
ಬೆಂಗಳೂರು: ನಕಲಿ ಬ್ಯಾಂಕ್ ಅಕೌಂಟ್ ತೆರೆದು 12.60 ಲಕ್ಷ ರೂಪಾಯಿ ಪಂಚಾಯಿತಿ ಹಣವನ್ನು ನುಂಗಿರುವ ಆರೋಪದಡಿ ಗ್ರಾಮ ಪಂಚಾಯಿತಿ ಅಧ್ಯಕ್ಷನನ್ನ ಬಂಧಿಸಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಬಾಗಲೂರು ಗ್ರಾಮದಲ್ಲಿ ನಡೆದಿದೆ.
ಶಾಸಕ ಕೃಷ್ಣಬೈರೇಗೌಡ ಬೆಂಬಲಿಗ ಹಾಗೂ ಹಾಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿರುವ ಮುನೇಗೌಡನನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಜಿಯೋ ಕೆಬಲ್ ಅಳವಡಿಕೆಗಾಗಿ ಪಂಚಾಯಿತಿಗೆ 12 ಲಕ್ಷದ 60 ಸಾವಿರ ರೂಪಾಯಿಗಳ DDಯನ್ನ ಗುತ್ತಿಗೆದಾರ ನೀಡಿದ್ದ ಎಂದು ತಿಳಿದುಬಂದಿದೆ. ಆದರೆ ಮುನೇಗೌಡ, ಗುತ್ತಿಗೆದಾರ ನೀಡಿದ್ದ DDಯನ್ನ ನಕಲಿ ಅಕೌಂಟ್ ತೆರೆದು, ಅದಕ್ಕೆ ಜಮಾಯಿಸಿ, ಹಣವನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಬಂಧಿತ ಆರೋಪಿ ಮುನೇಗೌಡ ಸಂಜಯ್ ನಗರದ HDFC ಬ್ಯಾಂಕ್ನಲ್ಲಿ PDO ಬಾಗಲೂರು ಎಂಬ ಹೆಸರಲ್ಲಿ ನಕಲಿ ಖಾತೆ ತೆರೆದು ಈ ಕೃತ್ಯ ಎಸಗಿದ್ದಾನಂತೆ. ಈ ಬಗ್ಗೆ ತನಿಖೆ ನಡೆಸುವಂತೆ ಬಾಗಲೂರು ಠಾಣೆಗೆ PDO ಅನ್ನಪೂರ್ಣೆಶ್ವರಿ ದೂರು ನೀಡಿದ್ದರು. ದೂರಿನ ಮೆರೆಗೆ ಸುದೀರ್ಘ ತನಿಖೆ ನಡೆಸಿದ ಪೊಲೀಸರು ಮುನೇಗೌಡನನ್ನು ಬಂಧಿಸಿದ್ದಾರೆ.