ಖಾಲಿಸ್ತಾನಿ ಪ್ರತ್ಯೇಕತಾವಾದಿಗಳಿಂದ ವಾಷಿಂಗ್ಟನ್ನ ಮಹಾತ್ಮ ಗಾಂಧಿ ಪ್ರತಿಮೆ ವಿರೂಪ
ಮಹಾತ್ಮ ಗಾಂಧಿ ಪ್ರತಿಮೆಯ ತಲೆ, ಮುಖದ ಮೇಲೆ ಹಳದಿ ಬಣ್ಣದ ಧ್ವಜ ಹೊದಿಸಿ, ಹಲಗೆ ಹಾಗೂ ಫಲಕಗಳನ್ನು ಅಂಟಿಸಿದರು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿಯ ಕುತ್ತಿಗೆಗೆ ಹಗ್ಗದಿಂದ ನೇತು ಹಾಕಿದರು.
ವಾಷಿಂಗ್ಟನ್: ಭಾರತದ ಸಂಸತ್ತು ಅಂಗೀಕರಿಸಿರುವ ಕೃಷಿ ಕಾನೂನುಗಳ ವಿರುದ್ಧ ವಾಷಿಂಗ್ಟನ್ನಲ್ಲಿ ಪ್ರತಿಭಟಿಸುತ್ತಿರುವ ಭಾರತ ಮೂಲದ ಸಿಖ್ಖರಿಗೆ ಖಾಲಿಸ್ತಾನಿ ಪ್ರತ್ಯೇಕತಾವಾದಿಗಳು ಬೆಂಬಲ ಘೋಷಿಸಿದ್ದಾರೆ. ವಾಷಿಂಗ್ಟನ್ನ ಭಾರತೀಯ ರಾಯಭಾರ ಕಚೇರಿ ಮುಂಭಾಗದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯ ಸುತ್ತ ಶನಿವಾರ (ಡಿ.12) ತಮ್ಮ ಧ್ವಜವನ್ನು ಕಟ್ಟಿ ವಿರೂಪಗೊಳಿಸಿದ್ದಾರೆ.
ವಾಷಿಂಗ್ಟನ್, ಮೇರಿಲ್ಯಾಂಡ್ ಮತ್ತು ವರ್ಜೀನಿಯಾ ಸುತ್ತಮುತ್ತಲಿನ ನೂರಾರು ಸಿಖ್ಖರು, ಹಾಗೂ ನ್ಯೂಯಾರ್ಕ್, ನ್ಯೂಜೆರ್ಸಿ, ಪೆನ್ಸಿಲ್ವೇನಿಯಾ, ಇಂಡಿಯಾನಾ, ಓಹಿಯೋ ಮತ್ತು ನಾರ್ತ್ ಕೆರೊಲಿಯಾದ ಅನೇಕರು ಶನಿವಾರ ಕಾರು ರ‍್ಯಾಲಿ ನಡೆಸಿದ್ದರು.
ಮೋದಿ ಪ್ರತಿಕೃತಿಗೆ ನೇಣು: ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಂತೆ ಕೆಲವರು ಭಾರತ ವಿರುದ್ಧ ಪೋಸ್ಟರ್ಸ್ಗಳು ಹಾಗೂ ಬ್ಯಾನರ್ಗಳನ್ನು ಪ್ರದರ್ಶಿಸುವ ಜೊತೆಗೆ ‘ಖಾಲಿಸ್ತಾನ ರಿಪಬ್ಲಿಕ್’ ಧ್ವಜವನ್ನು ಹಿಡಿದು ಘೋಷಣೆಗಳನ್ನು ಕೂಗಿದರು.
ಸ್ವಲ್ಪ ಸಮಯದ ಬಳಿಕ 2000ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅಂದಿನ ಅಮೇರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಸಮ್ಮುಖದಲ್ಲಿ ಅನಾವರಣಗೊಳಿಸಿದ ಮಹಾತ್ಮ ಗಾಂಧಿ ಪ್ರತಿಮೆಯ ತಲೆ, ಮುಖದ ಮೇಲೆ ಹಳದಿ ಬಣ್ಣದ ಧ್ವಜವನ್ನು ಹೊದಿಸಿ, ಹಲಗೆ ಹಾಗೂ ಫಲಕಗಳನ್ನು ಅಂಟಿಸಿದರು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿಯ ಕುತ್ತಿಗೆಗೆ ಹಗ್ಗದಿಂದ ನೇತು ಹಾಕಿದರು.