ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಅತಂತ್ರ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ರಾಜ್ಯಪಾಲ ಭಗತ್‌ಸಿಂಗ್ ಕೋಶ್ಯಾರಿ ಶಿಫಾರಸು ಮಾಡಿದ್ದಾರೆ. ಇದನ್ನು ವಿರೋಧಿಸಿ ಶಿವಸೇನೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರೆ ಕಾಂಗ್ರೆಸ್ ಮತ್ತು ಎನ್ಸಿಪಿ ಪಕ್ಷಗಳು ರಾಜ್ಯದಲ್ಲಿ ನೂತನ ಸರ್ಕಾರ ರಚನೆ ಕಸರತ್ತನ್ನು ಜಾರಿಯಲ್ಲಿಟ್ಟಿವೆ.
ಸುಮಾರು 20 ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಹಗ್ಗಜಗ್ಗಾಟಕ್ಕೆ ಕೊನೆಗೂ ತೆರೆ ಬಿದ್ದಿದೆ. ಬಿಜೆಪಿ, ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಸರ್ಕಾರ ರಚಿಸಲು ವಿಫಲವಾದ ಕಾರಣ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಲಾಗಿದೆ.
ಯಾರಿಗೂ ಇಲ್ಲಮೆಜಾರಿಟಿ, ಸರ್ಕಾರ ರಚಿಸಲು ವಿಫಲ: ಮಹಾರಾಷ್ಟ್ರ ವಿಧಾನಸಭೆ ಒಟ್ಟು 288 ಸಂಖ್ಯಾಬಲ ಹೊಂದಿದೆ. ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 145. ಬಿಜೆಪಿ 105 ಸೀಟ್ ಗೆದ್ದು ಅತಿದೊಡ್ಡ ಪಕ್ಷ ಸ್ಥಾನದಲ್ಲಿದೆ. ಹೀಗಾಗಿ ಸರ್ಕಾರ ರಚಿಸಲು ಮೊದಲಿಗೆ ಬಿಜೆಪಿಗೆ ರಾಜ್ಯಪಾಲರು ಅವಕಾಶ ನೀಡಿದ್ದರು. ಆದ್ರೆ, ಶಿವಸೇನೆ ಸಹಕಾರ ನೀಡದ ಕಾರಣ ಬಿಜೆಪಿ ಹಿಂದೆ ಸರಿಯಿತು. ನಂತರ ಎರಡನೇ ಅತಿದೊಡ್ಡ ಪಕ್ಷ ಶಿವಸೇನೆಗೆ ಸರ್ಕಾರ ರಚಿಸಲು ಗವರ್ನರ್ ಆಹ್ವಾನ ನೀಡಿದ್ದರು. ಆದ್ರೆ ಶಿವಸೇನೆ ರಾಜಕೀಯ ಲೆಕ್ಕಾಚಾರ ಸಹ ಉಲ್ಟಾ ಹೊಡೆಯಿತು. ಕೊನೆಗೆ ಎನ್ಸಿಪಿಯೂ ಸಹ ಸರ್ಕಾರ ರಚಿಸಲು ವಿಫಲವಾದ ಕಾರಣ ರಾಷ್ಟ್ರಪತಿ ಆಳ್ವಿಕೆಗೆ ರಾಜ್ಯಪಾಲ ಕೋಶ್ಯಾರಿ ಶಿಫಾರಸು ಮಾಡಿದ್ದಾರೆ.
ರಾಷ್ಟ್ರಪತಿ ಆಳ್ವಿಕೆಗೆ ಪ್ರಧಾನಿ ಮೋದಿ ಸಂಪುಟ ತೀರ್ಮಾನ?: ಯಾರಿಗೂ ಇಲ್ಲ ಮೆಜಾರಿಟಿ ಇಲ್ಲದ ಕಾರಣ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂಬ ಶಿಫಾರಸಿಗೆ ಕೇಂದ್ರ ಸಚಿವ ಸಂಪುಟ ಅಂಕಿತ ಹಾಕಿದೆ. ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಪ್ರಧಾನಿ ಮೋದಿ ನೇತೃತ್ವದ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂಬ ರಾಜ್ಯಪಾಲರ ವರದಿ ಆಧರಿಸಿ ಕೇಂದ್ರ ಸಂಪುಟವು ರಾಷ್ಟ್ರಪತಿ ಕೋವಿಂದ್ ನಾರಾಯಣ್ ಅವರಿಗೆ ಈ ಶಿಫಾರಸು ಕಳುಹಿಸಿದೆ ಎಂದು ಉನ್ನತ ಮೂಲಗಳು ಹೇಳಿವೆ.