ಶುಲ್ಕ ಇಲ್ಲ, ವಕೀಲರ ನೇಮಕ ಅವಶ್ಯಕತೆ ಇಲ್ಲ: ಖರ್ಚಿಲ್ಲದೆ ಪ್ರಕರಣ ಇತ್ಯರ್ಥ, ಅಚ್ಚರಿಯಾದರೂ ಸತ್ಯ
ದೇಶಾದ್ಯಂತ ಎಲ್ಲ ಜಿಲ್ಲಾ ನ್ಯಾಯಾಲಯಗಳ ಕಾನೂನು ಸೇವೆಗಳ ಪ್ರಾಧಿಕಾರ ಕಚೇರಿಯಲ್ಲಿ ಜುಲೈ 13 ರಂದು ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ. ಕೊಪ್ಪಳದಲ್ಲಿ ಕೂಡ ಅಂದು ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಹಣ ವಸೂಲಿ, ಕಾರ್ಮಿಕರ ವ್ಯಾಜ್ಯಗಳು, ಗಂಡ ಹೆಂಡತಿ ಜಗಳ, ಅಪಘಾತ ಪ್ರಕರಣಗಳು ಸೇರಿದಂತೆ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ರಾಜಿ ಮಾಡಲು ಅವಕಾಶವಿದೆ.
ಕೊಪ್ಪಳ, ಜೂ.19: ದೇಶಾದ್ಯಂತ ಎಲ್ಲ ಜಿಲ್ಲಾ ನ್ಯಾಯಾಲಯಗಳ ಕಾನೂನು ಸೇವೆಗಳ ಪ್ರಾಧಿಕಾರ ಕಚೇರಿಯಲ್ಲಿ ಜುಲೈ 13 ರಂದು ಲೋಕ ಅದಾಲತ್ (Lok Adalat) ಹಮ್ಮಿಕೊಳ್ಳಲಾಗಿದೆ. ಕೊಪ್ಪಳದಲ್ಲಿ (Koppal) ಕೂಡ ಅಂದು ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಇದರ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಅಂತ ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲಕಾರಿ ರಾಮಪ್ಪ ಒಡೆಯರ ತಿಳಿಸಿದ್ದಾರೆ. ಕೊಪ್ಪಳದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಮಲಕಾರಿ ರಾಮಪ್ಪ ಒಡೆಯರ್, “ಯಾವುದೇ ಶುಲ್ಕವಿಲ್ಲದೆ, ಉಚಿತವಾಗಿ ರಾಜಿ ಪಂಚಾಯತಿ ಮೂಲಕ ಬಾಕಿ ಇರುವ ಪ್ರಕರಣಗಳನ್ನು ಬಗೆಹರಿಸಿಕೊಳ್ಳಬಹುದು” ಅಂತ ಹೇಳಿದ್ದಾರೆ.
ಹಣ ವಸೂಲಿ, ಕಾರ್ಮಿಕರ ವ್ಯಾಜ್ಯಗಳು, ಗಂಡ ಹೆಂಡತಿ ಜಗಳ, ಅಪಘಾತ ಪ್ರಕರಣಗಳು ಸೇರಿದಂತೆ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ರಾಜಿ ಮಾಡಲು ಅವಕಾಶವಿದೆ. ಪ್ರಕರಣದಲ್ಲಿ ಕಂಪೌಡೇಬಲ್, ನಾನ್ ಕಾಂಪೌಡೇಬಲ್ ಪ್ರಕರಣಗಳು ಇರುತ್ತವೆ. ಇದರಲ್ಲಿ ಕಂಪೌಂಡೇಬಲ್ ಪ್ರಕರಣಗಳನ್ನು ಎರಡು ಕಡೆ ಕಕ್ಷಿದಾರರು ಸೇರಿಕೊಂಡು ರಾಜಿ ಪಂಚಾಯತಿ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ. ಇನ್ನು ಪೆಂಡಿಂಗ್ ಲಿಟಿಗೇಶನ್ ಮತ್ತು ಪ್ರೀ ಲಿಟಿಗೇಶನ್ ಪ್ರಕರಣಗಳನ್ನು ಕೂಡ ರಾಜಿ ಮೂಲಕ ಬಗೆಹರಿಸಿಕೊಳ್ಳಬಹುದು. ಅಂದರೆ ಈಗಾಗಲೆ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣಗಳ ಜೊತೆಗೆ ಇನ್ನು ದಾಖಲಾಗದ ಪ್ರಕರಣಗಳನ್ನು ಕೂಡ ಬಗೆಹರಿಸಿಕೊಳ್ಳಲು ಅವಕಾಶವಿದೆ.
ಶುಲ್ಕ ಇಲ್ಲ, ವಕೀಲರ ನೇಮಕ ಅವಶ್ಯಕತೆ ಇಲ್ಲ
ಲೋಕ ಅದಾಲತ್ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಪೀಸ್ ಕಟ್ಚಬೇಕು ಅನ್ನೋ ಚಿಂತೆ ಇರುವುದಿಲ್ಲ. ವಕೀಲರ ನೇಮಕದ ಗೊಡವೇ ಇರುವುದಿಲ್ಲ. ಯಾವುದೆ ವಕೀಲರ ನೇಮಕ ಮಾಡದೆ, ಶುಲ್ಕ ಕಟ್ಟದೆ ಸರಳವಾಗಿ ರಾಜಿ ಮೂಲಕ ಪ್ರಕರಣ ಬಗೆಹರಿಸಿಕೊಳ್ಳಲು ಲೋಕ ಅದಾಲತ್ನಲ್ಲಿ ಅವಕಾಶ ಇದೆ.
ಲೋಕ ಅದಾಲತ್ ಮೂಲಕ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳುವುದರಿಂದ. ಮೇಲಿಂದ ಮೇಲೆ ನ್ಯಾಯಾಲಯಕ್ಕೆ ಓಡಾಡುವುದು ತಪ್ಪುತ್ತದೆ. ನ್ಯಾಯಾಲಯ ಶುಲ್ಕ, ವಕೀಲರ ಶುಲ್ಕ ಇಲ್ಲದೆ ಪ್ರಕರಣ ಬಗೆಹರಿಸಿಕೊಳ್ಳಬಹುದಾಗಿದೆ. ಮೇಲಾಗಿ ಮಾನಸಿಕ ಕಿರಿಕಿರಿ ಕಡಿಮೆಯಾಗುತ್ತದೆ.
ಇದನ್ನೂ ಓದಿ: ರಾಯಚೂರು ಲೋಕ ಅದಾಲತ್; ನ್ಯಾಯಾದೀಶರ ಎದುರು ಮತ್ತೆ ಒಂದಾದ 8 ಜೋಡಿ
ಲೋಕ ಅದಾಲತ್ನಲ್ಲಿ ಪ್ರಕರಣ ಬಗೆಹರಿಸಿಕೊಳ್ಳುವುದು ಹೇಗೆ?
ಲೋಕ ಅದಾಲತ್ನಲ್ಲಿ ಪ್ರಕರಣವನ್ನು ಸುಲಭವಾಗಿ ಇತ್ಯರ್ಥ ಪಡಿಸಿಕೊಳ್ಳಲು ಅವಕಾಶವಿದೆ. ಈಗಾಗಲೇ ನ್ಯಾಯಾಲಯದಲ್ಲಿರುವ ಪ್ರಕರಣಗಳಿದ್ದರೆ ಎರಡೂ ಕಡೆಯವರ ಪೈಕಿ ಒಬ್ಬರಾದರು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಬಂದು ನಾವು ರಾಜಿ ಮೂಲಕ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳಲು ಸಿದ್ದ ಅಂತ ಅರ್ಜಿಯನ್ನು ನೀಡಬೇಕು. ದಾಖಲಾಗದ ಪ್ರಕರಣಗಳಿದ್ದರೆ ಅವರು ಕೂಡ ಒಂದು ಅರ್ಜಿಯನ್ನು ನೀಡಿದರೆ ಲೋಕ ಅದಾಲತ್ನಲ್ಲಿ ಆ ಅರ್ಜಿಗಳನ್ನು ಪರಿಗಣಿಸಲಾಗುತ್ತದೆ. ಇಬ್ಬರು ಒಪ್ಪಿ ಬಂದರೆ ಅವರ ಪ್ರಕರಣಗಳನ್ನು ರಾಜಿ ಮೂಲಕ ಸ್ಥಳದಲ್ಲೇ ಬಗೆಹರಿಸಲಾಗುತ್ತದೆ. ಒಬ್ಬರೇ ರಾಜಿಗೆ ಅರ್ಜಿ ಸಲ್ಲಿಸಿದ್ದರೆ, ಎದುರಾಳಿ ಪಾರ್ಟಿಗೆ ನೋಟಿಸ್ ನೀಡಿ, ಅವರನ್ನು ಕರೆಸಿ ರಾಜಿ ಮಾಡಲು ಕೂಡ ಅವಕಾಶ ಇರುತ್ತದೆ.
ಈ ಸಂಬಂಧ ಸಾರ್ವಜನಿಕರು ತಮ್ಮ ಜಿಲ್ಲೆಯಲ್ಲಿರುವ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಬಹುದಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ