AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Layoffs: ಸಂಕಷ್ಟದಲ್ಲಿ ಓಲಾ ಉದ್ಯೋಗಿಗಳು, 200 ಮಂದಿ ಕೆಲಸದಿಂದ ವಜಾ; ವರದಿ

ಷೇರುಪೇಟೆಗೆ ನೀಡಿರುವ ಮಾಹಿತಿಯ ಪ್ರಕಾರ, ಓಲಾ ಆದಾಯದಲ್ಲಿ ಶೇ 65ರಷ್ಟು ಕುಸಿತವಾಗಿದ್ದು, 689.61 ಕೋಟಿ ರೂ.ಗೆ ಇಳಿಕೆಯಾಗಿದೆ.

Layoffs: ಸಂಕಷ್ಟದಲ್ಲಿ ಓಲಾ ಉದ್ಯೋಗಿಗಳು, 200 ಮಂದಿ ಕೆಲಸದಿಂದ ವಜಾ; ವರದಿ
ಓಲಾ (ಸಾಂದರ್ಭಿಕ ಚಿತ್ರ)
TV9 Web
| Edited By: |

Updated on:Jan 13, 2023 | 11:35 AM

Share

ನವದೆಹಲಿ: ಕ್ಯಾಬ್ ಸೇವೆ ಒದಗಿಸುವ ಮತ್ತು ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿ ಓಲಾ (Ola) ವಿವಿಧ ಘಟಕಗಳಿಂದ 200 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಿದೆ (Layoff) ಎಂದು ವರದಿಯಾಗಿದೆ. ಈ ವಾರ 200 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಟೆಕ್ ತಂಡದಲ್ಲಿದ್ದ ತಮ್ಮನ್ನೂ ವಜಾಗೊಳಿಸಿದ್ದಾರೆ. ಇದೀಗ ಬೇರೆ ಉದ್ಯೋಗಾವಕಾಶ ಎದುರುನೋಡುತ್ತಿದ್ದೇನೆ ಎಂದು ಉದ್ಯೋಗಿಯೊಬ್ಬರು ತಿಳಿಸಿರುವುದಾಗಿ ‘ಬ್ಯುಸಿನೆಸ್ ಟುಡೇ’ ವರದಿ ಮಾಡಿದೆ. ಓಲಾ ಕ್ಯಾಬ್, ಓಲಾ ಎಲೆಕ್ಟ್ರಿಕ್​​ನಲ್ಲಿ ಉದ್ಯೋಗ ಕಡಿತ ಮುಂದುವರಿದಿದೆ ಎಂದು ಮೂಲಗಳು ಹೇಳಿವೆ. ಕಂಪನಿಯು 2022ರ ಸೆಪ್ಟೆಂಬರ್​​ನಿಂದಲೇ 200 ಮಂದಿ ಉದ್ಯೋಗಿಗಳ ವಜಾಕ್ಕೆ ಚಿಂತನೆ ನಡೆಸಿತ್ತು ಎನ್ನಲಾಗಿದೆ. ಉದ್ಯಮ ನಿರ್ವಹಣೆಗಾಗಿ ಎಂಜಿನಿಯರಿಂಗ್ ವಿಭಾಗದಿಂದ 200ರಷ್ಟು ಉದ್ಯೋಗ ಕಡಿತ ಮಾಡುವುದಾಗಿ ಕಂಪನಿ ಈ ಹಿಂದೆ ತಿಳಿಸಿತ್ತು.

ಸಹ ಸಂಸ್ಥಾಪಕ ಭವೀಶ್ ಅಗರ್​ವಾಲ್ ಅವರ ನೀತಿಯಿಂದಾಗಿ ಓಲಾ ಇತ್ತೀಚೆಗೆ ಸುದ್ದಿಯಾಗಿತ್ತು. ಕಂಪನಿಯ ಅನೇಕ ಉದ್ಯೋಗಿಗಳು, ಮಾಜಿ ಉದ್ಯೋಗಿಗಳು ಭವೀಶ್ ಅಗರ್​ವಾಲ್ ಆಕ್ರಮಣಕಾರಿ ವರ್ತನೆ ತೋರುತ್ತಿದ್ದಾರೆ ಎಂದು ಹೇಳಿದ್ದರು.

ಇದನ್ನೂ ಓದಿ: Infosys Hiring: ಮೂರನೇ ತ್ರೈಮಾಸಿಕದಲ್ಲಿ ಇನ್ಫೋಸಿಸ್​ನಿಂದ 6,000 ಮಂದಿಯ ನೇಮಕ; 50,000 ಉದ್ಯೋಗದ ಗುರಿ

‘ನಮ್ಮದು ಮಹತ್ವಾಕಾಂಕ್ಷೆಯುಳ್ಳ ಕಂಪನಿ. ನನ್ನದೂ ಒಂದು ಕಂಪನಿ ಇರಲಿ ಎಂಬ ಧೋರಣೆ ನಮ್ಮದಲ್ಲ. ನಾವು ಸುಲಭ ಮತ್ತು ಆರಾಮವಾಗಿರುವುದಕ್ಕಾಗಿ ಕಂಪನಿ ಸ್ಥಾಪಿಸಿಲ್ಲ. ನನ್ನ ವೈಯಕ್ತಿಕ ಸ್ಟೈಲ್ ಆಕ್ರಮಣಕಾರಿಯಾಗಿಯೇ ಇದೆ. ನಾವು ಉತ್ತಮ ಗುಣಮಟ್ಟದ ಮತ್ತು ಹೆಚ್ಚು ತೀವ್ರತೆಯ ಕೆಲಸದ ಸಂಸ್ಕೃತಿಯನ್ನು ಹೊಂದಿದ್ದೇವೆ’ ಎಂದು ತಮ್ಮ ವಿರುದ್ಧದ ಟೀಕೆಗಳಿಗೆ ಅಗರ್​ವಾಲ್ ಇತ್ತೀಚೆಗೆ ಪ್ರತಿಕ್ರಿಯಿಸಿದ್ದರು.

ಉದ್ಯೋಗ ಕಡಿತದ ಬಗ್ಗೆ ಓಲಾ ಪ್ರತಿಕ್ರಿಯೆ ಏನು?

ಸದ್ಯದ ಉದ್ಯೋಗ ಕಡಿತವನ್ನು ಓಲಾ, ತಂಡಗಳ ಪುನರ್​​ರಚನಾ ಪ್ರಕ್ರಿಯೆ ಎಂದು ಬಣ್ಣಿಸಿದೆ. ಕಂಪನಿಯ ಕಾರ್ಯಕ್ಷಮತೆಯನ್ನು ಸುಧಾರಿಸಲು ನಾವು ನಿಯಮಿತವಾಗಿ ಪುನರ್​​ರಚನಾ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತಿರುತ್ತೇವೆ. ಈಗಿನ ಸಂದರ್ಭಕ್ಕೆ ಅಪ್ರಸ್ತುತ ಎನಿಸುವ ಹುದ್ದೆಗಳಿವೆ. ಅವುಗಳನ್ನು ತೆರವುಗೊಳಿಸಿ ಆದ್ಯತೆಯ ಕ್ಷೇತ್ರಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದೇವೆ. ಎಂಜಿನಿಯರಿಂಗ್ ಮತ್ತು ವಿನ್ಯಾಸ ಕ್ಷೇತ್ರದಲ್ಲಿ ಹೊಸ ಮತ್ತು ಅನುಭವ ಉಳ್ಳ ಪ್ರತಿಭೆಗಳಿಗೆ ಅವಕಾಶ ನೀಡಲಿದ್ದೇವೆ. ಇದಕ್ಕಾಗಿ ನೇಮಕಾತಿ ಮಾಡಿಕೊಳ್ಳಲಿದ್ದೇವೆ ಎಂದು ಓಲಾ ಪ್ರತಿಕ್ರಿಯಿಸಿದೆ.

ಓಲಾ ಆದಾಯದಲ್ಲಿ ಕುಸಿತ

ಷೇರುಪೇಟೆಗೆ ನೀಡಿರುವ ಮಾಹಿತಿಯ ಪ್ರಕಾರ, ಓಲಾ ಆದಾಯದಲ್ಲಿ ಶೇ 65ರಷ್ಟು ಕುಸಿತವಾಗಿದ್ದು, 689.61 ಕೋಟಿ ರೂ.ಗೆ ಇಳಿಕೆಯಾಗಿದೆ. ಆದರೆ, ಕಂಪನಿಯು 89.82 ಕೋಟಿ ರೂ. ಕಾರ್ಯಾಚರಣೆ ಲಾಭ ಗಳಿಸಿತ್ತು. ಹಿಂದಿನ ಹಣಕಾಸು ವರ್ಷದಲ್ಲಿ ಕಂಪನಿ 610.18 ಕೋಟಿ ರೂ. ನಷ್ಟ ಅನುಭವಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:15 am, Fri, 13 January 23