ಚಿತ್ರದುರ್ಗ: ಶಿವಮೊಗ್ಗ ಜಿಲ್ಲೆಯ ಶ್ರೀ ಮಜ್ಜಗದ್ಗುರು ಕೂಡಲಿ ಶೃಂಗೇರಿ ಶಂಕರಾಚಾರ್ಯ ಮಹಾಸಂಸ್ಥಾನಮ್ನ ಹಳೇ ಸಮಿತಿಯವರಿಂದ ಮಠದಲ್ಲಿ ಆತಂಕ ಸೃಷ್ಟಿಯಾಗಿದೆ. ನಮ್ಮನ್ನು ಹೆದರಿಸಿ ಮಠದ ಹಣ, ಆಸ್ತಿ ದೋಚಲು ಕೆಲವರು ಷಡ್ಯಂತ್ರ ರೂಪಿಸಿದ್ದಾರೆ ಎಂದು ಕೂಡಲಿ ಮಠದ ಪೀಠಾಧಿಪತಿ ವಿಧ್ಯಾಭಿನವ ವಿದ್ಯಾರಣ್ಯ ಭಾರತೀ ಶ್ರೀ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಮಠದ ಹಳೇ ಸಮಿತಿಯವರು ಮಠದಲ್ಲಿ ಆತಂಕ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಕೆಲವರು ಗೂಂಡಾಗಳನ್ನು ಕರೆತಂದು ಮಠದಲ್ಲಿ ದಾಂಧಲೆ ನಡೆಸಿದ್ದಾರೆ. ಪೂಜೆ, ಅನುಷ್ಠಾನ ಮಾಡಲು ಸಹ ಅಡೆತಡೆ ಮಾಡಿ ಕಿರುಕುಳ ನೀಡುತ್ತಿದ್ದಾರೆ. ಕಳೆದ ಶನಿವಾರ ದಾಂಧಲೆ ನಡೆಸಿ ನಮ್ಮ ಶಿಷ್ಯಂದಿರು ಮತ್ತು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು. ಪೀಠದಿಂದ ಇಳಿದು ನಡೆಯುವಂತೆ ನಮ್ಮ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ಹೀಗಾಗಿ ನಾವು ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ.
ಒತ್ತಡಕ್ಕೆ ಒಳಗಾಗಿ ಯಾರನ್ನಾದರೂ ಪೀಠಾಧಿಪತಿ ಮಾಡಿಕೊಳ್ಳಿ ಅಂದಿದ್ದೆ. ಅದಕ್ಕೆ ಹೊಸ ಪೀಠಾಧಿಪತಿ ಆಯ್ಕೆಗೆ ಶ್ರೀಗಳ ಸಮ್ಮತಿಯೆಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಗಲಾಟೆ, ದೊಂಬಿಯಿಂದ ಮನನೊಂದು ಚಿತ್ರದುರ್ಗದ ಶಾಖಾಮಠಕ್ಕೆ ಬಂದಿದ್ದೇನೆ ಎಂದು ಭಾರತೀ ಶ್ರೀ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: Death Note: ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ನೇಣು ಬಿಗಿದುಕೊಂಡು ಆತ್ಮಹತ್ಯೆ