ಮತ್ತೆ ಕೈ ಜೋಡಿಸಿದ ಹಂಸಲೇಖ, ಎಸ್. ಮಹೇಂದರ್: ಹೊಸ ಸಿನಿಮಾ ಅನೌನ್ಸ್
ಹಲವಾರು ಮ್ಯೂಸಿಕಲ್ ಹಿಟ್ ಸಿನಿಮಾ ನೀಡಿದ ಹಂಸಲೇಖ ಮತ್ತು ಎಸ್. ಮಹೇಂದರ್ ಮತ್ತೆ ಒಂದಾಗಿದ್ದಾರೆ. ಈ ಜೋಡಿಯ ಹೊಸ ಸಿನಿಮಾವನ್ನು ಕೆ.ಸಿ. ವಿಜಯ್ ಕುಮಾರ್ ಅವರು ನಿರ್ಮಾಣ ಮಾಡಲಿದ್ದಾರೆ. ಜನವರಿ 16ರಂದು ಈ ಸಿನಿಮಾದ ಶೀರ್ಷಿಕೆ ಹಾಗೂ ಚಿತ್ರತಂಡದ ಅಧಿಕೃತ ಪರಿಚಯ ಮಾಡಿಕೊಡಲು ತಯಾರಿ ನಡೆದಿದೆ.

ಹಿರಿಯ ನಿರ್ದೇಶಕ ಎಸ್. ಮಹೇಂದರ್ (S Mahendar) ಅವರು ಹಲವು ಗಮನಾರ್ಹ ಸಿನಿಮಾಗಳನ್ನು ನೀಡಿದ್ದಾರೆ. ಫ್ಯಾಮಿಲಿ ಆಡಿಯನ್ಸ್ ಮೆಚ್ಚುವಂತಹ ಸಿನಿಮಾಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ಇನ್ನು, ಅವರ ನಿರ್ದೇಶನದ ಸಿನಿಮಾಗಳಲ್ಲಿ ಹಾಡುಗಳು ಕೂಡ ಗಮನ ಸೆಳೆಯುತ್ತವೆ. ಎಸ್. ಮಹೇಂದ್ರ ಅವರ ಸಿನಿಮಾಗೆ ಹಂಸಲೇಖ (Hamsalekha) ಅವರ ಸಂಗೀತ ಸೇರಿಕೊಂಡರೆ ಸೂಪರ್ ಹಿಟ್ ಎಂದೇ ಅರ್ಥ. ಅಂದಹಾಗೆ, ಹಂಸಲೇಖ ಮತ್ತು ಎಸ್. ಮಹೇಂದರ್ ಅವರು ಜೊತೆಯಾಗಿ ಮತ್ತೆ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಈ ಸಿನಿಮಾಗೆ ಕೆ.ಸಿ ವಿಜಯ್ ಕುಮಾರ್ (KC Vijay Kumar) ಬಂಡವಾಳ ಹೂಡುತ್ತಿದ್ದಾರೆ.
ಹಂಸಲೇಖ ಮತ್ತು ಎಸ್. ಮಹೇಂದರ್ ಅವರು ಕನ್ನಡ ಚಿತ್ರರಂಗದ ದಿಗ್ಗಜರು. ಅವರಿಬ್ಬರ ಕಾಂಬಿನೇಷನ್ನಲ್ಲಿ ‘ಗೌಡ್ರು’, ‘ಕರ್ಪೂರದ ಗೊಂಬೆ’, ‘ಗೌರವ’, ‘ಸ್ನೇಹಲೋಕ’, ‘ಗಟ್ಟಿಮೇಳ’, ‘ಶೃಂಗಾರಕಾವ್ಯ’, ‘ಕೊಡಗಿನ ಕಾವೇರಿ’, ‘ತಾಯಿ ಇಲ್ಲದ ತವರು’ ಮುಂತಾದ ಸಿನಿಮಾಗಳು ಜನಮನ ಗೆದ್ದಿವೆ. ಈಗ ಅವರು ಒಂದು ಗ್ಯಾಪ್ ಬಳಿಕ ಮತ್ತೆ ಜೊತೆಯಾಗಿ ಸಿನಿಮಾ ಮಾಡುತ್ತಿದ್ದಾರೆ. ಆ ಬಗ್ಗೆ ಸುದ್ದಿ ಹೊರಬಿದ್ದಿದೆ.
‘ಶ್ರೀಗುರುರಾಯರು ಸಿನಿಮಾ’ ಬ್ಯಾನರ್ ಮೂಲಕ ಈ ಹೊಸ ಸಿನಿಮಾವನ್ನು ಕೆ.ಸಿ. ವಿಜಯ್ ಕುಮಾರ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಇದು ಮ್ಯೂಸಿಕಲ್ ಹಿಟ್ ಜೋಡಿಯ ಕಾಂಬಿನೇಷನ್ ಆದ್ದರಿಂದ ಹಾಡುಗಳ ಮೇಲೆ ವಿಶೇಷ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಸದ್ಯಕ್ಕೆ ನಿರ್ದೇಶಕ, ಸಂಗೀತ ನಿರ್ದೇಶಕ ಹಾಗೂ ನಿರ್ಮಾಪಕರ ಹೆಸರು ಮಾತ್ರ ಬಹಿರಂಗ ಆಗಿದೆ. ಸಿನಿಮಾದ ಶೀರ್ಷಿಕೆ ಏನು ಎಂಬುದನ್ನು ಜನವರಿ 16ರಂದು ತಿಳಿಸಲಾಗುವುದು. ಅಲ್ಲದೇ, ಚಿತ್ರತಂಡದಲ್ಲಿ ಇನ್ನೂ ಯಾರೆಲ್ಲ ಇರಲಿದ್ದಾರೆ ಎಂಬ ಮಾಹಿತಿ ಕೂಡ ಅಂದೇ ಗೊತ್ತಾಗಲಿದೆ. ಹಂಸಲೇಖ ಅವರು ಸಂಗೀತ ನೀಡುತ್ತಿರುವುದರಿಂದ ಕೌತುಕ ಹೆಚ್ಚಿದೆ.
ಇದನ್ನೂ ಓದಿ: ಹಂಸಲೇಖ ಸಂಗೀತ, ಸಾಹಿತ್ಯದಲ್ಲಿ ‘ಸೋಲ್ಮೇಟ್ಸ್’ ಸಿನಿಮಾ ಹಾಡು
ಹಂಸಲೇಖ ಮತ್ತು ಎಸ್. ಮಹೇಂದರ್ ಅವರು ಸುಮಾರು 20 ಸಿನಿಮಾಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದಾರೆ. ಅವರ ಕಾಂಬಿನೇಷನ್ನಲ್ಲಿ ಮೂಡಿಬಂದ ಸಿನಿಮಾಗಳ ಹಾಡುಗಳು ಇಂದಿಗೂ ಕೇಳುಗರ ಫೇವರಿಟ್ ಆಗಿ ಉಳಿದುಕೊಂಡಿವೆ. ಈಗ ಇದೇ ಜೋಡಿಯಿಂದ ಮತ್ತೊಂದು ಮ್ಯೂಸಿಕಲ್ ಹಿಟ್ ಸಿನಿಮಾವನ್ನು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




