ಶಿವಮೊಗ್ಗ: ಚಲಿಸುವ ಕಾರಿನಿಂದ ಐದು ವರ್ಷದ ಹೆಣ್ಣು ಮಗು ಕೆಳಗೆ ಬಿದ್ದ ಘಟನೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟ್ ಬಳಿ ನಡೆದಿದೆ. ನಿನ್ನೆ ರಾತ್ರಿ ಸುಮಾರು 9.30ರ ಸಮಯದಲ್ಲಿ ಕಾರಿನಲ್ಲಿ ಮಂಗಳೂರಿನಿಂದ ಚಿಕ್ಕಮಗಳೂರಿನ ಎನ್.ಆರ್.ಪುರಕ್ಕೆ ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಕಾರು ಚಲಾಯಿಸುವ ವೇಳೆ ಪೋಷಕರು ನಿದ್ರೆಗೆ ಜಾರಿದ್ದಾರೆ. ಈ ವೇಳೆ ಅನಿರೀಕ್ಷಿತವಾಗಿ ಕಾರ್ ಡೋರ್ ತೆರೆದುಕೊಂಡಿದೆ. ಈ ಪರಿಣಾಮ ಐದು ವರ್ಷದ ಹೆಣ್ಣು ಮಗು ಆನ್ವಿ ಕಾರ್ನಿಂದ ಕೆಳಕ್ಕೆ ಬಿದ್ದಿದ್ದಾಳೆ. ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಮತ್ತೊಬ್ಬ ಕಾರ್ ಚಾಲಕ ರಸ್ತೆ ಬದಿಯಲ್ಲಿ ಅಳುತ್ತಿರುವ ಮಗುವನ್ನು ಕಂಡು ಆಗುಂಬೆ ಪೊಲೀಸರಿಗೆ ಒಪ್ಪಿಸಿದ್ದಾನೆ.
ಮಗುವಿಲ್ಲದೆ ಕೊಪ್ಪದ ವರೆಗೆ ಪ್ರಯಾಣಿಸಿದ ಪೋಷಕರು, ಬಳಿಕ ಮಗು ಇಲ್ಲದನ್ನು ಗಮನಿಸಿ ಬಂದ ದಾರಿಯಲ್ಲೇ ವಾಪಸ್ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಆಗುಂಬೆ ಚೆಕ್ ಪೋಸ್ಟ್ ನಲ್ಲಿ ವಿಚಾರಿಸಿದ್ದಾರೆ. ನಂತರ ಮಗು ಆಗುಂಬೆ ಪೊಲೀಸ್ ಠಾಣೆಯಲ್ಲಿ ಸುರಕ್ಷಿತವಾಗಿ ಇರುವುದು ಗೊತ್ತಾಗಿದೆ. ಬಳಿಕ ಮಗುವನ್ನು ಠಾಣೆಯಿಂದ ಪಡೆದು ತೆರಳಿದ್ದಾರೆ.
Published On - 4:10 pm, Fri, 31 January 20