ಕೊಳಚೆ ನೀರಿನಲ್ಲೇ.. ಬಂಗಾರದಂತಹ ನೂರಾರು ಗಂಧದ ಮರ ಬೆಳೆಸಿದ ಕೋಲಾರದ ರೈತ!

| Updated By: ಆಯೇಷಾ ಬಾನು

Updated on: Jun 17, 2020 | 3:50 PM

ಕೋಲಾರ: ಜಿಲ್ಲೆಯಲ್ಲಿ ಸದಾಕಾಲ ಬರದ ತಾಂಡವ. ಮಳೆ ನೀರಿನ ಮೇಲೇ ಅವಲಂಬಿತವಾದ ಇಲ್ಲಿಯ ನದಿ-ಹಳ್ಳಗಳು, ಕೆರೆ-ಕುಂಟೆಗಳಲ್ಲಿ ನೀರು ಇದ್ದರೆ ಇತ್ತು.. ಇಲ್ಲಾಂದ್ರೆ ಇಲ್ಲ. ಜೊತೆಗೆ ಅಂತರ್ಜಲದ ಮಟ್ಟ ಪಾತಾಳಕ್ಕೆ ಕುಸಿದಿದ್ದು ಕೊಳವೆ ಬಾವಿ ಕೊರೆಸಲು ಹರಸಾಹಸ ಪಡೆಬೇಕಾಗಿ ಹೋಗಿದೆ. ಹೀಗಾಗಿ ಬೇಸಾಯ ಮಾಡಲು ಪ್ರತಿಕೂಲ ಪರಿಸ್ಥಿತಿ ಇರುವ ಕಾರಣ ಹಲವಾರು ಜನ ರೈತರು ಕೃಷಿಗೆ ವಿದಾಯ ಹೇಳಿ ಬೆಂಗಳೂರು ಮುಂತಾದ ಪಟ್ಟಣಗಳಿಗೆ ಕೆಲಸ ಅರಸಿಕೊಂಡು ಗುಳೆ ಹೋಗುತ್ತಿದ್ದಾರೆ. ನಾರುವ ನೀರಿನಲ್ಲೇ ಬೇಸಾಯ! ಆದರೆ, ಇದೇ ಚಿನ್ನದ ನಾಡಿನ […]

ಕೊಳಚೆ ನೀರಿನಲ್ಲೇ.. ಬಂಗಾರದಂತಹ ನೂರಾರು ಗಂಧದ ಮರ ಬೆಳೆಸಿದ ಕೋಲಾರದ ರೈತ!
Follow us on

ಕೋಲಾರ: ಜಿಲ್ಲೆಯಲ್ಲಿ ಸದಾಕಾಲ ಬರದ ತಾಂಡವ. ಮಳೆ ನೀರಿನ ಮೇಲೇ ಅವಲಂಬಿತವಾದ ಇಲ್ಲಿಯ ನದಿ-ಹಳ್ಳಗಳು, ಕೆರೆ-ಕುಂಟೆಗಳಲ್ಲಿ ನೀರು ಇದ್ದರೆ ಇತ್ತು.. ಇಲ್ಲಾಂದ್ರೆ ಇಲ್ಲ. ಜೊತೆಗೆ ಅಂತರ್ಜಲದ ಮಟ್ಟ ಪಾತಾಳಕ್ಕೆ ಕುಸಿದಿದ್ದು ಕೊಳವೆ ಬಾವಿ ಕೊರೆಸಲು ಹರಸಾಹಸ ಪಡೆಬೇಕಾಗಿ ಹೋಗಿದೆ. ಹೀಗಾಗಿ ಬೇಸಾಯ ಮಾಡಲು ಪ್ರತಿಕೂಲ ಪರಿಸ್ಥಿತಿ ಇರುವ ಕಾರಣ ಹಲವಾರು ಜನ ರೈತರು ಕೃಷಿಗೆ ವಿದಾಯ ಹೇಳಿ ಬೆಂಗಳೂರು ಮುಂತಾದ ಪಟ್ಟಣಗಳಿಗೆ ಕೆಲಸ ಅರಸಿಕೊಂಡು ಗುಳೆ ಹೋಗುತ್ತಿದ್ದಾರೆ.

ನಾರುವ ನೀರಿನಲ್ಲೇ ಬೇಸಾಯ!
ಆದರೆ, ಇದೇ ಚಿನ್ನದ ನಾಡಿನ ಯುವ ರೈತನೊಬ್ಬ ಹೆಚ್ಚು ನೀರಿಲ್ಲದಿದ್ರೂ, ನಿರಾಸೆಗೊಳ್ಳದೆ, ಇರುವ ಕಡಿಮೆ ಪ್ರಮಾಣದ ನೀರಿನಲ್ಲೇ ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಬೇಸಾಯ ಮಾಡಲು ಮುಂದಾಗಿದ್ದಾನೆ. ಹೌದು, ನಾವು ಹೇಳಲು ಹೊರಟಿರುವುದು ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಜೋತೇನಹಳ್ಳಿ ಗ್ರಾಮದ ಯುವ ರೈತ ಅಂಬರೀಶನ ಶ್ರಮದ ಯಶೋಗಾಥೆ ಇದು.

ನೀರಿಲ್ಲ ನೀರಿಲ್ಲ ಎಂದು ಪರದಾಡುವ ರೈತರ ಮಧ್ಯೆ ಈ ಅಂಬರೀಶ ಊರಿನಿಂದ ಹೊರಬರುವ ಕೊಳಚೆ ನೀರನ್ನೇ ಬಳಸಿ ಬೇಸಾಯಕ್ಕೆ ಮುಂದಾಗಿದ್ದಾನೆ. ಅಬ್ಬಬ್ಬಾ ಎಷ್ಟು ನಾರುತ್ತೆ ಈ ನೀರು ಎಂದು ಮೂಗು ಮುಚ್ಚಿಕೊಂಡು ಮಾರು ದೂರ ಓಡುವ ಅದೇ ದುರ್ವಾಸನೆ ಸೂಸುವ ನೀರಿನಲ್ಲಿ ತನಗಿರುವ ಅರ್ಧ ಎಕರೆ ಜಮೀನಿನಲ್ಲಿ ಸುಗಂಧ ಬೀರುವ ನೂರಾರು ಶ್ರೀಗಂಧದ ಮರಗಳನ್ನು ಬೆಳೆಸಿದ್ದಾನೆ. ಇದಲ್ಲದೆ ವಿವಿಧ ಬಗೆಯ 600 ಸಸಿಗಳನ್ನು ಸಹ ನೆಟ್ಟಿದ್ದಾನೆ.

ಸೋಲಿಲ್ಲದ ಸರದಾರ ಈ ನಮ್ಮ ಅಂಬರೀಶ
ಜಲಸಂರಕ್ಷಣೆಯ ಬಗ್ಗೆ ಚೆನ್ನಾಗಿ ಅರಿತಿರುವ ಅಂಬರೀಶ ತನ್ನ ಭೂಮಿಯಲ್ಲೇ ಕೃಷಿ ಹೊಂಡವನ್ನ ನಿರ್ಮಿಸಿ ಊರಿನ ಚರಂಡಿ ನೀರು ಅಲ್ಲಿಗೆ ಹರಿದು ಬರುವಂತೆ ವ್ಯವಸ್ಥೆ ಮಾಡಿದ್ದಾನೆ. ಶೇಖರಣೆ ಯಾದ ನೀರನ್ನು ಹನಿ ನೀರಾವರಿ ಅಥವಾ ಡ್ರಿಪ್​ ಇರಿಗೇಷನ್​ ಬಳಸಿಕೊಂಡು ಸಸಿ ಮತ್ತು ಮರಗಳಿಗೆ ನೀರೊದಗಿಸಿ ಮಿತವ್ಯಯದಲ್ಲಿ ಅಧಿಕ ಲಾಭ ಪಡೆಯುತ್ತಿದ್ದಾನೆ.

ಇನ್ನು ಇವರ ಈ ಪ್ರಯತ್ನಕ್ಕೆ ಗ್ರಾಮಸ್ಥರಿಂದ ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಅಪ್ಪ ಹಾಕಿದ ಆಲದಮರ ಎಂದು ಅದಕ್ಕೇ ಜೋತುಬಿದ್ದುಕೊಂಡಿರುವುದರ ಬದಲು ಹೊಸ ಪ್ರಯತ್ನವನ್ನು ಮಾಡಿ ಯಶಸ್ಸು ಪಡೆದಿದ್ದಾರೆ. ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೇ ಸಾಗದು ಕೆಲಸವು ಮುಂದೆ ಎಂಬ ಅಣ್ಣಾವ್ರ ಬಂಗಾರದ ಮನುಷ್ಯ ಸಿನಿಮಾದ ಹಾಡಿನಂತೆ ಚಿನ್ನದ ನಾಡಿನಲ್ಲಿ ಬಂಗಾರದಂತಹ ಸಿರಿಗಂಧದ ಮರವನ್ನು ಬೆಳೆಸಿರುವ ಈ ನೇಗಿಲಯೋಗಿಯ ಯಶೋಗಾಥೆ ಎಲ್ಲರಿಗೂ ಮಾದರಿ -ರಾಜೇಂದ್ರ ಸಿಂಹ


Published On - 1:56 pm, Wed, 17 June 20