ರಾಜಕೀಯಕ್ಕೆ ರಜನಿಕಾಂತ್: ಏನಾಗಬಹುದು ತಮಿಳುನಾಡು ರಾಜಕಾರಣ?

‘ಟಿವಿ9’ ನಡೆಸಿದ ಫೇಸ್​ಬುಕ್​ ಲೈವ್​ ಕಾರ್ಯಕ್ರಮದಲ್ಲಿ ರಜನಿಕಾಂತ್ ರಾಜಕೀಯ ಪ್ರವೇಶದ ಪರಿಣಾಮಗಳ ಬಗ್ಗೆ ವಿಶ್ಲೇಷಿಸುವ ಪ್ರಯತ್ನ ನಡೆಯಿತು. ‘ರಜನಿ ರಾಜಕೀಯ ಬದುಕು ಅನಿರೀಕ್ಷಿತ ತಿರುವುಗಳಿಂದ ಕೂಡಿರುತ್ತವೆ’ ಎಂದೇ ಫೇಸ್​ಬುಕ್​ಲೈವ್​ನಲ್ಲಿ ಪಾಲ್ಗೊಂಡಿದ್ದ ಹಿರಿಯ ಪತ್ರಕರ್ತರಾದ ಗಂಗಾಧರ ಮೊದಲಿಯಾರ್ ಮತ್ತು ಸಿದ್ದರಾಜು ವಿಶ್ಲೇಷಿಸಿದರು.

ರಾಜಕೀಯಕ್ಕೆ ರಜನಿಕಾಂತ್: ಏನಾಗಬಹುದು ತಮಿಳುನಾಡು ರಾಜಕಾರಣ?
ರಜನಿಕಾಂತ್
Edited By:

Updated on: Dec 07, 2020 | 11:50 AM

ರಾಜಕಾರಣ ಪ್ರವೇಶಿಸುವ ಸೂಪರ್​ಸ್ಟಾರ್ ರಜನಿಕಾಂತ್ ಘೋಷಣೆ ತಮಿಳುನಾಡು ರಾಜಕಾರಣದ ಮೇಲೆ ಬೀರಬಹುದಾದ ಪ್ರಭಾವಗಳ ಬಗ್ಗೆ ಸಾಕಷ್ಟು ಲೆಕ್ಕಾಚಾರಗಳು ಚಾಲ್ತಿಯಲ್ಲಿವೆ. ಸಿನಿಮಾ ಹಿನ್ನೆಲೆಯಿಂದ ಬಂದ ಸಾಕಷ್ಟು ನಾಯಕರು ತಮಿಳುನಾಡು ರಾಜಕಾರಣದಲ್ಲಿಯೂ ಮಿಂಚಿ ಮರೆಯಾದರು. ತಮಿಳುನಾಡು ರಾಜಕಾರಣ ಮತ್ತು ತಮಿಳು ಸಿನಿಮಾಗಳಿಗೆ ಇರುವ ನಂಟಿನ ಬಗ್ಗೆ ಯೋಚಿಸಿದಾಗ ಜಯಲಲಿತಾ, ಕರುಣಾನಿಧಿ, ಎಂಜಿಆರ್​, ವಿಜಯ್​ಕಾಂತ್​ ಸಹಜವೆನ್ನುವಂತೆ ನೆನಪಾಗುತ್ತಾರೆ. ರಜನಿಕಾಂತ್​ರ ರಾಜಕೀಯ ಹಾದಿ ಹೇಗಿರಬಹುದು?

ಇಂದು ‘ಟಿವಿ9 ಡಿಜಿಟಲ್’ ನಡೆಸಿದ ಫೇಸ್​ಬುಕ್​ ಲೈವ್ ಕಾರ್ಯಕ್ರಮದಲ್ಲಿ ಇದೇ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ನಡೆಯಿತು. ‘ರಜನಿ ರಾಜಕೀಯ ಬದುಕು ಅನಿರೀಕ್ಷಿತ ತಿರುವುಗಳಿಂದ ಕೂಡಿರುತ್ತವೆ’ ಎಂದೇ ಫೇಸ್​ಬುಕ್​ಲೈವ್​ನಲ್ಲಿ ಪಾಲ್ಗೊಂಡಿದ್ದ ಹಿರಿಯ ಪತ್ರಕರ್ತರಾದ ಗಂಗಾಧರ ಮೊದಲಿಯಾರ್ ಮತ್ತು ಸಿದ್ದರಾಜು ವಿಶ್ಲೇಷಿಸಿದರು.

ಅವರ ಮಾತಿನ ಅಕ್ಷರರೂಪ ಇಲ್ಲಿದೆ…

ಇದನ್ನೂ ಓದಿ: ರಾಜಕೀಯ ವಿಶ್ಲೇಷಣೆ | ತಮಿಳುನಾಡು ರಾಜಕೀಯದಲ್ಲೂ ಸೂಪರ್​ಸ್ಟಾರ್ ಆಗ್ತಾರಾ ರಜನಿಕಾಂತ್

ತಮಿಳುನಾಡಿನ ರಾಜಕೀಯ ಚಿಮ್ಮುಹಲಗೆ ಸಿನಿಮಾ: ಗಂಗಾಧರ ಮೊದಲಿಯಾರ್
ರಾಜಕೀಯ ಸಂದೇಶಗಳನ್ನು ಜನರಿಗೆ ತಲುಪಿಸಲು ಸಿನಿಮಾ ಮಾಧ್ಯಮವನ್ನು ಯಶಸ್ವಿಯಾಗಿ ಬಳಸಿದ ರಾಜ್ಯ ತಮಿಳುನಾಡು. ಪೆರಿಯಾರ್​ ರಾಮಸ್ವಾಮಿ ‘ಡಿಕೆ’ಯಿಂದ ಸಿಡಿದು ಬಂದ ಅಣ್ಣಾದೊರೈ ಮತ್ತು ಕರುಣಾನಿಧಿ ಸಿನಿಮಾಗಳನ್ನು ರಾಜಕೀಯಕ್ಕೆ ಬಳಸಿಕೊಂಡರು. ಎಂಜಿಆರ್​ ಅವರ ಬಹುತೇಕ ಚಿತ್ರಗಳಲ್ಲಿ ರಾಜಕೀಯ ಉದ್ದೇಶ ಇರುತ್ತಿತ್ತು. ಎಂಜಿಆರ್​ ಅವರ ವಾರಸುದಾರಿಕೆಯ ಪ್ರತೀಕವಾಗಿ ಸಿನಿಮಾಗಳಿಂದಲೇ ತಮಿಳು ಜನರಿಗೆ ಪರಿಚಿತೆಯಾದ ಜಯಲಲಿತಾ ಮುಂದುವರಿದರು.

ಸಿನಿಮಾ-ರಾಜಕಾರಣ ಕೊಂಡಿಯ ಇತ್ತೀಚಿನ ಉದಾಹರಣೆಯಾಗಿ ವಿಜಯ್​ಕಾಂತ್ ಕಾಣಿಸುತ್ತಾರೆ. ಆದರೆ ಈಗ ಜಯಲಲಿತಾ ಮತ್ತು ಕರುಣಾನಿಧಿ ಎಂಬ ಇಬ್ಬರು ದೊಡ್ಡ ನಾಯಕರು ಅಸ್ತಂಗತರಾದ ನಂತರ ತಮಿಳುನಾಡಿನಲ್ಲಿ ಒಂದು ನಿರ್ವಾತ ಸೃಷ್ಟಿಯಾಗಿದೆ. ಅದನ್ನು ಯಾರು ತುಂಬುತ್ತಾರೆ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ರಜನಿಕಾಂತ್ ರಾಜಕೀಯ ಪ್ರವೇಶ ಘೋಷಣೆಯನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕು.

ರಾಜಕೀಯ ಪ್ರವೇಶಿಸುವ ಇಂಗಿತವನ್ನು ರಜನಿಕಾಂತ್​ರ ಹಲವು ಸಿನಿಮಾಗಳಲ್ಲಿ ಗುರುತಿಸಬಹುದು. ‘ಮುತ್ತು’ ಸಿನಿಮಾದಲ್ಲಿ ರಜನಿಕಾಂತ್ ಓರ್ವ ಬಡ ಕಲಾವಿದ. ಒಂದು ಸಲ ಸಿಂಹಾಸದ ಮೇಲೆ ಕುಳಿತ ತಕ್ಷಣ ಅವರಿಗೆ ಶಕ್ತಿ ಬರುತ್ತೆ. ‘ಈ ಸೀಟ್​ಗೆ ಇಷ್ಟೊಂದು ಪವರ್ ಅಂತ್ಲೇ ಎಲ್ಲರೂ ಇದಕ್ಕೆ ಆಸೆ ಪಡ್ತಾರೆ’ ಅನ್ನೋ ಡೈಲಾಗ್ ಆ ಸಿನಿಮಾದಲ್ಲಿ ಬರುತ್ತೆ.

ಇನ್ನೊಂದು ಸಿನಿಮಾದಲ್ಲಿ ಜನರು ರಜನಿಯನ್ನು ದೊರೆಯಾಗಿ ನೋಡಬೇಕು ಅಂತ ಹೇಳ್ತಾರೆ. ‘ದೇವರು ಹೇಳಿದಾಗ, ಯಾವಾಗ ಬರಬೇಕೋ ಆಗ ನಾನು ಬರ್ತೀನಿ’ ಅಂತ ರಜನಿ ಮುಂದೊಂದು ದಿನ ರಾಜಕೀಯ ಪ್ರವೇಶಿಸುವ ಇಂಗಿತ ಬಿಟ್ಟುಕೊಡುತ್ತಾರೆ. ಹೀಗೆ ರಾಜಕೀಯ ಪ್ರವೇಶವನ್ನು ರಿಸರ್ವ್​ ಸೀಟ್​ನಲ್ಲಿ ಇರಿಸಿಕೊಂಡು ಬಂದರು ರಜನಿ.

ಇದನ್ನೂ ಓದಿ: ಡಿ.31ಕ್ಕೆ ರಜನಿಕಾಂತ್ ಹೊಸ ಪಕ್ಷ ಘೋಷಣೆ: ಜನವರಿಗೆ ಚಾಲನೆ

ರಾಜಕಾರಣದಲ್ಲಿ ಸಿನಿಮಾ ಹಿಡಿತ ಕಡಿಮೆಯಾಗಿದೆ: ಸಿದ್ದರಾಜು
ತಮಿಳುನಾಡಿನ ಇಂದಿನ ರಾಜಕಾರಣ ಗಮನಿಸಿದರೆ ಅಲ್ಲಿ ಸಿನಿಮಾ ಹಿಡಿತ ಕಡಿಮೆಯಾಗಿದೆ ಅನ್ನಿಸುತ್ತೆ. ಎಐಎಡಿಎಂಕೆಯ ಪಳನಿಸ್ವಾಮಿ ಮತ್ತು ಪನ್ನೀರ್​ಸೆಲ್ವಂ ಸದಾ ಕಿತ್ತಾಡ್ತಿದ್ದಾರೆ. ಡಿಎಂಕೆಯಲ್ಲಿ ಅಳಗಿರಿ ಮತ್ತು ಸ್ಟಾಲಿನ್ ನಡುವೆ ಹೋರಾಟವಿದೆ. ಕರುಣಾನಿಧಿ ನಂತರ ಡಿಎಂಕೆಗೆ ಸ್ಟಾಲಿನ್ ಉತ್ತರಾಧಿಕಾರಿ ಎಂದು ಘೋಷಣೆಯಾದರೂ, ಮಧುರೈ ನಂತರದ ದಕ್ಷಿಣ ಭಾಗದಲ್ಲಿ ಅಳಗಿರಿ ಪ್ರಭಾವವಿದೆ.

ರಜನಿ ಸಿನಿಮಾಗಳು ಈಗ ಮೊದಲಿನಷ್ಟು ಹಿಟ್​ ಆಗ್ತಿಲ್ಲ. ಇನ್ನು ರಾಜಕೀಯವಾಗಿ ಜನರು ಅವರ ಕೈಹಿಡೀತಾರೆ ಎನ್ನುವುದು ಅನುಮಾನದ ವಿಚಾರ. 2016ರ ವಿಧಾನಸಭಾ ಚುನಾಣೆಯಲ್ಲಿ ಅವರು ಡಿಎಂಕೆ ಪರ ಮಾತಾಡಿದ್ರು. ಆದರೆ ಅದೇನೂ ಪ್ರಯೋಜನಕ್ಕೆ ಬರಲಿಲ್ಲ. ಈ ಹಿಂದೆ ಅವರು ಬಿಜೆಪಿ, ಎಐಡಿಎಂಕೆ ಪರವೂ ನಿಲುವು ತಳೆದದ್ದಿದೆ. ಈಗ ಸ್ವಂತ ಬಲದ ಮೇಲೆ ನಿಂತು ಅದೃಷ್ಟಪರೀಕ್ಷೆ ಮಾಡಿಕೊಳ್ಳಲು ಪ್ರಯತ್ನಿಸ್ತಾ ಇದ್ದಾರೆ.

ರಜನಿಕಾಂತ್ ತಮಿಳುನಾಡಿನವರಲ್ಲ ಎನ್ನುವ ಅಭಿಯಾನವನ್ನು ಈಗಾಗಲೇ ಡಿಎಂಕೆ ಆರಂಭಿಸಿದೆ. ಇವರು ಪ್ರಸ್ತಾಪಿಸುತ್ತಿರುವ ಆಧ್ಯಾತ್ಮ ರಾಜಕಾರಣಕ್ಕೆ ತಮಿಳುನಾಡಿನ ಯುವಜನರ ಮನ್ನಣೆ ಸಿಗುವುದು ಅನುಮಾನ. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಮಲಹಾಸನ್ ಅದೃಷ್ಟ ಪರೀಕ್ಷೆ ಮಾಡಿಕೊಂಡು ಸೋತರು. ಚುನಾವಣೆಯಲ್ಲಿ ರಜನಿಗೆ ಸಿಗುವ ಜನಮನ್ನಣೆಯ ಬಗ್ಗೆ ನನಗೆ ಅನುಮಾನವಿದೆ.

ತಮಿಳುನಾಡು ರಾಜಕಾರಣ ಜಯಲಲಿತಾ ಮತ್ತು ಕರುಣಾನಿಧಿ ಎಂಬ ಇಬ್ಬರು ಪ್ರಭಾವಿ ನಾಯಕರ ನಿರ್ಗಮನದ ನಂತರ ನಡೆಯುತ್ತಿರುವ ಮೊದಲು ಚುನಾವಣೆಯಿದು. ತಮಿಳುನಾಡಿನಲ್ಲಿ ಕಮಲ ಅರಳಿಸಲು ಬಿಜೆಪಿ ಬಲವಾಗಿ ಪ್ರಯತ್ನಿಸಲಿದೆ. ಕನ್ಯಾಕುಮಾರಿ ಪ್ರದೇಶದಲ್ಲಿ ಬಿಜೆಪಿಯ ಒಬ್ಬರೇ ಒಬ್ಬರು ಬಹುಕಾಲದಿಂದ ಗೆಲ್ತಿದ್ದಾರೆ. ಅದು ಬಿಜೆಪಿ ಬಲದಿಂದ ಅಲ್ಲ, ಸ್ವಂತ ಬಲದ ಮೇಲೆ. ಬಿಜೆಪಿ ತಮಿಳುನಾಡಿನಲ್ಲಿ ನೆಲೆ ಕಂಡುಕೊಳ್ಳಲು ಇನ್ನೂ ಸಾಕಷ್ಟು ಸಮಯಬೇಕು.

ಫೆಬ್ರುವರಿಗೆ ಶಶಿಕಲಾ ನಟರಾಜನ್ ಜೈಲಿನಿಂದ ಬಿಡುಗಡೆಯಾಗ್ತಾರೆ. ಸೋದರ ಟಿಟಿವಿ ದಿನಕರನ್ ಈಗಾಗಲೇ ಪಕ್ಷ ಕಟ್ಟಿದ್ದಾರೆ, ಅವರಿಗೆ ಒಂದಿಷ್ಟು ಶಾಸಕರೂ ಇದ್ದಾರೆ. ಇನ್ನು ಸೇಲಂ ಭಾಗದಲ್ಲಿ ದಲಿತ ಮತಗಳನ್ನು ಒಗ್ಗೂಡಿಸುವ ರಾಜಕಾರಣವೊಂದು ನಡೆಯುತ್ತಿದೆ. ಈ ಎಲ್ಲದರ ನಡುವೆ ರಜನಿ ಈಜಿ ಹೇಗೆ ದಡ ಸೇರುತ್ತಾರೋ ನೋಡಬೇಕು.

ಆಂಧ್ರದಲ್ಲಿ ಚಿರಂಜೀವಿ ಮತ್ತು ಪವನ್ ಕಲ್ಯಾಣ್ ಚುನಾವಣೆಗೆ ನಿಂತಾದ ಅವರ ಪ್ರಚಾರ ಸಭೆಗಳಿಗೆ ಜನರು ವ್ಯಾಪಕವಾಗಿ ಸೇರುತ್ತಿದ್ದರು. ಆದರೆ ಚುನಾವಣೆ ಫಲಿತಾಂಶ ಏನಾಯ್ತು? ರಜನಿ ರಾಜಕೀಯ ಪ್ರವೇಶಕ್ಕೆ ತಮಿಳುನಾಡು ಹೇಗೆ ಸ್ಪಂದಿಸುತ್ತದೆ ಎಂಬುದನ್ನು ಕಾದು ನೋಡಬೇಕು.

Published On - 5:31 pm, Fri, 4 December 20