‘ಮೋದಿ ಕೊಟ್ಟ ಮಾತು ಎಷ್ಟು ಈಡೇರಿಸಿದ್ದಾರೆ ಅಂತಾ ನಿಮ್ಮ CD ನೀವೇ ಹಾಕಿಕೊಂಡು ನೋಡಿ’
ಮೋದಿ ಕೊಟ್ಟ ಮಾತು ಎಷ್ಟು ಈಡೇರಿಸಿದ್ದಾರೆ ನೀವೇ ನೋಡಿ. ಎಷ್ಟು ಈಡೇರಿಸಿದ್ದಾರೆ ಅಂತಾ ನಿಮ್ಮ ಸಿಡಿ ನೀವೇ ಹಾಕಿಕೊಂಡು ನೋಡಿ ಎಂದು ನಿಯಮ 68ರ ಅಡಿ ಬೆಲೆ ಏರಿಕೆ ಬಗ್ಗೆ ಚರ್ಚೆ ವೇಳೆ ವಿಧಾನಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯ ನಾರಾಯಣಸ್ವಾಮಿ ಕಾಲೆಳೆದಿದ್ದಾರೆ.
ಬೆಂಗಳೂರು: ನಾವು ಆಡಳಿತಕ್ಕೆ ಬಂದರೆ ಬೆಲೆ ಏರಿಕೆ ಕಡಿಮೆ ಮಾಡುತ್ತೇವೆ. ಬೆಲೆ ಏರಿಕೆ ಕಡಿಮೆ ಮಾಡುತ್ತೇವೆ ಎಂದು ಮೋದಿ ಹೇಳಿದ್ದರು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಎಲ್ಲಾ ಸಭೆಗಳಲ್ಲಿ ಹೇಳಿದ್ರು. ಮೋದಿ ಕೊಟ್ಟ ಮಾತು ಎಷ್ಟು ಈಡೇರಿಸಿದ್ದಾರೆ ನೀವೇ ನೋಡಿ. ಎಷ್ಟು ಈಡೇರಿಸಿದ್ದಾರೆ ಅಂತಾ ನಿಮ್ಮ ಸಿಡಿ ನೀವೇ ಹಾಕಿಕೊಂಡು ನೋಡಿ ಎಂದು ನಿಯಮ 68ರ ಅಡಿ ಬೆಲೆ ಏರಿಕೆ ಬಗ್ಗೆ ಚರ್ಚೆ ವೇಳೆ ವಿಧಾನಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯ ನಾರಾಯಣಸ್ವಾಮಿ ಕಾಲೆಳೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೊಟ್ಟ ಮಾತು ಉಳಿಸಿಕೊಂಡಿಲ್ಲ. ನಿತ್ಯ ಬೆಲೆ ಏರಿಕೆ ಆಗ್ತಿದೆ ಎಂದು ನಾರಾಯಣಸ್ವಾಮಿ ಆಕ್ರೋಶ ಹೊರಹಾಕಿದರು.
ಯುಪಿಎ ಅವಧಿಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಿದ್ದರೂ ಏರಿಸಿರಲಿಲ್ಲ. ಆಗಿನ ಪ್ರಧಾನಿ ಮನಮೋಹನ್ ಸಿಂಗ್ ತೈಲ ಬೆಲೆ ಏರಿಸಿರಲಿಲ್ಲ. ಮೋದಿ ಸರ್ಕಾರ ಬಂದಾಗ ಕಚ್ಚಾ ತೈಲ ಬೆಲೆ ಕಡಿಮೆ ಇದ್ದರೂ ತೈಲ ಬೆಲೆ ಮಾತ್ರ ಇಳಿಕೆ ಆಗಿಲ್ಲವೆಂದು ಸದಸ್ಯ ನಾರಾಯಣಸ್ವಾಮಿ ಹೇಳಿದರು.
‘ರಾಮರಾಜ್ಯ ಮಾಡುತ್ತೇವೆ ಎಂದು ನೀವು ಅಧಿಕಾರಕ್ಕೆ ಬಂದ್ರಿ’ ರಾಮರಾಜ್ಯ ಮಾಡುತ್ತೇವೆ ಎಂದು ನೀವು ಅಧಿಕಾರಕ್ಕೆ ಬಂದ್ರಿ. ರಾಮ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 94 ರೂ. ಆಗಿದೆ. ರಾವಣ ದೇಶದಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 60 ರೂ. ಇದೆ. ಸೀತೆನಾಡಿನಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 50 ರೂ. ಇದೆ. ಇದೇನಾ ರಾಮರಾಜ್ಯ ಎಂದು ನಾರಾಯಣಸ್ವಾಮಿ ಖಾರವಾಗಿ ಪ್ರಶ್ನೆ ಹಾಕಿದರು. ಎಲ್ಲಾ ಸರ್ಕಾರಿ ಸಂಸ್ಥೆಗಳನ್ನ ಮಾರುವುದಕ್ಕೆ ಹೊರಟಿದ್ದೀರಾ? ಅಂಬಾನಿ, ಅದಾನಿಗೆ ಮಾರಾಟ ಮಾಡಲು ಹೊರಟಿದ್ದೀರಾ? ಹೀಗೆ ಮಾಡಿದ್ರೆ ಮುಂದೆ ಅಂಬಾನಿ, ಅದಾನಿ ಪಿಎಂ ಆಗ್ತಾರೆ. ಈ ದೇಶದ ಜನರನ್ನು ಸಾಲದ ಸುಳಿಯಲ್ಲಿ ಸಿಲುಕಿಸಿ ಉದ್ಯಮಿಗಳಾದ ಅಂಬಾನಿ, ಅದಾನಿಗೆ ಸಹಾಯ ಮಾಡ್ತೀರಾ? ಎಂದು ಸಹ ಪ್ರಶ್ನಿಸಿದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಲಹೆ ಪಡೆಯಿರಿ. ಬೆಲೆ ಏರಿಕೆಗೆ ಕಡಿವಾಣ ಹಾಕಿ ಎಂದು ನಾರಾಯಣಸ್ವಾಮಿ ಆಗ್ರಹಿಸಿದರು.
‘ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ’ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ವಿಧಾನಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಠೋಡ್ ಹೇಳಿದ್ದಾರೆ. ಬೇಟಿ ಬಚಾವೋ ಬೇಟಿ ಪಡಾವೋಗೆ ಒಂದು ರೂ. ನೀಡಿಲ್ಲ. ಸ್ವಚ್ಛ ಭಾರತ್ಗೆ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ರೂಸಾ ಅಡಿ ಕಾಲೇಜುಗಳಿಗೆ ಕೇಂದ್ರ ಸರ್ಕಾರ ಹಣ ನೀಡಿಲ್ಲ. ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರ ದೊಡ್ಡ ಮೋಸ ಮಾಡಿದೆ. ಕೊರೊನಾಗೆ 5,000 ಕೋಟಿ ಖರ್ಚು ಮಾಡಿದ್ದೇವೆ ಅಂತೀರಾ. ಆದರೆ, ದಾಖಲೆ ಪ್ರಕಾರ 4300 ಕೋಟಿ ಮಾತ್ರ ಖರ್ಚಾಗಿದೆ. ಸಿಎಂ ಯಡಿಯೂರಪ್ಪ ಏಕೆ ಸುಳ್ಳು ಹೇಳುತ್ತಿದ್ದಾರೋ ಗೊತ್ತಿಲ್ಲ. ಕೊರೊನಾ ನಿರ್ವಹಣೆಗೆ ಬಳಸಿದ ಹಣದಲ್ಲೂ ಸುಳ್ಳು ಹೇಳಿದೆ ಎಂದು ಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಠೋಡ್ ಹೇಳಿದರು.
‘ಲವ್ ಜಿಹಾದ್, ಗೋಹತ್ಯೆ, ಎನ್ಆರ್ಸಿ ಬಗ್ಗೆ ಮಾತಾಡ್ತಾರೆ; ಬಡವರ ಊಟ, ಬಟ್ಟೆ ಬಗ್ಗೆ ಮಾತನಾಡಿಲ್ಲ’ ಇತ್ತ, ಸರ್ಕಾರ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ ಎಂದು ಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯ ನಜೀರ್ ಅಹ್ಮದ್ ವಾಗ್ದಾಳಿ ನಡೆಸಿದರು. ಲವ್ ಜಿಹಾದ್, ಗೋಹತ್ಯೆ, ಎನ್ಆರ್ಸಿ ಬಗ್ಗೆ ಮಾತಾಡ್ತಾರೆ. ಬಡವರ ಊಟ, ಬಟ್ಟೆ, ಮನೆ ಬಗ್ಗೆ ಸರ್ಕಾರ ಮಾತನಾಡಿಲ್ಲ. ಗೋಹತ್ಯೆ ನಿಷೇಧ ಕಾಯ್ದೆಯಿಂದ ನಿರುದ್ಯೋಗಿ ಆಗಿದ್ದಾರೆ. ಸಾವಿರಾರು ಜನರು ನಿರುದ್ಯೋಗಿಗಳಾಗಿದ್ದಾರೆ. ಸರ್ಕಾರ ಬಡವರ ವಿರುದ್ಧವಾಗಿದೆ ಎಂದು ನಜೀರ್ ಅಹ್ಮದ್ ಸಿಟ್ಟಾದರು. ಬಜೆಟ್ನಲ್ಲಿ ಬಡವರಿಗೆ ಮನೆ ನೀಡುವ ಪ್ರಸ್ತಾಪ ಮಾಡಿಲ್ಲ. ನಿತ್ಯ ಬೆಲೆ ಏರಿಕೆ ಆದರೂ ಯಾರು ತಲೆ ಕೆಡಿಸಿಕೊಂಡಿಲ್ಲ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ನಜೀರ್ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
‘ಸಿಎಂ ಯಡಿಯೂರಪ್ಪ ಕೊರೊನಾ ಬಜೆಟ್ ಮಂಡಿಸಬೇಕಿತ್ತು’ ಸಿಎಂ ಯಡಿಯೂರಪ್ಪ ಕೊರೊನಾ ಬಜೆಟ್ ಮಂಡಿಸಬೇಕಿತ್ತು ಎಂದು ಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ಹೇಳಿದರು. ವಿಷನ್ ಇಟ್ಟುಕೊಂಡು ಸಿಎಂ BSY ಬಜೆಟ್ ಮಂಡಿಸಬೇಕಿತ್ತು. ಌಕ್ಷನ್ ಪ್ಲ್ಯಾನ್ ಮಾಡುವ ನಿಟ್ಟಿನಲ್ಲಿ ಕೆಲಸ ಆಗಬೇಕಿತ್ತು. ರಾಜ್ಯ ಸರ್ಕಾರ ಆಡಳಿತ ವೆಚ್ಚ ತಗ್ಗಿಸುವ ಕೆಲಸ ಮಾಡಿಲ್ಲ. ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಪ್ರತಿದಿನ ಏರಿಕೆಯಾಗ್ತಿದೆ. ಜನಸಾಮಾನ್ಯರ ಜೀವನ ಕಷ್ಟಕರವಾಗಿದೆ ಎಂದು ಪಿ.ಆರ್.ರಮೇಶ್ ಮಾತನಾಡಿದರು.
ಪೆಟ್ರೋಲ್, ಡೀಸೆಲ್ ದರ ಕಡಿಮೆಯಿದ್ದರೂ ಹೆಚ್ಚುವರಿ ತೆರಿಗೆ ವಿಧಿಸಲಾಗ್ತಿದೆ. ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಘೋಷಣೆ ವಿಚಾರವಾಗಿ 500 ಕೋಟಿ ಘೋಷಣೆ ಮಾಡಿದ್ದ ಸರ್ಕಾರ 1 ಲಕ್ಷ ನೀಡಿದೆ. ಒಕ್ಕಲಿಗರ ನಿಗಮ ಸೇರಿ ಯಾವುದೇ ನಿಗಮಕ್ಕೆ ಹಣ ನೀಡಿಲ್ಲ ಎಂದು ಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ಹೇಳಿದರು.
ಈ ನಡುವೆ, ಹೆಸ್ಕಾಂ ವಿಚಾರವಾಗಿ ಸಿಎಂ ಉತ್ತರ ಕೊಡಬೇಕೆಂದು ಪರಿಷತ್ನಲ್ಲಿ ವಿಪಕ್ಷಗಳ ಪಟ್ಟುಹಿಡಿದವು. ಸಿಎಂ ಉತ್ತರಿಸಬೇಕು ಎಂದು ವಿಪಕ್ಷ ನಾಯಕ S.R.ಪಾಟೀಲ್ ಆಗ್ರಹಿಸಿದರು. ಪ್ರಶ್ನೆ ಕೇಳುವ ಮುನ್ನ ತುರ್ತು ಕೆಲಸ ಎಂದು ಉತ್ತರಿಸದೇ ಸಿಎಂ ತೆರಳಿದ್ದಕ್ಕೆ S.R.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಬಳಿಯೇ ಇದನ್ನ ಪ್ರಸ್ತಾಪಿಸಬೇಕು ಎಂದು ಪಾಟೀಲ್ ಹೇಳಿದಾಗ ಸಿಎಂ ಬದಲಾಗಿ ನಾನೇ ಉತ್ತರಿಸ್ತೇನೆ ಎಂದು ಸಚಿವ ಪೂಜಾರಿ ಮುಂದಾದರು. ಈ ವೇಳೆ ಎದ್ದು ನಿಂತ ಡಿಸಿಎಂ ಗೋವಿಂದ ಕಾರಜೋಳ ಸದನದಲ್ಲಿ ಯಾವುದೇ ಸಚಿವರು ಉತ್ತರ ಕೊಡಬಹುದು. ಉತ್ತರ ತೃಪ್ತಿ ಆಗದಿದ್ದರೆ ಮತ್ತೆ ಕೇಳಿ ಎಂದರು.
‘ನೀವೇನು ಸರ್ವಜ್ಞ ಅಲ್ಲ, ಕೆಲವು ವೇಳೆ ವ್ಯತ್ಯಾಸ ಆಗುತ್ತೆ’ ಅದಕ್ಕೆ, ಸಚಿವರಿಗೆ ಅ ಅನ್ನುವುದಕ್ಕೆ ಬರಲ್ಲ ಊ ಅನ್ನಲು ಬರಲ್ಲ ಎಂದು ನಾರಾಯಣಸ್ವಾಮಿ ತಿರುಗೇಟು ಕೊಟ್ಟರು. ನಾರಾಯಣಸ್ವಾಮಿ ಮಾತಿಗೆ ಸಚಿವರ ತೀವ್ರ ವಿರೋಧ ವ್ಯಕ್ತವಾಯಿತು. ಡಿಸಿಎಂ ಕಾರಜೋಳ ಹಾಗೂ ಸಿ.ಸಿ.ಪಾಟೀಲ್ ಅವರಿಂ ವಿರೋಧ ವ್ಯಕ್ತವಾಯಿತು. ನೀವೇನು ಸರ್ವಜ್ಞ ಅಲ್ಲ, ಕೆಲವು ವೇಳೆ ವ್ಯತ್ಯಾಸ ಆಗುತ್ತೆ. ಹಾಗೆಲ್ಲ ಮಾತಾಡಬೇಡಿ ಎಂದು ಡಿಸಿಎಂ ಕಾರಜೋಳ ಹೇಳಿದರು. ಈ ವೇಳೆ ಮಧ್ಯೆ ಪ್ರವೇಶ ಮಾಡಿದ ಪರಿಷತ್ ಸಭಾಪತಿ ಸಚಿವರ ಬಗ್ಗೆ ಹಾಗೆ ಮಾತಾಡಬಾರದು ಎಂದರು.
ಇದನ್ನೂ ಓದಿ: ಬಳ್ಳಾರಿಯ ವಿಮ್ಸ್ನಲ್ಲಿ ಕೊರೊನಾ ಬ್ಲಾಸ್ಟ್: ಒಂದೇ ದಿನ 8 ವೈದ್ಯಕೀಯ ವಿದ್ಯಾರ್ಥಿಗಳಿಗೆ ವಕ್ಕರಿಸಿದ ವೈರಸ್