ಮೈಸೂರು: ಪೂಜಾರಿಯೊಬ್ಬ ಮನೆಯಲ್ಲಿ ಪೂಜೆ ಮಾಡುವ ನೆಪದಲ್ಲಿ ಚಿನ್ನ ಕದ್ದುಹೋಗಿದ್ದ ಪ್ರಕರಣ ಆರು ತಿಂಗಳ ನಂತರ ಮನೆಯವರ ಅರಿವಿಗೆ ಬಂದಿದೆ.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಉಯಿಗೌಡನಹಳ್ಳಿಯ ನಿಂಗಪ್ಪ ಎಂಬುವವರ ಮನೆಯಲ್ಲಿ ಕಳೆದ ಆರು ತಿಂಗಳ ಹಿಂದೆ ಕೆ.ಆರ್. ನಗರ ತಾಲೂಕಿನ ಸಾತಿಗ್ರಾಮದ ಚೌಡೇಶ್ವರಿ ದೇವಾಲಯದ ಪೂಜಾರಿ ಮನು ಎಂಬಾತನಿಂದ ಮನೆಯಲ್ಲಿ ಪೂಜೆ ಮಾಡಿಸಿದ್ದಾರೆ. ಈ ವೇಳೆ ಮನೆಯ ವಾಸ್ತು ಸರಿ ಮಾಡುತ್ತೇನೆ ಅಂತ ಮನೆಯ ದಾರ ಹಾಗೂ ಕುಡಿಕೆಗಳನ್ನ ಕಟ್ಟಿದ್ದಾನೆ.
ಈ ವೇಳೆ ನಿಂಗಪ್ಪ ತಮ್ಮ ಸಂಬಂಧಿಕರಿಗೂ ಪೂಜೆ ಮಾಡಿಸುವ ವಿಚಾರವನ್ನ ತಿಳಿಸಿ ಪೂಜೆಗೂ ಅವರನ್ನು ಕರೆದಿದ್ದಾನೆ. ಈ ವೇಳೆ ಪೂಜೆಯಲ್ಲಿ ಭಾಗಿಯಾಗಿರುವವರು ತಮ್ಮ ಬಳಿ ಇರುವ ಚಿನ್ನವನ್ನ ಪೂಜೆಗೆ ಇಟ್ಟರೆ ಒಳಿತಾಗುತ್ತೆ ಎಂದು ಪೂಜಾರಿ ತಿಳಿಸಿದ್ದಾನೆ. ಅದರಂತೆ ಪೂಜೆಗೆ ತಮ್ಮ ಬಳಿ ಇದ್ದ ಅರ್ಧ ಕೆ.ಜಿ. ಯಷ್ಟು ಚಿನ್ನವನ್ನ ಇಟ್ಟಿದ್ದಾರೆ. ಪೂಜೆ ಮುಗಿದ ನಂತರ ಅದನ್ನು ಬೀರುವಿನಲ್ಲಿ ಆರು ತಿಂಗಳ ಕಾಲ ಇಟ್ಟು ಆಯುಧ ಪೂಜೆ ಬಳಿಕ ತೆರೆದು ನೋಡಬೇಕು, ಇಲ್ಲದಿದ್ದರೆ ಕೆಡಕಾಗುತ್ತೆ ಎಂದು ಹೇಳಿದ್ದಾನೆ.
ಅದರಂತೆ ಆರು ತಿಂಗಳ ನಂತರ ತೆರೆದು ನೋಡಿದಾಗ ಕಳ್ಳತನವಾಗಿರೋದು ಬೆಳಕಿಗೆ ಬಂದಿದೆ. ನಂತರ ಈ ವಿಚಾರವನ್ನ ಬಿಳಿಕೆರೆ ಪೊಲೀಸರಿಗೆ ತಿಳಿಸಿದಾಗ ಪೂಜಾರಿಯನ್ನ ಕರೆದು ವಿಚಾರಿಸಿದಾಗ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೂಜೆ ಮುಗಿದ ಬಳಿಕ ಬಟ್ಟೆ ಬದಲಿಸುವ ನೆಪದಲ್ಲಿ ಕೋಣೆಗೆ ನುಗ್ಗಿ ಬೀರುವಿನಲ್ಲಿದ್ದ ಚಿನ್ನವನ್ನ ಕದ್ದಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.