RBI new rules: ಆನ್​ಲೈನ್ ವಹಿವಾಟಿಗೆ ಆರ್​ಬಿಐ ಹೊಸ ನಿಯಮ; ಇಲ್ಲಿದೆ ನೀವು ತಿಳಿಯಬೇಕಾದ ಸಂಗತಿಗಳು

| Updated By: ಸಾಧು ಶ್ರೀನಾಥ್​

Updated on: Feb 27, 2021 | 5:45 PM

Reserve Bank of India: ಆನ್​​ಲೈನ್ ಶಾಪಿಂಗ್ ಅಥವಾ ಮತ್ಯಾವುದೇ ಆನ್​ಲೈನ್ ವ್ಯವಹಾರಕ್ಕೆ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಹಣ ವರ್ಗಾವಣೆ ಮಾಡುವಂತಿದ್ದಲ್ಲಿ ಹೊಸ ನಿಯಮವೊಂದನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2021ರ ಜುಲೈಯಿಂದ ಜಾರಿಗೆ ತರಲಿದೆ.

RBI new rules: ಆನ್​ಲೈನ್ ವಹಿವಾಟಿಗೆ ಆರ್​ಬಿಐ ಹೊಸ ನಿಯಮ; ಇಲ್ಲಿದೆ ನೀವು ತಿಳಿಯಬೇಕಾದ ಸಂಗತಿಗಳು
ರಿಸರ್ವ್​ ಬ್ಯಾಂಕ್​ ಆಫ್ ಇಂಡಿಯಾ (ಸಾಂದರ್ಭಿಕ ಚಿತ್ರ)
Follow us on

ನಿಮ್ಮ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್​ನ ಹದಿನಾರು ಅಂಕಿಯೂ ನಿಮಗೆ ನೆನಪಿದೆಯಾ? ಫ್ಲಿಪ್​ಕಾರ್ಟ್, ಅಮೆಜಾನ್, ಸ್ವಿಗ್ಗಿ, ಝೊಮ್ಯಾಟೋ, ನೆಟ್​​ಫ್ಲಿಕ್ಸ್, ಅಮೆಜಾನ್​​ನಂಥದ್ದಕ್ಕೆ ಹಣ ಪಾವತಿ ಮಾಡುವಾಗ ಒಂದೇ ಬಟನ್ ಕ್ಲಿಕ್ ಅನಿಸಿ, ಸಿವಿವಿ ತುಂಬಿದರೆ ಹಣ ವರ್ಗಾವಣೆ ಆಗಿಬಿಡುವಾಗ ಇದೆಂಥ ತಮಾಷೆ ಪ್ರಶ್ನೆ ಎಂದು ಕೇಳುತ್ತೀರಾ? ಓಹ್, ಒಂದು ನಿಮಿಷ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಹೊಸ ಮಾರ್ಗದರ್ಶಿ ಸೂತ್ರ ಬಿಡುಗಡೆ ಆಗುತ್ತಿದೆ. ಅದರ ಪ್ರಕಾರ, ಗ್ರಾಹಕರ ಕಾರ್ಡ್​​ಗಳ ಯಾವುದೇ ಮಾಹಿತಿಯನ್ನು ವೆಬ್​​ಸೈಟ್​ಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳುವಂತಿಲ್ಲ. ಪ್ರತಿ ಸಲವೂ ಹೆಸರು, ಕಾರ್ಡ್ ಸಂಖ್ಯೆ, ಎಕ್ಸ್​​ಪೈರಿ ಅಲ್ಲಿಂದಲೇ ಭರ್ತಿ ಮಾಡಲು ಆರಂಭಿಸಬೇಕು.

ಈ ನಿಯಮ ಬಂದುಬಿಟ್ಟರೆ ನೀವೇನಾದರೂ ಆನ್​ಲೈನ್ ವಹಿವಾಟು ನಡೆಸುತ್ತಿದ್ದೀರಿ ಎಂದಾದಲ್ಲಿ ಪ್ರತಿ ಬಾರಿಯೂ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಇಟ್ಟುಕೊಂಡಿರಬೇಕು. ಇನ್ನೊಂದು ಆಯ್ಕೆ ಏನೆಂದರೆ, ಯಾವ ಕಾರ್ಡ್ ಬಳಸಬೇಕು ಎಂದಿದ್ದೀರೋ ಅದರ ಹದಿನಾರು ಅಂಕಿ, ಸಿವಿವಿ ಮೊದಲಾದ ಮಾಹಿತಿಗಳು ನೆನಪಿನಲ್ಲಿ ಇರಬೇಕು. ಈ ಹೊಸ ನಿಯಮ 2021ರ ಜುಲೈನಿಂದ ಜಾರಿಗೆ ಬರುತ್ತದೆ. ಈ ಆದೇಶದ ಪರಿಣಾಮ ಏನೆಂದರೆ, ಇಷ್ಟು ಸಮಯ ವೆಬ್​​ಸೈಟ್​​ನಲ್ಲಿ ನಿಮ್ಮೆಲ್ಲ ದಾಖಲೆ ಸಂಗ್ರಹ ಆಗಿರುತ್ತಿತ್ತು. ಅದನ್ನು ಆಯ್ಕೆ ಮಾಡಿಕೊಂಡು, ಕಾರ್ಡ್​​ನ ಹಿಂಬದಿಯಲ್ಲಿ ಇರುವ ಸಿವಿವಿ ಸಂಖ್ಯೆಯನ್ನು ನಮೂದಿಸಿದ್ದರೆ ಹಣ ವರ್ಗಾವಣೆ ಆಗುತ್ತಿತ್ತು. ಈ ಹೊಸ ಪದ್ಧತಿ ಜಾರಿಗೆ ಬಂದಲ್ಲಿ ಪ್ರತಿ ಸಲವೂ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ, ಆನ್​ಲೈನ್ ಪಾವತಿ ಮಾಡಬೇಕು.

ಥರ್ಡ್ ಪಾರ್ಟಿ ವೆಬ್​​ಸೈಟ್​ನಲ್ಲಿ ಮಾಹಿತಿ ಸಂಗ್ರಹವಾದರೆ ಅದರಿಂದ ಕಳುವಾಗೋದು, ವಂಚನಗೆ ದಾರಿ ಆಗೋದು ಇವೆಲ್ಲ ಸಮಸ್ಯೆ ಆಗುತ್ತದೆ. ಆದ್ದರಿಂದ ಇಂಥ ತೀರ್ಮಾನಕ್ಕೆ ಬರಲಾಗಿದೆ ಅನ್ನೋದು ಆರ್​​ಬಿಐ ಸಮರ್ಥನೆ. ಆದರೆ ಇದರಿಂದ “ಡಿಜಿಟಲ್ ಇಂಡಿಯಾ” ಉದ್ದೇಶಕ್ಕೇ ಕಲ್ಲು ಬಿದ್ದಂತೆ ಆಗುತ್ತದೆ ಎಂಬುದು ಕೆಲವರ ವಾದ. ಈಗಾಗಲೇ ಆರ್​ಬಿಐ ಉದ್ದೇಶಿತ ಕ್ರಮಕ್ಕೆ NASSCOM ಆತಂಕ ವ್ಯಕ್ತಪಡಿಸಿದೆ. ಕಾರ್ಡ್ ಬಗೆಗಿನ ಮಾಹಿತಿ ಬಹಳ ಪ್ರಾಥಮಿಕವಾದದ್ದು. ಗ್ರಾಹಕರ ವ್ಯಾಜ್ಯ ಬಗೆಹರಿಸುವುದಕ್ಕೆ, ಶೀಘ್ರವಾಗಿ ಸೇವೆ ಒದಗಿಸುವುದಕ್ಕೆ ಇವಕ್ಕೆಲ್ಲ ಕಾರ್ಡ್ ಮಾಹಿತಿ ತುಂಬ ಮುಖ್ಯ ಎನ್ನಲಾಗಿದೆ.

ಇಷ್ಟೇ ಅಲ್ಲ, ಫ್ಲಿಪ್​​ಕಾರ್ಟ್, ಅಮೆಜಾನ್, ನೆಟ್​​ಫ್ಲಿಕ್ಸ್, ಮೈಕ್ರೋಸಾಫ್ಟ್ ಮತ್ತು ಝೊಮ್ಯಾಟೋ ಸೇರಿ 25 ಗ್ರಾಹಕರ ಇಂಟರ್​ನೆಟ್ ಕಂಪೆನಿಗಳ ಸಮೂಹ ಆರ್​​ಬಿಐಗೆ ಪತ್ರ ಬರೆದಿವೆ. ಒಂದು ವೇಳೆ ಇಂತಹದ್ದೊಂದು ನಿಯಮವನ್ನು ಜಾರಿಗೆ ತಂದರೆ ಗ್ರಾಹಕರ ಆನ್​​ಲೈನ್ ಪಾವತಿ ಅನುಭೂತಿಗೆ ಪೆಟ್ಟು ನೀಡುತ್ತದೆ ಎಂದು ವಾದ ಮಂಡಿಸಿವೆ. ಇನ್ನು ವೆಬ್​ಸೈಟ್​ನಲ್ಲಿ ಆನ್​ಲೈನ್ ವಂಚನೆಯ ಅಪಾಯ ಎಷ್ಟಿದೆ ಎಂಬುದನ್ನು ನಿರ್ಧರಿಸುವುದಕ್ಕೆ ಕಷ್ಟವಾಗುತ್ತದೆ ಎಂದು ಕೂಡ ಹೇಳಲಾಗಿದೆ. ಇನ್ನು ಆರ್​ಬಿಐ ಹೊಸ ನಿಯಮದಿಂದ ಹಣ ಪಾವತಿ ಸುರಕ್ಷಿತವಾಗಿ ಆಗುತ್ತದೆಯೋ ಇಲ್ಲವೋ ಆದರೆ ಕಠಿಣವಂತೂ ಆಗುತ್ತದೆ. ಪ್ರತಿ ಸಲ ನೆಟ್​ಫ್ಲಿಕ್ಸ್ ಸಬ್​​ಸ್ಕ್ರಿಪ್ಷನ್ ನವೀಕರಿಸುವಾಗ, ಆನ್​​ಲೈನ್ ಶಾಪಿಂಗ್ ಮಾಡುವಾಗ ಅಥವಾ ಅಪ್ಲಿಕೇಷನ್​ಗಳ ಮೂಲಕ ಖರೀದಿಸುವಾಗ ಪ್ರತಿ ಬಾರಿಯೂ ಕಾರ್ಡ್ ಮಾಹಿತಿಯನ್ನು ಭರ್ತಿ ಮಾಡಬೇಕು. ಒಂದೋ ಕಾರ್ಡ್ ನಿಮ್ಮ ಕೈಲಿರಬೇಕು ಅಥವಾ ಅದರಲ್ಲಿನ ಮಾಹಿತಿ ನೆನಪಿನಲ್ಲಿರಬೇಕು.

ಇದನ್ನೂ ಓದಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಕಾರ ತತ್ವದಡಿ ತೈಲ ಬೆಲೆ ಇಳಿಕೆ ಮಾಡಬೇಕಿದೆ: ಆರ್​ಬಿಐ ಶಕ್ತಿಕಾಂತ್ ದಾಸ್