ಯಡಿಯೂರಪ್ಪ ಹೊಸ ಆಟ.. ಯಾವುದು? ಹೇಗೆ?
ಸಂಪುಟ ಪುನಾರಚನೆ ಕಸರತ್ತಿಗೆ ಕೈ ಹಾಕಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪಕ್ಷದ ಹೈಕಮಾಂಡ್ ಕೈಗೆ ಸಂಪುಟ ಪುನಾರಚನೆ ಪಟ್ಟಿಯನ್ನು ಶಿಸ್ತಾಗಿ ಕೊಟ್ಟು ಬಂದಿದ್ದಾರೆ. ಈ ಮಧ್ಯೆ ರಾಜ್ಯದಲ್ಲಿ ಅವರು ಹೊಸ ರಾಜಕೀಯ ಪದ್ಧತಿಯೊಂದನ್ನು ಹುಟ್ಟುಹಾಕಿದ್ದಾರೆ. ಇದಕ್ಕೆ ರಾಷ್ಟ್ರೀಯ ನಾಯಕರ ಅನುಮತಿ ಇದೆ ಎನ್ನುವುದಕ್ಕೆ ಇನ್ನೂವರೆಗೂ ಯಾವ ಪುರಾವೆ ಸಿಕ್ಕಿಲ್ಲ. ಯಡಿಯೂರಪ್ಪನವರನ್ನು ಕಳೆದ 30 ವರ್ಷಗಳಿಂದ ನೋಡಿರುವ ಭಾರತೀಯ ಜನತಾ ಪಕ್ಷದ ಸ್ಥಳೀಯ ನಾಯಕರು ಖಾಸಗಿಯಾಗಿ ಹೇಳುವ ಮಾತೇ ಬೇರೆ. ಅವರ ಪ್ರಕಾರ ಯಡಿಯೂರಪ್ಪನವರು ಈಗ ಹೊಸ […]
ಸಂಪುಟ ಪುನಾರಚನೆ ಕಸರತ್ತಿಗೆ ಕೈ ಹಾಕಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪಕ್ಷದ ಹೈಕಮಾಂಡ್ ಕೈಗೆ ಸಂಪುಟ ಪುನಾರಚನೆ ಪಟ್ಟಿಯನ್ನು ಶಿಸ್ತಾಗಿ ಕೊಟ್ಟು ಬಂದಿದ್ದಾರೆ. ಈ ಮಧ್ಯೆ ರಾಜ್ಯದಲ್ಲಿ ಅವರು ಹೊಸ ರಾಜಕೀಯ ಪದ್ಧತಿಯೊಂದನ್ನು ಹುಟ್ಟುಹಾಕಿದ್ದಾರೆ. ಇದಕ್ಕೆ ರಾಷ್ಟ್ರೀಯ ನಾಯಕರ ಅನುಮತಿ ಇದೆ ಎನ್ನುವುದಕ್ಕೆ ಇನ್ನೂವರೆಗೂ ಯಾವ ಪುರಾವೆ ಸಿಕ್ಕಿಲ್ಲ. ಯಡಿಯೂರಪ್ಪನವರನ್ನು ಕಳೆದ 30 ವರ್ಷಗಳಿಂದ ನೋಡಿರುವ ಭಾರತೀಯ ಜನತಾ ಪಕ್ಷದ ಸ್ಥಳೀಯ ನಾಯಕರು ಖಾಸಗಿಯಾಗಿ ಹೇಳುವ ಮಾತೇ ಬೇರೆ. ಅವರ ಪ್ರಕಾರ ಯಡಿಯೂರಪ್ಪನವರು ಈಗ ಹೊಸ ತಂತ್ರಗಾರಿಕೆಗೆ ಮೊರೆ ಹೋಗಿದ್ದಾರೆ. ಇಲ್ಲೀವರೆಗೆ ಅವರ ತಂತ್ರ ಬೇರೆ ರೀತಿಯದೇ ಇರುತ್ತಿತ್ತು.
ಏನದು ಹೊಸ ಪದ್ಧತಿ? ಉಪ ಚುನಾವಣೆ ಇರಲಿ ಅಥವಾ ಟಿವಿ ಕ್ಯಾಮೆರಾ ಮುಂದೆ ನಿಂತು ಕೊಡುವ ಬೈಟ್ ಇರಲಿ, ನಾಯಕರು ತಮ್ಮ ರಾಜಕೀಯ ವಿರೋಧಿಗಳನ್ನು ಬಯ್ಯುವುದು, ಹೀಗಳೆಯುವುದು ಸಾಮಾನ್ಯ. ಯಡಿಯೂರಪ್ಪನವರಿಗೆ ಸಿಟ್ಟು ಬಂದರೆ ಸಾಕು. ತಾವು ಹೇಳಿದ್ದೇ ನಡೆಯಬೇಕು. ಜಗಳದಲ್ಲಿ ಕೂಡ. ತಮಗೆ ಬರುವ ಲಾಭ ನಷ್ಟ ನೋಡದೇ ವಿರೋಧಿಗಳ ವಿರುದ್ಧ ತೊಡೆತಟ್ಟುತ್ತಿದ್ದರು. ಮೊನಚು ಮಾತಿನಲ್ಲಿ ತಿವಿಯಲು ಪ್ರಯತ್ನಿಸುತ್ತಿದ್ದುದು ಹೊಸದೇನಲ್ಲ. ಹಿಂದಿನ ಬಾರಿ ಮುಖ್ಯಮಂತ್ರಿಯಾಗಿದ್ದಾಗ ದೇವೇಗೌಡರ ಕುಟುಂಬದ ಅವ್ಯವಹಾರ ಬಯಲಿಗೆಳೆಯಲು ಅಂದಿನ ರಾಜಕೀಯ ಕಾರ್ಯದರ್ಶಿಯಾಗಿದ್ದ ಬಿ.ಜೆ. ಪುಟ್ಟಸ್ವಾಮಿಯನ್ನು ಬಿಟ್ಟಿದ್ದರು. ಅದು ಕೊನೆಗೂ ದಡ ಮುಟ್ಟಲಿಲ್ಲ.
ಈ ಬಾರಿ ಅವರು ಹೊಸ ವರಸೆಯೊಂದಿಗೆ ಆಳ್ವಿಕೆ ನಡೆಸುತ್ತಿದ್ದಾರೆ. ಅವರು ಯಾರನ್ನೂ ಬಯ್ಯಲ್ಲ. ಇತ್ತೀಚಿನ ಉಪಚುನಾವಣೆಯಲ್ಲಿ ಕೂಡ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎಷ್ಟೇ ಬಯ್ದರೂ ಯಡಿಯೂರಪ್ಪ ಯಾರ ತಂಟೆಗೂ ಹೋಗಲಿಲ್ಲ. ಇನ್ನು ದೇವೇಗೌಡರ ಕುಟುಂಬದ ವಿಚಾರಕ್ಕೆ ಬಂದರೆ, ಯಡಿಯೂರಪ್ಪ ಏನನ್ನೂ ಮಾತನಾಡುತ್ತಿಲ್ಲ.
ಬಿಜೆಪಿ ಮೂಲಗಳ ಪ್ರಕಾರ, ಹೊರಗೆ ಎಂಥದೇ ಜಗಳ ನಡೆಯಲಿ, ಯಡಿಯೂರಪ್ಪ ಅವರು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಮತ್ತು ಎಚ್.ಡಿ. ಕುಮಾರಸ್ವಾಮಿ ಜೊತೆಗೆ ತುಂಬಾ ಚೆನ್ನಾಗಿ ಸಂಬಂಧ ಕಾಯ್ದುಕೊಂಡಿದ್ದಾರೆ. ಈ ಮೂರು ನಾಯಕರುಗಳು ಹೇಳುವ ಕೆಲವು ಸರಕಾರಿ ನೌಕರರ ವರ್ಗಾವರ್ಗಿ ಆಗುತ್ತೆ. ಅವರ ಕ್ಷೇತ್ರಕ್ಕೆ ಸಂಬಂಧಿಸಿದ ಯಾವ ಕಡತ ಕೂಡ ಬಹಳ ದಿನ ಕಾಯೋಲ್ಲ. ಎಲ್ಲಕ್ಕೂ ಯಡಿಯೂರಪ್ಪ ಅಂಕಿತ ಹಾಕಿ ಕಳಿಸುತ್ತಾರೆ. ಇವು ಮಾಮೂಲು, ಇದರಲ್ಲೇನು ವಿಶೇಷ ಎಂದುಕೊಂಡಿರಾ?
ಮಂಗಳವಾರ, ಮಂಡ್ಯ ಜಿಲ್ಲೆ ಡಿಸಿಸಿ ಬ್ಯಾಂಕ್ ಚುನಾವಣೆ ಆಯ್ತು. ಅಲ್ಲಿ ಬಿಜೆಪಿಗೆ ಅಡ್ರೆಸ್ ಇಲ್ಲ. ಹೀಗಿದ್ದಾಗ, ಕುಮಾರಸ್ವಾಮಿಯವರನ್ನು ಖುಷಿಯಾಗಿರಿಸಲು ಅವರು ಸೂಚಿಸಿದ ವ್ಯಕ್ತಿಯನ್ನು ಸರಕಾರದಿಂದ ನಾಮಿನೇಶನ್ ಮಾಡಿ, ಜೆಡಿಎಸ್ ಕೈ ಮೇಲಾಗುವಂತೆ ನೋಡಿಕೊಂಡರು. ಇನ್ನೊಂದು ಮೂಲಗಳ ಪ್ರಕಾರ, ಬೆಂಗಳೂರಿನ ಮಾಜಿ ಮೇಯರ್ ಸಂಪತ್ ರಾಜ್ ಅವರ ಬಂಧನದ ವಿಚಾರದಲ್ಲಿ ಕೂಡ ಸರಕಾರ ತುಂಬಾ ಹೃದಯವೈಶಾಲ್ಯತೆ ತೋರಿಸಿತ್ತು.
ಅದಕ್ಕೆ ಕಾರಣ.. ಒಮ್ಮೆ ಮೊದಲ ದಿನವೇ ಬಂಧಿಸಿದ್ದರೆ, ಶಿವಕುಮಾರ್ ಅವರಿಗೆ ತುಂಬಾ ಸಿಟ್ಟು ಬರುತ್ತಿತ್ತು. ಕೊನೆಗೆ ಹೈಕೋರ್ಟ್ ತಪರಾಕಿ ಕೊಟ್ಟ ಮೇಲೆ, ಅನಿವಾರ್ಯವಾಗಿ ಸಂಪತ್ ರಾಜ್ ಬಂಧನ ಆಯ್ತು. ಈಗ ಯಡಿಯೂರಪ್ಪನವರಿಗೆ ಒಂದು ಸಕಾರಣ ಇತ್ತು: ಕೋರ್ಟ್ ಹೇಳಿತು.. ಹಾಗಾಗಿ ಬಂಧಿಸಿದೆ ಎಂದು. ಸಿದ್ದರಾಮಯ್ಯ ಕೂಡ ತಮಗೆ ಬೇಕಾದ ಸರಕಾರಿ ನೌಕರರ ವರ್ಗಾವಣೆ ಮಾಡಿಸಿಕೊಳ್ಳುವುದು ಮತ್ತು ಇನ್ನಿತರೆ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಶಿರಾ ಉಪಚುನಾವಣೆ ಆಯ್ತಲ್ಲ. ಗೆದ್ದ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡ ಬಿಜೆಪಿಗೆ ಹೇಗೆ ಹೋದ್ರು ಅನ್ನೋದನ್ನ ನೋಡಿ. ಕಾಂಗ್ರೆಸ್ಸಿನ ಕಟ್ಟಾಳು, ಡಾ. ರಾಜೇಶ್ ಗೌಡ ರಾತ್ರೋರಾತ್ರಿ ಬಿಜೆಪಿಗೆ ಹೋಗಿದ್ದೇ ಸಿದ್ದರಾಮಯ್ಯನವರ ಕೃಪಾಕಟಾಕ್ಷದಿಂದ ಎನ್ನುತ್ತಾರೆ ಹಲವಾರು ಬಿಜೆಪಿ ನಾಯಕರು.
ಯಡಿಯೂರಪ್ಪ ಅವರಿಗೆ ಏನು ಲಾಭ? ಸರಕಾರದ ವಿರುದ್ಧ ವಿರೋಧ ಪಕ್ಷಗಳು ಕೈಗೊಳ್ಳುವ ಚಳುವಳಿ ತರಹದ ಹೋರಾಟದಿಂದ ಯಡಿಯೂರಪ್ಪ ಪಾರಾಗಿದ್ದುದು ಮೊದಲನೆಯ ಲಾಭ. ಅವರ ತಪ್ಪುಗಳನ್ನು ಹೊರತೆಗೆದು ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸುವ (ಹಿಂದಿನ ಬಾರಿ ಕುಮಾರಸ್ವಾಮಿ ಈ ಕೆಲಸ ಮಾಡಿದ್ದರು) ಕೆಲಸ ಈ ಬಾರಿ ಆಗದೇ ಇದ್ದುದು ಅವರಿಗೆ ಆಗುತ್ತಿರುವ ಎರಡನೇ ಲಾಭ. ಅದಕ್ಕಿಂತ ಹೆಚ್ಚಾಗಿ ಇನ್ನೊಂದು ಲಾಭವಿದೆ ಎಂದು ಬಿ ಜೆ ಪಿ ಮೂಲಗಳು ಹೇಳುತ್ತಿವೆ. ಯಡಿಯೂರಪ್ಪನವರ ತಂತ್ರಗಾರಿಕೆ ಪಕ್ಷಕ್ಕೆ ಖಂಡಿತ ಸಹಾಯವಾಗಲ್ಲ. ಡ್ರಗ್ ಕೇಸಿಗೆ ಸಂಬಂಧಿಸಿದ ವಿಚಾರಣೆಯಿಂದ ಕೆಲವು ಸೆಲೆಬ್ರಿಟಿಗಳನ್ನು ಬಿಟ್ಟಿದ್ದು ಅಥವಾ ಇಡೀ ಕೇಸಿನ ವಿಚಾರಣೆಯನ್ನು ಬರೀ ಸ್ಯಾಂಡಲ್ವುಡ್ಗೆ ಸೀಮಿತಗೊಳಿಸಿದ್ದರಿಂದ ಬಿಜೆಪಿ ಸರಕಾರದ ಮೇಲೆ ಇದ್ದ ವಿಶ್ವಾಸ ತುಂಬಾ ಕಡಿಮೆ ಆಗುವಂತಾಗಿದೆ. ಸಂಪತ್ ರಾಜ್ ಕೇಸಿನಲ್ಲಿ ಸರಕಾರ ನಡೆದುಕೊಂಡ ರೀತಿ ಪಕ್ಷಕ್ಕೆ ಕಪ್ಪುಚುಕ್ಕೆ ಇಡುವಂತಿದೆ. ಇದು ಏನನ್ನು ತೋರಿಸುತ್ತೆ ಎಂದರೆ, ಸಮಾಜಕ್ಕೆ ಹಾನಿ ಮಾಡುವ ಡ್ರಗ್ ಪೆಡ್ಲರ್ಗಳ ವಿಚಾರವಿರಲಿ, ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯ ವಿಚಾರಣೆ ಇರಲಿ, ಯಡಿಯೂರಪ್ಪ ಸರಕಾರ ವಿರೋಧ ಪಕ್ಷದ ನಾಯಕರ ಓಲೈಕೆಗೆ ಪ್ರಥಮ ಆದ್ಯತೆ ನೀಡುತ್ತೆ ಹೊರತು ರಾಜ್ಯದ ಹಿತಾಸಕ್ತಿಗೆ ಅಲ್ಲ ಎಂಬುದು. ಮುಂದಿನ ದಿನಗಳಲ್ಲಿ ಇದು ಪಕ್ಷಕ್ಕೆ ಹಾನಿ ಮಾಡುವುದು ಖಂಡಿತ.
ಯಡಿಯೂರಪ್ಪ ಲೆಕ್ಕ ಹಾಕಿರಬಹುದು. ಅದೇನೆಂದರೆ, ವಿರೋಧ ಪಕ್ಷಗಳ ನಾಯಕರ ನಡುವೆಯೇ ಅಸೂಯೆ ಮತ್ತು ಸ್ಪರ್ಧೆ ಹುಟ್ಟು ಹಾಕುವುದು ಮತ್ತು ಆಗ ನಡೆಯುವ ವಿರೋಧಿ ನಾಯಕರುಗಳ ಜಗಳದಿಂದ ತಮಗೆ ಎಷ್ಟು ರಾಜಕೀಯ ಲಾಭವಾಗುತ್ತದೋ ಅಷ್ಟು ಲಾಭ ಮಾಡಿಕೊಳ್ಳುವುದು ಎಂದು. ಈ ತಂತ್ರಗಾರಿಕೆಯನ್ನು ಅವರು ಮುಂದಿನ ಚುನಾವಣೆವರೆಗೂ ನಡೆಸಲು ಸಾಧ್ಯವೋ? ಅಥವಾ ಮಧ್ಯದಲ್ಲಿ ಬೇರೆ ಸ್ಥಿತ್ಯಂತರವಾಗಿ ಅವರು ಪಕ್ಷದ ಹಿತಾಸಕ್ತಿ ಬಲಿಕೊಡಲು ಹೋದಾಗ ಪಕ್ಷ ಏನು ಕ್ರಮ ತೆಗೆದು ಕೊಳ್ಳುತ್ತೆ ಎನ್ನುವುದರ ಮೇಲೆ ಅವರ ತಂತ್ರಗಾರಿಕೆ ಕಾದು ನಿಂತಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
Published On - 6:39 pm, Wed, 18 November 20