Corona Vaccine: ಚೀನಾದ ಲಸಿಕೆ ನಿರಾಕರಿಸಿದ ಬ್ರೆಜಿಲ್ ನಾಗರಿಕರು

ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ಬ್ರೆಜಿಲ್​ ನಾಗರಿಕರಲ್ಲಿ ಗೊಂದಲ ಉಂಟಾಗಿದೆ. ಅಲ್ಲಿನ ಅಧ್ಯಕ್ಷರ ಹೇಳಿಕೆಯೂ ಈ ಗೊಂದಲವನ್ನು ಪುಷ್ಠೀಕರಿಸುವಂತಿದೆ.

  • ganapathi bhat
  • Published On - 12:32 PM, 13 Dec 2020
Corona Vaccine: ಚೀನಾದ ಲಸಿಕೆ ನಿರಾಕರಿಸಿದ ಬ್ರೆಜಿಲ್ ನಾಗರಿಕರು
ಸಾಂದರ್ಭಿಕ ಚಿತ್ರ

ಬ್ರೆಜಿಲ್​ನಲ್ಲಿ ಕೊವಿಡ್ ಲಸಿಕೆ ನಿರಾಕರಿಸುತ್ತಿರುವ ಜನರ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಶೇ. 22 ರಷ್ಟು ಮಂದಿ ಲಸಿಕೆ ಹಾಕಿಸಿಕೊಳ್ಳುವುದನ್ನು ತಿರಸ್ಕರಿದಿದ್ದಾರೆ. ಕಳೆದ ಆಗಸ್ಟ್​ನಲ್ಲಿ ಈ ಪ್ರಮಾಣ ಶೇ. 9ರಷ್ಟಿತ್ತು. ಕಳೆದ ವಾರ ನಡೆದ ಪೋಲ್ ಮಾಹಿತಿಯಂತೆ ಲಸಿಕೆ ನಿರಾಕರಿಸುತ್ತಿರುವವರ ಪ್ರಮಾಣ ಹೆಚ್ಚಳವಾಗಿದೆ. ಲಸಿಕೆ ತಿರಸ್ಕರಿಸುತ್ತಿರುವವರು ಚೀನಾ ತಯಾರಿಸಿದ ಲಸಿಕೆಯನ್ನು ಸ್ವೀಕರಿಸುವುದಿಲ್ಲ ಎಂಬ ಕಾರಣ ನೀಡಿರುವುದು ತಿಳಿದುಬಂದಿದೆ.

ಪೋಲ್​ಸ್ಟರ್ ಡಾಟಾಫೊಲ್ಹಾ ಕಳೆದ ವಾರ ನಡೆಸಿದ ಗಣತಿಯಂತೆ ಶೇ. 73ರಷ್ಟು ಜನರು ಲಸಿಕೆ ಹಾಕಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಶೇ. 5ರಷ್ಟು ಜನರಿಗೆ ಲಸಿಕೆ ಪಡೆಯಬೇಕೋ ಬೇಡವೋ ಎಂಬ ಬಗ್ಗೆ ಗೊಂದಲವಿದೆ ಎಂದು ತಿಳಿದುಬಂದಿದೆ. ಈ ಮೊದಲು ಆಗಸ್ಟ್​ನಲ್ಲಿ ನಡೆದ ಗಣತಿಯ ಪ್ರಕಾರ ಈ ಪ್ರಮಾಣ ಕ್ರಮವಾಗಿ ಶೇ. 89 ಮತ್ತು ಶೇ. 3ರಷ್ಟಿತ್ತು.

ಕೊವಿಡ್ ಲಸಿಕೆ ಬಗ್ಗೆ ಸಂದೇಹ ವ್ಯಕ್ತಪಡಿಸಿರುವ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೊನಾರೊ, ಯಾವ ಲಸಿಕೆಯನ್ನೂ ಪಡೆಯುವುದಿಲ್ಲ ಎಂದು ಕಳೆದ ತಿಂಗಳು ಹೇಳಿಕೆ ನೀಡಿದ್ದರು. ಲಸಿಕೆಯನ್ನು ತಿರಸ್ಕರಿಸುವುದು ನನ್ನ ಹಕ್ಕು ಎಂದೂ ಅವರು ಹೇಳಿಕೊಂಡಿದ್ದರು. ಮುಖ್ಯವಾಗಿ ಚೀನಾದ ಕೊವಿಡ್ ಲಸಿಕೆಯ ಬಗ್ಗೆ ಅವರು ಅನುಮಾನ ಪಟ್ಟಿದ್ದಾರೆ. ಜನರು ಲಸಿಕೆ ತಿರಸ್ಕರಿಸುವಲ್ಲಿ ಬ್ರೆಜಿಲ್ ಅಧ್ಯಕ್ಷರ ಹೇಳಿಕೆ ಭಾರಿ ಪರಿಣಾಮ ಬೀರಿದೆ ಎಂದೂ ಹೇಳಲಾಗುತ್ತಿದೆ.

ಡಾಟಾಫೊಲ್ಹಾ ಮಾಹಿತಿಯಂತೆ, ಕೇವಲ ಶೇ. 47ರಷ್ಟು ಜನರು ಚೀನಾ ಲಸಿಕೆ ಪಡೆಯಲು ಒಪ್ಪಿಗೆ ಸೂಚಿಸಿದ್ದಾರೆ. ಶೇ. 50ರಷ್ಟು ಮಂದಿ ಚೀನಾ ತಯಾರಿಸಿದ ಕೊವಿಡ್ ಲಸಿಕೆ ಸ್ವೀಕರಿಸುವುದಿಲ್ಲ ಎಂದಿದ್ದಾರೆ. ಶೇ. 3ರಷ್ಟು ಜನರು ಈ ಬಗ್ಗೆ ನಿರ್ಣಯ ತೆಗೆದುಕೊಂಡಿಲ್ಲ ಎಂದು ತಿಳಿದುಬಂದಿದೆ.

ಕೊರೊನಾ ಲಸಿಕೆಗೂ ತಪ್ಪಲಿಲ್ಲ ಹ್ಯಾಕರ್ಸ್​ ಕಾಟ; ಸೈಬರ್​ ಅಟ್ಯಾಕ್​ಗೆ ಬೆದರಿದ ಫೈಜರ್​, ಬಯೋಎನ್​ಟೆಕ್