ಗ್ರಾಮ ಪಂಚಾಯತಿ​ ಚುನಾವಣೆಗೂ ಕಾಲಿಟ್ಟ ‘ಸೋಶಿಯಲ್​ ಮೀಡಿಯಾ’ ಪ್ರಚಾರ

ಗ್ರಾಮ ಪಂಚಾಯತಿ ಚುನಾವಣಾ ಪ್ರಚಾರಕ್ಕೆ ಸೋಶಿಯಲ್​ ಮೀಡಿಯಾ ಬಳಸಿಕೊಳ್ಳಲು ಮುಂದಾಗಿರುವುದು ಗಮನಾರ್ಹ. ಒಂದುವೇಳೆ ಗೆದ್ದವರು ಚುನಾವಣೆಗೂ ಮುನ್ನ ಮೆಸೇಜ್​ನಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಲಿಲ್ಲ ಅಂದರೆ ಜನರು ಸ್ಕ್ರೀನ್​​ಶಾಟ್ ತೋರಿಸಿ ತಿರುಗೇಟು ಕೊಟ್ಟರೂ ಅಚ್ಚರಿಯಲ್ಲಿ ಬಿಡಿ!

ಗ್ರಾಮ ಪಂಚಾಯತಿ​ ಚುನಾವಣೆಗೂ ಕಾಲಿಟ್ಟ ‘ಸೋಶಿಯಲ್​ ಮೀಡಿಯಾ’ ಪ್ರಚಾರ
ಪ್ರಾತಿನಿಧಿಕ ಚಿತ್ರ
Skanda

|

Dec 13, 2020 | 2:27 PM

ಕಲಬುರಗಿ: ರಾಜಕೀಯ ಪಕ್ಷಗಳು ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮತದರಾರ ಮನಗೆಲ್ಲಲು ಸೋಶಿಯಲ್ ಮೀಡಿಯಾಗಳನ್ನು ಬಳಸಿಕೊಳ್ಳುತ್ತಿರುವ ಪರಿಯನ್ನು 2014ರಿಂದ ಈಚೆಗೆ ಹೆಚ್ಚಾಗಿ ಗಮನಿಸುತ್ತಿದ್ದೇವೆ. ಈ ಟ್ರೆಂಡ್ ಇದೀಗ ಗ್ರಾಮ ಪಂಚಾಯತಿ ಚುನಾವಣೆಗೂ ಕಾಲಿಟ್ಟಿದೆ.

ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ತಾವು ಯಾರಿಗೂ ಕಮ್ಮಿಯಿಲ್ಲ ಅಂತಾ ಚುನಾವಣಾ ಪ್ರಚಾರಕ್ಕೆ ಸೋಶಿಯಲ್ ಮೀಡಿಯಾಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಂತೂ ಈಗ ಬಿಸಿಲಿಗಿಂತಲೂ ಬಿಗುವಾಗಿ ಚುನಾವಣಾ ಕಾವು ಏರುತ್ತಿದೆ.

ವಿಶೇಷವೆಂದರೆ ಈ ಬಾರಿ ಚುನಾವಣೆಯಲ್ಲಿ ಹೆಚ್ಚಿನ ಯುವಕರು ಸ್ಪರ್ಧೆ ಮಾಡುತ್ತಿದ್ದಾರೆ. ರಾಜಕೀಯದಲ್ಲಿ ಬೆಳೆಯಬೇಕು, ಸಮಾಜ ಸೇವೆ ಮಾಡಬೇಕು ಎನ್ನುವ ಹುಮ್ಮಸ್ಸು ಇರುವವರು ರಾಜಕೀಯ ಪ್ರವೇಶಕ್ಕೆ ಮೊದಲ ಮೆಟ್ಟಿಲಂತಿರುವ ಗ್ರಾಮ ಪಂಚಾಯತಿ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಇಂತಹ ಯುವ ಪಡೆ ಇದೀಗ ತಮ್ಮ ಪ್ರಚಾರಕ್ಕೆ ಸೋಶಿಯಲ್ ಮೀಡಿಯಾಗಳನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿರುವುದು ವಿಶೇಷ.

ಕಲಬುರಗಿ ಭಾಗದಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಅನೇಕ ಅಭ್ಯರ್ಥಿಗಳು ಪ್ರಚಾರಕ್ಕಾಗಿ ವಾಟ್ಸಪ್ ಮತ್ತು ಫೇಸ್​ಬುಕ್ ಮೊರೆ ಹೋಗಿದ್ದಾರೆ. ಗ್ರಾಮದ ಅಭಿವೃದ್ದಿಯೇ ನನ್ನ ಗುರಿ, ನುಡಿದಂತೆ ನಡೆಯುತ್ತೇನೆ, ಅಭಿವೃದ್ದಿ ಮಾಡಿಯೇ ತೀರುತ್ತೇನೆ. ಎಲ್ಲರಂತೆ ನಾನು ಸುಳ್ಳು ಆಶ್ವಾಸನೆ ನೀಡೋದಿಲ್ಲಾ, ಪಂಚಾಯತಿಯ ಎಲ್ಲಾ ಸವಲತ್ತುಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತೇನೆ, ಒಂದೇ ಒಂದು ಅವಕಾಶ ಕೊಡಿ ಎಂಬಿತ್ಯಾದಿ ಸ್ಲೋಗನ್​ಗಳನ್ನು ತಮ್ಮ ಭಾವಚಿತ್ರದೊಂದಿಗೆ ಹಾಕಿಕೊಂಡು ಮತಯಾಚನೆ ಮಾಡುತ್ತಿದ್ದಾರೆ.

ಸ್ಮಾರ್ಟ್​ಫೋನ್​ ಬಳಕೆ ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವಂತೆಯೇ ಯುವಕರು ಪಂಚಾಯತಿ ಚುನಾವಣಾ ಪ್ರಚಾರಕ್ಕೆ ಸೋಶಿಯಲ್​ ಮೀಡಿಯಾ ಬಳಸಿಕೊಳ್ಳಲು ಮುಂದಾಗಿರುವುದು ಗಮನಾರ್ಹ. ಒಂದುವೇಳೆ ಗೆದ್ದವರು ಚುನಾವಣೆಗೂ ಮುನ್ನ ಮೆಸೇಜ್​ನಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಲಿಲ್ಲ ಅಂದರೆ ಜನರು ಸ್ಕ್ರೀನ್​​ಶಾಟ್ ತೋರಿಸಿ ತಿರುಗೇಟು ಕೊಟ್ಟರೂ ಅಚ್ಚರಿಯಲ್ಲಿ ಬಿಡಿ! -ಸಂಜಯ್ ಚಿಕ್ಕಮಠ

ಗ್ರಾ.ಪಂ. ಚುನಾವಣೆಯಲ್ಲಿ ಫೇಸ್​ಬುಕ್ ಹವಾ: ಕೋಟೆನಾಡಿನಲ್ಲಿ ಹಳ್ಳಿಹಕ್ಕಿಗಳ ಪೋಸ್ಟ್ ಕಮೆಂಟ್​ ಅಬ್ಬರ

ಉಡುಪಿ: ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕಾರ.. ಯಾಕೆ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada