ನಾನು ಡಿವಿಜಿಯವರನ್ನು ಮೊದಲ ಸಲ ಭೇಟಿಯಾಗುವ ವೇಳೆಗೆ ಬರಹಗಾರನಾಗಿ ಸುಮಾರು ಆರು ವರ್ಷ ಕಳೆದಿತ್ತು. ರೈಟ್ ಆನರಬಲ್ ಶ್ರೀನಿವಾಸ ಶಾಸ್ತ್ರಿಯವರನ್ನು ಕುರಿತು ಕೆಲವು ಮಾಹಿತಿಗಳನ್ನು ಶೇಖರಿಸಲು ಅವರನ್ನು ಭೇಟಿಯಾಗಿದ್ದೆ. ಆ ವೇಳೆಗೆ ಹಿಮಾಲಯದೆತ್ತರವನ್ನು ಮೀರಿ ಬೆಳೆದಿದ್ದ ಡಿವಿಜಿಯವರನ್ನು ಭೇಟಿಯಾಗುವಾಗ ಅಳುಕು ಇತ್ತು. ಅವರೆಲ್ಲಿ, ನಾನೆಲ್ಲಿ ಎನ್ನುವ ಕೀಳರಿಮೆ ಕಾಡುತ್ತಿತ್ತು. ಆದರೆ ಮೊದಲ ಭೇಟಿಯಲ್ಲಿ ಅವರು ನನ್ನೊಡನೆ ನಡೆದುಕೊಂಡ ರೀತಿ, ನನಗೆ ಕೊಟ್ಟ ಗೌರವಗಳನ್ನು ಎಂದಿಗೂ ಮರೆಯಲಾರೆ. ಸರಳತೆ, ಸಜ್ಜನಿಕೆಗಳು ನಮ್ಮ ನಡವಳಿಕೆಯ ಭಾಗವಾಗಬೇಕು, ನಾವು ಎಷ್ಟೇ ಎತ್ತರ ಬೆಳೆದರೂ ಅದು ನಮ್ಮ ತಲೆಗೆ ಹತ್ತದೆ, ನಮ್ಮ ತಲೆ ನಮ್ಮ ಭುಜದ ಮೇಲೆ ಭದ್ರವಾಗಿ ನಿಲ್ಲಬೇಕು- ಇದು ಎರಡು ಸಲ ಅವರನ್ನು ಭೇಟಿಯಾದಾಗ ನಾನು ಕಲಿತ ಪಾಠ ಎನ್ನುತ್ತಾರೆ ಬೆಂಗಳೂರಿನ ಖ್ಯಾತ ಆಪ್ತಸಮಾಲೋಚಕ ಆರ್.ಶ್ರೀನಾಗೇಶ್. ಡಿವಿಜಿ (ಮಾರ್ಚ್ 17, 1887) ಜನ್ಮದಿನದ ಹಿನ್ನೆಲೆಯಲ್ಲಿ ಶ್ರೀನಾಗೇಶ್ ಕಟ್ಟಿಕೊಟ್ಟಿರುವ ಡಿವಿಜಿ ಅವರ ಆಪ್ತಚಿತ್ರಣ ಇಲ್ಲಿದೆ.
ಹಿಂದಿನದಿನ ಹಣ ಮರುದಿನ ಕೈ ಖಾಲಿ
ಅವರ ನೆರೆಯವರು ಒಂದು ಪ್ರಸಂಗವನ್ನು ನಿವೇದಿಸಿದರು. ‘ಮನೆಗೆ ನೆಂಟರು ಬಂದಿದ್ದಾರೆ, ಕಾಫಿಪುಡಿ, ಸಕ್ಕರೆ ಬೇಕು. ಮಗನಿಂದ ಹಣ ಬಂದ ಕೂಡಲೇ ಕೊಡುವೆ’ ಎಂದು ಡಿವಿಜಿ ಚೀಟಿಯನ್ನು ಬರೆದು ಹುಡುಗನೊಬ್ಬನನ್ನು ಅಂಗಡಿಗೆ ಕಳುಹಿಸಿದ್ದರು. ಅದರ ಹಿಂದಿನ ದಿನವೇ ಅವರಿಗೆ ಸನ್ಮಾನ ಮಾಡಿ ಒಂದು ಲಕ್ಷ ರೂಗಳ ನಿಧಿಯನ್ನು ಸಮರ್ಪಿಸಲಾಗಿತ್ತು!
ಎಲ್ಲಿ ಹೋಯಿತು ಆ ಹಣ? ತಾವು ಅತ್ಯಂತ ಶ್ರದ್ಧೆಯಿಂದ ಕಟ್ಟಿದ್ದ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಗೆ ಇಡಿಯ ಮೊತ್ತವನ್ನು ದಾನ ಮಾಡಿದ್ದರು ಅವರು.
ನಮಗೆ ಸಿಕ್ಕ ಹಣದ ಸದುಪಯೋಗವಾಗಬೇಕು, ಅದರಿಂದ ನಾಲ್ಕು ಜನರಿಗೆ ಒಳಿತಾಗಬೇಕು- ಇದು ಅವರ ಮೇಲಿನ ನಡವಳಿಕೆಯಿಂದ ಸಿಗುವ ಸಂದೇಶ. ಅವರು ಸಂಪಾದನೆಯನ್ನು ಮಾಡಿದರು. ಆದರೆ, ಅದರ ವಿನಿಯೋಗ ಅವರ ಸ್ವಂತಕ್ಕಿಂತ ಹೆಚ್ಚಿಗೆ ಸಮಾಜಕ್ಕೆ ಹೆಚ್ಚು ವಿನಿಯೋಗವಾಯಿತು ಎನ್ನುವುದು ಗಮನಾರ್ಹ. ಅವರ ಸಂಕೀರ್ಣ ಸ್ಮೃತಿ ಸಂಪುಟದಲ್ಲಿ ಒಂದು ಪ್ರಸಂಗವನ್ನು ನಿವೇದಿಸಿದ್ದಾರೆ. ಅವರ ಚಿಕ್ಕ ತಾತ ರಾಮಣ್ಣನವರನ್ನು ಕುರಿತು ಬರೆದ ಕಥೆ ಅದು. ರಾಮಣ್ಣನವರಿಗೆ ಪತ್ನೀ ವಿಯೋಗವಾದ ನಂತರ ಅವರು ಮರುಮದುವೆ ಆಗಿರಲಿಲ್ಲ. ಜೀವನೋಪಾಯಕ್ಕಾಗಿ ಲೇವಾದೇವಿ ಇಟ್ಟುಕೊಂಡಿದ್ದರಂತೆ. ಉಳಿದಂತೆ, ಅವರ ಅಣ್ಣ ಮತ್ತು ತಮ್ಮಂದಿರ ಮಕ್ಕಳನ್ನು, ಜಮೀನುಗಳನ್ನು ನೋಡಿಕೊಳ್ಳುತ್ತಿದ್ದರಂತೆ. ಅದನ್ನು ಎಂದಿಗೂ ಒಂದು ಹೊರೆ ಎಂದು ಭಾವಿಸದೆ, ಸಂಸಾರ ಬಾರವನ್ನು ಅವರಷ್ಟು ಶ್ರದ್ಧೆ, ಭಕ್ತಿಗಳಿಂದ ಯಾವ ಸಂಸಾರಿಯೂ ನಡೆಸಿರಲಾರ ಎಂದು ಡಿವಿಜಿ ಬರೆಯುತ್ತಾರೆ. ಅದರಲ್ಲಿಯೇ ಅವರಿಗೆ ಸಂತೃಪ್ತಿ ಇತ್ತು ಎಂದು ವರ್ಣಿಸುತ್ತಾರೆ.
ಕುಟುಂಬ ಒಡೆಯೋ ಬಗ್ಗೆ ಡಿವಿಜಿ ಮಾತು
ಈ ಸಂದರ್ಭದಲ್ಲಿ ಡಿವಿಜಿ ಅವರ ಕೆಲವು ನುಡಿಗಳು ಗಮನಾರ್ಹ. ಭೂ ವ್ಯವಸಾಯದ ಆದಾಯ ವರ್ಷಕ್ಕೊಮ್ಮೆ ಬರುತ್ತಿತ್ತು. ಎಲ್ಲರೂ ಒಟ್ಟಾಗಿ ದುಡಿಯುತ್ತಿದ್ದರು. ಒಟ್ಟಿಗೆ ಸಂಸಾರ ನಡೆಯುತ್ತಿತ್ತು. ಇದು ಹೋಗಿ, ಮಾಸಿಕ ಸಂಪಾದನೆ ಪ್ರಾರಂಭವಾದಾಗ, ಪರಸ್ಪರ ಪೈಪೋಟಿ ಹೆಚ್ಚಿತು. ನನಗೆ ಹೆಚ್ಚು ವೇತನ, ನಿನಗೆ ಕಡಿಮೆ ಎನ್ನುವ ತಾರತಮ್ಯಗಳು ಪ್ರಾರಂಭವಾದವು. ತಮ್ಮ ಕುಟುಂಬವನ್ನು ಮಾತ್ರ ನೋಡಿಕೊಳ್ಳುವ ಪರಿಪಾಠ ಪ್ರಾರಂಭವಾಯಿತು.
ಇದು ಪರಸ್ಪರ ಬಾಂಧವ್ಯ, ಒಡನಾಟಗಳ ಮೇಲೆ ತೀವ್ರ ಪರಿಣಾಮ ಬೀರಿತು. ಇದು ಡಿವಿಜಿಯವರ ತಾತ್ಪರ್ಯ. ಮತ್ತೊಂದು ಕುತೂಹಲಕಾರೀ ಘಟನೆ ಹಂಚಿಕೊಳ್ಳಬೇಕು. ಅಂದಿನ ಕಾಲದಲ್ಲಿ ಒಂದು ಹೊಟೆಲ್ ಪ್ರಾರಂಭವಾಗಿತ್ತಂತೆ. ಅಲ್ಲಿ ಮೂರು ಭಾಗಗಳು. ಒಳಗೆ ಅಡುಗೆಮನೆಯಲ್ಲಿ ‘ವೈದಿಕ ಬಾಹ್ಮಣರಿಗೆ’- ಅಂದರೆ, ಪಂಚೆ, ಶಲ್ಯ ಧರಿಸಿ, ಜುಟ್ಟು ಇದ್ದವರಿಗೆ. ಎರಡನೆಯ ಭಾಗ ‘ಲೌಕಿಕ ಬ್ರಾಹಣರಿಗೆ’- ಅಂದರೆ, ಕ್ರಾಪ್ ಬಿಟ್ಟು, ಪ್ಯಾಂಟು, ಷರ್ಟು ಧರಿಸಿದವರು. ಮೂರನೆಯ ಭಾಗ ‘ಅನ್ಯರಿಗೆ’. ತಮ್ಮ ಎಂಜಲೆಲೆಗಳನ್ನು ಅವರವರೇ ತೊಟ್ಟಿಗೆ ಹಾಕಬೇಕು. ಲೋಟದಿಂದ ಎತ್ತಿ ಕುಡಿಯಬೇಕು- ಇದು ಎಲ್ಲರಿಗೂ ಅನ್ವಯವಾಗುವ ನಿಯಮ.
ಒಮ್ಮೆ ಡಿವಿಜಿ ಗೆಳೆಯನೊಟ್ಟಿಗೆ ಹೊಟೆಲಿಗೆ ಹೋಗಿದ್ದರಂತೆ, ಅಡುಗೆಮನೆಯಲ್ಲಿ ಕುಳಿತ ಇವರಿಗೆ ಅವರ ಗೆಳೆಯನ ದೊಡ್ಡಪ್ಪ ಹೊರಬಾಗಿಲಿನಿಂದ ಒಳಗೆ ಬಂದಿದ್ದು ಕಾಣಿಸಿತು. ಕೂಡಲೇ ಇಬ್ಬರೂ ಅಲ್ಲಿಂದ ಮತ್ತೊಂದು ಬಾಗಿಲಿನಿಂದ ಪರಾರಿ! ಮತ್ತೆ ಒಳಗೆ ಹೋದಾಗ ಹೊಟೆಲಿನ ಮಾಲೀಕರು ಯಾಕೆ ಹಾಗೆ ಓಡಿ ಹೋದಿರಿ ಎಂದು ಕೇಳಿದಾಗ ಡಿವಿಜಿ ಕಾರಣ ತಿಳಿಸಿದರಂತೆ.
ಈ ಪ್ರಸಂಗದಲ್ಲಿ ಬರುವ ಹಿರಿಯರಿಗೆ ಪತ್ನೀ ವಿನಿಯೋಗವಾಗಿದ್ದುದರಿಂದ ಅವರು ಹೊಟೆಲಿನ ಮೇಲೆ ಅವಲಂಬಿತರಾಗಿದ್ದರು. ಈ ಹುಡುಗರಿಬ್ಬರೂ ಹೋಗಿದ್ದು ಬಾಯಿ ಚಪಲಕ್ಕೆ. ಈ ವ್ಯತ್ಯಾಸದ ಹಿನ್ನೆಲೆಯಲ್ಲಿ ಈ ಪ್ರಸಂಗವನ್ನು ಅರ್ಥೈಸಿದಾಗ, ಇಲ್ಲಿ ಹೆದರಿಕೆಗಿಂತ ಹೆಚ್ಚಾಗಿ ಗೌರವ ಎದ್ದು ಕಾಣುತ್ತದೆ. ಮಕ್ಕಳು ತಪ್ಪು ಮಾಡಿದಾಗ ಹಿರಿಯರು ದಂಡಿಸುತ್ತಿದ್ದರು- ಅವರ ಸ್ವಂತ ಮಕ್ಕಳಲ್ಲದೇ ಹೋದರೂ! ಆ ಮಕ್ಕಳ ಸ್ವಂತ ಪೋಷಕರೂ ಅದಕ್ಕೆ ಅಡ್ಡಿ ಬರುತ್ತಿರಲಿಲ್ಲ. ಇದು ಮಕ್ಕಳಲ್ಲಿ ಸನ್ನಡವಳಿಕೆ ರೂಪಿತವಾಗಲು ನೆರವಾಗುತ್ತಿತ್ತು. ಇದು ಇಂದಿನ ಪೋಷಕರು ಗಮನಿಸಬೇಕಾದ ವಿಷಯ!
ಮಾಸ್ಟರ್ ಹಿರಣ್ಣಯ್ಯ ಅವರಿಗೆ ಹೇಳಿದ ಮಾತು
ಡಿವಿಜಿ ಒಮ್ಮೆ ಮಾಸ್ಟರ್ ಹಿರಿಯಣ್ಣನವರನ್ನು ಓದುವ ಅಭ್ಯಾಸ ಇಟ್ಟುಕೊಂಡಿದ್ದೀಯಾ ಎಂದು ಕೇಳಿದಾಗ, ‘ನನ್ನ ಗಮನವೆಲ್ಲ ನಾಟಕ, ಸಂಪಾದನೆ, ಲೆಕ್ಕಗಳ ಕಡೆಗೇ ಇರುವುದು. ಓದಿಗೆ ಸಮಯವೆಲ್ಲಿ’ ಎಂದರಂತೆ ಮಾಸ್ಟರ್ ಹಿರಿಯಣ್ಣಯ್ಯ.
‘ಕುಡಿಯೋ ಅಭ್ಯಾಸ ಇದೆಯಲ್ಲ, ಅದರ ಜೊತೆಗೆ ತರಿಸಿಕೊಳ್ಳುವ ಕುರುಕಲನ್ನು ಕಾಗದದಲ್ಲಿ ತಾನೇ ಕಟ್ಟಿ ಕೊಡುವುದು? ಆ ನಂತರ ಅದನ್ನು ಬಿಸಾಡುವ ಮೊದಲು, ಅದರ ಮೇಲೆ ಒಂದಷ್ಟು ಕಣ್ಣಾಡಿಸಿ, ಏನು ಬರೆದಿದೆ ಎಂದು ಓದಿ ಬಿಸಾಡಿದರೆ, ಅದೂ ಓದೇ’ ಎಂದರಂತೆ ಡಿವಿಜಿ.
ದಿನಕ್ಕೆ ಹತ್ತು ನಿಮಿಷವಾದರೂ ಏನಾದರೂ ಓದಿ ಎಂದು ಒಂದು ತರಬೇತಿ ಶಿಬಿರದಲ್ಲಿ ನಾನು ಹೇಳಿದಾಗ, ಭಾಗವಹಿಸಿದ್ದವರೊಬ್ಬರು, ‘ನನಗೆ ಈ ಮುಂಚೆಯೇ ಯಾರಾದರೂ ಈ ಮಾತನ್ನು ಹೇಳಿದ್ದಿದ್ದರೆ ಅದೆಷ್ಟೋ ಬೆಳೆದುಬಿಟ್ಟಿರುತ್ತಿದ್ದೆ’ ಎಂದರು. ಅವರ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಡಿವಿಜಿಯವರ ನುಡಿಗಳನ್ನು ಕೂರಿಸಿಟ್ಟಾಗ, ಓದು ಅಂದರೆ ದೊಡ್ಡದೊಡ್ಡ ಗ್ರಂಥಗಳನ್ನೇ ಓದಬೇಕು ಎಂದೇನಿಲ್ಲ, ಸರಳವಾಗಿ, ಕೈಗೆ ಸಿಕ್ಕಿದ್ದನ್ನು ಒಂದೆರಡು ನಿಮಿಷವಾದರೂ ಓದುವ ಅಭ್ಯಾಸ ಬೆಳೆಸಿಕೊಳ್ಳಿ ಎನ್ನುವ ಡಿವಿಜಿಯವ ಸಲಹೆ ಅನುಷ್ಠಾನಕ್ಕೆ ತರುವುದು ಸುಲಭ ಎನಿಸುವುದಿಲ್ಲವೇ!
ಕೊನೆಯ ಮಾತು
ತಮ್ಮ ಜ್ಞಾಪಕ ಚಿತ್ರಶಾಲೆ ಮಾಲಿಕೆಯಲ್ಲಿ ಅನೇಕ ಮಹನೀಯರನ್ನು ಪರಿಚಯಿಸುತ್ತಾರೆ. ಎಲ್ಲ ಆದರ್ಶಪ್ರಾಯ ಜೀವನ ನಡೆಸಿದವರು. ಇರುವುದರಲ್ಲಿ ಸಂತೃಪ್ತಿ ಹೊಂದಿ, ನಾಲ್ಕು ಜನಕ್ಕೆ ಉಪಯೋಗವಾಗುವಂತಹ ಕೆಲಸಗಳನ್ನು ಮಾಡುವುದರಲ್ಲಿ ನೆಮ್ಮದಿ ಕಂಡುಕೊಂಡವರು. ಜೀವನ ಚರಿತ್ರೆಯ ಮುಖ್ಯಾಂಶಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಬಹುದು. ಮೊದಲನೆಯದು ಬಾಹ್ಯ ಸಂಗತಿಗಳು. ಎರಡನೆಯದು ಅಂತಃಸ್ವಭಾವ ಎನ್ನುತ್ತಾರೆ ಡಿವಿಜಿ.
‘ಬಾಹ್ಯ ಸಂಗತಿ ಎಂದರೆ ಅವರನ್ನು ಕುರಿತು ಬಹುತೇಕರಿಗೆ ತಿಳಿದಿರುವುದು, ಗೋಚರವಾಗುವುದು. ಅಂತಃಸ್ವಭಾವ ಎಂದರೆ, ತುಂಬ ಪ್ರೀತಿಯಿಂದ ನೋಡುತ್ತಿದ್ದುದು ಎಂತಹವರನ್ನು, ಆಪ್ತಮಿತ್ರರು ಯಾರು ಯಾರು, ಅವನ ಸಂಭಾಷಣೆಯ ವಿಷಯಗಳೇನು, ಅವನಿಗೆ ಅತ್ಯಂತ ಪ್ರಿಯವಾದ ಕಾಲಕ್ಷೇಪದ ಮಾರ್ಗವೇನು- ಸಂಗೀತವೇ, ಸಾಹಿತ್ಯವೇ, ತತ್ವವಿಚಾರಗಳೇ, ಗಣಿತ ವಿಜ್ಞಾನಾದಿ ಶಾಸ್ತ್ರಗಳೇ, ಕಾಡುಹರಟೆಯೇ? ಅವನಿಗೆ ಅತ್ಯಂತ ಪ್ರಿಯವಾಗಿದ್ದ ಗ್ರಂಥ ಯಾವುದು? ಆಚಾರ ಸಂಪ್ರದಾಯಗಳಲ್ಲಿ ಅವನು ನಿತ್ಯ ಅನುಸರಿಸುತ್ತಿದ್ದ ಮಾರ್ಗ ಯಾವುದು, ಸಾರ್ವಜನಿಕ ವಿಷಯಗಳಲ್ಲಿ ಅವನ ಪಂಥ ಯಾವುದು, ಅವನು ಬಹಿರಂಗವಾಗಿ ಸಾರುತ್ತಿದ್ದ ಅಭಿಪ್ರಾಯಗಳಿಗೂ, ಅಂತರಂಗವಾಗಿ ನಡೆಯುತ್ತಿದ್ದ ನಡವಳಿಕೆಗಳಿಗೂ ಹೊಂದಿಕೆ ಎಷ್ಟು ಮಾತ್ರ ಇತ್ತು- ಜೀವನ ಚರಿತ್ರೆಯಿಂದ ನಮಗೆ ತಿಳಿದು ಬರಬೇಕಾದ ಅಂತರಂಗದ ವಿಷಯಗಳು ಇವು’.
ನಮ್ಮ ಸಮಾಜದ ಇಂದಿನ ಆಗುಹೋಗುಗಳನ್ನು ಮೇಲಿನ ಅಂತರಂಗದ ವಿಷಯಗಳೊಡನೆ ಜೋಡಿಸಿದಾಗ, ನಿಜವಾಗಿ ಸತ್ವ ಪೂರ್ಣರಾದ ವ್ಯಕ್ತಿಗಳನ್ನು ಗುರುತಿಸಲು ನೆರವಾಗುತ್ತದೆ, ಅಂತಹವರ ನಡವಳಿಕೆ ನಮಗೆ ಉತ್ತಮ ಪ್ರೇರಣೆಯಾಗಬಲ್ಲದು.
(ಈ ಲೇಖನ ಬರೆದಿರುವ ಆರ್. ಶ್ರೀನಾಗೇಶ್ ಬರಹಗಾರ, ಗ್ರಂಥಕರ್ತ, ಆಪ್ತ ಸಲಹೆಗಾರ. ಪೋಷಕರ- ಮಕ್ಕಳ ಬಾಂಧವ್ಯ ಹಾಗೂ ದಾಂಪತ್ಯನಿಭಾವಣೆಯ ಮಾರ್ಗದರ್ಶಿ. ಪ್ರತಿಯೊಬ್ಬರಿಗೂ ತಮ್ಮತನವನ್ನು ಕಂಡುಕೊಳ್ಳಲು ನೆರವಾಗುವ ಪ್ರೇರೇಪಕ)
ಇದನ್ನೂ ಓದಿ: ಅಪ್ಪನಾಗುವುದೆಂದರೆ: ನಿನಗೆ ಇನ್ನೂ ಬೇರೆ ಜವಾಬ್ದಾರಿಗಳಿವೆ ಎಂದು ಹೇಳಿಹೋದ ಮಗಳು
Published On - 8:24 pm, Wed, 17 March 21