ಗೇಣಿಗೆ ಭೂಮಿ ಕೊಟ್ಟು ಸುಮ್ಮನಿರುವ ಅಧಿಕಾರಿಗಳು; ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ ನಷ್ಟ
ಇಲ್ಲಿನ ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ. ದಂಧೆಕೋರರ ಜೇಬು ಸೇರುತ್ತಿದೆ. ಇಲಾಖೆ ಅಧಿಕಾರಿಗಳು ಮೌನ ವಹಿಸಿದ್ದನ್ನು ನೋಡಿದರೆ, ಅವರೂ ಈ ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲಾ? ಎಂಬ ಅನುಮಾನವೂ ಕಾಡುತ್ತಿದೆ.
ಯಾದಗಿರಿ: ಅದೊಂದು ಸರ್ಕಾರಕ್ಕೆ ಸೇರಿದ ಗುಡ್ಡಗಾಡು ಪ್ರದೇಶ. ಆ ಜಾಗ ಬಳಕೆಗೆ ಬರೋದಿಲ್ಲ ಎಂದು ಅಧಿಕಾರಿಗಳೇ ಗಣಿಗಾರಿಕೆ ಮಾಡಲು ಗೇಣಿಕೊಟ್ಟಿದ್ದರು. ಆದರೆ ಈಗ ಅಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಸುತ್ತಲಿನ ರೈತರು ಧೂಳಿನಿಂದ ಕಂಗಾಲಾಗಿದ್ದಾರೆ.
ಯಾದಗಿರಿ ಜಿಲ್ಲೆಯ ಶಹಾಪುರದ ದೋರನಹಳ್ಳಿ ಗ್ರಾಮದ ಹೊರಭಾಗದಲ್ಲಿರುವ ಮಹಾಂತೇಶ್ವರ ದೇಗುಲದ ಹಿಂಭಾಗದಲ್ಲಿ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸೇರಿದ ನೂರಾರು ಎಕರೆ ಗುಡ್ಡಗಾಡು ಪ್ರದೇಶ ಇದೆ. ಇಲ್ಲೀಗ ಸರ್ಕಾರದ ನಿಯಮವನ್ನೂ ಮೀರಿ ಕ್ರಷರ್ಗಳು ಕೆಲಸ ಮಾಡುತ್ತಿವೆ. ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿರುವ ದಂಧೆಕೋರರ ಆರ್ಭಟ ಜೋರಾಗಿದೆ.
ಪರವಾನಗಿ ಇದ್ರೂ ಅಕ್ರಮ ಇಲ್ಲಿ ಕಲ್ಲು ಗಣಿಗಾರಿಕೆ ಮಾಡುತ್ತಿರುವವರು ಎಲ್ಲರೂ ಪರವಾನಗಿ ಪಡೆದಿಲ್ಲ ಎಂದಲ್ಲ. ಪರವಾನಗಿ ಪಡೆದಿದ್ದಕ್ಕಿಂತಲೂ ಹೆಚ್ಚಿನ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವ ಮೂಲಕ ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆ. ಇಷ್ಟು ಪ್ರಮಾಣದಲ್ಲಿ ಲೂಟಿಯಾಗುತ್ತಿರುವುದನ್ನು ನೋಡಿದರೂ ಅಧಿಕಾರಿಗಳು ಬಾಯಿಮುಚ್ಚಿಕೊಂಡಿದ್ದಾರೆ.
ಸ್ಥಳೀಯರ ಆಕ್ರೋಶ ಇದೇ ಬೆಟ್ಟದಲ್ಲಿರುವ ಪಾಂಡವರ ಹೆಜ್ಜೆ ಕಲ್ಲುಗಳು, ಜೋಗಿಮಠ, ಅಕ್ಕತಂಗಿಯರ ಗುಂಡು ಐತಿಹಾಸಿಕ ಮಹತ್ವ ಪಡೆದಿವೆ. ಇದೇ ಗುಡ್ಡದ ಪಕ್ಕದಲ್ಲಿ ಮಹಾಂತೇಶ್ವರ ಮಂದಿರವಿದೆ. ಆದರೆ ಅಕ್ರಮ ಗಣಿಗಾರಿಕೆಯಿಂದ ಕಾಲಕ್ರಮೇಣ ಎಲ್ಲ ಹಾಳಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಗಣಿಗಾರಿಕೆ ಮಾಡುತ್ತಿರುವ ಗುತ್ತಿಗೆದಾರರು ಬ್ಲಾಸ್ಟ್ ಮಾಡುವ ಮೂಲಕ ಗುಡ್ಡದ ಕಲ್ಲುಗಳನ್ನು ತೆಗೆಯುತ್ತಿದ್ದಾರೆ. ಈ ವೇಳೆ ಯಾವುದೇ ನಿಯಮಗಳನ್ನೂ ಸರಿಯಾಗಿ ಪಾಲನೆ ಮಾಡುತ್ತಿಲ್ಲ. ಕಲ್ಲನ್ನು ಬ್ಲಾಸ್ಟ್ ಮಾಡುವಾಗ ಸುತ್ತಲೂ ಸೂಕ್ತ ಭದ್ರತೆ ಒದಗಿಸಬೇಕಾಗುತ್ತದೆ. ಸುತ್ತಲೂ ಟಿನ್ ಶೆಡ್ ಅಥವಾ ಕಲ್ಲಿನ ಗೋಡೆಯನ್ನಾದರೂ ನಿರ್ಮಿಸಬೇಕು. ಆದರೆ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಬೇಕಾಬಿಟ್ಟಿ ಸ್ಫೋಟ ಮಾಡಲಾಗುತ್ತಿದೆ. ಗಣಿಗಾರಿಕೆ ಪಕ್ಕದಲ್ಲೇ ಕ್ರಷರ್ಗಳನ್ನು ಇಡಲಾಗಿದ್ದು, ಜಲ್ಲಿಕಲ್ಲು ತಯಾರು ಮಾಡಲಾಗುತ್ತಿದೆ. ಇದರಿಂದಾಗಿ ವಿಪರೀತ ಧೂಳು ಆವರಿಸಿದ್ದು, ಸುತ್ತಲಿನ ಜನರಂತೂ ತತ್ತರಿಸಿದ್ದಾರೆ. ಅಕ್ಕಪಕ್ಕದ ಬೆಳೆಗಳು ನಾಶವಾಗುತ್ತಿದೆ. ಅಧಿಕಾರಿಗಳಿಗೆ ಹೇಳಿದರೆ, ನಾವು ಸ್ಥಳಕ್ಕೆ ಭೇಟಿ ಕೊಟ್ಟಿದ್ದೇವೆ ಎನ್ನುತ್ತಾರೆ. ಆದರೆ ಯಾವುದೇ ಕ್ರಮವನ್ನೂ ಕೈಗೊಂಡ ಹಾಗೆ ಕಾಣುತ್ತಿಲ್ಲ.
ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಇಲ್ಲಿನ ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ. ದಂಧೆಕೋರರ ಜೇಬು ಸೇರುತ್ತಿದೆ. ಇಲಾಖೆ ಅಧಿಕಾರಿಗಳು ಮೌನ ವಹಿಸಿದ್ದನ್ನು ನೋಡಿದರೆ, ಅವರೂ ಈ ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲಾ? ಎಂಬ ಅನುಮಾನವೂ ಕಾಡುತ್ತಿದೆ. -ಅಮೀನ್ ಹೊಸುರ್