National Safety Day 2021: ರಾಷ್ಟ್ರೀಯ ಸುರಕ್ಷತಾ ದಿನ; ವಾಹನ ಚಾಲನೆ ಮಾಡುವಾಗ ಮರೆಯದೇ ರಸ್ತೆ ನಿಯಮ ಪಾಲಿಸಿ

|

Updated on: Mar 04, 2021 | 11:39 AM

National Safety Day 2021: ಹೆದ್ದಾರಿಗಳಲ್ಲಿ ಸುರಕ್ಷಿತವಾಗಿ ಪ್ರಯಾಣಿಸಲು ಯಾವ ನಿಯಮಗಳನ್ನು ಅನುಸರಿಸಬೇಕು ಎಂದು ಸಂಕ್ಷಿಪ್ತವಾಗಿ ನೋಡೋಣ..

National Safety Day 2021: ರಾಷ್ಟ್ರೀಯ ಸುರಕ್ಷತಾ ದಿನ; ವಾಹನ ಚಾಲನೆ ಮಾಡುವಾಗ ಮರೆಯದೇ ರಸ್ತೆ ನಿಯಮ ಪಾಲಿಸಿ
ಸಾಂದರ್ಭಿಕ ಚಿತ್ರ
Follow us on

ಇಂದಿನಿಂದ ವಿಶಿಷ್ಟ ಅಭಿಯಾನವೊಂದು ದೇಶದಾದ್ಯಂತ ಆರಂಭವಾಗಲಿದೆ. ಏನಿದು ಎಂದಿರಾ? ಇಂದಿನಿಂದ ಮುಂದಿನ ಒಂದು ವಾರಗಳ ಕಾಲ ‘ರಾಷ್ಟ್ರೀಯ ಸುರಕ್ಷತಾ ಸಪ್ತಾಹ’ ಎಂಬ ಅಭಿಯಾನವೊಂದನ್ನು ಆಚರಿಸಲಾಗುತ್ತದೆ. ಈ ಅಭಿಯಾನದ ಆರಂಭದ ದಿನವಾದ ಇಂದು (ಮಾರ್ಚ್ 4) ನ್ನು ರಾಷ್ಟ್ರೀಯ ಸುರಕ್ಷತಾ ದಿನವೆಂದು (National Safety Day 2021) ಕರೆಯಲಾಗುತ್ತದೆ. ದೇಶದ ವಿವಿಧ ಸಂಘ ಸಂಸ್ಥೆಗಳು ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತವೆ. ಸಾರ್ವಜನಿಕರಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸುತ್ತವೆ.

1972ರಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಸುರಕ್ಷತಾ ಕೌನ್ಸಿಲ್ ಎಂಬ ಸಂಸ್ಥೆಯನ್ನು ಸ್ಥಾಪಿಸಿತು. ವಿವಿಧ ವಲಯಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕ ಸುರಕ್ಷತೆ, ಆರೋಗ್ಯ ಮತ್ತು ಪರಿಸರವನ್ನು ಸುರಕ್ಷಿತವಾಗಿ ಇರಿಸುವ ಉದ್ದೇಶದೊಂದಿಗೆ ಈ ಸಂಸ್ಥೆ ಶ್ರಮಿಸುತ್ತದೆ. ಅಂದಿನಿಂದ ಪ್ರತಿ ವರ್ಷದ ಮಾರ್ಚ್ 4ರಂದು ರಾಷ್ಟ್ರೀಯ ಸುರಕ್ಷಾ ದಿನವೆಂದು ಆಚರಿಸಲಾಗುತ್ತದೆ. ಈ ವರ್ಷದ ರಾಷ್ಟ್ರೀಯ ಸುರಕ್ಷತಾ ಅಭಿಯಾನದ ಥೀಮ್ ‘ರಸ್ತೆ ಅಪಘಾತ’.

ರಾಷ್ಟ್ರೀಯ ಅಪರಾಧ ವಿಭಾಗದ ಅಂಕಿಅಂಶಗಳ ಪ್ರಕಾರ 2019ರಲ್ಲೊಂದೇ 4,67,171 ರಸ್ತೆ ಅಪಘಾತಗಳು ಸಂಭವಿಸಿವೆ. ದೇಶದಲ್ಲಿ ಪ್ರತಿದಿನವೂ ಘಟಿಸುತ್ತಲೇ ಇರುವ ರಸ್ತೆ ಅಪಘಾತಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಎನ್​ಜಿಒಗಳು ಸಂಘ ಸಂಸ್ಥೆಗಳು ಆಯೋಜಿಸಲಿವೆ. ವಾಹನ ಪ್ರಯಾಣ ಮಾಡುವಾಗ ಸವಾರರ ಸುರಕ್ಷತೆಗೆ ಹೆಚ್ಚು ಮಹತ್ವ ನೀಡುವಂತೆ ಮನೋ ಜಾಗೃತಿ ಮೂಡಿಸುವಲ್ಲಿ ಈ ಅಭಿಯಾನ ನೆರವಾಗಲಿದೆ.

ಹಾಗಾದರೆ, ಹೆದ್ದಾರಿಗಳಲ್ಲಿ ಸುರಕ್ಷಿತವಾಗಿ ಪ್ರಯಾಣಿಸಲು ಯಾವ ಕ್ರಮಗಳನ್ನು ಅನುಸರಿಸಬೇಕು ಎಂದು ಸಂಕ್ಷಿಪ್ತವಾಗಿ ನೋಡೋಣ..

ರಸ್ತೆ ನಿಯಮಗಳನ್ನು ಪಾಲಿಸಿ
ಸರ್ಕಾರ ಸಾರ್ವತ್ರಿಕವಾಗಿ ಒಂದು ನಿಯಮವನ್ನು ಜಾರಿಗೊಳಿಸಿರುತ್ತದೆ. ಅವುಗಳನ್ನು ಪಾಲಿಸುವುದರಿಂದ ಎಲ್ಲರಿಗೂ ಕ್ಷೇಮ. ವಾಹನ ಸವಾರ, ಪಾದಚಾರಿ, ಮತ್ತು ರಸ್ತೆಗಳ ಅಕ್ಕಪಕ್ಕದಲ್ಲಿ ಓಡಾಡುವ ಪ್ರಾಣಿಗಳೂ ಸಹ ಸುರಕ್ಷಿತವಾಗಿರಬಹುದು.

1). ವಾಹನಗಳನ್ನು ರಸ್ತೆಯ ಎಡಭಾಗದಲ್ಲೇ ಚಲಾಯಿಸಿ, ಅಪ್ಪಿತಪ್ಪಿಯೂ ನಿಯಮ ಉಲ್ಲಂಘನೆ ಮಾಡಬೇಡಿ. ನಿಯಮ ಉಲ್ಲಂಘನೆಯಿಂದ ಎದುರು ಬದಿಯಿಂದ ಬರುತ್ತಿರುವ ಸವಾರರೂ ಕಸಿವಿಸಿಗೊಳ್ಳಬಹುದು.

2). ಪಾದಚಾರಿಗಳು ಸಹ ರಸ್ತೆಯ ಬಲಭಾಗದಲ್ಲೇ ಸಂಚರಿಸಿ.

3). ರಸ್ತೆ ಕ್ರಾಸ್ ಮಾಡುವಾಗ ಸಿಗ್ನಲ್, ಹಾರ್ನ್ ಮುಂತಾದವುಗಳನ್ನು ಬಳಸಿ.

4). ಹೆಲ್ಮೆಟ್ ಮತ್ತು ಸೀಟ್​ಬೆಲ್ಟ್​ಗಳನ್ನು ಪ್ರತಿಬಾರಿಯೂ ಕಡ್ಡಾಯವಾಗಿ ಬಳಸಿ.

5). ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ.

6). ವಾಹನ ಚಾಲನೆ ಮಾಡುವಾಗ ಫೋನ್​ನಲ್ಲಿ ಮಾತನಾಡುವುದು, ಮೊಬೈಲ್ ಫೋನ್ ಬಳಕೆ ಮಾಡಲೇಬೇಡಿ. ಅನಿವಾರ್ಯವಾಗಿ ಮೊಬೈಲ್ ಬಳಸಬೇಕಿದ್ದಲ್ಲಿ ವಾಹನವನ್ನು ರಸ್ತೆ ಪಕ್ಕ ನಿಲ್ಲಿಸಿಕೊಂಡೇ ಬಳಸಿ.

7). ರಸ್ತೆ ದಾಟುವಾಗ ಝೀಬ್ರಾ ಕ್ರಾಸಿಂಗ್ ಮೇಲಿಂದಲೇ ದಾಟಿ.

8). ಅನಾರೋಗ್ಯ ಇರುವಾಗ ವಾಹನ ಚಾಲನೆ ಮಾಡಬೇಡಿ.

9). ದನ-ಕರು, ನಾಯಿ ಮುಂತಾದ ಪ್ರಾಣಿಗಳು ರಸ್ತೆಗೆ ಅಡ್ಡವಾಗಿ ಬರಬಹುದು. ಲಕ್ಷ್ಯ ವಹಿಸಿ ವಾಹನ ಚಾಲನೆ ಮಾಡಿ

ರಸ್ತೆ ಸುರಕ್ಷತಾ ನಿಯಮಗಳ ಪಾಲನೆಯಿಂದ ಯಾವುದೇ ಅಪಾಯಕ್ಕೆ ಆಹ್ವಾನ ನೀಡದಂತೆ ವಾಹನ ಚಾಲನೆ ಮಾಡಬಹುದು. ಅಲ್ಲದೆ, ನಿಯಮಗಳ ಪಾಲನೆ ಪಾದಚಾರಿಗಳ ಆರೋಗ್ಯಕ್ಕೆ ಕ್ಷೇಮಕರ. ನಿರ್ದಿಷ್ಟಪಡಿಸಿದ ನಿಯಮಗಳನ್ನು ಎಲ್ಲರೂ ಪಾಲಿಸುವುದರಿಂದ ಯಾರಿಗೂ ಹಾನಿಯಿಲ್ಲ. ಮನೆಯಿಂದ ಹೊರಟ ಹಾಗೇ ಮನೆಗೆ ಮರಳಬೇಕು ಎಂಬ ಇಚ್ಛೆ ಎಲ್ಲರಿಗೂ ಇರುತ್ತದೆ ಅಲ್ಲವೇ, ಈ ಕಾರಣಕ್ಕಾದರೂ ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸೋಣ.

ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿನಿಯ ಮನೆಗೇ ತೆರಳಿ ಆತ್ಮವಿಶ್ವಾಸ ಹೆಚ್ಚಿಸಿದ ಸಚಿವ ಸುರೇಶ್ ಕುಮಾರ್

ದತ್ತಾಂಶ ಸುರಕ್ಷತಾ ಕಾನೂನು ರೂಪಿಸುತ್ತೇವೆ: ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್

Published On - 11:33 am, Thu, 4 March 21