ಇತ್ತೀಚೆಗೆ ಎಲೆಕ್ಟ್ರಿಕ್ ಸ್ಕೂಟರ್ಗಳಿಗೆ (Electrical Scooter) ಬೆಂಕಿ ಹೊತ್ತಿಕೊಂಡಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿದೆ. ಇಲ್ಲಿಯ ತನಕ ಚಿಮುಕಿಸಿದಂತೆ ಅಲ್ಲೊಂದು-ಇಲ್ಲೊಂದು ನಡೆಯುತ್ತಿತ್ತು ಅವಘಡ. ಈ ಬಾರಿ 20 ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿ ಪಾಲಾಗಿದೆ. ಜಿತೇಂದ್ರ ಇವಿ ಎಂಬ ಹೆಸರಿನ ಕಂಪೆನಿಗೆ ಸೇರಿದ ಎಲೆಕ್ಟ್ರಿಕ್ ಸ್ಕೂಟರ್ಗಳು ಇವಾಗಿದ್ದು, ಈ ದೃಶ್ಯಗಳ ವಿಡಿಯೋ ಸೆರೆ ಆಗಿದೆ. ದೃಶ್ಯದಲ್ಲಿ ಕಂಡುಬಂದಂತೆ ಸಾಗಾಟದ ವೇಳೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಕಂಟೇನರ್ನಲ್ಲಿ ಸಾಗಿಸುವಾಗ ಬೆಂಕಿ ಕಾಣಿಸಿಕೊಂಡಿದೆ. ವರದಿ ಪ್ರಕಾರ, ಈ ಸ್ಕೂಟರ್ಗಳನ್ನು ಕಾರ್ಖಾನೆಯಿಂದ ನಾಸಿಕ್ಗೆ ಸಾಗಿಸಲಾಗುತ್ತಿತ್ತು. ಜಿತೇಂದ್ರ ಎಲೆಕ್ಟ್ರಿಕಲ್ನ ನಲವತ್ತು ಸ್ಕೂಟರ್ಗಳು ಕಂಟೇನರ್ನಲ್ಲಿ ಇದ್ದವು. ಅದರಲ್ಲಿ ಮೇಲಿನ ಡೆಕ್ನಲ್ಲೇ 40ರ ಪೈಕಿ 20 ಸ್ಕೂಟರ್ಗಳಿದ್ದವು. ಅವುಗಳಲ್ಲಿ ಬೆಂಕಿ ಹೊತ್ತಿವೆ. ಏಪ್ರಿಲ್ 9ನೇ ತಾರೀಕಿನಂದು ಈ ಘಟನೆ ವರದಿ ಆಗಿದ್ದು, ಯಾವುದೇ ಸಾವು- ನೋವು ವರದಿ ಆಗಿಲ್ಲ.
ಇತ್ತೀಚೆಗೆ ಪುಣೆಯ ಲೋಹೆಗಾಂವ್ ಪ್ರದೇಶದಲ್ಲಿ ಓಲಾ ಎಸ್1 ಪ್ರೊ ಎಲೆಕ್ಟ್ರಿಕಲ್ ಸ್ಕೂಟರ್ಗೆ ಬೆಂಕಿ ಹೊತ್ತಿಕೊಂಡಿತ್ತು. 31 ಸೆಕೆಂಡ್ಗಳ ವಿಡಿಯೋವೊಂದು ಲಭ್ಯ ಆಗಿತ್ತು. ಅದರ ಪ್ರಕಾರ, ಜನ ನಿಬಿಡ ವಾಣಿಜ್ಯ ಪ್ರದೇಶದಲ್ಲಿ ನಿಲುಗಡೆ ಮಾಡಿದ್ದ ಸ್ಕೂಟರ್ ಸಂಪೂರ್ಣವಾಗಿ ಬೆಂಕಿ ಹೊತ್ತು ಉರಿದಿತ್ತು. ಈ ಘಟನೆಗೆ ಕಾರಣ ಏನು ಎಂಬ ಬಗ್ಗೆ ಈಗಲೂ ತನಿಖೆ ನಡೆಯುತ್ತಿದೆ. ಲಿಥಿಯಂ- ಅಯಾನ್ ಬ್ಯಾಟರಿ ಒಳಗೆ ಎಕ್ಸೋಥರ್ಮಿಕ್ ರಿಯಾಕ್ಷನ್ ಆಗಿ, ಹಾನಿ ಅಥವಾ ಶಾರ್ಟ್ ಸರ್ಕೀಟ್ ಆಗಿರಬಹುದು ಎಂಬ ಅಂದಾಜಿದೆ. ಲಿಥಿಯಂ-ಅಯಾನ್ ಬ್ಯಾಟರಿ ಬೆಂಕಿ ಹೊತ್ತಿಕೊಂಡರೆ ಅದನ್ನು ನಂದಿಸುವುದು ಕಷ್ಟ. ನೀರಿನೊಂದಿಗೆ ಅದು ಸಂಪರ್ಕಕ್ಕೆ ಬಂದ ಕೂಡಲೇ ಜಲಜನಕ ಅನಿಲ ಮತ್ತು ಲಿಥಿಯಂ-ಹೈಡ್ರಾಕ್ಸೈಡ್ ಉತ್ಪಾದಿಸುತ್ತದೆ. ವಿಪರೀತ ಬೆಂಕಿಗೆ ಕಾರಣ ಆಗುವುದು ಜಲಜನಕ ಅನಿಲ. ಅದೇ ಪ್ರಮುಖ ಸಮಸ್ಯೆ. ಗಮನಿಸಬೇಕಾದ ಸಂಗತಿ ಏನೆಂದರೆ, ಓಲಾ ಎಸ್1ನಲ್ಲಿ 2.97 kWh ಬ್ಯಾಟರಿ ಇದ್ದರೆ, ಎಸ್1 ಪ್ರೊನಲ್ಲಿ 3.98 kWh ಬ್ಯಾಟರಿ.
ಬೆಂಕಿ ಹೊತ್ತಲು ಕಾರಣ ಏನೇ ಇರಬಹುದು. ಆದರೆ ಇಂಥ ಘಟನೆಗಳು ಗಾಬರಿ ಹುಟ್ಟಿಸುವುದಂತೂ ಹೌದು. ಇದರ ಜತೆಗೆ ಭವಿಷ್ಯದಲ್ಲಿ ಎಲೆಕ್ಟ್ರಿಕ್ ಸ್ಕೂಟರ್, ಅದರಲ್ಲೂ ಓಲಾ ಎಲೆಕ್ಟ್ರಿಕ್ ಮತ್ತು ಜಿತೇಂದ್ರ ಇವಿಯಂಥದ್ದನ್ನು ಖರೀದಿಸಬೇಕು ಎಂದು ಆಸಕ್ತಿ ಹೊಂದಿರುವವರ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ನಡು ರಸ್ತೆಯಲ್ಲಿ ಹೊತ್ತಿ ಉರಿದ ಕೋಟಿ ಮೌಲ್ಯದ ಮರ್ಸಿಡಿಸ್ ಕಾರು: ಸಿಸಿಟಿವಿಯಲ್ಲಿ ದೃಶ್ಯ ಸೆರೆ