ಚಿನ್ನದ ನೆಲದಲ್ಲಿ ಶುರುವಾಗಲಿದೆ ಕೈಗಾರಿಕಾ ಪರ್ವ, ಮರುಕಳಿಸಲಿದೆ KGFನ ಗತಕಾಲದ ವೈಭವ
ಕೋಲಾರ: ಜಿಲ್ಲೆಯು ಚಿನ್ನದ ನಾಡು ಎಂದೇ ಪ್ರಖ್ಯಾತಿ ಪಡೆಯಲು ಕಾರಣ KGFನ ಚಿನ್ನದ ಗಣಿ. ಆದರೆ, ಕಳೆದ 20 ವರ್ಷಗಳಿಂದ ಈ ಚಿನ್ನದ ಗಣಿಗೆ ಬೀಗ ಬಿದ್ದಿದ್ದು ಅದರ ಸುಮಾರು 12,000 ಎಕರೆ ಪ್ರದೇಶವು ನಿರುಪಯುಕ್ತವಾಗಿ ಹೋಗಿತ್ತು. ಇದರ ಪರಿಣಾಮವಾಗಿ ಒಂದು ಕಾಲದಲ್ಲಿ ಚಿನ್ನದಷ್ಟೇ ಮೌಲ್ಯವಿದ್ದ ಭೂಮಿಯು ತನ್ನ ಬೆಲೆಯನ್ನೇ ಕಳೆದುಕೊಂಡಂತಾಗಿತ್ತು. ಆದರೆ, ಈಗ ಇದೇ ಭೂಮಿ ಜಿಲ್ಲೆಯ ಜನರಿಗೆ ಮತ್ತೊಮ್ಮೆ ಬಂಗಾರದಷ್ಟೇ ಲಾಭ ತಂದುಕೊಡಲಿದೆ. ಹೌದು, ಮುಚ್ಚಿ ಹೋಗಿರುವ ಗಣಿ ಪ್ರದೇಶದ ಭೂಭಾಗವನ್ನು ಇದೀಗ ಕೈಗಾರಿಕಾ […]

ಕೋಲಾರ: ಜಿಲ್ಲೆಯು ಚಿನ್ನದ ನಾಡು ಎಂದೇ ಪ್ರಖ್ಯಾತಿ ಪಡೆಯಲು ಕಾರಣ KGFನ ಚಿನ್ನದ ಗಣಿ. ಆದರೆ, ಕಳೆದ 20 ವರ್ಷಗಳಿಂದ ಈ ಚಿನ್ನದ ಗಣಿಗೆ ಬೀಗ ಬಿದ್ದಿದ್ದು ಅದರ ಸುಮಾರು 12,000 ಎಕರೆ ಪ್ರದೇಶವು ನಿರುಪಯುಕ್ತವಾಗಿ ಹೋಗಿತ್ತು. ಇದರ ಪರಿಣಾಮವಾಗಿ ಒಂದು ಕಾಲದಲ್ಲಿ ಚಿನ್ನದಷ್ಟೇ ಮೌಲ್ಯವಿದ್ದ ಭೂಮಿಯು ತನ್ನ ಬೆಲೆಯನ್ನೇ ಕಳೆದುಕೊಂಡಂತಾಗಿತ್ತು. ಆದರೆ, ಈಗ ಇದೇ ಭೂಮಿ ಜಿಲ್ಲೆಯ ಜನರಿಗೆ ಮತ್ತೊಮ್ಮೆ ಬಂಗಾರದಷ್ಟೇ ಲಾಭ ತಂದುಕೊಡಲಿದೆ.
ಹೌದು, ಮುಚ್ಚಿ ಹೋಗಿರುವ ಗಣಿ ಪ್ರದೇಶದ ಭೂಭಾಗವನ್ನು ಇದೀಗ ಕೈಗಾರಿಕಾ ಪ್ರದೇಶವನ್ನಾಗಿ ಪರಿವರ್ತಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಹಾಗಾಗಿ, ಜಿಲ್ಲೆಯ ಚಿನ್ನದ ಗಣಿಯಿರುವ ಪ್ರದೇಶಕ್ಕೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಅಧಿಕಾರಿಗಳು, ಸಂಸದರು ಹಾಗೂ ಶಾಸಕರೊಂದಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.

ಕೈಗಾರಿಕಾ ಪ್ರದೇಶದ ಸ್ಥಾಪನೆಗೆ ಕೇಂದ್ರದಿಂದ ಒಪ್ಪಿಗೆ KGF ಜಾಗವನ್ನ ಕೈಗಾರಿಕಾ ಪ್ರದೇಶವನ್ನಾಗಿ ಮಾಡುವ ಬಗ್ಗೆ ರಾಜ್ಯ ಸರ್ಕಾರ ಈ ಹಿಂದೆ ಕೇಂದ್ರಕ್ಕೆ ಅನುಮತಿ ಕೋರಿತ್ತು. ರಾಜ್ಯದ ಮನವಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಹಾಗಾಗಿ, ಕೇಂದ್ರ ಗಣಿ ಸಚಿವ ಪ್ರಲ್ಹಾದ ಜೋಶಿ ಚಿನ್ನದ ಗಣಿಯ ಪ್ರದೇಶದಲ್ಲಿ ಯಾವುದೇ ನೈಸರ್ಗಿಕ ಸಂಪತ್ತು ಇಲ್ಲದಿರುವ ಬಗ್ಗೆ ತಮ್ಮ ಇಲಾಖೆಯಿಂದ ತನಿಖೆ ನಡೆಸಿ, ಅಲ್ಲಿ ಇನ್ನು ಮುಂದೆ ಗಣಿಗಾರಿಕೆ ಮಾಡಲು ಸಾಧ್ಯವಿಲ್ಲವೆಂದು ವರದಿ ಬಂದರೆ ಚಿನ್ನದ ಗಣಿ ಪ್ರದೇಶವನ್ನು KIADB ಗೆ ಹಸ್ತಾಂತರ ಮಾಡುವುದಾಗಿ ತಿಳಿಸಿದ್ದಾರೆ.
ಇನ್ನು ಕೆಜಿಎಫ್ ಚಿನ್ನದ ಗಣಿಗೆ ಸೇರಿದ ಒಟ್ಟು 12,109 ಎಕರೆ ಭೂಮಿ ಇದ್ದು, ಅದರಲ್ಲಿ 3,200 ಎಕರೆ ಭೂಮಿ ಖಾಲಿ ಇದೆ. ಈ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಬೇಕಾದ ವ್ಯವಸ್ಥೆ ಸಹ ಇದೆ. ಸದ್ಯ ಈ ಪ್ರಕ್ರಿಯೆಗೆ ಆರು ತಿಂಗಳ ಕಾಲಾವಕಾಶ ಬೇಕಾಗಿದ್ದು, ಅಷ್ಟರಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳುವುದಾಗಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

KGF ಕೈಗಾರಿಕಾ ಪ್ರದೇಶವಾಗಲು ಇವುಗಳೇ ಸೂಕ್ತ ಕಾರಣ KGF ಕೇವಲ ಚಿನ್ನದ ಗಣಿಯ ಪ್ರದೇಶವಲ್ಲ. ಬದಲಾಗಿ ಇದು ಮೂರು ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಪ್ರದೇಶ. ಜೊತೆಗೆ ಮೂರು ರಾಜ್ಯಕ್ಕೂ ಉತ್ತಮ ರೈಲು ಸಂಪರ್ಕದ ವ್ಯವಸ್ಥೆ ಇದೆ, ಚೆನ್ನೈ ಬಂದರಿಗೆ ಸಮೀಪವಿದೆ. ಇದಲ್ಲದೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರವಿದೆ. ಹಾಗಾಗಿ, ಈ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಜೊತೆಗೆ, ಈ ಭಾಗದಲ್ಲಿ ಚಿನ್ನದ ಗಣಿ ಮುಚ್ಚಿದ ಬಳಿಕ ಸಾವಿರಾರು ಕಾರ್ಮಿಕ ಕುಟುಂಬಗಳ ನಿರುದ್ಯೋಗದಿಂದ ಬೀದಿಪಾಲಾಗಿದ್ದಾರೆ. ಈ ಎಲ್ಲಾ ಕಾರಣಗಳಿಗಾಗಿ ಈ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪಿಸಲೇ ಬೇಕಿದೆ. ಆದರೆ, ಇಂಥದೊಂದು ಪ್ರಯತ್ನ ಹಲವು ಸರ್ಕಾರಗಳ ಕಾಲದಲ್ಲೂ ನಡೆದಿದೆ. ಬರೀ ಹೇಳಿಕೆಗಳಿಗಷ್ಟೇ ಸೀಮಿತವಾಗಬಾರದು. ಇದು ಕಾರ್ಯರೂಪಕ್ಕೂ ಬರಬೇಕು ಅನ್ನೋದು ಸ್ಥಳೀಯ ಕಾಂಗ್ರೆಸ್ ಶಾಸಕಿ ರೂಪಕಲಾ ಮಾತು.
ಒಟ್ಟಾರೆ, ಒಂದು ಕಾಲದಲ್ಲಿ ಇಡೀ ಜಗತ್ತಿಗೆ ಬಂಗಾರ ನೀಡುತ್ತಿದ್ದ KGF ಎರಡು ದಶಕಗಳ ನಂತರ ಮತ್ತೆ ಸುದ್ದಿಯಲ್ಲಿದೆ.ಎಲ್ಲಾ ಅಂದುಕೊಂಡಂತೆ ನಡೆದರೆ ನಿಜಕ್ಕೂ KGFನ ಜೀವಮಾನದಲ್ಲಿ ಮತ್ತೊಂದು ಹೊಸ ಸುವರ್ಣ ಪರ್ವ ಆರಂಭವಾಗುವುದರಲ್ಲಿ ಎರಡು ಮಾತಿಲ್ಲ. -ರಾಜೇಂದ್ರಸಿಂಹ




