ನಾನು ಸಿಎಂ ಆಗಿದ್ದ ಜಾರಿ ಮಾಡಿದ್ದ ಯೋಜನೆಗಳು ಈಗ ನಿಲ್ಲುತ್ತಿವೆ: ಸಿದ್ದರಾಮಯ್ಯ ವಿಷಾದ
Siddaramaiah: ಮುಖ್ಯಮಂತ್ರಿಯಾಗಿದ್ದಾಗ ತಿಂಗಳಿಗೆ 7 ಕೆಜಿ ಅಕ್ಕಿ ಕೊಡುತ್ತಿದ್ದೆ. ನಾನೇನು ನಮ್ಮ ಅಪ್ಪನ ಮನೆಯಿಂದ ದುಡ್ಡು ತಂದಿದ್ನಾ? ಈಗ ಯಡಿಯೂರಪ್ಪ ಎಲ್ಲಾ ಕಡಿಮೆ ಮಾಡಿದ್ದಾನೆ ಎಂದು ಏಕವಚನದಲ್ಲೇ ಮಾತನಾಡಿದರು.
ಮಂಡ್ಯ: ಯಾವ ದೇವರೂ ದೇವಾಲಯ ಕಟ್ಟಿ ಎಂದು ಹೇಳಿಲ್ಲ. ಗುಡಿ ಕಟ್ಟಿ, ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಮಾಡುವವರು ನಾವು. ಬಹಳ ದೇವರುಗಳಿದ್ದಾರೆ ಎನ್ನುವುದು ನಮ್ಮ ಕಲ್ಪನೆ ಮಾತ್ರ. ವಾಸ್ತವವಾಗಿ ದೇವರು ಇರುವುದು ಒಬ್ಬನೇ. ಅವನನ್ನೇ ನಾವು ಹಲವು ಹೆಸರುಗಳಿಂದ ಕರೆಯುತ್ತೇವೆ. ಅದಕ್ಕೇ ದೇವನೊಬ್ಬ ನಾಮ ಹಲವು ಎನ್ನುವುದು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವವನೇ ದೇವರು. ಇನ್ನೊಬ್ಬರಿಗೆ ಕೆಡಕು ಬಯಸದಿರುವವನೇ ದೇವರು ಎಂದು ಕಾಂಗ್ರೆಸ್ ಶಾಸಕ ಸಿದ್ದರಾಮಯ್ಯ ಹೇಳಿದರು. ಇದನ್ನು ಕೇಳಿದ ಜನರು ‘ಹೌದು ಹುಲಿಯಾ’ ಎಂದು ಕೂಗಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಯಾವ ರೂಪದಲ್ಲಾದರೂ ದೇವರನ್ನ ಕಾಣಬಹುದು. ಎಲ್ಲವೂ ದೇವರಿಗೆ ಪ್ರಿಯವಾಗುತ್ತದೆ. ದೇವಾಲಯಕ್ಕೆ ಹೋಗಿ ನನಗೆ ಮತ್ತು ನನ್ನ ಹೆಂಡತಿಗೆ ಒಳಿತು ಮಾಡು ಎಂದರೆ ಮಾಡುವುದಿಲ್ಲ. ಸಮಾಜಕ್ಕೆ ಒಳಿತು ಮಾಡು ಎಂದರೆ ಮಾತ್ರ ದೇವರು ನಮಗೂ ಒಳ್ಳೆಯದು ಮಾಡುತ್ತಾನೆ. ಸಮಾಜ ನನಗೇನು ಮಾಡಿದೆ ಎನ್ನಬಾರದು, ಸಮಾಜಕ್ಕೆ ನಾನೇನು ಮಾಡಿದೆ ಎಂದು ಕೇಳಿಕೊಳ್ಳಬೇಕು ಎಂದರು.
ಷರತ್ತು ಹಾಕಿರಲಿಲ್ಲ ರೈತರ ಸಾಲಮನ್ನಾ ಮಾಡಲು ನಾನು ಷರತ್ತು ಹಾಕಿರಲಿಲ್ಲ. ಆದರೂ ನಾನು ಕಂಡೀಷನ್ ಹಾಕಿದ್ದೆ ಎಂದು ಹೇಳಿದ್ದಾರೆ ಎಂದು ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು. ನಾನು ಸಿಎಂ ಆಗಿದ್ದಾಗ ನರೇಂದ್ರ ಸ್ವಾಮಿ ಶಾಸಕರಾಗಿದ್ದರು. ಮಳವಳ್ಳಿ ಸೇವೆ ಮಾಡಲು ಯಾವುದೇ ಅಭಿವೃದ್ಧಿ ಕಾಮಗಾರಿ ಮಂಜೂರು ಮಾಡುತ್ತೇನೆ ಎಂದು ನರೇಂದ್ರ ಸ್ವಾಮಿಗೆ ಹೇಳಿದ್ದೆ ಎಂದು ಸಿದ್ದರಾಮಯ್ಯ ನೆನಪಿಸಿಕೊಂಡರು.
ಹೊಟ್ಟೆ ಉರಿಯಿಂದ ಸೋಲಿಸಿದರು ನಾನು ಎರಡನೇ ಬಾರಿಗೆ ಸಿಎಂ ಆಗಬಾರದೆಂಬ ಕಾರಣಕ್ಕೆ ಹೊಟ್ಟೆ ಉರಿಯಿಂದ ನನ್ನನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿದರು. ಮುಖ್ಯಮಂತ್ರಿಯಾದಾಗ 7 ಕೆಜಿ ಅಕ್ಕಿ ಕೊಡುತ್ತಿದ್ದೆ. ನಾನೇನು ನಮ್ಮ ಅಪ್ಪನ ಮನೆಯಿಂದ ದುಡ್ಡು ತಂದಿದ್ನಾ? ಈಗ ಯಡಿಯೂರಪ್ಪ ಎಲ್ಲಾ ಕಡಿಮೆ ಮಾಡಿದ್ದಾನೆ ಎಂದು ಏಕವಚನದಲ್ಲೇ ಮಾತನಾಡಿದರು.
ನಾನು ಸಿಎಂ ಆಗಿದ್ದಾಗ ತಂದಿದ್ದ ಯೋಜನೆಗಳನ್ನು ಯಡಿಯೂರಪ್ಪ ನಿಲ್ಲಿಸುತ್ತಿದ್ದಾರೆ. ರೈತನ ಮಗ ಎಂದು ಹೇಳುವುದು. ಪ್ರಮಾಣ ವಚನ ಸ್ವೀಕರಿಸುವಾಗ ಹಸಿರು ಟವಲ್ ಹಾಕಿಕೊಂಡು ಟವಲ್ಗೆ ಅವಮಾನ ಮಾಡುವುದು ಅವರ ರೀತಿ. ನಾನು ಸಿಎಂ ಆಗಿದ್ದಾಗ ಸಾಲ ಮನ್ನಾ ಮಾಡಿದ್ದೆ. ಯಡಿಯೂರಪ್ಪ ಮಾತ್ರ ಸಾಲ ಮನ್ನಾ ಸಾಧ್ಯವಿಲ್ಲ ಎನ್ನುತ್ತಾರೆ ಎಂದು ಹರಿಹಾಯ್ದುರು.
ಇದನ್ನೂ ಓದಿ: HD Kumaraswamy: ಸಿದ್ದರಾಮಯ್ಯಗೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು
Published On - 5:51 pm, Mon, 15 February 21