ಮುಂಬೈ: ಬ್ರಹ್ಮ, ವಿಷ್ಣು, ಶಿವ ಎದೆಹಾಲು ಕುಡಿದರು.. ಅಮ್ಮಾ ನೀನೆ ದೈವ ಅಂತಾ ಕಾಲು ಮುಗಿದರೋ ಎಂಬ ಸಿನಿಮಾ ಹಾಡಿನ ಸಾಲುಗಳಂತೆ ಶಿಶುವಿಗೆ ತಾಯಿಯ ಎದೆಹಾಲಿಗಿಂತ ಬೇರಾವ ಉತ್ತಮ ಆಹಾರ ಇಲ್ಲವೆಂದು ಹೇಳುತ್ತಾರೆ. ಅದರಲ್ಲಿರುವ ಮಮತೆ, ಪೌಷ್ಟಿಕತೆ, ಸಾತ್ವಿಕತೆ ಹಾಗೂ ರೋಗ ನಿರೋಧಕ ಶಕ್ತಿ ಕೂಸಿನ ಸಮಗ್ರ ಬೆಳವಣಿಗೆಯಲ್ಲಿ ನೆರವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
ಸ್ವಂತ ಮಗುವಿನ ಜೊತೆಗೆ ಇತರೆ 60 ಮಕ್ಕಳ ಪಾಲಿಗೆ ಅಮೃತ ನೀಡಿದ ತಾಯಿ
ನೇತ್ರದಾನ, ರಕ್ತದಾನದಂತೆ ಇದೀಗ ಸಿನಿಮಾ ನಿರ್ಮಾಪಕಿಯೊಬ್ಬರು ಎದೆಹಾಲು ಉಣಿಸಲು ಕಷ್ಟವಾಗುತ್ತಿರುವ ಬಾಣಂತಿಯರ ಮಕ್ಕಳಿಗೆ ಆಪದ್ಬಾಂಧವರಾಗಿ ಪರಿಣಮಿಸಿದ್ದಾರೆ. ಹೌದು, ಸಾಂಡ್ ಕೀ ಆಂಖ್ (ಎತ್ತಿನ ಕಣ್ಣು ಅಥವಾ ಬುಲ್ಸ್ ಐ) ಎಂಬ ಹಿಂದಿ ಚಿತ್ರದ ನಿರ್ಮಾಪಕಿ ನಿಧಿ ಪಾರ್ಮಾರ್ ಹೀರಾನಂದಾನಿ ಕಳೆದ ಮೇ ತಿಂಗಳಿಂದ ಸರಿಸುಮಾರು 42 ಲೀಟರ್ ಎದೆಹಾಲನ್ನು ದಾನ ಮಾಡಿದ್ದಾರೆ. ಇದೇ ವರ್ಷ ಮುದ್ದಾದ ಮಗುವಿಗೆ ಜನ್ಮ ನೀಡಿದ್ದ ನಿಧಿ ತಮ್ಮ ಶಿಶುವಿಗೆ ಮೊಲೆಯುಣಿಸುವುದಲ್ಲದೆ ಇತರೆ ನವಜಾತ ಶಿಶುವಿನ ಸಹಾಯಕ್ಕೆ ಮುಂದಾಗಿದ್ದಾರೆ.
ಮಾತೃತ್ವದ ಧನ್ಯತೆ.. ಅವರಿಗೆ ಫ್ಯಾಷನ್; ಇವರಿಗೆ ಪ್ಯಾಷನ್!
ಇತ್ತೀಚಿನ ಫ್ಯಾಷನ್ ಯುಗದಲ್ಲಿ ತನ್ನದೇ ಮಕ್ಕಳಿಗೆ ಹಾಲುಣಿಸುವುದಕ್ಕೆ ವಿಶೇಷವಾಗಿ ಸಿನಿಮಾ ಮಂದಿ ಹಿಂದೇಟು ಹಾಕುತ್ತಾರೆ. ದೈಹಿಕ ಸೌಂದರ್ಯ ಕಾಪಾಡಿಕೊಳ್ಳುವ ಭರದಲ್ಲಿ.. ತನ್ನ ಶಿಶುವಿಗೆ ಮೊಲೆಯುಣಿಸದೇ ಇರುವುದನ್ನು ಫ್ಯಾಷನ್ ಮಾಡಿಕೊಂಡಿದ್ದಾರೆ. ಆದ್ರೆ ಈ ಮಹಾತಾಯಿ ತನ್ನದೇ ಮಗುವಿನ ಜೊತೆಗೆ ಇತರೆ ಶಿಶುಗಳಿಗೂ ಹಾಲುಣಿಸುವುದನ್ನು ಪ್ಯಾಷನ್ ಮಾಡಿಕೊಂಡಿದ್ದಾರೆ! ಇದು ಅಪ್ಪಟ ಮಾತೃ ಹೃದಯವೇ ಸರಿ!
ಮುಂದಿನ ಒಂದು ವರ್ಷದವರೆಗೂ ಇದೇ ರೀತಿಯಲ್ಲಿ ಎದೆಹಾಲು ದಾನ
ಆಸ್ಪತ್ರೆಯಲ್ಲಿ ಎದೆಹಾಲು ಉಣಿಸಲು ಕಷ್ಟಪಡುತ್ತಿದ್ದ ಬಾಣಂತಿಯರ ಕೂಸುಗಳಿಗೆ ಹಾಲು ಒದಗಿಸಿದ್ದಾರೆ. ಈ ಮೂಲಕ ಬರೋಬ್ಬರಿ 60 ಮಕ್ಕಳ ಪಾಲಿಗೆ ನಿಧಿ ಪಾರ್ಮಾರ್ ಸಾಕ್ಷಾತ್ ಅನ್ನಪೂರ್ಣೇಶ್ವರಿಯಾಗಿದ್ದಾರೆ. ಅಷ್ಟೇ ಅಲ್ಲ, ತಮ್ಮ ಎದೆಹಾಲು ಪಡೆದ ಮಕ್ಕಳ ದುರ್ಬಲ ಆರೋಗ್ಯ ಸ್ಥಿತಿ ಕಂಡು ಮುಂದಿನ ಒಂದು ವರ್ಷದವರೆಗೂ ಇದೇ ರೀತಿಯಲ್ಲಿ ಎದೆಹಾಲು ದಾನ ಮಾಡಲು ಮುಂದಾಗಿದ್ದಾರೆ.
Published On - 6:09 pm, Wed, 18 November 20