AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಮಕೂರು DC ನಿರ್ಲಕ್ಷ್ಯಕ್ಕೆ ಬೇಸತ್ತ ಜಿಲ್ಲಾ ಉಸ್ತುವಾರಿ ಸಚಿವ: 600 ಕೋಟಿ ರೂ ಯೋಜನೆ ಪೂರ್ತಿ ಯಾವಾಗ?

ಈಗ ಉಳಿದಿರುವ ಸಮಯದಲ್ಲಿ ಕಾರ್ಯಯೋಜನೆ ಸಿದ್ಧಪಡಿಸಿ, ಹೆಚ್ಚೆಂದರೆ ಕೆಲಸ ಆರಂಭಿಸಬಹುದು. ಇಷ್ಟು ಅತ್ಯಲ್ಪ ಅವಧಿಯಲ್ಲಿ ಕಾಮಗಾರಿ ಮುಗಿಸಲು ಸಾಧ್ಯವಿಲ್ಲ. ಕೊನೆಗೆ ಅನುದಾನ ಬಳಕೆಯಾಗದೆ ಉಳಿದಿರುವ ಹಣ ಸರ್ಕಾರಕ್ಕೆ ವಾಪಸಾಗುತ್ತದೆ. ಆಗ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ಆಗಿಲ್ಲ, ಪ್ರಗತಿಯಲ್ಲಿ ಹಿಂದೆ ಉಳಿದಿದ್ದೇವೆ. ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿಬರುವುದು ಮಾತ್ರ ತಪ್ಪುವುದಿಲ್ಲ.

ತುಮಕೂರು DC ನಿರ್ಲಕ್ಷ್ಯಕ್ಕೆ ಬೇಸತ್ತ ಜಿಲ್ಲಾ ಉಸ್ತುವಾರಿ ಸಚಿವ: 600 ಕೋಟಿ ರೂ ಯೋಜನೆ ಪೂರ್ತಿ ಯಾವಾಗ?
ಜೆ.ಸಿ ಮಾಧುಸ್ವಾಮಿ
preethi shettigar
| Updated By: ಸಾಧು ಶ್ರೀನಾಥ್​|

Updated on: Jan 09, 2021 | 5:05 PM

Share

ತುಮಕೂರು: ಜಿಲ್ಲೆಯ ಅಭಿವೃದ್ಧಿಗೆ ಬಿಡುಗಡೆಯಾಗಿರುವ ಸುಮಾರು 600 ಕೋಟಿ ರೂಪಾಯಿಯನ್ನು ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಅಧಿಕಾರಿಗಳು ಪ್ರಸಕ್ತ ಆರ್ಥಿಕ ವರ್ಷ ಮುಗಿಯಲು ಒಂದೆರಡು ತಿಂಗಳು ಉಳಿದಿರುವಾಗಲೇ ಖರ್ಚು ಮಾಡಲು ಸಾಧ್ಯವೇ? ಎನ್ನುವ ಪ್ರಶ್ನೆ ಸದ್ಯ ಜಿಲ್ಲೆಯಲ್ಲಿ ಉಂಟಾಗಿದ್ದು, ತೀವ್ರ ಚರ್ಚೆಗೆ ಇದು ಕಾರಣವಾಗಿದೆ.

ಇಷ್ಟೊಂದು ದೊಡ್ಡ ಮೊತ್ತವನ್ನು ಬಳಕೆ ಮಾಡಿಕೊಂಡು ವಿವಿಧ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಿ ಫೆಬ್ರವರಿ 15ರ ಒಳಗೆ ಖಜಾನೆಗೆ ಬಿಲ್ ಸಲ್ಲಿಸುವ ಅನಿವಾರ್ಯತೆಗೆ ಅಧಿಕಾರಿಗಳು ಸಿಲುಕಿದ್ದಾರೆ. ಹೀಗಾಗಿ ಇನ್ನು ಒಂದು ತಿಂಗಳಲ್ಲಿ ಇಷ್ಟೆಲ್ಲ ಕೆಲಸ ಮಾಡಲು ಸಾಧ್ಯವಾಗುವುದೇ ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕೆ ಸರಿಹೊಂದುವಂತೆ ಮೊನ್ನೆ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.

ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗವೊಂದರಲ್ಲೇ (ತುಮಕೂರು, ಮಧುಗಿರಿ ವಿಭಾಗ ಸೇರಿ) ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 100 ಕೋಟಿ ರೂಪಾಯಿಗೂ ಹೆಚ್ಚು ಬಳಕೆ ಮಾಡಬೇಕಿದೆ. ಇನ್ನಷ್ಟೇ ಕಾಮಗಾರಿಗಳಿಗೆ ಸಂಬಂಧಿಸಿದ ಕಾರ್ಯಯೋಜನೆ ಸಿದ್ಧಪಡಿಸಿ ಅನುಮೋದನೆ ಪಡೆದು ಕೆಲಸ ನಿರ್ವಹಿಸಲು ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಬೇಕಿದ್ದು, ನಂತರ ಕೆಲಸ ಪೂರ್ಣಗೊಳಿಸಿ ಕಾಮಗಾರಿ ಪೂರ್ಣಗೊಂಡ ಪ್ರಮಾಣಪತ್ರ ನೀಡಿದ ಮೇಲೆ ಬಿಲ್ ಸಿದ್ಧಪಡಿಸಿ ಖಜಾನೆಗೆ ಸಲ್ಲಿಸಬೇಕು.ಈ ಬಗ್ಗೆ ಸಚಿವರು ಮೊದಲೇ ಪ್ರಕ್ರಿಯೆ ಮುಗಿಸಿ ಅಗ್ರಿಮೆಂಟ್ ಮಾಡಿ ಎಂದು ಹೇಳಿದ್ದರೂ ಒಪ್ಪದ ಅಧಿಕಾರಿಗಳ ವಿರುದ್ಧ ಸಚಿವರು ಕೆಂಡಾಮಂಡಲವಾಗಿದ್ದಾರೆ.

ಕೆಡಿಪಿ ಸಭೆಯ ಚಿತ್ರಣ

ಜಿಲ್ಲೆಯಲ್ಲಿ ಅತಿಹೆಚ್ಚು ಕಾಮಗಾರಿಗಳು, ಅಭಿವೃದ್ಧಿ ಕೆಲಸಗಳು ನಡೆಯುವುದು ಜಿಲ್ಲಾ ಪಂಚಾಯತಿ ಎಂಜಿನಿಯರಿಂಗ್ ವಿಭಾಗದ ಮೂಲಕ. ರಸ್ತೆ, ಕಟ್ಟಡಗಳು, ಕೆರೆ ನಿರ್ವಹಣೆ, ಹೂಳೆತ್ತುವುದು, ದುರಸ್ತಿ, ಚರಂಡಿ, ಚೆಕ್ ಡ್ಯಾಂಗಳ ನಿರ್ಮಾಣ ಮತ್ತಿತರ ಮೂಲಸೌಕರ್ಯ ಕಲ್ಪಿಸುವ ಕೆಲಸಗಳು ಈ ವಿಭಾಗದಿಂದ ಆಗುತ್ತವೆ. ಆದರೆ ಕಳೆದ 10 ತಿಂಗಳಿಂದ ಈ ವರ್ಷದ ಅನುದಾನದಲ್ಲಿ ಒಂದೇ ಒಂದು ಕಾಮಗಾರಿಯನ್ನೂ ಕೈಗೆತ್ತಿಕೊಂಡಿಲ್ಲ. ಹಿಂದಿನ ವರ್ಷದಲ್ಲಿ ಅಪೂರ್ಣಗೊಂಡಿದ್ದ ಕೆಲಸ ಮುಗಿಸಿದ್ದು, ಹೊಸದಾಗಿ ಯಾವ ಕೆಲಸವನ್ನು ಆರಂಭಿಸಿಲ್ಲ. ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಕರ್ಯ ಸಿಗದೆ ಜನತೆ ಬಳಲುವಂತಾಗಿದ್ದು, ರಸ್ತೆ ನಿರ್ಮಿಸಿ, ಚರಂಡಿ ಮಾಡಿಕೊಡಿ ಎಂದು ಜನರು ಕೇಳುವುದು ಮಾತ್ರ ತಪ್ಪಿಲ್ಲ. ಹೀಗಾಗಿ ತುಮಕೂರು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಇಇ ಹರೀಶ್ ಬಾಬು ಹಾಗೂ ಎಇಇ ರಂಗಸ್ವಾಮಿಗೆ ‌ಸಚಿವರು ಮನಬಂದಂತೆ ಬೈದಿದ್ದಾರೆ.

ಈಗ ಉಳಿದಿರುವ ಸಮಯದಲ್ಲಿ ಕಾರ್ಯಯೋಜನೆ ಸಿದ್ಧಪಡಿಸಿ, ಹೆಚ್ಚೆಂದರೆ ಕೆಲಸ ಆರಂಭಿಸಬಹುದು. ಇಷ್ಟು ಅತ್ಯಲ್ಪ ಅವಧಿಯಲ್ಲಿ ಕಾಮಗಾರಿ ಮುಗಿಸಲು ಸಾಧ್ಯವಿಲ್ಲ. ಕೊನೆಗೆ ಅನುದಾನ ಬಳಕೆಯಾಗದೆ ಉಳಿದಿರುವ ಹಣ ಸರ್ಕಾರಕ್ಕೆ ವಾಪಸಾಗುತ್ತದೆ. ಆಗ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ಆಗಿಲ್ಲ, ಪ್ರಗತಿಯಲ್ಲಿ ಹಿಂದೆ ಉಳಿದಿದ್ದೇವೆ. ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿಬರುವುದು ಮಾತ್ರ ತಪ್ಪುವುದಿಲ್ಲ. ಇದಲ್ಲದೆ ಇತರೆ ಇಲಾಖೆಗಳಲ್ಲಿ ಅನುದಾನ ಹಂಚಿಕೆ, ಫಲಾನುಭವಿಗಳಿಗೆ ನೆರವು ಮತ್ತಿತರ ಕೆಲಸ ನಡೆಯುವುದರಿಂದ ಹೆಚ್ಚಿನ ಸಮಸ್ಯೆ ಆಗುವುದಿಲ್ಲ. ಆದರೆ ಪೂರ್ಣ ಪ್ರಮಾಣದಲ್ಲಿ ಅನುದಾನ ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ.

J.C.ಮಾಧುಸ್ವಾಮಿ

ಹಿಂದಿನ ವರ್ಷ 43 ಕೋಟಿ ರೂಪಾಯಿ ವಾಪಸ್: ಹಿಂದಿನ ವರ್ಷ ಬಳಕೆಯಾಗದೆ 43 ಕೋಟಿ ರೂಪಾಯಿ ಅನುದಾನ ಸರ್ಕಾರಕ್ಕೆ ವಾಪಸ್ ಹೋಗಿದ್ದು, ಇದರಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿತ್ತು. ಹಿಂದೆ ಅಪೂರ್ಣಗೊಂಡಿದ್ದ ಕೆಲಸಗಳನ್ನು ಈ ಬಾರಿ ಪೂರ್ಣಗೊಳಿಸಿ ಪ್ರಸಕ್ತ ಸಾಲಿನ ಅನುದಾನದಲ್ಲಿ ಬಿಲ್ ಪಾವತಿಸಲಾಗಿದೆ. ಬಂದ ಹಣವನ್ನೂ ಬಳಕೆ ಮಾಡಿಕೊಳ್ಳದಿದ್ದರೆ ಅಧಿಕಾರಿಗಳಿಗಳಿಂದ ಕೆಲಸ ಮಾಡಿಸುವುದು ಹೇಗೆ? ಸದ್ಯ ಉಳಿದಿರುವ ಅತ್ಯಲ್ಪ ಅವಧಿಯಲ್ಲಿ 600 ಕೋಟಿ ರೂಪಾಯಿ ಖರ್ಚು ಮಾಡಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.

ಜಿಲ್ಲಾ ಪಂಚಾಯಿತಿ ಸದಸ್ಯರ ನಡುವಿನ ತಿಕ್ಕಾಟದಿಂದ ಜಿಲ್ಲೆಗೆ ಬಂದ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಲತಾ ಅವರನ್ನು ಅಧಿಕಾರದಿಂದ ಇಳಿಸುವ ಸಲುವಾಗಿ ಆಗಸ್ಟ್‌ನಲ್ಲಿ ಕರೆದ ಸಭೆಗೆ ಸದಸ್ಯರು ಗೈರು ಹಾಜರಾಗಿದ್ದರು. ನಂತರ ಕರೆದ ಯಾವ ಸಭೆಗೂ ಬರಲಿಲ್ಲ. ಸಭೆ ನಡೆದು ಕ್ರಿಯಾ ಯೋಜನೆಗೆ ಒಪ್ಪಿಗೆ ನೀಡಿದ್ದರೆ ಈ ವೇಳೆಗಾಗಲೇ ಸಾಕಷ್ಟು ಅನುದಾನ ಬಳಕೆ ಮಾಡಿಕೊಳ್ಳುವ ಅವಕಾಶಗಳು ಇದ್ದವು. ಸದಸ್ಯರ ಗೈರು ಹಾಜರಿಗೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಮಾಧುಸ್ವಾಮಿ, ಸದಸ್ಯರು ಸಭೆ ನಡೆಸಿ ಕ್ರಿಯಾ ಯೋಜನೆಗೆ ಒಪ್ಪಿಗೆ ನೀಡದಿದ್ದರೆ ಜಿಲ್ಲಾ ಪಂಚಾಯತಿ ಆಡಳಿತ ಮಂಡಳಿಯನ್ನು ಸೂಪರ್‌ ಸೀಡ್ ಮಾಡಿಸಲಾಗುವುದು ಎಂದು ಎಚ್ಚರಿಸಿದ್ದರು.

ನಂತರ ನವೆಂಬರ್ 20ರಂದು ನಡೆದ ಸಭೆಗೆ ಸದಸ್ಯರು ಹಾಜರಾಗಿ ಕ್ರಿಯಾ ಯೋಜನೆಗೆ ಒಪ್ಪಿಗೆ ನೀಡಿದ್ದರು. ಸಭೆ ಒಪ್ಪಿಗೆ ಕೊಟ್ಟ ನಂತರವೂ ಅಧಿಕಾರಿಗಳು ಕೆಲಸ ಮಾಡಿಲ್ಲ ಎಂಬುವುದು ಪ್ರಮುಖ ಆಕ್ಷೇಪವಾಗಿದೆ. ಒಟ್ಟಾರೆ 600 ಕೋಟಿ ರೂಪಾಯಿ ವಾಪಸ್ ಹೋಗುವ ಕಾರಣಕ್ಕೆ ಮೊನ್ನೆ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮೊದಲೇ ಈ ಕೆಲಸ ಮಾಡಿದ್ರೆ ಕೊರೊನಾ ಹರಡ್ತಿರಲಿಲ್ಲ -ಮಾಧುಸ್ವಾಮಿ ಹೀಗ್ಯಾಕೆ ಅಂದ್ರು?