ಚಿಕ್ಕಬಳ್ಳಾಪುರ: ಅವರು ಹೇಳಿ ಕೇಳಿ ರಾಜ್ಯ ಸರ್ಕಾರದಲ್ಲಿ ಹೈಟೆಕ್ ಹಾಗೂ ಪ್ರಭಾವಿ ಸಚಿವರು, ಅವರ ತವರು ಕ್ಷೇತ್ರದಲ್ಲಿ ಕೆಲವು ಗ್ರಾಮಗಳು ಬಂಡೆಗಳ ಮೇಲೆ ನಿರ್ಮಾಣವಾಗಿವೆ, ಆದ್ರೆ ಈಗ ಸಮಸ್ಯೆಯಾಗುತ್ತಿರುವುದು ಮನೆಗಳ ನಿರ್ಮಾಣದಿಂದ ಅಲ್ಲವೇ ಅಲ್ಲ, ಅದೆ ಬಂಡೆಗಳ ಮೇಲೆ ಈಗ ಶೌಚಾಲಯಗಳನ್ನು ನಿರ್ಮಾಣ ಮಾಡಲು ಆಗದೆ ಸ್ವತಃ ಜನರು ಹಾಗೂ ಜಿಲ್ಲಾಡಳಿತ ಹೆಣಗಾಡುವಂತಾಗಿದೆ. ಇದ್ರಿಂದ ಹೈಟೆಕ್ ಮಂತ್ರಿಯ ತವರು ಕ್ಷೇತ್ರದಲ್ಲಿ ಕೆಲವರು ಬಯಲು ಬಹಿರ್ದೆಸೆಯನ್ನೆ ನಂಬಿಕೊಂಡು ಪ್ರತಿದಿನ ಪ್ರತಿಸಲ ಕಷ್ಟಪಡುವಂತಾಗಿದೆ.
ಜನಸಂಖ್ಯೆ ಹೆಚ್ಚಾದಂತೆ ಸರ್ಕಾರಿ ಗೋಮಾಳ, ಅರಣ್ಯ ಭೂಮಿ, ರಾಜಕಾಲುವೆ, ಕೆರೆ ಕುಂಟೆ ಒತ್ತುವರಿ ಮಾಡಿಕೊಂಡು ಗ್ರಾಮಗಳ ನಿರ್ಮಾಣ ಮಾಡಿದ್ದು ಆಯಿತು, ಆದ್ರೆ ಅಲ್ಲಿಷ್ಟು ಇಲ್ಲಿಷ್ಟು ಉಳಿದಿದ್ದ ಬೆಟ್ಟ ಗುಡ್ಡ ಹಾಗೂ ಕಲ್ಲು ಬಂಡೆಗಳ ಮೇಲೆ ಊರುಗಳ ನಿರ್ಮಾಣ ಮಾಡಿ ಈಗ ಶೌಚಾಲಯ ಕಟ್ಟಿಕೊಳ್ಳಲು ಜನರು ಪರದಾಡುವಂತಾಗಿದೆ.
314 ಫಲಾನುಭವಿಗಳಿಗೆ ಶೌಚಾಲಯಗಳು
ಹೌದು ಇಂಥ ಸಮಸ್ಯೆ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ತವರು ಕ್ಷೇತ್ರದಲ್ಲಿ ಸಾಮಾನ್ಯವಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ 10 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ 314 ಫಲಾನುಭವಿಗಳಿಗೆ ಶೌಚಾಲಯಗಳ ನಿರ್ಮಾಣ ಮಾಡುವುದೆ ಈಗ ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ ಹರಸಾಹಸವಾಗಿದೆ. ಒಂದೆಡೆ ಇರೊ ನಿಗದಿತ ಅನುದಾನದಲ್ಲಿ ಬಂಡೆಗಳ ಮೇಲೆ ಶೌಚಾಲಯ ನಿರ್ಮಾಣ ಮಾಡಲು ಆಗುತ್ತಿಲ್ಲ, ಮತ್ತೊಂದೆಡೆ ಸಾಮಾನ್ಯ ಶೌಚಾಲಯದಂತೆ ಶೌಚ ಗೃಹ ನಿರ್ಮಾಣ ಮಾಡಲು ಆಗುತ್ತಿಲ್ಲ.
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಸಾಮಾನ್ಯ ವರ್ಗದ ಜನರಿಗೆ ಕೇಂದ್ರ ಸರ್ಕಾರ ಫಲಾನುಭವಿಗೆ ತಲಾ 12 ಸಾವಿರ ರೂಪಾಯಿ ನಿಗದಿಗೊಳಿದೆ. ಇನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ತಲಾ 15 ಸಾವಿರ ರೂಪಾಯಿ ನಿಗದಿಗೊಳಿಸಿದೆ. ಇದ್ರಿಂದ ಇರುವ ಅನುದಾನದಲ್ಲಿ ಶೌಚಾಲಯ ನಿರ್ಮಾಣ ಮಾಡಲು ಆಗುತ್ತಿಲ್ಲ.
ಇದ್ರಿಂದ ಚಿಕ್ಕಬಳ್ಳಾಪುರ ತಾಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಎಸ್.ಎಲ್.ಹರ್ಷವರ್ಧನ್ ಬಂಡೆಗಳ ಮೇಲೆ ಇರುವ ಫಲಾನುಭವಿಗಳಿಗೆ ಶೌಚಾಲಯ ನಿರ್ಮಾಣ ಮಾಡಿಕೊಡಲು ಅನುದಾನ ಹೆಚ್ಚಿಸಿದ್ದಾರೆ. ಹೆಚ್ಚುವರಿಯಾಗಿ ಸಾಮಾನ್ಯ ವರ್ಗಕ್ಕೆ ತಲಾ 23 ಸಾವಿ ರೂಪಾಯಿ ಹಾಗೂ ಎಸ್.ಸಿ ಮತ್ತು ಎಸ್.ಟಿ ಸಮುದಾಯದ ತಲಾ ಫಲಾನುಭವಿಗಳಿಗೆ 20 ಸಾವಿರ ರೂಪಾಯಿ ಅನುದಾನ ಮಂಜೂರು ಮಾಡಲು ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಪಿ.ಶಿವಶಂಕರ್ ಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಹಾಗಾದ್ರೆ ಶೌಚಾಲಯ ನಿರ್ಮಾಣ ಹೇಗೆ..?
ಬಂಡೆಗಳ ಮೇಲೆ ಶೌಚಾಲಯ ನಿರ್ಮಾಣ ಮಾಡಲು ಇ.ಒ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಬಂಡೆಗಳನ್ನು ಕೊರೆಯಲು ಸಾಧ್ಯವಿಲ್ಲ, ಆದ್ರೆ ಶೌಚಾಲಯದ ಬೇಸಿನ್ನ್ನು ಬಂಡೆಯಿಂದ ಮೂರು ನಾಲ್ಕು ಅಡಿ ಎತ್ತರದಲ್ಲಿ ಇಟ್ಟು ಶೌಚ ಗೃಹ ನಿರ್ಮಾಣ ಮಾಡುವುದು. ನಂತರ ಬೇಸಿನ್ ಸುತ್ತ ಮರಳು ಜಲ್ಲಿ ಸಿಮೆಂಟ್ ನಿಂದ ತುಂಬಿ ಸುಲಭವಾಗಿ ಹತ್ತಿ ಇಳಿಯುವಂತೆ ಮಾಡುವುದು.
ಬಂಡೆಯ ಮೇಲೆಯೆ ಸಂಗ್ರಹವಾದ ತ್ಯಾಜ್ಯವನ್ನು ವಾರಕ್ಕೊಮ್ಮೆ ಪಿಟ್ ಕ್ಲೀನರ್ ಮೂಲಕ ಸಂಗ್ರಹಿಸಿ ತ್ಯಾಜ್ಯ ವಿಲೇವಾರಿ ಮಾಡಲು ಯೋಜನೆ ರೂಪಿಸಿದ್ದಾರೆ. ಮತ್ತೊಂದೆಡೆ ಬಂಡೆಯ ಮೇಲೆ ಫಲಾನುಭವಿಗಳಿಗೆ ಶೌಚಾಲಯಗಳನ್ನು ನಿರ್ಮಾಣ ಮಾಡಿ ಎಲ್ಲಾ ಶೌಚಾಲಯಗಳಿಂದ ಒಂದೆ ಪೈಪ್ ಮೂಲಕ ಭೂಮಿಯಲ್ಲಿ ಸಂಗ್ರಹಿಸಿ ಹಿಂಗುವಂತೆ ಮಾಡಲು ಯೋಜನೆ ರೂಪಿಸಿದ್ದಾರೆ.
ಅಂದುಕೊಂಡಂತೆ ಮಾಡಲು ಸರ್ಕಾರ ಹೆಚ್ಚುವರಿಯಾಗಿ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಬೇಕಿದೆ. ಆದ್ರೆ ಬಂಡೆಗಳ ಮೇಲೆ ಊರು ಕಟ್ಟಿ ಶೌಚಾಲಯಗಳನ್ನು ಕಟ್ಟಿಕೊಳ್ಳಲು ಪರದಾಡುವಂತಾಗಿರುವುದು ಮಾತ್ರ ವಿಪರ್ಯಾಸವೇ ಸರಿ. -ಭೀಮಪ್ಪ ಪಾಟೀಲ