ಮುಂಬೈ ಇಂಡಿಯನ್ಸ್ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ಮತ್ತೆ ಭುಜದ ಸಮಸ್ಯೆ ಎದುರಾಗಿದೆಯೇ? ಶುಕ್ರವಾರದಂದು ರಾಯಲ್ ಚಾಲೆಂಜರ್ಸ್ ವಿರುದ್ಧ ಅಡಿದ ಪಂದ್ಯದಲ್ಲಿ ಹಾರ್ದಿಕ್ ಬೌಲ್ ಮಾಡಲಿಲ್ಲ. ಮುಂಬೈ ಟೀಮಿನ ಮೂಲಗಳ ಪ್ರಕಾರ ಅವರಿಗೆ ಭುಜನೋವು ಮರುಕಳಿಸಿದ್ದರಿಂದ ಬೌಲಿಂಗ್ನಿಂದ ದೂರ ಉಳಿದಿದ್ದಾರೆ. ಅದರೆ ಅವರು ಇಷ್ಟರಲ್ಲೇ ಬೌಲಿಂಗ್ ಆರಂಭಿಸಲಿದ್ದಾರೆ ಎಂದು ಟೀಮಿನ ಬೌಲಿಂಗ್ ಕೋಚ್ ಮತ್ತು ಮುಂಬೈ ಇಂಡಿಯನ್ಸ್ ಕ್ರಿಕೆಟ್ ಆಪರೇಶನ್ಗಳ ನಿರ್ದೇಶಕರಾಗಿರುವ ಜಹೀರ್ ಖಾನ್ ಹೇಳಿದ್ದಾರೆ. ಐದು ಬಾರಿ ಚಾಂಪಿಯನ್ಶಿಪ್ ಗೆದ್ದಿರುವ ಮುಂಬೈ ತಂಡವು ತನ್ನ ಉದ್ಘಾಟನಾ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ತಂಡದ ವಿರುದ್ಧ ಎರಡು ವಿಕೆಟ್ಗಳಿಂದ ಸೋತಿತ್ತು.
ಸೋಮವಾರದಂದು ಕ್ರೀಡಾ ವೆಬ್ಸೈಟೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಜಹೀರ್ ಅವರು,‘ ಹಾರ್ದಿಕ್ ಅವರು ಒಂದು ಇಡೀ ಪ್ಯಾಕೇಜ್ ಆಗಿ ತಂಡಕ್ಕೆ ಅಮೂಲ್ಯವಾಗಿದ್ದಾರೆ. ಕಳೆದ ಪಂದ್ಯದಲ್ಲಿ ಅವರಿಗೆ ವರ್ಕ್ಲೋಡ್ ಸಂಬಂಧಿಸಿದ ಸಮಸ್ಯೆಯಾಗಿತ್ತು,’ ಎಂದು ಹೇಳಿದರು.
‘ಇಂಗ್ಲೆಂಡ್ ವಿರುದ್ಧ ನಡೆದ ಸೀಮಿತ ಓವರ್ಗಳ ಸರಣಿಯಲ್ಲಿ ಹಾರ್ದಿಕ್ ಬೌಲ್ ಮಾಡಿದರು, ಕೊನೆಯ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯದಲ್ಲಿ ಅವರು ಒಂಬತ್ತು ಓವರ್ಗಳನ್ನು ಬೌಲ್ ಮಾಡಿದರು. ಅವರಿಗೆ ವರ್ಕ್ಲೋಡ್ ಜಾಸ್ತಿ ಎಂದು ಭಾವಿಸಿ ಟೀಮಿನ ಫಿಸಿಯೋ ಅವರ ಸಲಹೆಯನ್ನು ನಾವು ತೆಗದೆಕೊಂಡಾಗ ಅಲ್ಪಾವಧಿಗೆ ಅವರು ಬೌಲ್ ಮಾಡದಿರುವುದು ಒಳಿತು ಎಂದು ಹೇಳಿದರು. ಹಾಗಾಗೇ ಅವರಿಗೆ ಬೌಲ್ ಮಾಡಲು ಹೇಳುತ್ತಿಲ್ಲ,’ ಎಂದು ಜಹೀರ್ ಹೇಳಿದರು.
‘ಅವರಿಗೆ ಭುಜನೋವಿನ ಸಮಸ್ಯೆಯಿದೆ ಅದನ್ನು ಅಲ್ಲಗಳೆಯಲಾಗದು. ಆದರೆ ಸಮಾಧಾನಕರ ಸಂಗತಿಯೆಂದರೆ ಅತಂಕಪಡುವಂಥದ್ದೇನೂ ಇಲ್ಲ. ಅವರು ಆದಷ್ಟು ಬೇಗ ಬೌಲಿಂಗ್ ಮಾಡುವುದನ್ನು ಆರಂಭಿಸಲಿದ್ದಾರೆ. ಅವರು ಆ ಮೂಲಕವೂ ತಂಡಕ್ಕೆ ಉತ್ತಮ ಕಾಣಿಕೆ ನೀಡಲಿದ್ದಾರೆ ಎಂಬ ಭರವಸೆ ನಮಗಿದೆ,’ ಎಂದು ತಮ್ಮ ಎಡಗೈ ವೇಗದ ಬೌಲಿಂಗ್ ಮೂಲಕ ಭಾರತದ ರಾಷ್ಟ್ರೀಯ ತಂಡಕ್ಕೆ ಅತ್ಯುತ್ತಮ ಸೇವೆ ಸಲ್ಲಿಸಿದ ಜಹೀರ್ ಹೇಳಿದರು.
ಮುಂಬೈ ಟೀಮಿಗೆ ಆರನೇ ಬೌಲಿಂಗ್ ಆಪ್ಷನ್ ಆಗಿ ವೆಸ್ಟ್ ಇಂಡೀಸ್ ಆಲ್ರೌಂಡರ್ ಕೈರನ್ ಪೊಲ್ಲಾರ್ಡ್ ಲಭ್ಯರಿದ್ದಾರೆಂದು ಹೇಳಿದ ಜಹೀರ್, ‘ಪೊಲ್ಲಾರ್ಡ್ ಅವರು ನಮ್ಮ ಆರನೇ ಬೌಲಿಂಗ್ ಆಪ್ಷನ್ ಆಗಿದ್ದಾರೆ, ಹಾಗಾಗಿ ಬೌಲಿಂಗ್ ವಿಭಾಗದಲ್ಲಿ ನಮಗೆ ಯಾವುದೇ ಚಿಂತೆಯಿಲ್ಲ. ನಾವು ಒಂದಷ್ಟು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೆಕಿದೆ, ಅಷ್ಟೇ.’ ಎಂದು ತಿಳಿಸಿದರು.
ಈ ವರ್ಷದ ಫಾರ್ಮಾಟ್ ಭಿನ್ನವಾಗಿದೆ. ಆ ದೃಷ್ಟಿಯ ಹಿನ್ನೆಲೆಯಿಂದ ಟೀಮಿನಲ್ಲಿ ಸ್ಥಾನ ಮತ್ತು ಜವಾಬ್ದಾರಿಗಳ ಬಗ್ಗೆ ನಾವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಿರುವುದು ಅತ್ಯವಶ್ಯಕವಾಗಿದೆ. ನಮ್ಮ ಹೋಮ್ ಗ್ರೌಂಡ್ನಲ್ಲಿ ನಾವು ಆಡುತ್ತಿಲ್ಲ, ಈ ಅಂಶವನ್ನು ಅಂಗೀಕರಿಸಬೇಕಿದೆ ಮತ್ತು ನಾವು ಆಡಲಿರುವ ಮೈದಾನಗಳ ಅಗತ್ಯಕ್ಕೆ ತಕ್ಕಂತೆ ಹೊಂದಾಣಿಕೆಗಳನ್ನು ಮಾಡಿಕೊಂಡು ಮುಂದೆ ಸಾಗಬೇಕಿದೆ,’ ಎಂದು ಜಹೀರ್ ಹೇಳಿದರು.
ಆರಂಭ ಆಟಗಾರ ಕ್ವಿಂಟನ್ ಡಿ ಕಾಕ್ ಅವರ ಲಭ್ಯತೆ ಕುರಿತು ಮಾತಾಡಿದ ಮಾತಾಡಿದ ಜಹೀರ್, ‘ಕ್ವಿಂಟನ್ ಅವರ ಕ್ವಾಂರಟೈನ್ ಅವಧಿ ಮುಗಿದಿದೆ, ನಿನ್ನೆಯಿಂದ ಅವರು ನೆಟ್ಸ್ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ, ಹಾಗಾಗಿ ನಾಳೆ ಕೆಕೆಆರ್ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಅವರು ಲಭ್ಯರಿದ್ದಾರೆ,’ ಎಂದು ಸ್ಪಷ್ಟಪಡಿಸಿದರು.