ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾಗಿದ್ದ ಅನರ್ಹರ ಭವಿಷ್ಯ ಇಂದೇ ತೀರ್ಮಾನ

|

Updated on: Nov 13, 2019 | 8:48 AM

ಬೆಂಗಳೂರು: ಇಡಿ ದೇಶದ ಗಮನ ಸೆಳೆದ, ರಾಜ್ಯ ರಾಜಕಾರಣವನ್ನ ಬುಡಮೇಲು ಮಾಡಿದ ಎಲ್ಲರ ಲೆಕ್ಕಾಚಾರಗಳನ್ನ ಅದಲು ಬದಲು ಮಾಡಿದ ಅನರ್ಹ ಶಾಸಕರ ಹಣೆಬರಹ ಇನ್ನೇನು ಕೆಲವೇ ಗಂಟೆಗಳಲ್ಲಿ ಡಿಸೈಡ್ ಆಗಲಿದೆ. ಇಡಿ ರಾಜ್ಯಕ್ಕೆ ರಾಜ್ಯವೇ ಈ ದಿನವನ್ನ ಎದುರು ನೋಡ್ತಿದೆ. ರಾಷ್ಟ್ರ ರಾಜಕಾರಣದ ಚಿತ್ತ ಕರ್ನಾಟಕದತ್ತ ಹೊರಳಿದೆ. ಏನಾಗುತ್ತೋ ಏನೋ. ಮುಂದಿನ ಭವಿಷ್ಯ ಹೇಗೋ ಏನೋ ಅನ್ನೋ ಟೆನ್ಷನ್. ಹಾಗಿದ್ರೆ ಇಷ್ಟು ದಿನ ಆಗಿದ್ದೇನು? ಇಡಿ ರಾಜ್ಯಕ್ಕೆ ರಾಜ್ಯವೇ ಇವತ್ತಿನ ದಿನವನ್ನೇ ಎದುರು ನೋಡ್ತಿದೆ. ರಾಷ್ಟ್ರ ರಾಜಕಾರಣದ […]

ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾಗಿದ್ದ ಅನರ್ಹರ ಭವಿಷ್ಯ ಇಂದೇ ತೀರ್ಮಾನ
ಪಕ್ಷಾಂತರಗೊಂಡ ಶಾಸಕರು
Follow us on

ಬೆಂಗಳೂರು: ಇಡಿ ದೇಶದ ಗಮನ ಸೆಳೆದ, ರಾಜ್ಯ ರಾಜಕಾರಣವನ್ನ ಬುಡಮೇಲು ಮಾಡಿದ ಎಲ್ಲರ ಲೆಕ್ಕಾಚಾರಗಳನ್ನ ಅದಲು ಬದಲು ಮಾಡಿದ ಅನರ್ಹ ಶಾಸಕರ ಹಣೆಬರಹ ಇನ್ನೇನು ಕೆಲವೇ ಗಂಟೆಗಳಲ್ಲಿ ಡಿಸೈಡ್ ಆಗಲಿದೆ. ಇಡಿ ರಾಜ್ಯಕ್ಕೆ ರಾಜ್ಯವೇ ಈ ದಿನವನ್ನ ಎದುರು ನೋಡ್ತಿದೆ. ರಾಷ್ಟ್ರ ರಾಜಕಾರಣದ ಚಿತ್ತ ಕರ್ನಾಟಕದತ್ತ ಹೊರಳಿದೆ. ಏನಾಗುತ್ತೋ ಏನೋ. ಮುಂದಿನ ಭವಿಷ್ಯ ಹೇಗೋ ಏನೋ ಅನ್ನೋ ಟೆನ್ಷನ್. ಹಾಗಿದ್ರೆ ಇಷ್ಟು ದಿನ ಆಗಿದ್ದೇನು?

ಇಡಿ ರಾಜ್ಯಕ್ಕೆ ರಾಜ್ಯವೇ ಇವತ್ತಿನ ದಿನವನ್ನೇ ಎದುರು ನೋಡ್ತಿದೆ. ರಾಷ್ಟ್ರ ರಾಜಕಾರಣದ ಚಿತ್ತ ಕರ್ನಾಟಕದತ್ತ ಹೊರಳಿದೆ. ಅದಕ್ಕೆ ಕಾರಣ, ಇಂದು ಅನರ್ಹ ಶಾಸಕರ ಹಣೆಬರಹ ನಿರ್ಧಾರವಾಗಲಿದೆ.

ಅನರ್ಹ ಶಾಸಕರ ಪಾಲಿಗೆ ಇಂದು ಜಡ್ಜ್​ಮೆಂಟ್ ಡೇ..!


ಹೌದು, ಇಡಿ ದೇಶದ ಗಮನ ಸೆಳೆದ, ರಾಜ್ಯ ರಾಜಕಾರಣವನ್ನ ಬುಡಮೇಲು ಮಾಡಿದ ಎಲ್ಲರ ಲೆಕ್ಕಾಚಾರಗಳನ್ನ ಅದಲು ಬದಲು ಮಾಡಿದ ಅನರ್ಹ ಶಾಸಕರ ಹಣೆಬರಹ ಇಂದು ಡಿಸೈಡ್ ಆಗಲಿದೆ. ಬೆಳಗ್ಗೆ 10.30ಕ್ಕೆ ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿ ರಮಣ ನೇತೃತ್ವದ ತ್ರಿಸದಸ್ಯ ಪೀಠ ಎಲ್ಲ 17 ಜನರ ಭವಿಷ್ಯವನ್ನ ಬರೆಯಲಿದ್ದಾರೆ.
ಹಾಗಂದ ಮಾತ್ರಕ್ಕೆ ಸುಪ್ರೀಂ ತೀರ್ಪು ಕೇವಲ ಅನರ್ಹರ ಭವಿಷ್ಯ ನಿರ್ಧಾರಿಸೋ ತೀರ್ಪಲ್ಲ. ಬದಲಿಗೆ ರಾಜ್ಯ ರಾಜಕಾರಣದಲ್ಲಿ ಹೊಸ ಸಾಧ್ಯತೆಗಳನ್ನ ಸೃಷ್ಟಿಸುವ ತೀರ್ಪು, ರಾಜಕಾರಣದ ದಿಕ್ಕು ದೆಸೆಯನ್ನೇ ಬದಲಿಸುವ ತೀರ್ಪು, ಆಪರೇಷನ್ ಕಮಲ, ತೆರೆ ಹಿಂದೆ ಬಿಜೆಪಿ ಮಾಡಿದ ಎಲ್ಲಾ ಪ್ರಯತ್ನಕ್ಕೆ ಫಲಿತಾಂಶ ಕೊಡುವ ತೀರ್ಪು. ಸುಪ್ರೀಂಕೋರ್ಟ್ ಕೊಡೋ ತೀರ್ಪು ಅನರ್ಹರ ವಿಚಾರವಾಗಿ ಹಿಂದಿನ ಸ್ಪೀಕರ್ ತೆಗೆದುಕೊಂಡ ಐತಿಹಾಸಿಕ ನಿರ್ಧಾರಕ್ಕೆ, ಕಾಂಗ್ರೆಸ್ ಹೋರಾಟಕ್ಕೆ ಫಲಿತಾಂಶ ಕೊಡುವ ತೀರ್ಪು.

ಹೀಗಾಗೇ ರಾಜ್ಯದ ಜನರಿಗೆ ಕ್ಷಣಕ್ಷಣಕ್ಕೂ ಕುತೂಹಲ ಪುಟಿದೇಳ್ತಿದ್ರೆ, ಅನರ್ಹರ ಎದೆ ಬಡಿತ ಕ್ಷಣಕ್ಷಣಕ್ಕೂ ಏರ್ತಿದೆ. ಟೆನ್ಷನ್.. ಟೆನ್ಷನ್.. ಟೆನ್ಷನ್.. ಅತ್ತ ಅನರ್ಹರು ಟೆನ್ಷನ್​ನಲ್ಲಿದ್ರೆ, ಇತ್ತ ಸಿಎಂ ಯಡಿಯೂರಪ್ಪ ಒಳಗೊಳಗೆ ಚಡಪಡಿಕೆಗೆ ಬಿದ್ದಿದ್ದಾರೆ.. ಇತ್ತ ಗಾಯಗೊಂಡಿರೋ ಸಿಂಹದಂತೆ ಕಾಂಗ್ರೆಸ್ ಪ್ರತಿ ಉಸಿರಿನಲ್ಲೂ ಲಾಭ ನಷ್ಟದ ಲೆಕ್ಕಹಾಕ್ತಿದೆ. ಇಷ್ಟರ ಮಟ್ಟಿಗೆ ಸುಪ್ರೀಂಕೋರ್ಟ್ ಕೊಡೋ ತೀರ್ಪು ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನ ಎಬ್ಬಿಸಿದೆ.

ಹಾಗಿದ್ರೆ ಇವತ್ತಿನ ಈ ತೀರ್ಪು ಇಷ್ಟೊಂದು ಏಕೆ ಮಹತ್ವ ಪಡೆದಿದ್ದು ಅಂತಾ ಒಮ್ಮೆ ಹಿಂತಿರುಗಿ ನೋಡಿದ್ರೆ ಅಲ್ಲಿ ಕಾಣೋದು ಸಣ್ಣ ಕಿಡಿಯಿಂದ ಕಾಡ್ಗಿಚ್ಚಿನಂತೆ ಧಗಧಗಿಸಿದ ಬೆಂಕಿ. ಕ್ಷಿಪ್ರಕ್ರಾಂತಿ. ರಾಜ್ಯ ರಾಜಕಾರಣದ ಸಾಲು ಸಾಲು ಬೃಹನ್ ನಾಟಕ.

ಆ ಕ್ಷಿಪ್ರಕ್ರಾಂತಿ ಎಂಥಾದ್ದು, ಆ ಹೈಡ್ರಾಮ ಎಂಥಾದ್ದು, ದೋಸ್ತಿ ಸರ್ಕಾರ ಉರಳಲು ನಡೆದ ಬೃಹನ್ ನಾಟಕ ಎಂಥಾದ್ದು ಅನ್ನೋದನ್ನ ಒಮ್ಮೆ ರಿವೈಂಡ್ ಮಾಡದೇ ಇದ್ರೆ, ನಾಳಿನ ತೀರ್ಪಿನ ಮಹತ್ವ, ಗಂಭೀರತೆಗೆ ಅರ್ಥ ಬರಲ್ಲ. ಹಾಗಿದ್ರೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸುನಾಮಿ ಎಬ್ಬಿಸಿದ ಆ ಹಂಗಾಮವನ್ನ ಎಳೆ ಎಳೆಯಾಗಿ ತೋರಿಸ್ತೀವಿ ನೋಡಿ.

ಜುಲೈ 1 2019 ಆನಂದ್ ಸಿಂಗ್ ರಾಜೀನಾಮೆಯಿಂದ ಹೊತ್ತಿದ ಬೆಂಕಿ..!
ಅಸಲಿಗೆ ಅನರ್ಹ ಶಾಸಕರ ರಾಜೀನಾಮೆಗೆ ನಾಂದಿ ಹಾಡಿದ್ದೆ ಹೊಸಪೇಟೆ ಶಾಸಕ ಆನಂದ್ ಸಿಂಗ್, ಜಿಂದಾಲ್​ಗೆ ಭೂಮಿ ಪರಭಾರೆ ವಿರೋಧಿಸಿ ಹಾಗೂ ವಿಜಯನಗರ ಪ್ರತ್ಯೇಕ ಜಿಲ್ಲೆಗಾಗಿ ಪಟ್ಟು ಹಿಡಿದು ಕಾಂಗ್ರೆಸ್​​ನಿಂದ ಆನಂದ್ ಸಿಂಗ್ ಹೊರ ಬಂದಿದ್ರು. ಅಲ್ಲಿಂದಲೇ ರಾಜೀನಾಮೆ ಪರ್ವ ಶುರುವಾಗಿತ್ತು. ಯಾಕಂದ್ರೆ ಇದಾದ ಐದೇ ದಿನಕ್ಕೆ ದೋಸ್ತಿ ಸರ್ಕಾರಕ್ಕೆ ದೊಡ್ಡ ಶಾಕ್ ಎದುರಾಗಿತ್ತು.

ಜುಲೈ 6, 12 ಶಾಸಕರ ರಾಜೀನಾಮೆ, ಮುಂಬೈಗೆ ಏರ್​ಲಿಫ್ಟ್ ..!
ಯೆಸ್, ಆನಂದ್ ಸಿಂಗ್ ರಾಜೀನಾಮೆಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದ ದೋಸ್ತಿ ಸರ್ಕಾರಕ್ಕೆ ನಿಜವಾದ ಪೆಟ್ಟು ಬಿದ್ದಿದ್ದೆ ಜುಲೈ 6 ರಂದು. ಆವತ್ತು ಒಂದಲ್ಲ ಎರಡಲ್ಲ ಬರೋಬ್ಬರಿ 12 ಶಾಸಕರು ಸ್ಪೀಕರ್ ಕಚೇರಿಗೆ ತೆರಳಿ ತಮ್ಮ ರಾಜೀನಾಮೆ ಪತ್ರ ಇಟ್ಟು ಬಂದಿದ್ರು. ಅಷ್ಟೇ ಅಲ್ಲ ನೇರವಾಗಿ ರಾಜಭವನಕ್ಕೆ ತೆರಳಿ ತಮ್ಮ ರಾಜೀನಾಮೆ ವಿಚಾರ ತಿಳಿಸಿ ಸೀದಾ ಮುಂಬೈಗೆ ಏರ್​ಲಿಫ್ಟ್ ಆಗಿದ್ರು.

ಇದಾಗಿ ಎರಡೇ ದಿನಕ್ಕೆ ಅಂದ್ರೆ ಜುಲೈ 8ರಂದು ಆಗಷ್ಟೇ ಸಚಿವ ಸ್ಥಾನ ಪಡೆದು ಮಂತ್ರಿಗಳಾಗಿದ್ದ ಪಕ್ಷೇತರ ಶಾಸಕ ನಾಗೇಶ್ ಹಾಗೂ ಆರ್​.ಶಂಕರ್​ಕೂಡ ರಾಜೀನಾಮೆ ಕೊಟ್ಟು ದೋಸ್ತಿ ನಾಯಕರು ಏದುಸಿರು ಬಿಡುವಂತೆ ಮಾಡಿದ್ರು. ಅದಾದ ಎರಡೇ ದಿನಕ್ಕೆ, ವಿಧಾನಸೌಧದಲ್ಲಿ ಹೈಡ್ರಾಮಾ ನಡುವೆ ಸುಧಾಕರ್ ರಾಜೀನಾಮೆ ಕೊಟ್ರು. ಅವತ್ತೇ ಬಂಡಾಯಗಾರರ ಬಣ ಸೇರಿಕೊಂಡು ಎಂಟಿಬಿ ಕೂಡ ಶಾಕ್ ಕೊಟ್ಬಿಟ್ರು.

ಅಲ್ಲಿಗೆ ಒಂದೇ ವಾರದ ಅವಧಿಯಲ್ಲಿ ಬರೋಬ್ಬರಿ 16 ಜನ ದೋಸ್ತಿ ಸರ್ಕಾರದ ವಿರುದ್ಧ ರಾಜೀನಾಮೆ ಕ್ಷಿಪ್ರಕ್ರಾಂತಿ ನಡೆಸಿದ್ರು. ರಾಜೀನಾಮೆ ಕೊಟ್ಟವರನ್ನ ಮುಂಬೈಗೆ ಕರೆದೊಯ್ದಲು ವಿಶೇಷ ವಿಮಾನ. ಬೆಂಗಳೂರು ಮಂಬೈ ನಡುವೆ ಶಾಸಕರ ಹಾರಾಟ ಎಲ್ಲವೂ ಇನ್ನೂ ಹಸಿಹಸಿಯಾಗೇ ಇದೆ.

ಜುಲೈ 10 ಮುಂಬೈಗೆ ಹೋಗಿ ಬರಿಗೈಲಿ ಡಿಕೆಶಿ ವಾಪಸ್..!
ರಾಜೀನಾಮೆ ಕೊಟ್ಟವ್ರೆಲ್ಲ ಮುಂಬೈಗೆ ಶಿಫ್ಟ್​ ಆಗಿದ್ರೆ, ಅವರೆಲ್ಲರನ್ನೂ ಕರೆತರ್ತಿನಿ ಅಂತಾ ಖುದ್ದು ಡಿಕೆಶಿಯೇ ಮುಂಬೈಗೆ ಹೋಗಿದ್ರು.. ಆದ್ರೆ, ಶಾಸಕರ ದರ್ಶನವೂ ಸಿಗದೆ, ಮಳೆ ನಡುವೆ ರಸ್ತೆಯಲ್ಲಿ ನಿಂತು ಬರೀಗೈಲಿ ಬಂದಿದ್ರು.

ಜುಲೈ 11 ವಿಧಾನಸೌಧದಲ್ಲಿ ಅನರ್ಹರ ಕುದುರೆ ಓಟ..!
ಆವತ್ತಿನ ಮಟ್ಟಿಗೆ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಸದ್ದು ಮಾಡಿತ್ತು, ಸರ್ಕಾರ ಕೆಡವಲು ಅದೆಷ್ಟು ಆತುರ, ಅದೇನ್ ಅವಸರ. ಅಷ್ಟಕ್ಕೂ ಇವ್ರೆಲ್ಲ ಆವತ್ತು ಹೀಗೆ ಓಡಿ ಬರೋದಕ್ಕೆ ಕಾರಣ, ಶಾಸಕರು ಕೊಟ್ಟ ರಾಜೀನಾಮೆ ಕ್ರಮಬದ್ಧವಾಗಿಲ್ಲ ಅಂತಾ ಹೇಳಿದ್ರು, ಇತ್ತ ರಾಜೀನಾಮೆ ಕೊಟ್ಟವರು ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ರು. ಸುಪ್ರೀಂಕೋರ್ಟ್ ಜುಲೈ 11ರ ಸಂಜೆ ಆರು ಗಂಟೆಯೊಳಗೆ ಮತ್ತೊಮ್ಮೆ ರಾಜೀನಾಮೆ ಸಲ್ಲಿಸಲು ಸೂಚಿಸಿತ್ತು. ಹೀಗಾಗಿ ಮುಂಬೈನಿಂದ ಆತುರಾತುರದಲ್ಲೇ ಬಂದ ಶಾಸಕರು ವಿಧಾನಸೌಧಕ್ಕೆ ಬರ್ತಿದ್ದಂತೆ ಕುದುರೆ ಓಟ ಕಿತ್ತಿದ್ರು.

ಇನ್ನು ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ವೇಳೆಗೆ ಕೊನೆಯ ಆಟಗಾರರಾಗಿ ಶ್ರೀಮಂತ್ ಪಾಟೀಲ್ ಕೂಡ ಅನಾರೋಗ್ಯದ ನೆಪವೊಡ್ಡಿ ರಾತ್ರೋ ರಾತ್ರಿ ಮುಂಬೈಗೆ ಹಾರಿದ್ರು.

ಜುಲೈ 23ಕ್ಕೆ ಹೆಚ್​ಡಿಕೆ ಸಿಎಂ ಸ್ಥಾನಕ್ಕೆ ರಾಜೀನಾಮೆ..!
ಅಂದು ಹೀಗೆ ರಾಜೀನಾಮೆ ಸಲ್ಲಿಸಿ ಕೆಲವರು ಮುಂಬೈಗೆ ಹಾರಿದ್ರೆ, ಕೆಲವರು ಸದನಕ್ಕೆ ಹಾಜರಾಗದೇ ದೂರ ಉಳಿದಿದ್ರು. ಅಂತಿಮವಾಗಿ ಜುಲೈ 23ಕ್ಕೆ ಹೆಚ್​.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯಲ್ಲಿ ಸೋತು, ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ರು. ಅಂತಿಮವಾಗಿ ಅಂದಿನ ಸ್ಪೀಕರ್ ರಮೇಶ್ ಕುಮಾರ್ ಮೊದಲ ಹಂತದಲ್ಲಿ ಮೂವರನ್ನ, ಎರಡನೇ ಹಂತದಲ್ಲಿ ಒಟ್ಟು 14 ಶಾಸಕರನ್ನ ಅನರ್ಹ ಶಾಸಕರನ್ನಾಗಿಸಿ ಆದೇಶ ಕೊಟ್ಟಿದ್ರು.

ಫೈನಲಿ ಅಂದಿನ ಸ್ಪೀಕರ್ ತೀರ್ಪನ್ನ ಪ್ರಶ್ನಿಸಿ ಅನರ್ಹರು ಸಲ್ಲಿಸಿದ್ದ ಅರ್ಜಿ ವಿಚಾರವಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಲಿದೆ. ಅನರ್ಹರ ಭವಿಷ್ಯ ನಿರ್ಧಾರವಾಗವ ಟೈಮ್ ಫಿಕ್ಸ್ ಆಗಿದೆ. ಹೀಗಾಗಿ ತೀರ್ಪಿನ ಕುರಿತು ಇನ್ನಿಲ್ಲದ ಕುತೂಹಲ ಗರಿಗೆದರಿದೆ.