
ಬೆಳಗಾವಿ: ಮಗಳನ್ನು ನೋಡಲು ಬಂದಿದ್ದ ಮಾವನನ್ನು ಅಳಿಯ ಕೊಲೆ ಮಾಡಿರುವ ಭೀಕರ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಟ್ನಾಳ ಗ್ರಾಮದಲ್ಲಿ ನಡೆದಿದೆ. ಸಿದ್ದಪ್ಪ ಖೋತ(58) ಹತ್ಯೆಯಾದ ವ್ಯಕ್ತಿ. ಬಾಳೇಶ್ ಬೋರಣ್ಣವರ(38) ಮಾವನನ್ನು ಹತ್ಯೆಗೈದ ಆರೋಪಿ.
ಹಬ್ಬದ ವಿಶೇಷ ಅಡುಗೆ ತೆಗೆದುಕೊಂಡು ಮಗಳ ಮನೆಗೆ ಬಂದಿದ್ದ ತಂದೆಗೆ ಆಘಾತ ಕಾದಿತ್ತು. ಮಕ್ಕಳಾಗಲಿಲ್ಲವೆಂದು ಹೆಂಡತಿ ಜತೆ ಅಳಿಯ ಜಗಳವಾಡುತ್ತಿದ್ದ. ಪತಿ-ಪತ್ನಿ ಜಗಳ ವಿಕೋಪಕ್ಕೆ ಹೋದಾಗ ಅದನ್ನು ತಡೆಯಲು ಸಿದ್ದಪ್ಪನ ಮಧ್ಯೆ ಪ್ರವೇಶಿಸಿದ್ದರು. ಈ ವೇಳೆ ಅಳಿಯ ಬಾಳೇಶ್ ಬೋರಣ್ಣವರ ತಮ್ಮ ಮಾವನ ತಲೆಗೆ ಪೈಪ್ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಮಾವ ಸಿದ್ದಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.