ವಿಜಯಪುರ: ಜಿಲ್ಲೆಯ ನಾಗಠಾಣ ಕ್ಷೇತ್ರದ JDS ಶಾಸಕರಿಗೆ ಗುಂಡು ಹಾರಿಸಿ ಹತ್ಯೆ ಬೆದರಿಕೆ ಮಾಡಿರುವ ಘಟನೆ ವರದಿಯಾಗಿದೆ. ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚೌಹಾಣ್ಗೆ ಜೀವಬೆದರಿಕೆ ಒಡ್ಡಲಾಗಿದೆ. ಜೊತೆಗೆ, ಕೆಲ ದುಷ್ಕರ್ಮಿಗಳು ನಡೆಸಿರುವ ಅಕ್ರಮಗಳನ್ನು ಪ್ರಶ್ನಿಸಿ ಅವರ ಕೃತ್ಯ ಬಹಿರಂಗಪಡಿಸಿದ್ದಕ್ಕೆ ಈ ರೀತಿ ಬೆದರಿಸಿದ್ದಾರೆ ಎಂದು ಶಾಸಕರು ಆರೋಪಿಸಿದ್ದಾರೆ.
ಶಾಸಕರಿಗೆ ಇದೆಯಾ ಜೀವ ಬೆದರಿಕೆ?
ಕಳೆದ ನವೆಂಬರ್ 15ರಂದು ರಾತ್ರಿವೇಳೆ ದುಷ್ಕರ್ಮಿಗಳು ಶಾಸಕರ ಮನೆ ಮುಂದೆಯೇ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ. ಅಂದ ಹಾಗೆ, ಶಾಸಕರ ಮನೆ ಆವರಣದಲ್ಲಿದ್ದ ಗಂಧದ ಮರವನ್ನು ಕಳುವು ಮಾಡಲು ಕೆಲ ಖದೀಮರು ಬಂದಿದ್ದರು. ಕಳ್ಳರು ಮರ ಕಡಿಯುವಾಗ ಎಚ್ಚರಗೊಂಡಿದ್ದ ಶಾಸಕ ಚೌಹಾಣ್ ಮತ್ತು ಅವರ ಕುಟುಂಬಸ್ಥರು ಖದೀಮರೊಂದಿಗೆ ವಾಗ್ವಾದಕ್ಕೆ ಇಳಿದರು. ಮರಗಳ್ಳರಿಗೆ ಶಾಸಕರು ಎಚ್ಚರ ಸಹ ನೀಡಿದ್ದರಂತೆ.
ಇದಕ್ಕೆ ಸಿಟ್ಟಿಗೆದ್ದ ಕಳ್ಳರು ಗುಂಡು ಹಾರಿಸಿ ಕೊಲ್ಲೋದಾಗಿ ಬೆದರಿಕೆ ಒಡ್ಡಿದ್ದರು ಎಂದು ಹೇಳಲಾಗಿದೆ. ಆದರೆ, ಶಾಸಕರು ಪೊಲೀಸರಿಗೆ ಕರೆ ಮಾಡುತ್ತಿದ್ದಂತೆ ಮರಗಳ್ಳರು ಕೂಡಲೇ ಅಲ್ಲಿಂದ ಕಾಲ್ಕಿತ್ತರಂತೆ. ಇದರಿಂದ ವಿಚಲಿತಗೊಂಡಿರುವ ಶಾಸಕ ದೇವಾನಂದ ಚೌಹಾಣ್ ಈ ಕುರಿತು ಚಳಿಗಾಲದ ಅಧಿವೇಶನದಲ್ಲಿ ಪ್ರಶ್ನೆ ಮಾಡುತ್ತೇನೆ. ಶಾಸಕರ ಸ್ಥಿತಿಯೇ ಹೀಗಾದರೆ ಜನ ಸಾಮಾನ್ಯರ ಸ್ಥಿತಿ ಹೇಗೆ ಎಂದು ಪ್ರಶ್ನಿಸುತ್ತೇನೆ ಎಂದು ಹೇಳಿದರು.
ಅಕ್ರಮ ಚಟುವಟಿಕೆ ಬಯಲಿಗೆಳೆದಿದ್ದಕ್ಕೆ ಬೆದರಿಕೆ?
ಅಂದ ಹಾಗೆ, ಇದಕ್ಕೂ ಮುನ್ನ 15 ದಿನಗಳ ಹಿಂದೆ ಮಹಾದೇವ ಭೈರಗೊಂಡನ ಬೆಂಬಲಿಗರೂ ಸಹ ನಮ್ಮವರ ಬಳಿ ಮಾಹಿತಿ ಕೇಳಿದ್ದಾರೆ ಎಂದು ಶಾಸಕ ಚೌಹಾಣ್ ಹೇಳಿದರು. ಶಾಸಕ ಎಷ್ಟು ದಿನ ಗನ್ಮ್ಯಾನ್ ಇಟ್ಟುಕೊಂಡು ಓಡಾಡುತ್ತಾನೋ ಓಡಾಡಲಿ. ಆತನದ್ದು ಬಹಳ ಆಗಿದೆ ಎಂದು ಜೀವ ಬೆದರಿಕೆ ಹಾಕಿದ್ದಾರಂತೆ.
ನನ್ನ ಕ್ಷೇತ್ರದಲ್ಲಿ ಅಕ್ರಮ ಮರಳು ಮಾಫಿಯಾ, ಕಾನೂನು ಬಾಹೀರ ಚಟುವಟಿಕೆಗಳನ್ನು ತಡೆ ಹಾಕಿದ್ದೆ. ಗುಟ್ಕಾ, ಮಾವಾ ಮಾರಾಟಕ್ಕೆ ತಡೆ ಒಡ್ಡಿದೆ. ಹಾಗಾಗಿ, ನನಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಶಾಸಕ ದೇವಾನಂದ ಚೌಹಾಣ್ ಹೇಳಿದ್ದಾರೆ.