AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮರಣ ಹೊಂದಿದ ಎತ್ತಿಗೆ ಮನುಷ್ಯರಿಗೆ ಮಾಡುವಂತೆ ತಿಥಿ ಮಾಡಿದರು, ಎಲ್ಲಿ ಗೊತ್ತಾ?

ಹಾವೇರಿ: ಮನುಷ್ಯರು ಮೃತಪಟ್ಟಾಗ ಮೂರು ಅಥವಾ ಒಂಬತ್ತು ದಿನಕ್ಕೆ‌ ಮೃತರ ಭಾವಚಿತ್ರ ಮಾಡಿಸಿ, ಪೂಜಿಸಿ ತಿಥಿ ಮಾಡುವುದು ಸಾಮಾನ್ಯ. ಆದರೆ ಪ್ರೀತಿಯಿಂದ ಸಾಕಿದ್ದ ಮತ್ತು ಭಾರ ಎಳೆಯುವ ಸ್ಪರ್ಧೆಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಎತ್ತು ಮೃತಪಟ್ಟಿದ್ದಕ್ಕೆ ಎತ್ತಿನ ಮನೆಯವರು ಎತ್ತಿಗೆ ತಿಥಿ ಮಾಡಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಕುರುಬಗೇರಿ ನಿವಾಸಿ ನಾಗಪ್ಪ ಗೂಳಪ್ಪನವರ ಎಂಬುವರೆ ಎತ್ತಿನ ತಿಥಿ ಮಾಡಿದ‌ ಮನೆಯವರು. ಕೃಷಿ ಕುಟುಂಬದ ನಾಗಪ್ಪ ಅವರ ಮನೆಯಲ್ಲಿ ಕೆಲವು ವರ್ಷಗಳಿಂದ ಎರಡು ಎತ್ತುಗಳಿವೆ. ಎರಡೂ ಎತ್ತುಗಳು […]

ಮರಣ ಹೊಂದಿದ ಎತ್ತಿಗೆ ಮನುಷ್ಯರಿಗೆ ಮಾಡುವಂತೆ ತಿಥಿ ಮಾಡಿದರು, ಎಲ್ಲಿ ಗೊತ್ತಾ?
Follow us
ಸಾಧು ಶ್ರೀನಾಥ್​
|

Updated on: Sep 11, 2020 | 5:18 PM

ಹಾವೇರಿ: ಮನುಷ್ಯರು ಮೃತಪಟ್ಟಾಗ ಮೂರು ಅಥವಾ ಒಂಬತ್ತು ದಿನಕ್ಕೆ‌ ಮೃತರ ಭಾವಚಿತ್ರ ಮಾಡಿಸಿ, ಪೂಜಿಸಿ ತಿಥಿ ಮಾಡುವುದು ಸಾಮಾನ್ಯ. ಆದರೆ ಪ್ರೀತಿಯಿಂದ ಸಾಕಿದ್ದ ಮತ್ತು ಭಾರ ಎಳೆಯುವ ಸ್ಪರ್ಧೆಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಎತ್ತು ಮೃತಪಟ್ಟಿದ್ದಕ್ಕೆ ಎತ್ತಿನ ಮನೆಯವರು ಎತ್ತಿಗೆ ತಿಥಿ ಮಾಡಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಕುರುಬಗೇರಿ ನಿವಾಸಿ ನಾಗಪ್ಪ ಗೂಳಪ್ಪನವರ ಎಂಬುವರೆ ಎತ್ತಿನ ತಿಥಿ ಮಾಡಿದ‌ ಮನೆಯವರು.

ಕೃಷಿ ಕುಟುಂಬದ ನಾಗಪ್ಪ ಅವರ ಮನೆಯಲ್ಲಿ ಕೆಲವು ವರ್ಷಗಳಿಂದ ಎರಡು ಎತ್ತುಗಳಿವೆ. ಎರಡೂ ಎತ್ತುಗಳು ಕೃಷಿ ಕೆಲಸದ ಜೊತೆಗೆ ಕೊಬ್ಬರಿ ಹೋರಿ ಓಟ ಮತ್ತು ಭಾರ ಎಳೆಯುವುದರಲ್ಲಿ ತಮ್ಮದೇಯಾದ ಹೆಸರು ಮಾಡಿವೆ. ಅದರಲ್ಲಿ ಭಾರ ಎಳೆಯುವ ಸ್ಪರ್ಧೆಗಳಲ್ಲಿ ಹೆಸರುವಾಸಿಯಾಗಿದ್ದ ಹುಚ್ಚ ಹೆಸರಿನ ಎತ್ತು ಕಳೆದ ಒಂಬತ್ತು ದಿನಗಳ ಹಿಂದೆ ಮೃತಪಟ್ಟಿತ್ತು. ಮನೆ ಮಗನಂತಿದ್ದ ಎತ್ತು ಮೃತಪಟ್ಟು ಒಂಬತ್ತು ದಿನಗಳಿಗೆ ಮನೆಯಲ್ಲಿ ಮೃತಪಟ್ಟ ಮನುಷ್ಯರಿಗೆ ಮಾಡುವಂತೆ ತಿಥಿ ಕಾರ್ಯ ಮಾಡಿದರು.

ಭಾರ ಎಳೆಯುವುದರಲ್ಲಿ ಸಖತ್ ಫೇಮಸ್.. ಕಳೆದ ಕೆಲವು ವರ್ಷಗಳಿಂದ ರೈತ ನಾಗಪ್ಪ ಗೂಳಣ್ಣವರ ಮನೆಯಲ್ಲಿದ್ದ ಎತ್ತು ಜಿಲ್ಲೆಯಲ್ಲಿ ಎಲ್ಲಿಯೇ ಭಾರ ಎಳೆಯುವ ಸ್ಪರ್ಧೆಗಳು ಇದ್ದರೆ ಅಲ್ಲಿ ಹಾಜರ್ ಇರುತ್ತಿತ್ತು. ಒಂದು ಟನ್ ನಿಂದ ಹನ್ನೊಂದು ಟನ್ ವರೆಗೆ ಭಾರ ಎಳೆಯುತ್ತಿತ್ತು. ರಾಣೆಬೆನ್ನೂರು, ಹಲಗೇರಿ ಸೇರಿದಂತೆ ಭಾಗವಹಿಸಿದ ಬಹುತೇಕ ಭಾರ ಎಳೆಯುವ ಸ್ಪರ್ಧೆಗಳಲ್ಲಿ ಹುಚ್ಚ ಹೆಸರಿನ ಮೃತ ಎತ್ತು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಪ್ರಶಸ್ತಿಗಳ ಜೊತೆಗೆ ಎತ್ತು ಮನೆಯವರಿಗೆ ಅದೃಷ್ಟದಂತೆ ಇತ್ತು.

ಮೃತ ಮನುಷ್ಯರಿಗೆ ಮಾಡುವಂತೆ ತಿಥಿ ಕಾರ್ಯ.. ಮನುಷ್ಯರು ಸತ್ತ ನಂತರ ಮೃತನ ಮನೆಯವರು ಮೂರು ಅಥವಾ ಒಂಬತ್ತು ದಿನಕ್ಕೆ ತಿಥಿ ಕಾರ್ಯ ನೆರವೇರಿಸುತ್ತಾರೆ. ಅದರಂತೆ ಮೃತ ಎತ್ತಿನ ಮನೆಯವರು ಎತ್ತಿನ ಭಾವಚಿತ್ರ ಮಾಡಿಸಿ, ಮಂಟಪ‌ ಕಟ್ಟಿ, ಮಂಟಪದಲ್ಲಿ ಎತ್ತಿನ ಮುಂದೆ ತರಹೇವಾರಿ ಹಣ್ಣುಗಳು, ಬಗೆಬಗೆಯ ಅಡುಗೆ ತಯಾರಿಸಿ ಸ್ವಾಮಿಯನ್ನು ಕರೆಯಿಸಿ ಶಾಸ್ತ್ರೋಕ್ತವಾಗಿ ಮಂತ್ರ ಹಾಡುಗಳ ಮೂಲಕ ಪೂಜೆ ಸಲ್ಲಿಸಿದರು.

ಮನೆಯವರಿಗೆಲ್ಲ ಕೈಗೆ ಕಂಕಣ ಕಟ್ಟಿ ಮಂಗಳಾರತಿ ಬೆಳಗಿ ಪೂಜೆ ಸಲ್ಲಿಸಲಾಯಿತು. ಕೇವಲ ಮೃತ ಎತ್ತಿನ ಮನೆಯವರು ಮಾತ್ರವಲ್ಲದೆ ಬೇರೆ ಬೇರೆ ಊರುಗಳಿಂದ ಬಂದಿದ್ದ ಮೃತ ಎತ್ತಿನ ಅಭಿಮಾನಿಗಳು ಸಹ ಎತ್ತಿನ ತಿಥಿ ಕಾರ್ಯದಲ್ಲಿ ಭಾಗವಹಿಸಿದ್ದರು.

ತಿಥಿಗೆ ಬಂದವರಿಗೆ ಭೋಜನ.. ಮನುಷ್ಯರು ಮೃತಪಟ್ಟು ಅವರ ತಿಥಿ ಕಾರ್ಯಕ್ಕೆ ಬರುವ ಜನರಿಗೆ ಮೃತನ ಮನೆಯವರು ಊಟ ಹಾಕುತ್ತಾರೆ. ಅದರಂತೆ ಹುಚ್ಚ ಹೆಸರಿನ ಮೃತ ಎತ್ತಿನ ಮನೆಯವರು ಎತ್ತಿನ ತಿಥಿ ಕಾರ್ಯಕ್ಕೆ ಬಂದವರಿಗೆ ಗೋದಿ ಹುಗ್ಗಿ, ಅಕ್ಕಿ ಹುಗ್ಗಿ, ಬದನೆಕಾಯಿ ಪಲ್ಯ, ಕೋಸಂಬರಿ, ಅನ್ನ ಮತ್ತು ಸಾಂಬಾರಿನ ಊಟದ ವ್ಯವಸ್ಥೆ ಮಾಡಿದ್ದರು. ಎತ್ತಿನ ತಿಥಿ ಕಾರ್ಯಕ್ಕೆ ಬಂದವರು ತಿಥಿ ಊಟ ಸವಿದು ಮೃತ ಎತ್ತಿನ ಗುಣಗಾನ ಮಾಡುತ್ತಾ ಮನೆಯತ್ತ ಹೆಜ್ಜೆ ಹಾಕಿದರು. -ಪ್ರಭುಗೌಡ.ಎನ್.ಪಾಟೀಲ