ಕೋಲಾರ: ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ತನಗೆ ಸೋಂಕು ತಗುಲಿರೋದು ದೃಢಪಡುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿ ಎಸ್ಕೇಪ್ ಆಗುವ ಮೂಲಕ ಆತಂಕಕ್ಕೆ ಕಾರಣನಾಗಿದ್ದಾನೆ. ಇಂಥಾದೊಂದು ಘಟನೆ ಕೋಲಾರದಲ್ಲಿ ನಡೆದಿದ್ದು ಸೋಂಕಿತ ವ್ಯಕ್ತಿ ಕೋಲಾರಕ್ಕೆ ಗಂಡಾಂತರ ಆಗ್ತಾನಾ ಅನ್ನೋ ಆತಂಕ ಮೂಡಿಸಿದೆ.
ಕೋಲಾರದಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಕೊರೊನಾ ಸ್ಪೈಡರ್ ಆಗ್ತಾನಾ ಅನ್ನೋ ಆತಂಕ ಮೂಡಿದೆ ಮಂಡ್ಯ ಜಿಲ್ಲೆ ನಾಗಮಂಗಲ ಮೂಲದ ವ್ಯಕ್ತಿಯಿಂದ ಸದ್ಯ ಇಂಥಾದೊಂದು ಆತಂಕ ಎದುರಾಗಿದೆ. ಕೊರೊನಾ ಸೋಂಕಿತ ವ್ಯಕ್ತಿ P-4863 ಜೂನ್ 3 ರಂದು ಆಂಧ್ರದ ತಿರುಪತಿ ತಿರುಮಲದಿಂದ ಕೋಲಾರಕ್ಕೆ ಬರುತ್ತಾನೆ. ತಿರುಮಲದಲ್ಲಿ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಕೋಲಾರದ ಎಪಿಎಂಸಿ ಮಾರುಕಟ್ಟೆ ಬಳಿಯ ವಾಸವಿ ಹೋಟೆಲ್ ಒಂದರಲ್ಲಿ ಕೆಲಸ ಬೇಕೆಂದು ಕೇಳಿಕೊಂಡು ಹೋಗಿರುತ್ತಾನೆ.
ಆದ್ರೆ ವಾಸವಿ ಹೋಟೆಲ್ ಮಾಲೀಕ ಹೊರರಾಜ್ಯದಿಂದ ಬಂದಿರುವ ಕಾರಣ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಬರುವಂತೆ ಸೂಚನೆ ನೀಡುತ್ತಾನೆ. ಅದರಂತೆ ಆತ ಕೋಲಾರ ಜಿಲ್ಲಾಸ್ಪತ್ರೆ ಎಸ್ಎನ್ಆರ್ಗೆ ಹೋಗಿ ಕೋವಿಡ್ ಟೆಸ್ಟ್ಗೆ ಗಂಟಲು ದ್ರವ ಮಾದರಿ ನೀಡಿ ಬಂದಿರುತ್ತಾನೆ, ಈ ವೇಳೆ ಆಸ್ಪತ್ರೆಯ ಸಿಬ್ಬಂದಿ ವಿಳಾಸ ಬರೆದುಕೊಂಡು ವರದಿ ಬರುವವರೆಗೆ ಹೋಂ ಕ್ವಾರಂಟೇನ್ ನಲ್ಲಿರುವಂತೆ ಸೂಚಿಸಿರುತ್ತಾರೆ. ಈ ವೇಳೆ ನಿನ್ನೆ ಆತನ ವರದಿ ಪಾಸಿಟಿವ್ ಬಂದಾಗ ಆರೋಗ್ಯ ಇಲಾಖೆ ಸಿಬ್ಬಂದಿ ಆತ ನೀಡಿದ್ದ ಪೋನ್ ನಂಬರ್ಗೆ ಕಾಲ್ ಮಾಡಿ ಆಸ್ಪತ್ರೆಗೆ ಬಂದು ದಾಖಲಾಗುವಂತೆ ಸೂಚನೆ ನೀಡುತ್ತಾರೆ. ಈ ವೇಳೆ ಗಾಬರಿಗೊಂಡ ಸೋಂಕಿತ ವ್ಯಕ್ತಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾರೆ.
ತಲೆ ನೋವಾದ P-4863
ಜೊತೆಗೆ ಆತ ಬಂಗಾರಪೇಟೆ ಬದಲಾಗಿ ಕೋಲಾರದ ಎಪಿಎಂಸಿ ಮಾರುಕಟ್ಟೆ ಬಳಿ ಇರುವ ವಾಸವಿ ಹೋಟೆಲ್ ನಲ್ಲಿ ಕೆಲಸ ಕೇಳಿಕೊಂಡು ಹೋಗಿದ್ದ ಮಾಹಿತಿ ತಿಳಿಯುತ್ತದೆ. ಜೊತೆಗೆ ಎರಡು ದಿನಗಳಿಂದ ಆತ ಈ ಹೋಟೆಲ್ ಬಳಿಯೇ ಇದ್ದ ಅನ್ನೋದು ತಿಳಿಯುತ್ತದೆ. ಆತನ ಮೊಬೈಲ್ ನಂಬರ್ ಆಧರಿಸಿ ಆತನ ವಿಳಾಸ ಹುಡುಗಿದಾಗ ಆತನ ಮಂಡ್ಯ ಜಿಲ್ಲೆ ನಾಗಮಂಗಲ ಮೂಲದ ವ್ಯಕ್ತಿ ಇಲ್ಲಿ ಮೊತ್ತೊಬ್ಬ ಶೇಖರ್ ಅನ್ನೋ ಸ್ನೇಹಿತನ ಜೊತೆಗಿದ್ದ ಮಾಹಿತಿ ಸದ್ಯ ಪೊಲೀಸರಿಗೆ ಸಿಕ್ಕಿದೆ.
ಸೋಂಕಿತ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸದ್ಯ ಆತನ ಮೊಬೈಲ್ ಟವರ್ ಲೊಕೇಷನ್ ಆಧಾರಿಸಿ ಆತನನ್ನು ಹುಡಕಾಟ ನಡೆಸುತ್ತಿರುವ ಕೋಲಾರ ನಗರ ಠಾಣಾ ಪೊಲೀಸರಿಗೆ ಹಾಗೂ ಆರೋಗ್ಯ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾನೆ. ಪೊಲೀಸರ ಹಾಗೂ ಆರೋಗ್ಯ ಇಲಾಖೆ ಕಣ್ಣು ತಪ್ಪಿಸಿ ಹೋಗಿರುವ ವ್ಯಕ್ತ ಎಲ್ಲೆಲ್ಲಿ ಓಡಾಡ್ತಾನೋ, ಯಾರ್ ಯಾರಿಗೆ ಸೋಂಕು ಹರಡುತ್ತಾನೋ ಅನ್ನೋ ಭಯ ಸದ್ಯ ಕೋಲಾರದಲ್ಲಿ ಶುರುವಾಗಿದೆ. ಆತನ ಹುಡುಕಾಟಕ್ಕೆ ಆತನ ಪೋಟೋ ಸಹ ಸಿಕ್ಕಿಲ್ಲ ಪರಿಣಾಮ ಎಪಿಎಂಸಿ ಯಾರ್ಡ್ ಮತ್ತು ಕೋಲಾರ ಜಿಲ್ಲಾಸ್ಪತ್ರೆಯ ಸಿಸಿಟಿವಿ ಕ್ಯಾಮರಾಗಳನ್ನು ಪೊಲೀಸರು ಹುಡುಕಾಡಲು ಶುರುಮಾಡಿದ್ದಾರೆ.
ಒಟ್ಟಾರೆ ಮಂಡ್ಯದಲ್ಲಿ ಹುಟ್ಟಿ ತಿರುಪತಿ ತಿರುಮಲಕ್ಕೆ ಹೋಗಿ, ಅಲ್ಲಿಂದ ಕೋಲಾರಕ್ಕೆ ಬಂದಿರುವ ಈ ಸೊಂಕಿತ ವ್ಯಕ್ತಿ ಕೋಲಾರ ಜಿಲ್ಲೆಗೆ ಸ್ಪೈಡರ್ ಆಗಿ ಮಹಾಮಾರಿ ಕೊರೊನಾ ಸೋಂಕು ಹರಡುತ್ತಾನಾ ಅನ್ನೋ ಭಯ ಆತಂಕ ಹೆಚ್ಚಾಗಿದ್ದು. ಆತ ಸಿಗುವವರೆಗೂ ಪೊಲೀಸರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ನಿದ್ದೆ ಮಾಡದ ಸ್ಥಿತಿ ತಂದೊಡ್ಡಿದ್ದಾನೆ.
Published On - 8:38 am, Mon, 8 June 20