ಮೂರು ಆಟಗಾರರ ರನೌಟ್, ಇಬ್ಬರಿಗೆ ಗಾಯ, ಅತಿಥೇಯರಿಗೆ 94 ರನ್ಗಳ ಮೊದಲ ಇನ್ನಿಂಗ್ಸ್ ನೀಡಿದ್ದು ಮತ್ತು ಒಬ್ಬ ಪ್ರಮುಖ ಬೌಲರ್ನ ಅನುಪಸ್ಥಿತಿಯೊಂದಿಗೆ ಆಸ್ಟ್ರೇಲಿಯಾದ ಎರಡನೇ ಇನ್ನಿಂಗ್ಸ್ನಲ್ಲಿ ಪೀಲ್ಡಿಂಗ್ಗೆ ಇಳಿದಿದ್ದು-ಸಿಡ್ನಿ ಟೆಸ್ಟ್ ಪಂದ್ಯದ ಮೂರನೇ ದಿನ ಟೀಮ್ ಇಂಡಿಯಾದ ಸಮಸ್ಯೆಗಳಿಗೆ ಕೊನೆಯೇ ಇಲ್ಲದಂತಿತ್ತು. ಉತ್ತಮ ಲೀಡ್ನೊಂದಿಗೆ ಇನ್ನೂ 8 ವಿಕೆಟ್ಗಳನ್ನು ಹೊಂದಿ ಒಟ್ಟಾರೆ 197 ರನ್ಗಳ ಮುನ್ನಡೆಯಲ್ಲಿರುವ ಅಸ್ಟ್ರೇಲಿಯಾ ಈ ಪಂದ್ಯದಲ್ಲಿ ನಿಚ್ಚಳ ಮೇಲುಗೈ ಸಾಧಿಸಿದೆ.
ಮೆಲ್ಬರ್ನ್ ಟೆಸ್ಟ್ನಲ್ಲಿ ಭಾರಿ ಜಯ ಸಾಧಿಸಿ ಸರಣಿಯನ್ನು 1-1ರಿಂದ ಸಮಮಾಡಿಕೊಂಡ ಅಜಿಂಕ್ಯಾ ರಹಾನೆ ಪಡೆ ಸಿಡ್ನಿಯಲ್ಲಿ ಈ ಪಾಟಿ ಹಿನ್ನಡೆ ಸಾಧಿಸೀತೆಂದು ಭಾರತದ ಕ್ರಿಕೆಟ್ ಪ್ರೇಮಿಗಳು ಪ್ರಾಯಶಃ ಅಂದುಕೊಂಡಿರಲಿಲ್ಲ. ಎರಡನೆ ದಿನದಾಟ ಕೊನೆಗೊಂಡಾಗ ಅತಿಥೇಯರ ಸ್ಕೋರ್ 2/103 ಅಗಿದ್ದು, ಮೊದಲ ಇನ್ನಿಂಗ್ಸ್ ಹಿರೊಗಳಾದ ಮಾರ್ನಸ್ ಲಬುಶೇನ್ ಮತ್ತು ಸ್ಟೀವ್ ಸ್ಮಿತ್ ಅನುಕ್ರಮವಾಗಿ 47 ಮತ್ತು 29 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ. ಅಂದರೆ ರವಿವಾರ ಬೆಳಗ್ಗೆ ಟೀಮ್ ಇಂಡಿಯಾದ ಆಟಗಾರರು ಒತ್ತಡದಲ್ಲಿಯೇ ಮೈದಾನಕ್ಕಿಳಿಯ ಬೇಕಿದೆ.
ನಿಸ್ಸಂದೇಹವಾಗಿ, ನಾಳೆ ಅಸ್ಸೀಗಳು ವೇಗವಾಗಿ ರನ್ಗಳಿಸುವ ಪ್ರಯತ್ನ ಮಾಡುತ್ತಾರೆ. ಅಸಲಿಗೆ ಅವರ ಮೇಲೆ ಯಾವದೇ ಒತ್ತಡವಿಲ್ಲ. ಅದಕ್ಕೂ ಮಿಗಿಲಾಗಿ ಈಗ ಕ್ರೀಸ್ನಲ್ಲಿರುವ ಬ್ಯಾಟ್ಸ್ಮನ್ಗಳು ಉತ್ತಮ ಸ್ಪರ್ಶದಲ್ಲಿರುವುದು ರಹಾನೆಯ ಚಿಂತೆಯನ್ನು ದ್ವಿಗುಣಗೊಳಿಸಲಿದೆ.
4 ವಿಕೆಟ್ ಪಡೆದ ಕಮ್ಮಿನ್ಸ್
ಭಾರತದ ಈ ಸ್ಥಿತಿಗೆ ಮತ್ತೊಮ್ಮೆ ಬ್ಯಾಟ್ಸ್ಮನ್ಗಳ ವೈಫಲ್ಯ ಮತ್ತು ರನ್ ಕದಿಯುವಾಗ ಶಾಲಾ ಮಕ್ಕಳಂಥ ವರ್ತನೆ ಕಾರಣವಾದವು. ಶನಿವಾರ ಬೆಳಗ್ಗೆ ನಿಧಾನಗತಿಯಲ್ಲೇ ರನ್ ಶೇಖರಿಸಿಲು ಆರಂಭಿಸಿದ ರಹಾನೆ ಮತ್ತು ಚೇತೇಶ್ವರ ಪೂಜಾರಾ ಅದೇ ಮನಸ್ಥತಿಯಲ್ಲಿ ಬ್ಯಾಟಿಂಗ್ ಮುಂದುವರಿಸಿದ್ದರೆ ತಂಡಕ್ಕೆ ಪ್ರಯೋಜನವಾಗುತಿತ್ತೇನೋ. ಆದರೆ, ವೈಯಕ್ತಿಕ ಸ್ಕೋರ್ 16 ಆಗಿದ್ದಾಗ ನೇಥನ್ ಲಿಯಾನ್ ಬೌಲಿಂಗ್ನಲ್ಲಿ ಜೀವದಾನ ಪಡೆದ ರಹಾನೆ ಅನಾವಶ್ಯಕವಾಗಿ ಆಕ್ರಮಣ ಪ್ರವೃತ್ತಿ ತೋರಲಾರಂಭಿಸಿ, ಲಿಯಾನ್ ಅವರ ಎಸೆತವೊಂದನ್ನು ಸಿಕ್ಸರ್ಗೆ ಎತ್ತಿದ ನಂತರ ಪ್ಯಾಟ್ ಕಮ್ಮಿನ್ಸ್ ಅವರ ಎಸೆತವನ್ನು ವಿಕೆಟ್ ಮೇಲೆ ಎಳೆದುಕೊಂಡರು.
ಈ ಸರಣಿಯಲ್ಲಿ ಪದೇಪದೆ ಬ್ಯಾಟಿಂಗ್ನಲ್ಲಿ ಫೇಲಾಗುತ್ತಿರುವ ಹನುಮ ವಿಹಾರಿ ಕೇವಲ 4 ರನ್ ಗಳಿಸಿ ರನೌಟ್ ಆದರು. ವಿಹಾರಿ ನಂತರ ಆಡಲು ಬಂದ ರಿಷಭ್ ಪಂತ್ ಆಕ್ರಮಣಕಾರಿ ಧೋರಣೆಯೊಂದಿಗೆ ರನ್ ಗಳಿಸಲಾರಂಭಿಸಿದರು. ಏತನ್ಮಧ್ಯೆ, ಮತ್ತೊಂದು ತುದಿಯಲ್ಲಿ ಎಮ್ಮ ಎಂದಿನ ಶೈಲಿಯಲ್ಲೇ ಬ್ಯಾಟ್ ಮಾಡುತ್ತಿದ್ದ ಪೂಜಾರಾ ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ 26ನೇ ಅರ್ಧ ಶತಕ ಪೂರೈಸಿದರು. ಪಂತ್ ಮತ್ತು ಪೂಜಾರಾ 53 ರನ್ಗಳ ಜೊತೆಯಾಟದಲ್ಲಿ ಪಾಲ್ಗೊಂಡರು. ಕಮ್ಮಿನ್ಸ್ ಬೌಲಿಂಗ್ನಲ್ಲಿ ಮೊಣಕೈಗೆ ಪೆಟ್ಟು ತಿಂದರೂ ಆಡುವುದನ್ನು ಮುಂದುವರಿಸಿದ ಪಂತ್ 36 ರನ್ ಗಳಿಸಿ ಹೇಜಲ್ವುಡ್ಗೆ ವಿಕೆಟ್ ಒಪ್ಪಿಸಿದರು.
ಮರು ಓವರ್ನಲ್ಲೇ ಕಮ್ಮಿನ್ಸ್ ತಾಳ್ಮೆಯ ಪ್ರತಿರೂಪವಾಗಿದ್ದ ಪೂಜಾರಾ ಅವರನ್ನು ಔಟ್ ಮಾಡಿದಾಗ ಭಾರತ ಅತಿಥೇಯರಿಗೆ ದೊಡ್ಡ ಲೀಡ್ ಬಿಟ್ಟುಕೊಡುವದು ಖಚಿತವಾಯಿತು. ಅಶ್ವಿನ್ ಮತ್ತು ಜಸ್ಪ್ರೀತ್ ಬುಮ್ರಾ ವಿವೇಕಹೀನರಂತೆ ರನೌಟ್ ಆಗಿದ್ದು ಆಸ್ಸೀಗಳ ಕೆಲಸವನ್ನು ಮತ್ತಷ್ಟು ಹಗುರಗೊಳಿಸಿತು. ಕೊನೆ ವಿಕೆಟ್ಗೆ ಜಡೇಜಾ, ಮೊಹಮ್ಮದ್ ಸಿರಾಜ್ರೊಂದಿಗೆ 29 ರನ್ಗಳನ್ನು ಸೇರಿಸಿದ್ದು ಆಸ್ಸೀಗಳ ಲೀಡನ್ನು 100ಕ್ಕಿಂತ ಕೆಳಗಿಳಿಸಿತು.
ಮತ್ತೊಮ್ಮೆ ಉತ್ಕೃಷ್ಟ ಬೌಲಿಂಗ್ ಪ್ರದರ್ಶನ ನೀಡಿದ ಪ್ಯಾಟ್ ಕಮ್ಮಿನ್ಸ್ 29 ರನ್ಗಳಿಗೆ 4 ವಿಕೆಟ್ ಪಡೆದು ತಾನ್ಯಾಕೆ ಟೆಸ್ಟ್ ಕ್ರಿಕೆಟ್ನಲ್ಲಿ ವಿಶ್ವದ ನಂಬರ್ ವನ್ ಬೌಲರ್ ಎನ್ನುವುದನ್ನು ಪ್ರೂವ್ ಮಾಡಿದರು. ಅರೋಗ್ಯಕರ ಲೀಡ್ನೊಂದಿಗೆ ಅಸ್ಟ್ರೇಲಿಯಾ ಎರಡನೆ ಇನ್ನಿಂಗ್ಸ್ ಆರಂಭಿಸಿದ ನಂತರ ವಿಲ್ ಪುಕೊವ್ಸ್ಕಿಯನ್ನು ಕೇವಲ 10ರನ್ಗಳಿಗೆ ಔಟ್ ಮಾಡಿದ ಸಿರಾಜ್ ಭಾರತದ ಶಿಬಿರದದಲ್ಲಿ ಸಂತಸ ಮೂಡಿಸಿದರು.
ಅರ್ಧ ಶತಕ ಬಾರಿಸಿದ ಚೇತೇಶ್ವರ್ ಪೂಜಾರಾ
ಪಂತ್ ಸ್ಥಾನದಲ್ಲಿ ಬದಲೀ ವಿಕೆಟ್ಕೀಪರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ವೃದ್ಧಿಮಾನ್ ಸಹಾ, ಪುಕೊವ್ಸ್ಕಿ ನೀಡಿದ ಕ್ಯಾಚನ್ನು ಅದ್ಭುತವಾಗಿ ಹಿಡಿದರು. ಮತ್ತೊಬ್ಬ ಓಪನರ್ ಡೇವಿಡ್ ವಾರ್ನರ್ ಅವರನ್ನು ರವಿಚಂದ್ರನ್ ಆಶ್ವಿನ್ ಎಲ್ಬಿ ಬಲೆಗೆ ಕೆಡವಿದರು.
ನಂತರ ಜೊತೆಗೂಡಿರುವ ಲಬುಶೇನ್ ಮತ್ತು ಸ್ಮಿತ್ ಮುರಿಯದ ಮೂರನೆ ವಿಕೆಟ್ಗೆ ಈಗಾಗಲೇ 68 ರನ್ ಪೇರಿಸಿದ್ದಾರೆ. ಆಸ್ಸೀಗಳು ಈ ಟೆಸ್ಟ್ನಲ್ಲಿ ನಿಶ್ಚಿತವಾಗಿಯೂ ಡ್ರೈವರ್ ಸ್ಥಾನದಲ್ಲಿದ್ದಾರೆ. ಭಾರತೀಯರು ಗೇಮ್ನಲ್ಲಿ ವಾಪಸ್ಸು ಬರಬೇಕಾದರೆ ಪವಾಡವೇ ನಡೆಯಬೇಕಿದೆ.