Kannada News » Karnataka » Ramesh jarkiholi likely to appeal court to stay for obscene video
ಅಶ್ಲೀಲ ವಿಡಿಯೋ ಪ್ರಸಾರಕ್ಕೆ ತಡೆ ಕೋರಿ ಕೋರ್ಟ್ ಮೆಟ್ಟಿಲೇರಲಿರುವ ರಮೇಶ್ ಜಾರಕಿಹೊಳಿ
Ramesh Jarkiholi CD Controversy: ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ವಿಡಿಯೋ ಪ್ರಸಾರ ಮಾಡದಂತೆ ತಡೆ ಹಿಡಿಯಬೇಕು ಎಂದು ರಮೇಶ್ ಜಾರಕಿಹೊಳಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಿದ್ದಾರೆ. ಅಲ್ಲದೇ, ಸಿಡಿ ಬಹಿರಂಗಗೊಳಿಸಿದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ.
ಬೆಂಗಳೂರು: ಅಶ್ಲೀಲ ಸಿಡಿ ಜಗಜ್ಜಾಹೀರಾದ ನಂತರ ಭಾರೀ ಮುಜುಗರಕ್ಕೊಳಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ರಮೇಶ್ ಜಾರಕಿಹೊಳಿ ಇದೀಗ ವಿಡಿಯೋ ಪ್ರಸಾರ ನಿರ್ಬಂಧಿಸುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲು ಹತ್ತಲು ತೀರ್ಮಾನಿಸಿದ್ದಾರೆ. ಆ ಮೂಲಕ ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ವಿಡಿಯೋ ಪ್ರಸಾರ ಮಾಡದಂತೆ ತಡೆ ಹಿಡಿಯಬೇಕು ಎಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಿದ್ದಾರೆ. ಅಲ್ಲದೇ, ಸಿಡಿ ಬಹಿರಂಗಗೊಳಿಸಿದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಸಹ ಜಾರಕಿಹೊಳಿ ಸಹೋದರರು ನಿರ್ಧರಿಸಿದ್ದಾರೆ.
ನಿನ್ನೆ ತಡರಾತ್ರಿ ತನಕವೂ ಅಜ್ಞಾತ ಸ್ಥಳದಲ್ಲಿ ಮುಂದಿನ ನಡೆಯ ಬಗ್ಗೆ ಸಹೋದರ ಬಾಲಚಂದ್ರ ಜಾರಕಿಹೊಳಿ ಜೊತೆ ಮಾತುಕತೆ ನಡೆಸಿರುವ ರಮೇಶ್ ಜಾರಕಿಹೊಳಿ ಸದ್ಯ ಬೆಂಗಳೂರು ನಿವಾಸಕ್ಕೆ ಬಂದಿದ್ದಾರೆ. ಸಿಡಿಯಿಂದಾಗಿ ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಸಂಕಟ ಉಂಟಾಗಿರುವುದರಿಂದ ಮುಜುಗರದಿಂದ ತಪ್ಪಿಸಿಕೊಳ್ಳಲು ಇಂದು ನಡೆಯುವ ಸದನಕ್ಕೂ ಬಹುತೇಕ ಗೈರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ರಮೇಶ್ ಜಾರಕಿಹೊಳಿ ಮತ್ತು ಯುವತಿ ನಡುವಿನ ಅಶ್ಲೀಲ ವಿಡಿಯೋ ಮತ್ತು ಸಂಭಾಷಣೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ವಿಪಕ್ಷಗಳು ಹಾಗೂ ಸೈದ್ಧಾಂತಿಕ ವಿರೋಧಿಗಳು ಅದನ್ನೇ ಬಹುಮುಖ್ಯ ಅಸ್ತ್ರವಾಗಿರಿಸಿಕೊಂಡು ರಮೇಶ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಈ ನಡುವೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ತಮ್ಮ ಬಳಿ ಇನ್ನೂ ಮೂವರು ಪ್ರಭಾವಿಗಳ ವಿಡಿಯೋ ಇರುವುದಾಗಿ ಹೇಳಿಕೆ ನೀಡಿರುವುದು ಭಾರೀ ಸಂಚಲನ ಮೂಡಿಸಿದೆ.