ಹಿಂದೆ ನೀಡಿದ್ದ ಭರವಸೆಯನ್ನು ನೆನಪಿಸಿ ಸಚಿವ ಭೈರತಿ ಬಸವರಾಜರನ್ನು ಹೊರಮಾವು ನಿವಾಸಿಗಳು ತರಾಟೆಗೆ ತೆಗೆದುಕೊಂಡರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 18, 2022 | 4:17 PM

ಒಬ್ಬ ಮಹಿಳೆ ಕಳೆದ ಬಾರಿ ಸಚಿವರು ಸ್ಥಳಕ್ಕೆ ಭೇಟಿ ನೀಡಿದಾಗ ಏನು ಹೇಳಿದ್ದರು, ಯಾವ ಭರವಸೆ ನೀಡಿದ್ದರು ಅನ್ನೋದನ್ನು ಕೋಪ ಮಿಶ್ರಿತ ಹತಾಷೆಯ ಧ್ವನಿಯಲ್ಲಿ ಹೇಳಿದರು. ಇದನ್ನು ನಿರೀಕ್ಷಿಸಿರದ ಸಚಿವರು ಮಹಿಳೆ ಮಾಧ್ಯಮಗಳ ಮುಂದೆ ತಮ್ಮನ್ನು ಎಕ್ಸ್​ಪೋಸ್ ಮಾಡಿದ್ದರಿಂದ ಗಾಬರಿಗೊಳಗಾಗುತ್ತಾರೆ.

Bengaluru: ಪ್ರಾಯಶಃ ಜನಗಳು ತಮ್ಮ ಭಾಗದ ಶಾಸಕ, ಮಂತ್ರಿ ಅಥವಾ ಕಾರ್ಪೋರೇಟರ್ ಗಳನ್ನು ಹೀಗೆ ತರಾಟೆಗೆ ತೆಗೆದುಕೊಂಡರೆ ಬೆಂಗಳೂರು ಮಹಾನಗರದಲ್ಲಿ ಬಡಾವಣೆಗಳು ವಾಸ ಯೋಗ್ಯವಾಗುತ್ತವೆ. ನಗರದ ಹೊರಮಾವು (Horamavu) ಏರಿಯಾನಲ್ಲಿ ವಾಸ ಮಾಡುವ ಜನರು ಮಳೆಯಾದಾಗಲೆಲ್ಲ ಪಡುವ ಬವಣೆಯನ್ನು ನಾವು ಕೆಲ ವರ್ಷಗಳಿಂದ ತೋರಿಸುತ್ತಿದ್ದೇವೆ. ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದ ಈ ಪ್ರದೇಶ ಮತ್ತೇ ಜಲಾವೃತಗೊಂಡಿದೆ (waterlogged). ಕಳೆದ ವರ್ಷವೂ ಇದೇ ಸಮಸ್ಯೆಯಾದಾಗ ಭೇಟಿ ನೀಡಿದ್ದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ (Byrathi Basavaraj) ಇಲ್ಲಿನ ನಿವಾಸಿಗಳಿಗೆ ಮಳೆ ನೀರು ವಸತಿಪ್ರದೇಶಗಳಿಗೆ ನುಗ್ಗದಂತೆ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದರು. ಆದರೆ ಒಂದು ವರ್ಷ ಕಳೆದರೂ ಸಚಿವ ಬಸವರಾಜ್ ಏನೂ ಮಾಡಲಿಲ್ಲ. ಪುನಃ ಆದೇ ಗೋಳು ಅನುಭವಿಸಿದ ನಿವಾಸಿಗಳು ಬುಧವಾರ ಬೆಳಗ್ಗೆ ಸಚಿವರು ಸಮೀಕ್ಷೆಗೆ ಬಂದಾಗ ಸಿಡಿದೆದ್ದು ಮಾಧ್ಯಮಗಳ ಎದುರೇ ಅವರನ್ನು ತರಾಟೆಗೆ ತೆಗೆದುಕೊಂಡರು.

ಒಬ್ಬ ಮಹಿಳೆ ಕಳೆದ ಬಾರಿ ಸಚಿವರು ಸ್ಥಳಕ್ಕೆ ಭೇಟಿ ನೀಡಿದಾಗ ಏನು ಹೇಳಿದ್ದರು, ಯಾವ ಭರವಸೆ ನೀಡಿದ್ದರು ಅನ್ನೋದನ್ನು ಕೋಪ ಮಿಶ್ರಿತ ಹತಾಷೆಯ ಧ್ವನಿಯಲ್ಲಿ ಹೇಳಿದರು. ಇದನ್ನು ನಿರೀಕ್ಷಿಸಿರದ ಸಚಿವರು ಮಹಿಳೆ ಮಾಧ್ಯಮಗಳ ಮುಂದೆ ತಮ್ಮನ್ನು ಎಕ್ಸ್​ಪೋಸ್ ಮಾಡಿದ್ದರಿಂದ ಗಾಬರಿಗೊಳಗಾಗುತ್ತಾರೆ. ನಂತರ ಸಾವರಿಸಿಕೊಂಡು ಸಮಜಾಯಿಷಿ ನೀಡುವ ಪ್ರಯತ್ನವನ್ನು ಮಾಡುತ್ತಾರೆ.

ಕಳೆದ ವರ್ಷ ಇಲ್ಲಿಗೆ ಬಂದು ಹೋದ ಬಳಿಕ ಮಾನ್ಯ ಮುಖ್ಯಮಂತ್ರಿಗಳನ್ನು ಸ್ಥಳಕ್ಕೆ ಕರೆತಂದು ಪರಿಸ್ಥಿತಿಯನ್ನು ವಿವರಿಸಿದೆ. ಎರಡು ರೇಲ್ವೇ ವೆಂಟ್ರಿಗಳನ್ನು ನಿರ್ಮಿಸಲು ರೂ. 25-30 ಕೋಟಿ ಬೇಕಾಗುತ್ತದೆ, ದಯವಿಟ್ಟು ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿ ಅಂತ ಅವರಿಗೆ ಮನವಿ ಮಾಡಿದಾಗ ಅವರು ಆಗಿನ ಬಿಬಿಎಮ್ ಪಿ ಕಮೀಶನರ್ ಆಗಿದ್ದ ಗೌರವ್ ಗುಪ್ತಾ ಅವರಿಗೆ ನಿರ್ದೇಶನ ನೀಡಿದರು. ನಾನು ಅದನ್ನು ಫಾಲೋ ಅಪ್ ಮಾಡುತ್ತಲೇ ಇದ್ದೆ, ಇವತ್ತು ಅಧ್ಯಕ್ಷರನ್ನು ಕರೆದುಕೊಂಡು ಬಂದಿದ್ದೀನಿ ಅಂತ ಅವರ ಹೇಳುತ್ತಿದ್ದಾಗ, ಮಾಧ್ಯಮದವರು ಮತ್ತು ನಿವಾಸಿಗಳು ನೀವು ಅದನ್ನು ಮಾಡಿದರೂ ಸಮಸ್ಯೆ ಪರಿಹಾರವಾಗಿಲ್ಲ ಅಂತ ಒಕ್ಕೊರಲಿನಿಂದ ಹೇಳಿದಾಗ ಅವರು ನಿರುತ್ತರಾಗುತ್ತಾರೆ.

ಸಚಿವರ ಜೊತೆ ಬಂದಿದ್ದ ಸಣ್ಣಪುಟ್ಟ ಲೀಡರ್ ಗಳು ಮತ್ತು ಅಧಿಕಾರಿಗಳು ಆಯ್ತು ಬಿಡಮ್ಮ, ಸಾಹೇಬರು ಮಾಡಿಸಿಕೊಡುತ್ತಾರೆ, ಅನ್ನುತ್ತಿದ್ದಂತೆಯೇ ಸಚಿವರು ಮುಖದ ಮೇಲಿನ ಬೆವರು ಒರೆಸಿಕೊಳ್ಳುತ್ತಾರೆ.

ಇದನ್ನೂ ಓದಿ:  ಬೆಂಗಳೂರು ಹೊರಮಾವು ಪ್ರದೇಶದಲ್ಲಿ 300-400 ಮನೆಗಳು ಜಲಾವೃತ! 24 ಗಂಟೆಗೆ 114 ಮಿಮೀ ಮಳೆ ದಾಖಲು

Published on: May 18, 2022 04:14 PM