ಶಾಲೆ ಮೇಲೆ ದುಷ್ಕರ್ಮಿಗಳ ದಾಳಿ; ನೂರಾರು ವಿದ್ಯಾರ್ಥಿಗಳು ನಾಪತ್ತೆ, ಆತಂಕದಲ್ಲಿ ಪಾಲಕರು
ಬಂದೂಕುಧಾರಿಗಳು AK-47 ಹಿಡಿದು ಉತ್ತರ ನೈಜೀರಿಯಾದಲ್ಲಿನ ಕಂಕರದಲ್ಲಿರುವ ಸರಕಾರಿ ವಿಜ್ಞಾನ ಶಾಲೆಯ ಮೇಲೆ ದಾಳಿ ನಡೆಸಿದರು. ಈ ವೇಳೆ 200 ವಿದ್ಯಾರ್ಥಿಗಳು ನಾಪತ್ತೆಯಾಗಿದ್ದರೆಂದು ಪೊಲೀಸರು ತಳಿಸಿದ್ದಾರೆ.
ಅಬುಜ: ಉತ್ತರ ನೈಜೀರಿಯಾದ ಕಸ್ಟಿನಾ ಶಾಲೆಯ ಮೇಲೆ ಬಂದೂಕುಧಾರಿಗಳು ದಾಳಿ ಮಾಡಿದ ನಂತರ ನೂರಾರು ವಿದ್ಯಾರ್ಥಿಗಳು ಕಾಣೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂದೂಕುಧಾರಿಗಳು AK-47 ಹಿಡಿದು ಉತ್ತರ ನೈಜೀರಿಯಾದ ಕಂಕರದಲ್ಲಿರುವ ಸರಕಾರಿ ವಿಜ್ಞಾನ ಶಾಲೆಯ ಮೇಲೆ ಶುಕ್ರವಾರ ದಾಳಿ ನಡೆಸಿದ್ದರು ಎಂದು ಪೊಲೀಸ್ ವಕ್ತಾರ ಗ್ಯಾಂಬೊ ಇಸಾಹ್ ಹೇಳಿದ್ದಾರೆ.
ನಾಪತ್ತೆಯಾದ ವಿದ್ಯಾರ್ಥಿಗಳನ್ನು ಹುಡುಕಲು ಪೊಲೀಸರು ಕಾರ್ಯಾಚರಣೆ ಅರಂಭಿಸಿದ್ದಾರೆ. ದಾಳಿ ನಡೆದ ಸಂದರ್ಭದಲ್ಲಿ ಪೊಲೀಸರು ಮತ್ತು ದುಷ್ಕರ್ಮಿಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ಸುಮಾರು 200 ವಿದ್ಯಾರ್ಥಿಗಳಿಗೆ ಅವರ ಸುರಕ್ಷತೆ ದೃಷ್ಟಿಯಿಂದ ಓಡಿಹೋಗಲು ಅವಕಾಶ ಮಾಡಿಕೊಡಲಾಗಿತ್ತು. ಓರ್ವ ಪೊಲೀಸ್ ಅಧಿಕಾರಿಯೂ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಶಾಲೆಯ ಮೇಲೆ ದಾಳಿ ಮಾಡಿದವರನ್ನು, ನೈಜೀರಿಯಾ ಸೇನೆ ವಾಯುಪಡೆಯ ನೆರವಿನೊಂದಿಗೆ ಕಾಡಿನಲ್ಲಿ ಪತ್ತೆಹಚ್ಚಿದೆ. ಆಗಲೂ ಸಹ ಗುಂಡಿನ ಚಕಮಕಿ ನಡೆದಿದೆ ಎಂದು ನೈಜೀರಿಯಾ ಅಧ್ಯಕ್ಷ ಮುಹಮ್ಮದ್ ಬುಹಾರಿ ಹೇಳಿದ್ದಾರೆ.
ಇನ್ನು ಶಾಲೆಯ ಅರ್ಧದಷ್ಟು ವಿದ್ಯಾರ್ಥಿಗಳು ಅಂದರೆ ಸುಮಾರು 800 ಮಕ್ಕಳು ಕಾಣೆಯಾಗಿದ್ದಾರೆಂದು ಪಾಲಕರು, ಶಾಲಾ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ. ನಿಜಕ್ಕೂ ಎಷ್ಟು ಜನ ಕಾಣೆಯಾಗಿದ್ದಾರೆ ಎಂದು ಪತ್ತೆ ಹಚ್ಚಿ, ಅವರನ್ನೆಲ್ಲ ರಕ್ಷಿಸುವ ಕಾರ್ಯ ಆರಂಭವಾಗಿದೆ ಎಂದು ಸರ್ಕಾರ ಹೇಳಿದೆ.