KPSC ಮೂಲಕ ನೇಮಕವಾದ್ರೂ ಸಿಗುತ್ತಿಲ್ಲ ನೇಮಕಾತಿ ಆದೇಶ: ಸಚಿವರ ಮನೆ ಎದುರು ಅಭ್ಯರ್ಥಿಗಳಿಂದ ಧರಣಿ
ಸರ್ಕಾರದ ವಿಳಂಬ ನೀತಿ ಖಂಡಿಸಿ ನೇಮಕವಾದ ಅಭ್ಯರ್ಥಿಗಳು ಕಳೆದ 3 ದಿನಗಳಿಂದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಶ್ರೀಮಂತ ಪಾಟೀಲ್ ಮನೆಯೆದುರು ಧರಣಿ ನಡೆಸುತ್ತಿದ್ದಾರೆ. ಬೆಂಗಳೂರಿನ ಮೇಖ್ರಿ ಸರ್ಕಲ್ ಸಮೀಪವಿರುವ ಸಚಿವ ಶ್ರೀಮಂತ ಪಾಟೀಲ್ ನಿವಾಸದ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇದ್ದ 222 ಹುದ್ದೆಗಳಿಗೆ KPSC ಮೂಲಕ ನೇಮಕವಾಗಿದ್ದರೂ ನೇಮಕಾತಿ ಆದೇಶ ನೀಡದಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಸಚಿವರ ನಿವಾಸದ ಎದುರು ಧರಣಿ ನಡೆಸುತ್ತಿದ್ದಾರೆ. ಸರ್ಕಾರದ ವಿಳಂಬ ನೀತಿ ಖಂಡಿಸಿ ನೇಮಕವಾದ ಅಭ್ಯರ್ಥಿಗಳು ಕಳೆದ 3 ದಿನಗಳಿಂದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಶ್ರೀಮಂತ ಪಾಟೀಲ್ ಮನೆಯೆದುರು ಧರಣಿ ನಡೆಸುತ್ತಿದ್ದಾರೆ. ಬೆಂಗಳೂರಿನ ಮೇಖ್ರಿ ಸರ್ಕಲ್ ಸಮೀಪವಿರುವ ಸಚಿವ ಶ್ರೀಮಂತ ಪಾಟೀಲ್ ನಿವಾಸದ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ಕೂಡಲೇ ನೇಮಕಾತಿ ಆದೇಶ ನೀಡುವಂತೆ ಆಗ್ರಹಿಸಿ ಕಳೆದ 3 ದಿನಗಳಿಂದ ಹಗಲು ರಾತ್ರಿ ಎನ್ನದೇ ಸಚಿವ ಶ್ರೀಮಂತ ಪಾಟೀಲ್ ಮನೆ ಎದುರು ರಾಜ್ಯದ ನಾನಾ ಭಾಗಗಳಿಂದ ಬಂದಿರುವ ಅಭ್ಯರ್ಥಿಗಳು ಧರಣಿ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯಿಂದ ಅನುಮತಿ ಪಡೆದುಕೊಂಡು ಕೂಡಲೇ ನೇಮಕ ಆದೇಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಮಧ್ಯೆ, ಶನಿವಾರದವರೆಗೂ ಕಾಯುವಂತೆ ಪ್ರತಿಭಟನಾನಿರತ ಅಭ್ಯರ್ಥಿಗಳಿಗೆ ಸಚಿವ ಪಾಟೀಲ್ ಮನವಿ ಮಾಡಿದ್ದಾರೆ. ಇದೀಗ, ಸಚಿವರ ಮನವಿ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಧರಣಿಯನ್ನು ತಾತ್ಕಾಲಿಕವಾಗಿ ಮುಂದೂಡಲು ನಿರ್ಧರಿಸಿದ್ದಾರೆ.
ಫ್ಲೋರ್ ಮಿಲ್ ಮಾಲೀಕನ ನಿರ್ಲಕ್ಷ್ಯದಿಂದ ಬಾಲಕನಿಗೆ ಸುಟ್ಟ ಗಾಯ ಖಾಸಗಿ ಕಂಪನಿ ನಿರ್ಲಕ್ಷ್ಯದಿಂದ ಬಾಲಕನಿಗೆ ಸುಟ್ಟ ಗಾಯಗಳಾಗಿರುವ ಘಟನೆ ಬೆಂಗಳೂರು ಹೊರವಲಯದ ಅತ್ತಿಬೆಲೆಯ ಇಚ್ಚಂಗೂರು ಕೆರೆ ಬಳಿ ನಡೆದಿದೆ. ಚಂದ್ರು(10) ಎಂಬ ಬಾಲಕನಿಗೆ ಗಾಯಗಳಾಗಿದೆ. ರಾಮಯ್ಯ ಫ್ಲೋರ್ ಮಿಲ್ ಮಾಲೀಕರ ವಿರುದ್ಧ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ.
ಅತ್ತಿಬೆಲೆ ಕೈಗಾರಿಕಾ ಪ್ರದೇಶದಲ್ಲಿರುವ ರಾಮಯ್ಯ ಫ್ಲೋರ್ ಮಿಲ್ನ ಮಾಲೀಕರು ಕೆರೆ ಬಳಿ ತ್ಯಾಜ್ಯ ಸುರಿಯುತ್ತಿದ್ದರು. ಇದರಿಂದ ಬೆಂಕಿ ಆವರಿಸಿ ಮೇಲ್ನೋಟಕ್ಕೆ ಕಾಣದಂತಿರುತ್ತೆ. ಆದರೆ, ಇದರೊಳಗೆ ಕಾಲಿಟ್ಟರೆ ಸುಟ್ಟು ಕರಕಲಾಗುವಷ್ಟು ಬಿಸಿ ಇರುತ್ತದೆ. ಈ ನಡುವೆ, ಕಳೆದ ವಾರ ತಾಯಿ ಜೊತೆ ಕಟ್ಟಿಗೆಗೆಂದು ಹೋಗಿದ್ದ ಚಂದ್ರು ಮಾಹಿತಿ ಇಲ್ಲದೆ ಕಾಲಿಟ್ಟ ಕೂಡಲೇ ಕುಸಿದು ಬಿದ್ದಿದ್ದಾನೆ. ಇದರಿಂದಾಗಿ ಚಂದ್ರುವಿನ ಕಾಲುಗಳು ಸಂಪೂರ್ಣವಾಗಿ ಸುಟ್ಟು ಗಾಯಗಳಾಗಿದೆ.
ಇನ್ನು, ಈ ಬಗ್ಗೆ, ಕಂಪನಿ ಮಾಲೀಕರನ್ನು ಪ್ರಶ್ನಿಸಿದರೆ ಇದಕ್ಕೆ ಹಾರಿಕೆ ಉತ್ತರ ಕೊಟ್ಟಿದ್ದಾರೆ. ಸದ್ಯ, ಚಂದ್ರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೆಂಗಿನಕಾಯಿ ಬಜಾರ್‌ನಲ್ಲಿ ಚಿಕ್ಕಪ್ಪನನ್ನೇ ಕೊಂದ ಮಗ ತೆಂಗಿನಕಾಯಿ ಬಜಾರ್‌ನಲ್ಲಿ ಚಿಕ್ಕಪ್ಪನನ್ನೇ ಮಗ ಕೊಂದ ಘಟನೆ ಗದಗ ನಗರದ ಬೆಟಗೇರಿಯಲ್ಲಿ ನಡೆದಿದೆ. ತನ್ನ ಚಿಕ್ಕಪ್ಪ ಮಂಜುನಾಥ(42) ಕಣ್ಣಿಗೆ ಖಾರದ ಪುಡಿ ಎರಚಿದ ಪ್ರವೀಣ್ ಎಂಬ ಯುವಕ ಚಾಕುವಿನಿಂದ ಕತ್ತು ಕೊಯ್ದು ಹತ್ಯೆಗೈದಿದ್ದಾನೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪ್ರವೀಣ್‌ನಿಂದ ಕೃತ್ಯ ಎಸಗಲಾಗಿದೆ.
ತೆಂಗಿನಕಾಯಿ ಕೀಳಲು ಹೋಗಿ ಕೆಳಗೆ ಬಿದ್ದು ಯುವಕ ಸಾವು ಇತ್ತ, ತೆಂಗಿನಕಾಯಿ ಕೀಳಲು ಹೋಗಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೇರಡಿಕೆ ಗ್ರಾಮದಲ್ಲಿ ನಡೆದಿದೆ. ಹೇರಡಿಕೆ ಗ್ರಾಮದಲ್ಲಿ ಮರದಿಂದ ಬಿದ್ದು ಮಹೇಶ್(24) ಎಂಬ ಯುವಕ ಅಸುನೀಗಿದ್ದಾನೆ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನಕಪುರದಲ್ಲಿ 74 ವರ್ಷದ ವೃದ್ಧೆ ಸಜ್ಮಮ್ಮ ಸಾವು ಕನಕಪುರದಲ್ಲಿ 74 ವರ್ಷದ ವೃದ್ಧೆ ಸಜ್ಮಮ್ಮ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಸಜ್ಜಮ್ಮ ಕನಕಪುರ ತಾಲೂಕಿನ ಪಡವಣಗೆರೆ ಗ್ರಾಮದ ವಾಸಿ. ವೃದ್ಧೆಯ ಸಾವಿಗೆ ನಿಖರ ಕಾರಣ ಏನೆಂದು ಗೊತ್ತಿಲ್ಲ. ವೃದ್ಧೆ ಮನೆಯತ್ತ ಜಿಲ್ಲಾ ಆರೋಗ್ಯಾಧಿಕಾರಿ ದೌಡಾಯಿಸಿದ್ದಾರೆ. ಹಾರೋಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮರಣೋತ್ತರ ಪರೀಕ್ಷೆ ಬಂದ ಬಳಿಕ ಕಾರಣ ಬಗ್ಗೆ ಸ್ಪಷ್ಟತೆ ಸಿಗಲಿದೆ.
ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಪ್ರಕರಣ: ಯುವಕರಿಬ್ಬರಿಗೆ ಜೈಲು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಪ್ರಕರಣದಲ್ಲಿ ಯುವಕರಿಬ್ಬರಿಗೆ ತಲಾ 10 ವರ್ಷ ಜೈಲು, ₹5.2 ಲಕ್ಷ ದಂಡ ವಿಧಿಸಲಾಗಿದೆ. ಚಾಮರಾಜನಗರದ ಸೆಷನ್ಸ್ ಕೋರ್ಟ್ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಅಪರಾಧಿಗಳಾದ
ಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಆರೋಪಿಗಳು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಗ್ರಾಮದವರು. 2016ರಲ್ಲಿ ಯುವಕರು ಇಬ್ಬರು ಅಪ್ರಾಪ್ತೆಯರನ್ನ ಕರೆದೊಯ್ದಿದ್ದರು. ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಾರು ಕಳ್ಳನನ್ನು ಬಂಧಿಸಿದಾಗ ಶ್ರೀಗಂಧ ಸಾಗಣೆ ಪತ್ತೆ ಪ್ರಕರಣ: ಮತ್ತೊಬ್ಬ ಕಾನ್ಸ್ಟೇಬಲ್ ಅಮಾನತು ಕಾರು ಕಳ್ಳನನ್ನು ಬಂಧಿಸಿದಾಗ ಶ್ರೀಗಂಧ ಸಾಗಣೆ ಪತ್ತೆ ಪ್ರಕರಣದಲ್ಲಿ ಮತ್ತೊಬ್ಬ ಕಾನ್ಸ್ಟೇಬಲ್ರನ್ನು ಅಮಾನತು ಮಾಡಲಾಗಿದೆ. ಹಾಸನದ ಸಿಇಎನ್ ವಿಭಾಗದ ಬಿ.ಆರ್.ಧರ್ಮ ಎಂಬ ಪೇದೆಯನ್ನು ಅಮಾನತುಗೊಳಿಸಲಾಗಿದೆ. ಆರೋಪಿ ಮಂಜುನಾಥ್ ಹೇಳಿಕೆ ಆಧರಿಸಿ ಧರ್ಮರನ್ನು ಅಮಾನತು ಮಾಡಲಾಗಿದೆ.
ಜ.27ರಂದು ಪೆನ್ಷನ್ ಮೊಹಲ್ಲಾ ಠಾಣಾ ವ್ಯಾಪ್ತಿಯಲ್ಲಿ ಫಾರ್ಚೂನರ್ ಕಾರು ಕಳ್ಳನ ಬಂಧನಕ್ಕಾಗಿ ಪೊಲೀಸರು ಶೋಧ ನಡೆಸಿದ್ದರು. ಫೆ.23ರಂದು ಮಂಜುನಾಥ್ ಎಂಬುವವರ ಮನೆ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಹಾಸನದ ಬಿ.ಕಾಟೀಹಳ್ಳಿ ಬಡಾವಣೆಯ SBM ಕಾಲೋನಿಯ ಮನೆಯಲ್ಲಿ 3 ಕೋಟಿಗೂ ಅಧಿಕ ಮೌಲ್ಯದ ಶ್ರೀಗಂಧ ಸಿಕ್ಕಿತ್ತು. ಈ ವೇಳೆ, ಮಂಜುನಾಥ್ನಿಂದ ಲಂಚ ಪಡೆದ ಆರೋಪದಲ್ಲಿ ವಾರದ ಹಿಂದೆ ಪಿಸಿ ಸೋಮಶೇಖರ್ ಅಮಾನತು ಮಾಡಲಾಗಿತ್ತು. ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಪಿಸಿ ಅಮಾನತು ಆಗಿದ್ದಾರೆ. ಇಬ್ಬರು ಕಾನ್ಸ್ಟೇಬಲ್ಗಳನ್ನು ಹಾಸನ ಎಸ್ಪಿ ಅಮಾನತುಗೊಳಿಸಿದ್ದಾರೆ.
ಒಂದೇ ದಿನ ಮೂರು ದ್ವಿಚಕ್ರ ವಾಹನ ಕದ್ದ ಬೈಕ್ ಕಳ್ಳರು ಬೈಕ್ ಕಳ್ಳರು ಒಂದೇ ದಿನ ಮೂರು ದ್ವಿಚಕ್ರ ವಾಹನ ಕದ್ದಿರುವ ಘಟನೆ ಹಾಸನ ಹೊರವಲಯದ ಬುಸ್ತೇನಹಳ್ಳಿಯಲ್ಲಿ ನಡೆದಿದೆ. ಮಾ.14ರ ಮಧ್ಯರಾತ್ರಿ ಮೂವರು ಬೈಕ್ ಕಳ್ಳರಿಂದ ಕೃತ್ಯ ಎಸಗಲಾಗಿದೆ. ಎರಡು ವಾರದ ಹಿಂದೆ ಇದೇ ಗ್ರಾಮದಲ್ಲಿ ಕಾರು ಕಳವಾಗಿತ್ತು. ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಣ್ಣು ಮಾರುವ ಸೋಗಿನಲ್ಲಿ ಗಾಂಜಾ ಮಾರುತ್ತಿದ್ದವನ ಬಂಧನ ಹಣ್ಣು ಮಾರುವ ಸೋಗಿನಲ್ಲಿ ಗಾಂಜಾ ಮಾರುತ್ತಿದ್ದವನ ಬಂಧನವಾಗಿರುವ ಪ್ರಸಂಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ನಡೆದಿದೆ. ದಾಬಸ್ಪೇಟೆ ಠಾಣೆ ಪೊಲೀಸರಿಂದ ಮೆಹಬೂಬ್ ಪಾಷಾ ಎಂಬುವವರು ಅರೆಸ್ಟ್ ಆಗಿದ್ದಾರೆ. ಬಂಧಿತ ಆರೋಪಿಯಿಂದ 2 ಕೆ.ಜಿ.ಗೂ ಅಧಿಕ ಗಾಂಜಾ ಜಪ್ತಿ ಮಾಡಲಾಗಿದೆ.
ಹುಲಗಿನಕೊಪ್ಪ ಬಳಿ ಜೂಜುಅಡ್ಡೆ ಮೇಲೆ ಪೊಲೀಸರ ದಾಳಿ ಹುಲಗಿನಕೊಪ್ಪ ಬಳಿ ಜೂಜುಅಡ್ಡೆ ಮೇಲೆ ಪೊಲೀಸರ ದಾಳಿ ನಡೆದಿದ್ದು 8 ಜೂಜುಕೋರರ ಬಂಧನ, 2.35 ಲಕ್ಷಕ್ಕೂ ಹೆಚ್ಚು ಹಣ ಜಪ್ತಿ ಮಾಡಲಾಗಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹುಲಗಿನಕೊಪ್ಪ ಗ್ರಾಮದಲ್ಲಿ ಘಟನೆ ನಡೆದಿದೆ. ಬಂಧಿತ ಜೂಜುಕೋರರಿಗೆ ಸೇರಿದ 6 ಕಾರು, 4 ಬೈಕ್ ಜಪ್ತಿ ಮಾಡಲಾಗಿದೆ. ಪಿಎಸ್ಐ ಶ್ರೀಶೈಲ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಪೊಲೀಸರ ದಾಳಿ ನಡೆಯಿತು. ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನದ ಖಾಸಗಿ ಐಟಿಐ ಕಾಲೇಜಿನಲ್ಲಿ ಅಗ್ನಿ ಆಕಸ್ಮಿಕ ಹಾಸನದ ಖಾಸಗಿ ಐಟಿಐ ಕಾಲೇಜಿನಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದೆ. ಐಟಿಐ ಕಟ್ಟಡದಲ್ಲಿದ್ದ ವಸ್ತುಗಳು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಹಾಸನದ ಡೇರಿ ಸರ್ಕಲ್‌ನಲ್ಲಿರುವ ಕಾಲೇಜಿನಲ್ಲಿ ಘಟನೆ ನಡೆದಿದೆ. ಕಾಲೇಜಿನ ಪಕ್ಕದಲ್ಲಿದ್ದ ತ್ಯಾಜ್ಯಕ್ಕೆ ಕಿಡಿಗೇಡಿಗಳಿಂದ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಪಕ್ಕದಲ್ಲಿದ್ದ ಶಾರದಾ ಐಟಿಐ ಕಾಲೇಜಿಗೂ ಬೆಂಕಿ ವ್ಯಾಪಿಸಿದೆ. ಬೆಂಕಿ ತೀವ್ರತೆಗೆ ಕಾಲೇಜಿನಲ್ಲಿದ್ದ ವಸ್ತುಗಳು ಸಂಪೂರ್ಣ ಭಸ್ಮವಾಗಿದೆ.
ಇದನ್ನೂ ಓದಿ: ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ