Social Responsibility; ಅಪ್ಪನಾಗುವುದೆಂದರೆ: ನಿನಗೆ ಇನ್ನೂ ಬೇರೆ ಜವಾಬ್ದಾರಿಗಳಿವೆ ಎಂದು ಹೇಳಿಹೋದ ಮಗಳು

‘ಚೇತರಿಸಿಕೊಳ್ಳುತ್ತಿದ್ದ ಮಗಳು ಶಸ್ತ್ರಚಿಕಿತ್ಸೆಯಾದ 36 ತಾಸುಗಳ ನಂತರ ಅಸುನೀಗಿದಾಗ ದೊಡ್ಡ ಆಘಾತವೇ ಆಯಿತು. ಕನ್ಯಾದಾನ ಮಾಡಬೇಕಿದ್ದ ಕೈಗಳಿಂದ ಅಗ್ನಿಸ್ಪರ್ಶ ಮಾಡುವ ಸಂದರ್ಭ ನಿಜಕ್ಕೂ ಕಠೋರವಾದುದು. ಒಪ್ಪಿಕೊಳ್ಳದೆ ವಿಧಿಯಿಲ್ಲ. ಒಪ್ಪಿಕೊಂಡು ನಮ್ಮ ಜೀವನವನ್ನು ಮುಂದುವರೆಸಿಕೊಂಡು ಹೋಗುವುದು ಬಿಟ್ಟು ಬೇರೆ ದಾರಿಯಿರಲಿಲ್ಲ. ಆ ವೇಳೆಗೆ ಆಪ್ತರನ್ನು ಕಳೆದುಕೊಂಡಾಗ ಆಗುವ ದುಃಖದ ನಿರ್ವಹಣೆಗೆ ಹಲವರಿಗೆ ಆಪ್ತಸಲಹೆ ಮಾಡಿದ್ದೆ. ನಾನು ಎದುರಿಸುವ ಸಂದರ್ಭಕ್ಕೆ ಈ ರೀತಿ ನನ್ನನ್ನು ತಯಾರು ಮಾಡುವುದು ದೈವಸಂಕಲ್ಪವಾಗಿತ್ತೇ ಎನ್ನುವ ಪ್ರಶ್ನೆಯೂ ಮನಸ್ಸಿನಲ್ಲಿ ಉದ್ಭವವಾಯಿತು.’ ಆರ್. ಶ್ರೀನಾಗೇಶ್

  • TV9 Web Team
  • Published On - 16:23 PM, 3 Mar 2021
Social Responsibility; ಅಪ್ಪನಾಗುವುದೆಂದರೆ: ನಿನಗೆ ಇನ್ನೂ ಬೇರೆ ಜವಾಬ್ದಾರಿಗಳಿವೆ ಎಂದು ಹೇಳಿಹೋದ ಮಗಳು
ಮೈತ್ರಿ, ಆರ್. ಶ್ರೀನಾಗೇಶ್

ಪ್ರಿಯ ಅಪ್ಪಂದಿರೇ, ಎರಡು ತಲೆಮಾರುಗಳ ಮಧ್ಯೆ ನೀವಿದ್ದೀರಿ. ಬೆನ್ನ ಹಿಂದೆ ನಿಮ್ಮ ಅಪ್ಪ-ಅಮ್ಮ, ಕಣ್ಣ ಮುಂದೆ ನಿಮ್ಮ ಮಕ್ಕಳು-ಕುಟುಂಬ. ನೀವು ಸಾಗಿಬಂದ, ಸಾಗಿಬರುತ್ತಿರುವ ಹಾದಿಯಲ್ಲಿ ಯಾವುದೇ ನೆನಪುಗಳು ಕೈಮಾಡಿ ನಿಲ್ಲಿಸಬಹುದು. ವಾಸ್ತವ ಸಂಗತಿಗಳು ಕಾಲಿಗೆ ಚಕ್ರ ಕಟ್ಟಲು ನೋಡಬಹುದು. ಈ ಎರಡರ ಮಧ್ಯೆ ಹೃದಯ-ಮೆದುಳು ಗುದ್ದಾಟಕ್ಕೆ ಬಿದ್ದಿರಬಹುದು, ಬಿದ್ದರೂ ನಾವು ನಡೆದಿದ್ದೇ ಹಾದಿ ಎಂದೂ ಸಾಗುತ್ತಿರಲೂಬಹುದು. ಹೀಗೆ ನೀವು ಸಾಕಷ್ಟು ವಿಧದಲ್ಲಿ ಆಂತರಿಕವಾಗಿ ಬೆಳೆದಿದ್ದೀರಿ, ಬೆಳೆಯುತ್ತಲೂ ಇದ್ದೀರಿ. ಹಾಗಿದ್ದರೆ ಅಪ್ಪನಾಗುತ್ತಿದ್ದಂತೆ ನಿಮ್ಮೊಳಗಿನ ನೀವು ರೂಪಾಂತರಕ್ಕೆ ಒಳಗಾದಿರೇ? ಅಪ್ಪನಾಗುವುದೆಂದರೆ ಅನುಭವವೇ, ಅವಕಾಶವೇ, ಆದರ್ಶವೇ, ಅನಿವಾರ್ಯವೇ, ಜವಾಬ್ದಾರಿಯೇ, ಸಹಜ ಪ್ರಕ್ರಿಯೆಯೆ ಅಥವಾ ಇದ್ಯಾವುದೂ ಅಲ್ಲವಾಗಿದ್ದರೆ ಇನ್ನೂ ಏನೇನು? ಒಮ್ಮೆ ಹಿಂತಿರುಗಿ ನೋಡಬಹುದೆ ಎಂದು ಕೆಲ ಅಪ್ಪಂದಿರಿಗೆ ‘ಟಿವಿ9 ಕನ್ನಡ ಡಿಜಿಟಲ್’ ಕೇಳಿತು. ಇದೋ ಹೊಸ ಸರಣಿ ‘ಅಪ್ಪನಾಗುವುದೆಂದರೆ’ ಇಂದಿನಿಂದ ಪ್ರಾರಂಭ.

ನಿಮಗೂ ಈ ಸರಣಿಯಲ್ಲಿ ಪಾಲ್ಗೊಳ್ಳಬೇಕು ಎನ್ನಿಸಿದರೆ ದಯವಿಟ್ಟು ಬರೆಯಿರಿ. ಕನಿಷ್ಟ 1000 ಪದಗಳಿರಲಿ, ನಾಲ್ಕೈದು ಭಾವಚಿತ್ರಗಳು ಮತ್ತು ಸ್ವವಿವರವೂ ಇರಲಿ. ಇ- ಮೇಲ್ tv9kannadadigital@gmail.com

ಪರಿಕಲ್ಪನೆ: ಶ್ರೀದೇವಿ ಕಳಸದ

ದುಃಖ ನಿರ್ವಹಣೆಗೆ ಸಂಬಂಧಿಸಿದಂತೆ ಹಲವರಿಗೆ ಆಪ್ತಸಲಹೆ ನೀಡುತ್ತಿದ್ದ ಬೆಂಗಳೂರಿನ ಆರ್. ಶ್ರೀನಾಗೇಶ, ಸ್ವತಃ ಆ ಸಂದರ್ಭವನ್ನು ಎದುರಿಸಿದ ರೀತಿಯನ್ನು ಮತ್ತದರಿಂದ ಹೊರಬರಲು ತಮ್ಮ ಜೀವನವನ್ನು ಮರುರೂಪಿಸಿಕೊಂಡ ಬಗೆಯನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಹಲವು ವರ್ಷಗಳ ಹಿಂದೆ ಬೆಂಗಳೂರು ಸಮೀಪವಿರುವ ನಮ್ಮ ಪೂರ್ವಜರ ಹಳ್ಳಿಗೆ ಹೋಗಿದ್ದೆ. ಅಲ್ಲಿ ನನ್ನ ಪರಿಚಯ ಯಾರಿಗೂ ಇಲ್ಲ. ನಾನು ಯಾರ ವಂಶದವನು ಎಂದು ತಿಳಿದಾಗ ಒಬ್ಬ ವೃದ್ಧ ಮಹಿಳೆ ನನಗೆ ಹೇಳಿದ್ದು- ‘ತುಂಬ ಒಳ್ಳೆಯಳಪ್ಪ ನಿನ್ನ ಅಮ್ಮ. ಅವಳು ಇದ್ದಿದ್ದು ಬರೀ 20 ವರ್ಷ. ಆದರೆ ಅದೆಷ್ಟು ಒಳ್ಳೆಯ ಹೆಸರು ತೊಗೊಂಡು ಹೊರಟು ಹೋದಳು.’

ನನಗೆ ಎಂಟು ತಿಂಗಳಿದ್ದಾಗ ನನ್ನನ್ನು ಬಿಟ್ಟುಹೋದ ನನ್ನ ತಾಯಿಯ ಪರಿಚಯ ನನಗಾಗಿರುವುದು ಅವರ ಒಡನಾಟವಿದ್ದವರಿಂದ. ಅವರ ಶಿಕ್ಷಕಿ, ಗೆಳತಿಯರು ಅವರನ್ನು ಕುರಿತು ಆಡುತ್ತಿದ್ದ ಮಾತುಗಳು ಮತ್ತು ಅಜ್ಜಿ ಕಲಿಸಿದ ಮೌಲ್ಯಗಳು ನನ್ನ ಬದುಕಿಗೆ ಒಂದು ಚೌಕಟ್ಟನ್ನು ನಿರ್ಮಿಸಿದವು. ಅಂತಹ ಅಮ್ಮನಿಗೆ ಮಗನಾಗಿ ನಾನು ಹೇಗೆ ನನ್ನ ಜೀವನವನ್ನು ರೂಪಿಸಿಕೊಳ್ಳಬೇಕು ಎಂಬ ದಾರಿಯನ್ನೂ ತೋರಿಸಿಕೊಟ್ಟವು.

ಹತ್ತನೆಯ ತರಗತಿಯಲ್ಲಿ ಇಬ್ಬರಿಗೆ ಮನೆಪಾಠ ಹೇಳಿಕೊಟ್ಟು ಗಳಿಸುತ್ತಿದ್ದ 20 ರೂಪಾಯಿಗಳಿಂದ ನನ್ನ ಖರ್ಚನ್ನು ಸಂಪಾದಿಸಿಕೊಂಡು ಮುಂದೆ, ಬೇಸಿಗೆರಜೆಯಲ್ಲಿ ದಿನಕ್ಕೆ 3 ರೂಪಾಯಿಗಳಂತೆ ದುಡಿಯುತ್ತ ನನ್ನ ಓದಿನ ಖರ್ಚನ್ನು ನಿಭಾಯಿಸಿಕೊಂಡಿದ್ದು, ನಿರುದ್ಯೋಗದ ಸಮಸ್ಯೆಯಿಲ್ಲದೆ ಕೆಲಸಕ್ಕೆ ಸೇರಿಕೊಂಡು ಖಚಿತವಾದ ಆರ್ಥಿಕ ಸ್ವಾತಂತ್ರ್ಯವನ್ನು ಗಳಿಸಿಕೊಂಡಿದ್ದು ನನ್ನ ವ್ಯಕ್ತಿತ್ವಕ್ಕೆ ಒಂದು ವೇದಿಕೆಯನ್ನು ನಿರ್ಮಿಸಿದವು ಎನ್ನಬಹುದು. ನನ್ನ ತಂದೆಯವರಿಗೆ ನನ್ನಿಂದ ಇದ್ದ ನಿರೀಕ್ಷೆಗಳೇ ಹೆಚ್ಚು. ಹೀಗಾಗಿ, ಬಹುತೇಕ ಕುಟುಂಬಗಳಲ್ಲಿ ಹಿರಿಯ ಮಗ ಎದುರಿಸುವ ಸವಾಲುಗಳನ್ನು ನಾನೂ ಎದುರಿಸಬೇಕಾಯಿತು. ದುಡಿಮೆ ಪ್ರಾರಂಭವಾದ ನಂತರ ಮನೆಯ ಹೊಣೆಗಾರಿಕೆಯನ್ನು ನಾನೊಬ್ಬನೇ ನೋಡಿಕೊಳ್ಳಬೇಕು ಎನ್ನುವ ಒತ್ತಡ ಹೆಚ್ಚಾಯಿತು.

ಹದಿವಯಸ್ಸಿನಿಂದಲೂ ನನ್ನ ಒಳಗುದಿಗಳನ್ನು ಹೇಳಿಕೊಳ್ಳಲು, ಅಂತರಂಗದ ಭಾವನೆಗಳನ್ನು ಹಂಚಿಕೊಳ್ಳಲು ಕೇಳುವ ಕಿವಿಗಳಿರಲಿಲ್ಲ, ತಲೆಯಿಡಲು ಭುಜಗಳಿರಲಿಲ್ಲ. ಬೆಳಗಿನ ಝಾವ ಸುಮಾರು 3 ಗಂಟೆಯ ನಂತರ ಒಂದಷ್ಟು ಸಮಯ ಹಾಸಿಗೆಯಲ್ಲಿಯೇ ಅಳುತ್ತ ಮಲಗಿರುತ್ತಿದ್ದೆ. ಬದುಕಿನಲ್ಲಿ ಒಂಟಿಯಾಗಿ ನಾನೇಕೆ ಹೀಗೆ ನರಳುತ್ತಿದ್ದೇನೆ, ಪ್ರೀತಿಯ ಸೆಲೆಯಿಲ್ಲದೆ ನಾನು ಏಕೆ ಪರದಾಡಬೇಕಿದೆ ಎಂಬುದು ನನ್ನ ಅಳಲಾಗಿತ್ತು. ಪ್ರೀತಿ ವ್ಯಕ್ತಪಡಿಸುವ ಸ್ಪರ್ಶ ನನಗೆ ಸಿಗುತ್ತಿರಲಿಲ್ಲ. ಆದರೆ ಅಜ್ಜಿಯ ಮನೆಯಲ್ಲಿಯೇ ಬೆಳೆದಿದ್ದು, ಮದುವೆಯಾಗುವ ತನಕ ಅವರ ಮನೆಯಲ್ಲಿಯೇ ಇದ್ದುದು ನನಗೆ ಶಕ್ತಿಯನ್ನೂ ಕೊಟ್ಟಿತ್ತು.
ಆ ಸಮಯದಲ್ಲಿ, ಹದಿವಯಸ್ಸಿನಲ್ಲಿ ಕಾವ್ಯ ನನ್ನನ್ನು ಸೆಳೆಯಿತು. ಓದುವ ಹವ್ಯಾಸ, ಬರೆಯುವ ಅಭ್ಯಾಸ ಇವೆರಡೂ ನನ್ನ ದುಗುಡಕ್ಕೆ ಸಮಾಧಾನ ಕೊಡುವ ಚಟುವಟಿಕೆಗಳಾಗಿ ನನ್ನನ್ನು ಕಾಪಾಡಿದವು.

appanaguvudendare

ಮೈತ್ರಿ ಎಂಬ ಆಪ್ತಜೀವ

ಬಹುಮುಖ್ಯವಾಗಿ ನರಳಾಟಗಳಿಂದ ನೊಂದು, ಬೆಂದು, ಇದಕ್ಕಿಂತ ಸಾಯುವುದೇ ಉತ್ತಮ ಎನ್ನುವ ಭಾವನೆ ಎಂದಿಗೂ ನನ್ನ ಮನದಲ್ಲಿ ಮೂಡಲಿಲ್ಲ. ಬದಲಿಗೆ ಜೀವನದಲ್ಲಿ ಏನಾದರೂ ಸಾಧನೆ ಮಾಡಲೇಬೇಕು ಎನ್ನುವ ತುಡಿತ ತೀವ್ರವಾಗಿ ಕಾಡಲು ಪ್ರಾರಂಭವಾಯಿತು. ಮಗನಾಗಿದ್ದಾಗ ನನಗೆ ಸಿಗದ ಪ್ರೀತಿ, ಪ್ರೋತ್ಸಾಹ, ಬೆಂಬಲಗಳನ್ನು ನನ್ನ ಮಕ್ಕಳಿಗೆ ಕೊಡುವಂತಹ ತಂದೆ ನಾನಾಗಬೇಕು ಎನ್ನುವ ಪಾಠವನ್ನು ಕಲಿಸಿದ್ದು ಈ ಅನುಭವ. ಸಂಪಾದನೆ ಪ್ರಾರಂಭವಾಗಿ, ಒಂದಿಷ್ಟು ವರ್ಷಗಳ ನಂತರ, ಮದುವೆಯಾಗುವುದು ಮುಂದಿನ ಹಂತ. ನಾನೂ ಇದಕ್ಕೆ ಹೊರತಲ್ಲ. ಮದುವೆಯಾದ ನಂತರ ಗಂಡನಾಗಿ ಹೊಸ ಪಾತ್ರವನ್ನು ನಿಭಾಯಿಸಿಕೊಂಡು, ಆ ಪಾತ್ರ ನಿರ್ವಹಣೆಯ ಜೊತೆಗೇ ಅನ್ಯ ಸಂಬಂಧಗಳ ಜೊತೆ ಸಮತೋಲನ ಕಾಪಾಡಿಕೊಂಡು ಹೋಗುವ ಕಲಿಕೆ ನನಗೆ ಈಗಾಗಲೇ ಆಗಿತ್ತು. ಬಾಳಸಂಗಾತಿಯ ಜೊತೆ ಪರಿಚಯ ಮತ್ತು ಹೊಂದಾಣಿಕೆಗೆ ಭದ್ರ ತಳಹದಿ ಹಾಕುವ ತನಕ ಮಕ್ಕಳಾಗದೇ ಇದ್ದರೆ ಒಳಿತು ಎಂದು ನಾವು ಇಬ್ಬರೂ ಒಪ್ಪಿಕೊಂಡಿದ್ದೆವು.
ಒಂದು ಮಗುವಿರಬೇಕು, ಮಗಳೇ ಆದರೆ ಚೆನ್ನ ಎಂದು ಪ್ರತಿಪಾದಿಸುತ್ತಿದ್ದ ನನಗೆ ಮಗಳು ಜನಿಸಿದಾಗಿನ ಸಂಭ್ರಮ ಹೇಳತೀರದು! ಈ ಮುಂಚೆ ನಾನು ನಿರ್ಧರಿಸಿದ್ದ ಹಾಗೆ, ಮಗಳಿಗೆ ಕೇವಲ ಅಪ್ಪನಾಗದೆ, ಜೊತೆಯ ಆಟಗಾರನಾಗಿ, ಕಥೆಗಾರನಾಗಿ, ಪುಸ್ತಕ ಓದುವುದರಿಂದ ಸಿಗುವ ಮೋಜಿನ ಪರಿಚಯವನ್ನು ಮಾಡಿಕೊಡುವ ಮಾರ್ಗದರ್ಶಿಯಾದೆ. ಪರಸ್ಪರ ಒಡನಾಟದಲ್ಲಿ ಇಬ್ಬರೂ ಬೆಳೆಯುತ್ತ ಹೋದೆವು. ಕಾಲಕಾಲಕ್ಕೆ ಕಡ್ಡಾಯವಾಗಿ ಪ್ರವಾಸ ಹೋಗುತ್ತಿದ್ದುದರಿಂದ ಮೂವರ ನಡುವೆ ಸ್ನೇಹಸೇತು ಸುಭದ್ರವಾಗಿ ತಳೆಯುವುದು ಸಾಧ್ಯವಾಯಿತು.

ಮನುಷ್ಯ ಪ್ರವಾಸದಿಂದ ಜೇನನ್ನು ಸಂಗ್ರಹಿಸುತ್ತಾನೆ ಎನ್ನುವ ಹೇಳಿಕೆಗನುಗುಣವಾಗಿ, ನಮ್ಮ ಪ್ರವಾಸದಿಂದ ನಮಗೆ ದೊರೆತ ಅನುಭವಗಳು ಮತ್ತು ಕಲಿಕೆಗಳು ನಮ್ಮ ವ್ಯಕ್ತಿತ್ವದ ಬೆಳವಣಿಗೆಗೆ ಮಾತ್ರವಲ್ಲ, ಅನಾನುಕೂಲಗಳಿಗೆ ಹೊಂದಿಕೊಂಡು ಹೋಗುವುದಕ್ಕೆ, ಸಂಧಿಗ್ಧತೆ ಎದುರಾದಾಗ ಅದನ್ನು ತಾಳ್ಮೆಯಿಂದ ಎದುರಿಸುವ ಕೌಶಲಗಳನ್ನು ರೂಢಿಸಿಕೊಳ್ಳಲು ನೆರವಿಗೆ ಬಂದವು. ನಮ್ಮಬದುಕಿಗೆ ಒಂದು ಬಲವನ್ನು ತಂದುಕೊಟ್ಟವು. ನವಯೌವನದ ಹಂತ ದಾಟಿದ ನಂತರ, ಎಲ್ಲರಿಗೂ ಆದಂತೆಯೇ ನನಗೂ ಇತರ ಕನಸುಗಳು ಹುಟ್ಟಿಕೊಂಡವು- ಮತ್ತೊಂದು ಮಗುವಿರಬೇಕು, ಮನೆ ಕಟ್ಟಬೇಕು, ಉದ್ಯೋಗದಲ್ಲಿ ಬಡ್ತಿ ಸಿಗಬೇಕು, ಸಾಮಾಜಿಕವಾಗಿ ಒಂದು ಮನ್ನಣೆ ಗಳಿಸಬೇಕು, ಇತ್ಯಾದಿ.

ಬಯಸಿದಂತೆ ಎರಡನೆಯ ಮಗಳು ಜನಿಸಿದಳು. ಸಾಮಾಜಿಕವಾಗಿ ಮನ್ನಣೆ ಗಳಿಸಿಕೊಂಡಿದ್ದೆ. ಉದ್ಯೋಗದಲ್ಲಿ ಅಧಿಕಾರಿಯಾಗುವ ಕನಸು ಬಾಕಿ ಇತ್ತು. ಆದರೆ, ಆ ಕನಸು ತನ್ನಆಕರ್ಷಣೆಯ ಜೊತೆಗೇ ತರಬಹುದಾದ ಆಘಾತಗಳಿಗೆ ನಾನು ಮಾನಸಿಕವಾಗಿ ತಯಾರಿ ಮಾಡಿಕೊಂಡಿರಲಿಲ್ಲ. ಅಧಿಕಾರಿಯಾಗಿ ಬಡ್ತಿ ಹೊಂದಿ ಕಲ್ಯಾಣ ಕರ್ನಾಟಕಕ್ಕೆ ವರ್ಗದ ಮೇಲೆ ಹೋಗಬೇಕಾಯಿತು. ಹೊಸಹುದ್ದೆಯಲ್ಲಿ ತಿಂಗಳಿನಲ್ಲಿ ಮೂರು ವಾರ ಐದು ಜಿಲ್ಲೆಗಳಲ್ಲಿ ಪ್ರವಾಸವನ್ನು ಮಾಡಬೇಕಾಗಿದ್ದುದರಿಂದ ಕುಟುಂಬವನ್ನು ಕರೆದೊಯ್ಯುವುದು ಸರಿಯಲ್ಲ ಎನಿಸಿತು.

ಹೀಗಾಗಿ ಅಲ್ಲಿಗೆ ಒಬ್ಬನೇ ಹೋದೆ. ಮತ್ತೆ ಒಂಟಿತನ, ಅನಾಥಪ್ರಜ್ಞೆ ಕಾಡತೊಡಗಿದವು. ಇದರ ಫಲಶೃತಿ, ತೀವ್ರ ಖಿನ್ನತೆ. ಸುಮಾರು ಒಂದೂವರೆ ವರ್ಷ ಇದನ್ನು ಅನುಭವಿಸಿದ ನಂತರ ಹೊಸ ಬೆಳಕು ಕಾಣಿಸಿತು. ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗೆ ಗಣಿತದ ಮೋಜನ್ನು ಕಲಿಸುವುದು. ಅದು ನಮ್ಮ ಎದುರು ಮನೆಯಲ್ಲಿದ್ದ ಒಂಬತ್ತನೆಯ ತರಗತಿಯ ವಿದ್ಯಾರ್ಥಿನಿಯನ್ನು ಓದಿಸುವುದಕ್ಕೆ ನಾಂದಿಯಾಯಿತು. ಈ ಸಂದರ್ಭದಲ್ಲಿ ಅವಳೊಡನೆ ಬೆಳೆದ ಒಡನಾಟದಿಂದಾಗಿ ಹೆಣ್ಣುಮಕ್ಕಳ ಭಾವನಾತ್ಮಕ ಅಗತ್ಯಗಳ ಪರಿಚಯವಾಯಿತು. ಹಾಗೆ ನಾನು ಸಂಪಾದಿಸಿಕೊಂಡ ಮೊದಲ ಮಗಳು ಅವಳಾದಳು.

ಇದು ನನ್ನ ಬದುಕಿಗೆ ಹೊಸ ದಿಕ್ಕನ್ನು ಕೊಟ್ಟಿತು. ಫೋನುಗಳಿಲ್ಲದ ಅಂದಿನ ಕಾಲದಲ್ಲಿ ನಾನು ಆ ಊರು ಬಿಟ್ಟರೂ ಪತ್ರಮುಖೇನ ಅವಳನ್ನು ಹುರಿದುಂಬಿಸುತ್ತ ಅವಳು ಎಲ್ಲಿಯೂ ಎಡವದೆ ಪದವೀಧರೆಯಾಗಲು ಪ್ರೇರೇಪಿಸುವುದಾಗ ವಿದ್ಯಾರ್ಥಿಗಳಿಗೆ ಉತ್ತೇಜನ ಕೊಡಬಲ್ಲ ನನ್ನ ಹೊಸ ಕೌಶಲದ ಪರಿಚಯ ನನಗೇ ಆಯಿತು. ಪ್ರೀತಿ ಮತ್ತು ಪ್ರೋತ್ಸಾಹದ ನುಡಿಗಳಿಗೆ ಹದಿವಯಸ್ಸಿನ ಮಕ್ಕಳೂ ಸ್ಪಂದಿಸುತ್ತಾರೆ ಎಂಬ ಪಾಠವನ್ನು ಕಲಿತುಕೊಂಡೆ.

appanaguvudendare

ಮಗಳೆಂಬ ಅರಿವು

ಅಧಿಕಾರಿಯಾಗುವುದರೊಂದಿಗೆ ವರ್ಗಾವಣೆಯೂ ಆಯಿತು. ಆದಕಾರಣ ಎರಡನೆಯ ಮಗಳ ಬಾಲ್ಯದ ಮೊದಲ ಆರೇಳು ವರ್ಷಗಳನ್ನು ನಾನು ತಪ್ಪಿಸಿಕೊಂಡಿದ್ದೆ. ಅದು ನನ್ನಲ್ಲಿ ಅಪರಾಧೀ ಪ್ರಜ್ಞೆಯನ್ನೂ ಸೃಷ್ಟಿಸಿತ್ತು. ನಾನಿಲ್ಲದ ಸಮಯದಲ್ಲಿ ಅವಳಿಗೆ ತಂದೆಯಾಗಿ ನಿಂತವಳು ಮೊದಲ ಮಗಳು. ತಾಯಿ ಶಾಲೆಯ ಕೆಲಸಗಳನ್ನು ಮುಗಿಸಿ ಮನೆಗೆ ಬರುವ ವೇಳೆಗೆ ರಾತ್ರಿಯಾಗಿರುತ್ತಿತ್ತು. ಆ ಸಮಯದಲ್ಲಿ ತಾಯಿಯ ಪಾತ್ರವನ್ನೂ ನಿರ್ವಹಿಸಿದವಳೂ ಆ ಮಗಳೇ. ಅವಳು ಬೆಳೆಯುವ ವಯಸ್ಸಿನಲ್ಲಿ ನಾನು ನಡೆದು ಕೊಂಡ ರೀತಿ, ಅವಳಿಗೆ ಕೊಡುತ್ತಿದ್ದ ಮಾರ್ಗದರ್ಶನ, ವಿವಿಧ ಅನುಭವಗಳಿಗೆ ಗುರಿ ಮಾಡಿದ್ದು ಇವೆಲ್ಲವೂ ದೊಡ್ಡ ಮಗಳಲ್ಲಿ ಚೈತನ್ಯವನ್ನು ತುಂಬಿದ್ದವು.

ನಾವು ಮಧ್ಯವಯಸ್ಸಿಗೆ ಬರುವ ವೇಳೆಗೆ ನಮ್ಮ ಮಕ್ಕಳು ಹದಿವಯಸ್ಸಿಗೆ ಕಾಲಿಟ್ಟಿರುತ್ತಾರೆ. ಅವರು ತಮ್ಮದೇ ಆದ ಗೊಂದಲಗಳಿಂದ ನರಳುತ್ತಿರುವ ಸಮಯದಲ್ಲಿ ನಾವು ನಮ್ಮದೇ ಸಮಸ್ಯೆಗಳಲ್ಲಿ ಸಿಲುಕಿಕೊಂಡಿರುತ್ತೇವೆ. ಕಚೇರಿಯ ಸಮಸ್ಯೆಗಳು, ಸಾಮಾಜಿಕ ಸಂಬಂಧಗಳು, ಅನ್ಯರಿಂದ ನಮಗಿರುವ ನಿರೀಕ್ಷೆಗಳು, ಎದುರಾಗುವ ಭ್ರಮನಿರಸನಗಳು ಇಂತಹವು ನಮ್ಮ ಮನಸ್ಸನ್ನು ವ್ಯಘ್ರಗೊಳಿಸಿರುತ್ತವೆ. ಸುಲಭವಾಗಿ ಸಿಗುವ ಹೆಂಡತಿ ಮಕ್ಕಳು ನಮ್ಮ ಆಕ್ರೋಶವನ್ನು ಎದುರಿಸಬೇಕಾದ ಬಲಿಪಶುಗಳಾಗಬಹುದು.

ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು ಮತ್ತು ಪೋಷಕರ ನಡುವೆ ಸಂಘರ್ಷಗಳು ಸಹಜ. ನಾನೂ ಇವೆಲ್ಲವನ್ನೂ ಎದುರಿಸಿದೆ. ಆದರೆ, ಮಗಳಿಗೂ ನನಗೂ ಇದ್ದ ಪರಸ್ಪರ ಗೌರವ, ಮೌಲ್ಯಗಳು ಹಾಗೂ ನಂಬಿಕೆಗಳು ಸಂಘರ್ಷಗಳಿಂದ ನಮ್ಮ ಬಾಂಧವ್ಯಕ್ಕಾಗಲೀ, ವ್ಯಕ್ತಿತ್ವಕ್ಕಾಗಲೀ, ಧಕ್ಕೆಯಾಗದಂತೆ ಕಾಪಾಡಿದವು. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ, ಕ್ಲಿಷ್ಟ ಸಂದರ್ಭದಲ್ಲಿ ಅವರು ಎದುರಿಸುತ್ತಿದ್ದ ಸಮಸ್ಯೆಗಳಿಗೆ ಜೊತೆಯಾಗಿ ನಿಂತು, ಅವರಿಂದ ಉತ್ತಮ ಸಾಧನೆಗಳು ಹೊರಹೊಮ್ಮಿದಾಗ ನನಗೆ ಸಿಗುತ್ತಿದ್ದ ತೃಪ್ತಿ ಪ್ರಾಯಶಃ ನನ್ನ ಬದುಕಿನ ಉದ್ದೇಶವೇ ಇದು ಎಂಬ ಒಳನೋಟವನ್ನು ಕೊಟ್ಟಿತು. ನಿವೃತ್ತಿಯ ವಯಸ್ಸು ತಲುಪುವ ಮುನ್ನವೇ ನೌಕರಿಯನ್ನು ತ್ಯಜಿಸಿ, ಯುವಜನರಿಗೆ ಹುರುಪು ತುಂಬುವ, ಬೆಳಕು ಕಾಣದೆ ಕತ್ತಲಲ್ಲಿ ನರಳುತ್ತಿರುವವರಿಗೆ ಬೆಳಕು ಕಾಣುವ ತನಕ ಕೈ ಹಿಡಿದು ಜೊತೆಯಲ್ಲಿ ನಡೆಯುವುದೇ ನನ್ನ ಬದುಕಿನ ಕಾಯಕ ಎಂದು ಕಂಡುಕೊಂಡೆ.

ತಾಯಿ ಗಳಿಸಿದ ಹೆಸರು, ಅಜ್ಜಿ ಕಲಿಸಿದ ಮೌಲ್ಯಗಳ ಜೊತೆಗೆ ನನ್ನ ಬಾಲ್ಯಾನುಭವಗಳು, ನನ್ನ ಹೃದಯ ಗೊಂದಲಗಳ ಗೂಡಾದಾಗ, ಅನಾಥ ಪ್ರಜ್ಞೆ ಕಾಡಿದಾಗ ಅದರಿಂದ ಹೊರಬರಲು ಕಂಡುಕೊಂಡ ರೀತಿ- ಈ ಎಲ್ಲವೂ ನನ್ನ ಈಗಿನ ಕಾಯಕಕ್ಕೆ ಸಜ್ಜುಗೊಳಿಸುತ್ತಿದ್ದವು, ದೂರದೂರುಗಳಲ್ಲಿ ಒಂಟಿಯಾಗಿ ಖಿನ್ನತೆ ಅನುಭವಿಸುತ್ತಿದ್ದುದೂ ನನ್ನ ಗುರಿಯನ್ನು ಈ ಕಾಯಕದೆಡೆಗೆ ತಿರುಗಿಸುವ ದೈವಸಂಕಲ್ಪವೇ ಆಗಿತ್ತು ಎಂದು ನಾನು ಅರ್ಥ ಮಾಡಿಕೊಂಡೆ. ಮೊದಲ ಮಗಳ ಮದುವೆ ಆಗಿದ್ದು ಮತ್ತೊಂದು ಮುಖ್ಯ ಘಟ್ಟ. ಸಂಭ್ರಮದ ಜೊತೆಗೆ ನಾನು ಸಾಕಿದ ಮಗಳು ಬೇರೊಂದು ಕುಟುಂಬದ ಭಾಗವಾಗುತ್ತಾಳೆ ಎನ್ನುವ ಕಳವಳ. ಈ ವೇಳೆಗೆ ಎರಡನೆಯ ಮಗಳು ತನ್ನ ಜೀವನದ ಗೊಂದಲಗಳ ಸಮಯವನ್ನು ಎದುರಿಸುತ್ತಿದ್ದಳು. ಇಂತಹ ಪರಿಸ್ಥಿತಿಯಲ್ಲಿ ಅವಳಿಗೆ ಅತ್ಯಂತ ನಂಬುಗೆಯ ಗೆಳೆಯ ನಾನಾಗಿದ್ದೆ. ಅವಳಿಗೆ ಅಳಲು ಭುಜ ಕೊಟ್ಟು, ಕತ್ತಲೆ ಕಾಡಿದಾಗ ಕ್ಯಾಂಡಲ್ ಹಿಡಿದು, ಜೊತೆಗೆ ಕೈ ಹಿಡಿದು ನಡೆಯುವ ಜೊತೆಗಾರನಾಗಿ, ಪ್ರೋತ್ಸಾಹಿಸುವ ಅಪ್ಪನಾಗಿದ್ದು ಈ ಮೊದಲು ಅವಳ ಬಾಲ್ಯದಲ್ಲಿ ಜೊತೆಗಿರಲಿಲ್ಲ ಎನ್ನುವ ಅಪರಾಧಿ ಮನೋಭಾವವನ್ನು ಮರೆಸಿದವು.

appanaguvudendare

ಮೈತ್ರಿಯೊಂದಿಗೆ ಅಕ್ಕ ಜ್ಯೋತ್ಸ್ನಾ

ನಾನು ಅಜ್ಜನಾಗುವ ವೇಳೆಗೆ ಸಂತೃಪ್ತ ಎನ್ನಬಹುದಾದ ಜೀವನ ನನ್ನದಾಗಿತ್ತು. ಕಥೆಗಳ ಮೂಲಕ, ಅವನ ಜೊತೆ ಆಡಿಕೊಳ್ಳುವುದರ ಮೂಲಕ ಅವನಿಗೆ ಪರಮಾಪ್ತ ಗೆಳೆಯನಾದೆ. ಈಗ ಅವನಿಗೆ ಎಂಟು ವರ್ಷ. ನಿನ್ನ ಪರಮಾಪ್ತ ಗೆಳೆಯ ಯಾರು ಎಂದು ಅವನನ್ನು ಕೇಳಿದರೆ, ಅವನು ಹೇಳುವುದು, ‘ಅಜ್ಜ’. ಈಗಲೂ ಅವನಿಗೆ ಪ್ರತಿದಿನ ಏಳು ಕಥೆಗಳನ್ನು ಹೇಳಲೇಬೇಕು- ಇದು ಅವನು ಹಾಕಿರುವ ನಿಯಮ. ನನ್ನ ಮೊದಲ ಮಗಳಿಗೆ ಶಸ್ತ್ರಚಿಕಿತ್ಸೆಯೊಂದು ಆಗಬೇಕಾಯಿತು. ಎರಡನೆಯ ಮಗು ಆಗುವುದು ಕಷ್ಟ ಎಂದು ಹೇಳಿದ್ದರು. ಆದರೂ ಅದು ಸಾಧ್ಯವಾಗಿ ಮೊಮ್ಮಗಳು ಜನಿಸಿದಾಗ ನಮ್ಮ ಸಂಭ್ರಮವನ್ನು ಹೇಳತೀರದು. ಈ ವೇಳೆಗೆ ಎರಡನೆಯ ಮಗಳಿಗೆ ಮದುವೆ ಮಾಡುವ ಪ್ರಯತ್ನಗಳು ಮುಂದುವರೆದಿದ್ದವು. ಮೊಮ್ಮಗಳು ಹುಟ್ಟಿದ ಒಂದು ತಿಂಗಳಿನ ನಂತರ ಎರಡನೆಯ ಮಗಳಿಗೆ ಕಾಯಿಲೆಯೊಂದು ಕಾಣಿಸಿಕೊಂಡಿತು. ಸುಮಾರು 40 ಲಕ್ಷ ಜನರಲ್ಲಿ ಒಬ್ಬರಿಗೆ ಇಂತಹ ಸಮಸ್ಯೆ ಬರುವುದು ಎಂದು ತಿಳಿಯಿತು. ಅದಕ್ಕೆ ಶಸ್ತ್ರಚಿಕಿತ್ಸೆ ಆಗಬೇಕಿತ್ತು.

ಚೇತರಿಕೆ ತೋರಿಸುತ್ತಿದ್ದ ಅವಳು ಶಸ್ತ್ರಚಿಕಿತ್ಸೆಯಾದ 36 ತಾಸುಗಳ ನಂತರ ಅಸುನೀಗಿದಾಗ ದೊಡ್ಡ ಆಘಾತವೇ ಆಯಿತು. ಕನ್ಯಾದಾನ ಮಾಡಬೇಕಿದ್ದ ಕೈಗಳಿಂದ ಅಗ್ನಿಸ್ಪರ್ಶ ಮಾಡುವ ಸಂದರ್ಭ ನಿಜಕ್ಕೂ ಕಠೋರವಾದುದು. ಒಪ್ಪಿಕೊಳ್ಳದೆ ವಿಧಿಯಿಲ್ಲ. ಒಪ್ಪಿಕೊಂಡು ನಮ್ಮ ಜೀವನವನ್ನು ಮುಂದುವರೆಸಿಕೊಂಡು ಹೋಗುವುದು ಬಿಟ್ಟು ಬೇರೆ ದಾರಿಯಿರಲಿಲ್ಲ. ಆ ವೇಳೆಗೆ ಆಪ್ತರನ್ನು ಕಳೆದುಕೊಂಡಾಗ ಆಗುವ ದುಃಖದ ನಿರ್ವಹಣೆಗೆ ಹಲವರಿಗೆ ಆಪ್ತ ಸಲಹೆ ಮಾಡಿದ್ದೆ. ನಾನು ಎದುರಿಸುವ ಸಂದರ್ಭಕ್ಕೆ ಈ ರೀತಿ ನನ್ನನ್ನು ತಯಾರು ಮಾಡುವುದು ದೈವಸಂಕಲ್ಪವಾಗಿತ್ತೇ ಎನ್ನುವ ಪ್ರಶ್ನೆಯೂ ಮನಸ್ಸಿನಲ್ಲಿ ಉದ್ಭವವಾಯಿತು. ಮೊದಲ ಮಗಳಿಗೆ ಎರಡನೆಯ ಮಗುವಾಗುವುದಿಲ್ಲ ಎಂಬ ನಿರೀಕ್ಷೆಗೆ ಪ್ರತಿಯಾಗಿ ಮೊಮ್ಮಗಳು ಹುಟ್ಟಿದ 70 ದಿನಗಳಲ್ಲಿ 28ರ ವಯಸ್ಸಿನ ಎರಡನೆಯ ಮಗಳನ್ನು ಕಳೆದುಕೊಂಡು, ಹುಟ್ಟಿನ ಸಂಭ್ರಮ ಮತ್ತು ಸಾವಿನ ಸಂಕಟ ಎರಡೂ ಎದುರಾಗಿ, ಬದುಕನ್ನು ಕುರಿತಂತೆ ನಮ್ಮ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದವು.

ಹಲವಾರು ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ, ವಿವಿಧ ಆಕರಗಳನ್ನು ಶೋಧಿಸುತ್ತ, ದೇವರನ್ನು ಯಾಕೆ ಹೀಗೆ ಮಾಡಿದೆ ಎಂದು ಕೇಳುತ್ತ ವಿಯೋಗದ ನೋವಿನಲ್ಲಿ ಮುಂದುವರೆದೆವು. ಹುಟ್ಟು, ಸಾವು, ಪುನರ್ಜನ್ಮ ಕುರಿತಂತೆ ಅದ್ಭುತ ಘಟನಾವಳಿಗಳು, ವಿಶ್ಲೇಷಣೆಗಳು ನಮಗೆ ದೊರೆತವು. ಇವೆಲ್ಲವನ್ನೂ ಸೇರಿಸಿ ನಮ್ಮಂತೆಯೇ ವಿಯೋಗ ಎದುರಿಸುವವರಿಗೆ ನೆರವಾಗಲಿ ಎನ್ನುವ ಕಾರಣಕ್ಕೆ ಮೊದಲ ಮಗಳೂ ನಾನೂ ಜಂಟಿಯಾಗಿ ಇಂಗ್ಲಿಷಿನಲ್ಲಿ ಒಂದು ಪುಸ್ತಕವನ್ನು ರಚಿಸಿದೆವು; How to escape from death?: When death comes calling.

appanaguvudendare

ಜ್ಯೋತ್ಸ್ನಾ-ಮೈತ್ರಿ

ಎರಡನೇ ಮಗಳು ತನ್ನ ಭೌತಿಕ ಶರೀರವನ್ನು ತ್ಯಜಿಸಿ ಹೋಗುವ ಒಂದು ತಿಂಗಳ ಮೊದಲು ಎರಡನೆಯ ಮಗಳು ಹಲವು ರೀತಿಯ ಕಾರ್ಯಕ್ರಮಗಳ ರೂಪುರೇಷೆಯ ಬಗ್ಗೆ ನನ್ನೊಡನೆ ಚರ್ಚಿಸುತ್ತಿದ್ದಳು ಅನ್ಯರಿಗೆ ಸಲಹೆ ಕೊಡುತ್ತಿದ್ದಂತೆ, ನಾವೂ ಒಂದು ಟ್ರಸ್ಟನ್ನು ಸ್ಥಾಪಿಸಿದೆವು. ಅವಳ ಜೀವವಿಮೆಯ ಹಣವನ್ನು ಬಂಡವಾಳವಾಗಿ ಹಾಕಿ ಮೈತ್ರಿ ಫೌಂಡೇಷನ್ ಸ್ಥಾಪಿಸಿದೆವು. ಅವಳ ಜನ್ಮದಿನದಂದು 2018ರಲ್ಲಿ ಉದ್ಘಾಟನೆಯಾಯಿತು. ಬಡವಿದ್ಯಾರ್ಥಿಗಳಿಗೆ ಧನಸಹಾಯ, ಅವಳಿಗೆ ಪ್ರಿಯವಾಗಿದ್ದ ಪ್ರಕೃತಿ-ಪರಿಸರ ಕುರಿತು ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಪ್ರಾಣಿಗಳ ಕ್ಷೇಮಕ್ಕೆ ನಾವು ಮಾಡಬಹುದಾದ ಕೆಲಸಗಳು ನಮ್ಮ ವೇದಿಕೆಯ ಧ್ಯೇಯವಾದವು.

ಪ್ರೀತಿ ಎಂಬ ಅದಮ್ಯ ಚೈತನ್ಯದ ಪರಿಚಯ ಮೂಡಿಸಿ, ಪ್ರತಿಯೊಬ್ಬರೂ ತಮ್ಮನ್ನು ತಾವು ಕಂಡುಕೊಂಡು, ತಮ್ಮ ಬದುಕಿನ ಮೂಲೋದ್ದೇಶವನ್ನು ಹುಡುಕುವತ್ತ ನಿಷ್ಠೆಯಿಂದ, ಶ್ರದ್ಧೆಯಿಂದ, ಪ್ರಾಮಾಣಿಕವಾಗಿ ಪ್ರಯತ್ನ ಮಾಡುವಂತೆ ಪ್ರೇರೇಪಿಸುವ ‘ಪವರ್ ಆಫ್ ಲವ್’ ಎನ್ನುವ ಮಾಸಿಕ ಸಭೆಯನ್ನು ನಮ್ಮ ಫೌಂಡೇಷನ್ನಿನಿಂದ ಪ್ರತೀ ತಿಂಗಳೂ ಮೂರನೆಯ ಭಾನುವಾರ ಮಾಡಿಕೊಂಡು ಬಂದಿದ್ದೇವೆ. ಇದರಲ್ಲಿ ಯಾರು ಬೇಕಾದರೂ ಪಾಲ್ಗೊಳ್ಳಬಹುದು.

ದೇವರೊಡನೆ ಸಂವಾದ ನಡೆಸುವ ಪರಿಪಾಠವನ್ನು ನನ್ನ ಹದಿವಯಸ್ಸಿನಿಂದಲೂ ರೂಢಿ ಮಾಡಿಕೊಂಡಿದ್ದೇನೆ. ಮಗಳನ್ನು ಕಳೆದುಕೊಂಡಾಗ ಅವಳನ್ನು ಹೀಗೆ ಕಳೆದುಕೊಳ್ಳಲು ಕಾರಣವೇನು ಎನ್ನುವ ಪ್ರಶ್ನೆಗೆ, ‘ಅವಳ ಅಗತ್ಯ ನನಗೆ ಉಂಟಾಯಿತು. ಈ ಜನ್ಮದಲ್ಲಿ ಅವಳು ಕಲಿಯಬೇಕಾಗಿದ್ದನ್ನು ಕಲಿತಾಯಿತು. ಮುಂದಿನ ಜನ್ಮದಲ್ಲಿ ಬೇರೊಂದು ಹೊಣೆಗಾರಿಕೆ ಹೊರಲು ಅವಳು ಸಿದ್ಧವಾಗಿದ್ದಾಳೆ’ ಎನ್ನುವ ಉತ್ತರ ದೊರೆಯಿತು. ‘ನನ್ನಿಂದಾಗದ ಕೆಲಸ ಅವಳಿಂದ ಏನು ಆಗುವುದು? ಬರಲು ಸಿದ್ದವಾಗಿದ್ದ ನನ್ನನ್ನೇ ಯಾಕೆ ಕರೆದೊಯ್ಯಲಿಲ್ಲ’ ಎಂದು ಮರು ಪ್ರಶ್ನೆ ಹಾಕಿದಾಗ ‘ನಿನಗೆ ಇನ್ನೂ ಬೇರೆ ಜವಾಬ್ದಾರಿಗಳಿವೆ’ ಎಂಬ ಸಂದೇಶ ದೊರೆಯಿತು.
ಮೈತ್ರಿ ಬಯಸಿದ ಹಾಗೆ ನಮ್ಮ ಜೀವನವನ್ನು ಅನುಭವಿಸುತ್ತ, ದೈವಪ್ರೇರಣೆಯಾಗುವ ಕೆಲಸಗಳನ್ನು ಮಾಡಿಕೊಂಡು ನಮ್ಮ ಸಮಯಕ್ಕೆ ಕಾಯುವುದು ನಮ್ಮ ಮುಂದೆ ಇರುವ ಆಯ್ಕೆ ಎನ್ನುವುದನ್ನು ಅರ್ಥ ಮಾಡಿಕೊಂಡಿದ್ದೇವೆ. ಎರಡೂವರೆ ದಶಕಗಳಲ್ಲಿ ನಾನು ಸಂಪಾದಿಸಿಕೊಂಡ ಹಲವು ಮಕ್ಕಳು ನಮ್ಮ ಜೊತೆಗೆ ಶಕ್ತಿಯಾಗಿ ನಿಂತಿದ್ದಾರೆ.

ನಮ್ಮ ವ್ಯಕ್ತಿತ್ವ ಪರಿಪೂರ್ಣವಾಗುವ ತನಕ, ಪುನರಪಿ ಜನನಂ ಪುನರಪಿ ಜನನೀ ಜಠರೇ ಶಯನಂ ಅನಿವಾರ್ಯ ಜೀವ ಚಕ್ರ, ಮರಣ ದೇಹಕ್ಕೆ, ಅದಕ್ಕೆ ಇರುವ ವಿಶಿಷ್ಟ ಗುರುತಿಗೆ, ಬದುಕು ಮುಂದುವರೆಯುತ್ತದೆ, ಮುಂದುವರೆಯುತ್ತಾ ಹೋಗುತ್ತದೆ. ವಿನಾ ದೈನ್ಯೇನ ಜೀವಿತಂ ಅನಾಯಾಸೇನ ಮರಣಂ- ನಾವು ಬಯಸಬಹುದಾದ ಬದುಕು. ಅವೆರಡೂ ಅಂತೆಯೇ ಆದಲ್ಲಿ ನಾವು ಪರಮ ಪುಣ್ಯಜೀವಿಗಳು.

ಇದನ್ನೂ ಓದಿ : Humanity; ಅಪ್ಪನಾಗುವುದೆಂದರೆ: ಹುಟ್ಟಿಸಿದವರನೆಲ್ಲ ಓದಿಸುತ್ತೇನೆಂದು ಬರೆದುಕೊಟ್ಟಿದ್ದೇನೇನು? ಅಪ್ಪ ಅಪರಿಚಿತನೇ ಆಗಿಬಿಟ್ಟ

ಪರಿಚಯ: ಆರ್. ಶ್ರೀನಾಗೇಶ್ ಬರಹಗಾರರು, ಆಪ್ತಸಲಹೆಗಾರರು. ಪೋಷಕರ-ಮಕ್ಕಳ ಬಾಂಧವ್ಯ, ದಾಂಪತ್ಯ ನಿಭಾವಣೆಯ ಮಾರ್ಗದರ್ಶಿ ಮತ್ತು ತಮ್ಮತನವನ್ನು ಕಂಡುಕೊಳ್ಳಲು ನೆರವಾಗುವ ಪ್ರೇರೇಪಕ.