ಅನುಷ್ಕಾ ಶೀರ್ಷಾಸನ ಮಾಡಿದ್ರು ಅಂತ ನೀವೂ ಮಾಡೋಕೆ ಹೋಗಿ ಅಪಾಯ ಮೈ ಮೇಲೆ ಎಳ್ಕೋಬೇಡಿ! ವೈದ್ಯರು ಏನಂತಾರೆ?
ಗರ್ಭಿಣಿಯಾಗಿರುವಾಗಲೂ ಶೀರ್ಷಾಸನ ಮಾಡಬಲ್ಲೆ ಎಂದು ತೋರಿಸಿಕೊಳ್ಳುವುದು ಹೆಚ್ಚುಗಾರಿಕೆಯೇನಲ್ಲ. ಯೋಗ, ವ್ಯಾಯಾಮದಲ್ಲಿ ಎಷ್ಟೇ ನಿಸ್ಸೀಮರಾದರೂ ಕೆಲವೊಂದು ಸಂದರ್ಭದಲ್ಲಿ ಆಯತಪ್ಪಿ ಬೀಳುವ ಸಾಧ್ಯತೆ ಇರುತ್ತದೆ.

ಸೆಲೆಬ್ರಿಟಿಗಳು ಏನೇ ಮಾಡಿದ್ರು ಅದನ್ನ ಕಣ್ಮುಚ್ಚಿಕೊಂಡು ಅನುಸರಿಸೋ ಅಭಿಮಾನಿಗಳೇ ಹೆಚ್ಚು. ಸೆಲೆಬ್ರಿಟಿಗಳು ಗೊತ್ತಿಲ್ಲದೇ ತಪ್ಪು ಮಾಡಿದ್ರೆ ಅದನ್ನು ಹಿಂದೆಮುಂದೆಯೂ ನೋಡದೇ ಸರಿ ಅಂತ ಕಣ್ಣಿಗೊತ್ತಿಕೊಂಡು ಪರಿಪಾಲಿಸೋ ಜನರಿದ್ದಾರೆ. ಈ ಪ್ರವೃತ್ತಿ ಎಷ್ಟೋ ಸಲ ಜೀವಕ್ಕೆ ಅಪಾಯವನ್ನೂ ತಂದೊಡ್ಡಬಹುದಾದ ಸಾಧ್ಯತೆಯೂ ಇದೆ.
ಅಭಿಮಾನಿಗಳು ಫುಲ್ ಫಿದಾ ನಟಿ ಅನುಷ್ಕಾ ಶರ್ಮಾ ನಿನ್ನೆ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಪೋಸ್ಟ್ ಸದ್ಯ ಎಲ್ಲೆಡೆ ವೈರಲ್ ಆಗಿದೆ. ಗರ್ಭಿಣಿ ಅನುಷ್ಕಾ ಶರ್ಮಾ ತಮ್ಮ ಪತಿರಾಯ ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮಾರ್ಗದರ್ಶನದಲ್ಲಿ ಯೋಗದ ಭಾಗವಾಗಿ ಶೀರ್ಷಾಸನ ಮಾಡುತ್ತಿರುವ ಸ್ವಲ್ಪ ಹಳೆಯದ್ದಾದ ಫೋಟೋವನ್ನು ಇದೀಗ ಪೋಸ್ಟ್ ಮಾಡಿದ್ದಾರೆ. ಪತಿ ವಿರಾಟ್ ಕೊಹ್ಲಿ ಅನುಷ್ಕಾರಿಗೆ ಆಧಾರಸ್ತಂಭವಾಗಿ ನಿಂತುಕೊಂಡಿದ್ದು ಸದ್ಯ ಈ ಫೋಟೋ ಅಭಿಮಾನಿಗಳ ಗಮನ ಸೆಳೆದಿದೆ.

ಅನುಷ್ಕಾ ನೀಡಿರುವ ಸ್ಪಷ್ಟನೆ ಏನು?
ಪರಿಣಿತರಿಂದ ಸಲಹೆ ಪಡೆದು ಶೀರ್ಷಾಸನ ಮಾಡಿದ್ದೇನೆ ಒಂದೆಡೆ ಅಭಿಮಾನಿಗಳು ಈ ಫೋಟೋವನ್ನು ಮೆಚ್ಚಿಕೊಂಡು ಹಾರೈಸುತ್ತಿದ್ದರೆ ಇನ್ನೊಂದೆಡೆ ಕೆಲವರು ಗರ್ಭಿಣಿಯಾಗಿ ಈ ರೀತಿ ಆಸನ ಮಾಡುವುದರಿಂದ ತೊಂದರೆಯಾಗುವುದಿಲ್ವಾ ಅಂತಾ ಆತಂಕ ವ್ಯಕ್ತಪಡಿಸಿದ್ದಾರೆ. ಫೋಟೋದೊಂದಿಗೆ ಶೀರ್ಷಾಸನ ಮಾಡಲು ವೈದ್ಯರಿಂದ ಅನುಮತಿ ಪಡೆದಿರುವೆ ಎಂದು ನಟಿ ಅನುಷ್ಕಾ ಸ್ಪಷ್ಟೀಕರಣ ನೀಡಿರುವರಾದರೂ ಇದು ಅಪಾಯಕಾರಿ ಎನ್ನುವುದು ಬಹುತೇಕ ಮಂದಿಯ ಅಭಿಪ್ರಾಯ.
ಶೀರ್ಷಾಸನ ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದಲ್ಲ ಈ ಕುರಿತು ಟಿವಿ9 ಡಿಜಿಟಲ್ ತಂಡ ಖ್ಯಾತ ಪ್ರಸೂತಿ ತಜ್ಞೆ ಡಾ.ಶೋಭಾ ವೆಂಕಟ್ ಅವರೊಂದಿಗೆ ಮಾತನಾಡಿದಾಗ, ಗರ್ಭಿಣಿಯರಿಗೆ ಅನುಕೂಲವಾಗಲೆಂದೇ ಹಲವು ರೀತಿಯ ವ್ಯಾಯಾಮಗಳಿವೆ. ಯೋಗ ಮತ್ತು ವ್ಯಾಯಾಮ ದೈಹಿಕ-ಮಾನಸಿಕ ಆರೋಗ್ಯಕ್ಕೆ ಸಹಕಾರಿ. ಆ ಕಾರಣಕ್ಕೆ ಗರ್ಭ ಧರಿಸಿದ 16ನೇ ವಾರದಿಂದ ಕೆಲವು ಬಗೆಯ ಆಸನಗಳನ್ನು ಮಾಡುವುದು ಉತ್ತಮ. ಆದರೆ, ಶೀರ್ಷಾಸನ ಮಾಡುವುದು ಸುರಕ್ಷಿತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸೆಲೆಬ್ರಿಟಿಗಳು ಮಾಡ್ತಾರೆ ಅಂತ ನೀವು ಮಾಡೋಕೆ ಹೋಗ್ಬೇಡಿ ಸೆಲೆಬ್ರಿಟಿಗಳು ಮಾಡಿದ್ದನ್ನ ನಾವೂ ಮಾಡುತ್ತೇವೆ ಎಂದು ಹೊರಟರೆ ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ. ಒಬ್ಬೊಬ್ಬ ಗರ್ಭಿಣಿಯರು ಒಂದೊಂದು ತೆರನಾದ ಪರಿಸ್ಥಿತಿಯಲ್ಲಿರುತ್ತಾರೆ. ಕೆಲವರಿಗೆ ರಕ್ತದೊತ್ತಡ ಏರುಪೇರಾಗಿರುತ್ತದೆ, ಇನ್ನು ಕೆಲವರಿಗೆ ಸಣ್ಣಪುಟ್ಟ ಸಮಸ್ಯೆಗಳಿರುತ್ತವೆ. ಅಂತಹವರು ಹೀಗೆ ವ್ಯಾಯಾಮ ಮಾಡುವುದು ಸರ್ವತಾಸಾಧುವಲ್ಲ ಎಂದು ಹೇಳಿದ್ದಾರೆ.
ಶೀರ್ಷಾಸನಕ್ಕೆ ಪರ್ಯಾಯವಾಗಿ ಸುಲಭವಾದ ವ್ಯಾಯಾಮಗಳಿವೆ ಅನ್ನೋದು ಗೊತ್ತಿರಲಿ ಎಲ್ಲಕ್ಕಿಂತ ಮಿಗಿಲಾಗಿ ಗರ್ಭಿಣಿಯಾಗಿರುವಾಗಲೂ ಶೀರ್ಷಾಸನ ಮಾಡಬಲ್ಲೆ ಎಂದು ತೋರಿಸಿಕೊಳ್ಳುವುದು ಹೆಚ್ಚುಗಾರಿಕೆಯೇನಲ್ಲ. ಯೋಗ, ವ್ಯಾಯಾಮದಲ್ಲಿ ಎಷ್ಟೇ ನಿಸ್ಸೀಮರಾದರೂ ಕೆಲವೊಂದು ಸಂದರ್ಭದಲ್ಲಿ ಆಯತಪ್ಪಿ ಬೀಳುವ ಸಾಧ್ಯತೆ ಇರುತ್ತದೆ. ಗರ್ಭಿಣಿಯರಿಗೆ ಹೊಟ್ಟೆ ಭಾರವಾಗಿರುವುದರಿಂದ ಇಂತಹ ಅಪಾಯ ಹೆಚ್ಚು. ಆದ್ದರಿಂದ ಸರಳ ಮತ್ತು ಸುರಕ್ಷಿತ ಆಸನಗಳನ್ನಷ್ಟೇ ಮಾಡುವುದು ಉತ್ತಮ ಎಂದು ತಿಳಿಸಿದ್ದಾರೆ.
Published On - 2:10 pm, Wed, 2 December 20



