ಮೈಸೂರು: ಹಾವು ಅಂದ್ರೆ ಕೆಲವರಿಗೆ ಶ್ರದ್ಧೆ, ಭಕ್ತಿ. ಇನ್ನೂ ಕೆಲವರಿಗೆ ಭಯ. ಕೆಲವರು ಹಾವನ್ನು ಭಯ ಭಕ್ತಿಯಿಂದ ಪೂಜಿಸಿದರೆ, ಮತ್ತೆ ಹಲವರು ಭಯದಿಂದ ಅದೇ ಹಾವನ್ನು ಸಾಯಿಸುತ್ತಾರೆ. ಇವೆರೆಡು ಅಪರೂಪದ ಘಟನೆಗೆ ಸಾಂಸ್ಕೃತಿಕ ನಗರಿ ಮೈಸೂರು ಸಾಕ್ಷಿಯಾಗಿದೆ.
ಒಂದು ಕಡೆ ಮನೆಗೆ ಬಂದ ಹಾವಿಗೆ ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡುತ್ತಿರುವ ಮಹಿಳೆ. ಮತ್ತೊಂದ್ಕಡೆ ಮನೆಗೆ ಬಂದ ಹಾವನ್ನ ಕೊಂದುಹಾಕಿದ ಮನೆಯವ್ರು.ಈ ಎರಡೂ ಘಟನೆಗೆ ಸಾಕ್ಷಿಯಾಗಿದ್ದು ಸಾಂಸ್ಕೃತಿಕ ನಗರಿ ಮೈಸೂರು. ಹೌದು ಮೈಸೂರಿನ ರಾಜರಾಜೇಶ್ವರಿ ನಗರದ ಗಾಯತ್ರಿ ಪ್ರಭಾಕರ್ ಅವರ ಮನೆಗೆ ನಾಗರಹಾವು ಬಂದಿತ್ತು. ಮನೆಗೆ ಬಂದ ನಾಗರಹಾವನ್ನ ಕಂಡು ಮನೆಯವರೆಲ್ಲಾ ಗಾಬರಿಯಾದರು.
ಮನೆಗೆ ಬಂದ ನಾಗರಹಾವಿಗೆ ಪೂಜೆ ಮಾಡಿದ್ದಾರೆ..
ತಕ್ಷಣ ಮೈಸೂರಿನ ಖ್ಯಾತ ಉರಗ ಸಂರಕ್ಷಕ ಸ್ನೇಕ್ ಶ್ಯಾಮ್ ಪುತ್ರ ಸೂರ್ಯ ಕೀರ್ತಿಗೆ ವಿಚಾರ ತಿಳಿಸಿದ್ದಾರೆ. ಮನೆಗೆ ಬಂದ ಸೂರ್ಯ ಕೀರ್ತಿ ಯುಪಿಎಸ್ ಒಳಗಿದ್ದ ಈ ಹಾವನ್ನು ಸಂರಕ್ಷಣೆ ಮಾಡಿದ್ದಾರೆ. ಸಂರಕ್ಷಣೆ ಮಾಡಿದ ಹಾವನ್ನು ಕಂಡ ಗಾಯತ್ರಿಯವರಿಗೆ ಭಕ್ತಿ ತುಂಬಿ ಬಂದಿದೆ. ತಕ್ಷಣ ದೇವರ ಮನೆಗೆ ಹೋಗಿ ಗಂಧದಕಡ್ಡಿ ತಂದು ಹಾವಿಗೆ ಪೂಜೆ ಮಾಡಿದ್ದಾರೆ. ಹಾವನ್ನ ಮುಟ್ಟಿ ನಮಸ್ಕರಿಸಿದ್ದಾರೆ.
ಹಾವಿಗೆ ಮನೆಯಲ್ಲಿದ್ದ ಕ್ರಿಮಿನಾಶಕ ಸ್ಪ್ರೇ ಮಾಡಿದ್ದಾರೆ..
ಇಲ್ಲಿ ಗಾಯತ್ರಿ ಅವರು ಹಾವಿಗೆ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿದ್ರೆ ಮತ್ತೊಂದು ಕಡೆ ಮನೆಗೆ ಬಂದ ಕೇರೆ ಹಾವನ್ನು ಮನೆಯವರೇ ಸಾಯಿಸಿದ್ದಾರೆ. ಮೈಸೂರಿನ ವಿಜಯನಗರದ 2ನೇ ಹಂತದಲ್ಲಿರುವ ಚಿದಾನಂದರ ಮನೆಗೆ ಕೇರೆ ಹಾವು ಬಂದಿದೆ. ಹಾವನ್ನು ಕಂಡು ಮನೆಯವರು ಗಾಬರಿಯಾಗಿದ್ದಾರೆ. ಹಾವಿಗೆ ಮನೆಯಲ್ಲಿದ್ದ ಕ್ರಿಮಿನಾಶಕ ಸ್ಪ್ರೇ ಮಾಡಿದ್ದಾರೆ. ಇದರಿಂದ ಉಸಿರುಗಟ್ಟಿ ಹಾವು ವಿಲ ವಿಲ ಒದ್ದಾಡಿ ಪ್ರಾಣ ಬಿಟ್ಟಿದೆ.
ಒಟ್ಟಾರೆ ಒಂದೇ ಜಿಲ್ಲೆಯಲ್ಲಿ ಎರಡು ವ್ಯತಿರಿಕ್ತ ಘಟನೆಗಳು ನಡೆದಿವೆ. ಒಂದು ಘಟನೆಯಲ್ಲಿ ಹಾವನ್ನ ಸಂರಕ್ಷಣೆ ಮಾಡುವ ಪ್ರಯತ್ನ ನಡೆದಿದ್ದರೆ, ಮತ್ತೊಂದು ಘಟನೆಯಲ್ಲಿ ಸರ್ಪ ಹತ್ಯೆ ಮಾಡಲಾಗಿದೆ. ಹೀಗಾಗಿ ಎಂತಹ ಸಂದರ್ಭ ಬಂದ್ರೂ ಸರ್ಪ ಹತ್ಯೆ ಮಾಡದೆ ತಜ್ಞರಿಗೆ ತಕ್ಷಣ ವಿಷಯ ಮುಟ್ಟಿಸಿ ಅನ್ನೋದು ಉರಗ ತಜ್ಞರ ಮನವಿಯಾಗಿದೆ.