ಅಬ್ಬಬ್ಬಾ! ಕೂಲ್ ಕೂಲ್ ಸಿಟಿ ಬೆಂಗಳೂರಿನ ತಾಪಮಾನ 40 ಡಿಗ್ರಿ ತಲುಪಿತಾ! ಮುಂದಿನ ದಿನಗಳು ಇನ್ನಷ್ಟು ಭೀಕರ

ಬೇಸಿಗೆ ಶುರುವಾದ್ರೆ ಸಾಕು ಕೂತಲ್ಲಿಯೇ ಕೊತಕೊತ, ನಿಂತಲ್ಲಿ ನಿಲ್ಲಲಾಗದು. ಬೇಸಿಗೆಯ ಬೇಗೆಗೆ ಇಡೀ ಮೈ ಬೆಂದು ಬೆವರಾಗಿ ಹರಿದಿರುತ್ತದೆ. ಅದರಲ್ಲೂ ಕಾಂಕ್ರೀಟ್ ಕಾಡಾಗಿರುವ ಬೆಂಗಳೂರಿನಲ್ಲಿ ಕಳೆದ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ದಾಖಲೆ ಮಟ್ಟದ ತಾಪಮಾನ ದಾಖಲಾಗಿದೆ. ಹಾಗಂತ ಬೇಸಿಗೆ ಇನ್ನೂ ಮುಗಿದಿಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಾಡುವ ಎಲ್ಲ ಲಕ್ಷಣಗಳೂ ಇವೆ. ಬೇಸಿಗೆಯ ಬಿಸಿ ಹೆಚ್ಚಳದ ಸಮ್ಮುಖದಲ್ಲಿ ಮೊದಲು ಆರೋಗ್ಯದ ಕಡೆ ಗಮನ ಕೊಡಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಅಬ್ಬಬ್ಬಾ! ಕೂಲ್ ಕೂಲ್ ಸಿಟಿ ಬೆಂಗಳೂರಿನ ತಾಪಮಾನ 40 ಡಿಗ್ರಿ ತಲುಪಿತಾ! ಮುಂದಿನ ದಿನಗಳು ಇನ್ನಷ್ಟು ಭೀಕರ
ಸಾಂದರ್ಭಿಕ ಚಿತ್ರ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on:Apr 30, 2024 | 8:33 PM

ಸಿಲಿಕಾನ್ ಸಿಟಿ ಬೆಂಗಳೂರು ದಿನ ಕಳೆದಂತೆಲ್ಲ ಕಾದ ಹಂಚಿನಂತೆ ಸುಡುತ್ತಿದೆ. ಆಚೆ ಕಾಲಿಟ್ಟರೆ ಸಾಕು ಸೂರ್ಯ ನೆತ್ತಿ ಸುಡುತ್ತಿದ್ದಾನೆ. ಬಿಸಿ ಹಬೆ ಜನರನ್ನು ಎಲ್ಲೂ ಓಡಾಡದಂತೆ ಮಾಡಿದೆ. ಕಳೆದ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿಯೂ ದಾಖಲೆ ಮಟ್ಟದ ತಾಪಮಾನವಿತ್ತು. ಕಳೆದ ಏಪ್ರಿಲ್ 24ರ ಬುಧವಾರ ಬೆಂಗಳೂರಿನಲ್ಲಿ 38 ಡಿಗ್ರಿ ಸೆಲ್ಶಿಯಸ್ ಉಷ್ಠಾಂಶ ದಾಖಲಾಗಿತ್ತು. ಏಪ್ರಿಲ್ 28ರ ಭಾನುವಾರ ಬೆಂಗಳೂರು ತಾಪಮಾನ ಮತ್ತೊಂದು ದಾಖಲೆಯ ಮಟ್ಟ ತಲುಪಿದೆ. ಕಳೆದ ದಶಕದಲ್ಲೇ ಅತಿ ಹೆಚ್ಚು ಬಿಸಿಲಿನ ದಿನ ಎನ್ನುವ ದಾಖಲೆ ಬರೆದಿದೆ. ಸಾಮಾನ್ಯವಾಗಿ ಕೂಲ್ ಕೂಲ್​ ಆಗಿಯೆ ಇರುವ ಬೆಂಗಳೂರು ಮಹಾನಗರವೇ ಹೀಗಿರುವಾಗ ರಾಜ್ಯದ ಇತರ ಜಿಲ್ಲೆಗಳಲ್ಲಿಯಂತೂ ತಾಪಮಾನ ಏರುಗತಿಯಲ್ಲಿಯೇ ಇದ್ದು, ಬಿಸಿಲ ಬೇಗೆಗೆ ಜನರು ತತ್ತರಿಸಿ ಹೋಗುತ್ತಿದ್ದಾರೆ.

ಏಪ್ರಿಲ್‌ 28ರ ಭಾನುವಾರ ನಗರದಲ್ಲಿ ದಾಖಲೆಯ 38.5 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದ್ದು, ಇದು ರಾಜಧಾನಿಯಲ್ಲಿ ಏಪ್ರಿಲ್‌ ತಿಂಗಳಲ್ಲಿ ದಾಖಲಾದ ಎರಡನೇ ಅತಿ ಹೆಚ್ಚು ಹಾಗೂ ಒಟ್ಟಾರೆ ಮೂರನೇ ಅತಿ ಹೆಚ್ಚು ತಾಪಮಾನವಾಗಿದೆ. 2016 ಏಪ್ರಿಲ್‌ 25 ರಂದು ನಗರದಲ್ಲಿ 39.2 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. ಇದಕ್ಕೂ ಪೂರ್ವದಲ್ಲಿ 1931 ಮೇ 22 ರಂದು 38.9 ಹಾಗೂ 1931 ರ ಏಪ್ರಿಲ್‌ 30ರಂದು 38.3 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು.

ಕಳೆದ ಐದು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ ದಾಖಲಾಗುತ್ತಲೇ ಇದೆ. ಮುಂದಿನ ಎರಡು-ಮೂರು ದಿನಗಳಲ್ಲಿ ತಾಪಮಾನ 39 ಡಿಗ್ರಿಗೆ ಏರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಮಾರ್ಚ್ 29 ರಂದು 36.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಿಸುವ ಮೂಲಕ ಬೆಂಗಳೂರು ಹವಾಮಾನ ಹಳೆ ದಾಖಲೆಗಳನ್ನು ಮುರಿದು ಹೊಸ ದಾಖಲೆಯನ್ನು ಬರೆಯುತ್ತಿದೆ. ಹಾಗೂ ಕಳೆದ 2016ರಿಂದ ಈ ವರ್ಷದ ಏಪ್ರಿಲ್ 2 ರಂದು 37.2 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ದಾಖಲಿಸುವ ಮೂಲಕ ಕಳೆದ 5 ವರ್ಷದ ಅತ್ಯಂತ ಬಿಸಿಯಾದ ದಿನವನ್ನು ದಾಖಲಿಸುವ ಮೂಲಕ ಹೊಸ ದಾಖಲೆ ಬರೆದಿದೆ.

2016 ಮತ್ತು 2024 ರ ನಡುವೆ ಮಾರ್ಚ್ 1 ರಿಂದ ಏಪ್ರಿಲ್ 21 ರವರೆಗಿನ ತುಲನಾತ್ಮಕ ಮಾಹಿತಿಯ ಪ್ರಚಾರ, ಈ ವರ್ಷ ಸರಾಸರಿ ತಾಪಮಾನದಲ್ಲಿ ಸ್ವಲ್ಪ ಹೆಚ್ಚಳ ಕಂಡು ಬಂದಿದೆ. 2016 ರ ಏಪ್ರಿಲ್ 21ರಿಂದ 49 ದಿನಗಳ ನಡುವೆ 34 ಡಿಗ್ರಿ ಸೆಲ್ಸಿಯಸ್ ಮತ್ತು ಅದಕ್ಕಿಂತ ಹೆಚ್ಚಿನ ತಾಪಮಾನ ಕಂಡು ಬಂದಿತ್ತು. ಆದರೆ 2024ರಲ್ಲಿ 51 ದಿನಗಳ ಕಾಲ ಇಂತಹ ತಾಪಮಾನ ಕಂಡು ಬಂದಿದೆ. ಅಂತೆಯೇ, 2016 ರಲ್ಲಿ, ಏಪ್ರಿಲ್ 21 ರಿಂದ 33 ದಿನಗಳ ಕಾಲ 35 ಡಿಗ್ರಿ ಸೆಲ್ಸಿಯಸ್ ಮತ್ತು ಅದಕ್ಕಿಂತ ಹೆಚ್ಚಿನ ತಾಪಮಾನವಿತ್ತು. ಆದರೆ 2024 ರಲ್ಲಿ 29 ದಿನಗಳು ಬೆಚ್ಚನೆಯ ತಾಪಮಾನ ಹೊಂದಿವೆ. 2016 ರ ಬೇಸಿಗೆಯನ್ನು ಹೋಲಿಕೆ ಮಾಡಿದರೆ ಈ ವರ್ಷದ ತಾಪಮಾನ ಏರಿಕೆ ಕಂಡಿದೆ.

ಬೆಂಗಳೂರಿನ ಐಎಂಡಿ ಹಿರಿಯ ವಿಜ್ಞಾನಿ ಜಿ.ಎಸ್. ಪಾಟೀಲ್, ಈ ಹಿಂದೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏಪ್ರಿಲ್ ಮೊದಲ ವಾರದಲ್ಲಿ 38.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಆದರೆ 2016 ರಿಂದ 2024ರ ಏಪ್ರಿಲ್ 28ರಂದು ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ 38 ಡಿಗ್ರಿ ಮತ್ತು ಕೆಐಎಯಲ್ಲಿ 38.1 ಡಿಗ್ರಿ ತಾಪಮಾನ ದಾಖಲಾಗಿದೆ ಎಂದರು.

ಕಳೆದ ಐದು ವರ್ಷಗಳಲ್ಲಿ ಅತ್ಯಂತ ಬಿಸಿಲಿನ ದಿನ

ಮಾಹಿತಿಯ ಪ್ರಕಾರ, 2024ರ ಮಾರ್ಚ್ ತಿಂಗಳಲ್ಲಿ ದಾಖಲಾದ ಗರಿಷ್ಠ ತಾಪಮಾನವು 36.6 ಡಿಗ್ರಿ ಸೆಲ್ಸಿಯಸ್. 2020ರ ಮಾರ್ಚ್​ನಲ್ಲಿ 36.1 ಡಿಗ್ರಿ ಗರಿಷ್ಠ ತಾಪಮಾನ ದಾಖಲಾಗಿತ್ತು. 2020ರ ಮಾರ್ಚ್​ಗೆ ಹೋಲಿಸಿದರೆ ಈ ವರ್ಷದ ಮಾರ್ಚ್​ ತಿಂಗಳು 0.5 ಡಿಗ್ರಿ ಸೆಲ್ಸಿಯಸ್ ಜಿಗಿತ ಕಂಡಿದೆ. 2020 ರಲ್ಲಿ, ಏಪ್ರಿಲ್‌ನಲ್ಲಿ ಗರಿಷ್ಠ ತಾಪಮಾನ 36.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಇದು ಈ ವರ್ಷ 37.6 ಡಿಗ್ರಿ ಸೆಲ್ಸಿಯಸ್‌ಗೆ ಏರಿದೆ.

ಏಪ್ರಿಲ್ ನಲ್ಲಿ 100 ವರ್ಷಗಳ ದಾಖಲೆ ಮುರಿದ ಉಷ್ಣಾಂಶ

ಇನ್ನು ಇಡೀ ಭಾರತದ ಹವಾಮಾನ ನೋಡುವುದಾದರೆ, ಏಪ್ರಿಲ್ ತಿಂಗಳ ಉಷ್ಣಾಂಶವು ಎಲ್ಲಾ ದಾಖಲೆಗಳನ್ನು ಮುರಿದಿದೆ. 103 ವರ್ಷಗಳ ನಂತರ ಈ ರೀತಿಯ ಹವಾಮಾನ ಸಂಭವಿಸಿದೆ. ಅನೇಕ ಕಡೆಗಳಲ್ಲಿ ತಾಪಮಾನವು 43 ಡಿಗ್ರಿ ತಲುಪಿದೆ ಎಂದು ಹವಾಮಾನ ಇಲಾಖೆ ವರದಿಯೊಂದನ್ನು ಬಿಡುಗಡೆ ಮಾಡಿದೆ.

ಹವಾಮಾನ ಇಲಾಖೆಯು 1921-2024 ರ ನಡುವಿನ ಏಪ್ರಿಲ್ ತಿಂಗಳ ಹವಾಮಾನ ಮಾಹಿತಿಯನ್ನು ಹಂಚಿಕೊಂಡಿದ್ದು ಈ ದತ್ತಾಂಶದ ಪ್ರಕಾರ, ಇದು ದೇಶದ ಅನೇಕ ಭಾಗಗಳಲ್ಲಿ ಕಂಡುಬಂದ ಅತ್ಯಂತ ಬಿಸಿಯಾದ ತಿಂಗಳು ಎಂದು ಸೂಚಿಸುತ್ತದೆ. ಮುಂದಿನ ಐದು ದಿನಗಳು ದೇಶದಲ್ಲಿ ಅನೇಕ ಕಡೆಗಳಲ್ಲಿ ಬಿಸಿಗಾಳಿ ಹೆಚ್ಚಾಗಲಿದೆ. ಅದರಲ್ಲೂ ಗಮನಿಸಬೇಕಾದ ಅಂಶವೆಂದರೆ ಲೋಕಸಭಾ ಚುನಾವಣೆ ಮತದಾನ ನಡೆಯುವ ಸ್ಥಳಗಳಲ್ಲಿ ಶಾಖ ಹೆಚ್ಚಾಗಲಿದೆ. ಬಂಗಾಳ, ಬಿಹಾರ, ಜಾರ್ಖಂಡ್ ಮತ್ತು ಒಡಿಶಾದ ಕೆಲವು ಭಾಗಗಳಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆಯಿದೆ. ಇದಲ್ಲದೆ, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ತೀವ್ರ ಶಾಖ ಸಂಭವಿಸಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ. ಪ್ರಸ್ತುತ ಮಲೇಷ್ಯಾ, ಇಂಡೋನೇಷ್ಯಾ, ಸಿಂಗಾಪುರ್ ಮತ್ತು ಇತರ ದೇಶಗಳೂ ಶಾಖದ ಅಲೆ ಅನುಭವಿಸುತ್ತಿವೆ ಎಂಬುದು ಗಮನಾರ್ಹ.

ಅಂಕಿಅಂಶಗಳ ಪ್ರಕಾರ, ಬಿಸಿಗಾಳಿ ಸೂಚ್ಯಂಕವು 40 ರಿಂದ 50 ಡಿಗ್ರಿ ಸೆಲ್ಸಿಯಸ್ ವರೆಗೆ ಕಂಡುಬರುತ್ತಿದೆ. ಕೇರಳ ಸೇರಿದಂತೆ ಪೂರ್ವ ಕರಾವಳಿಯ ಅನೇಕ ಭಾಗಗಳಲ್ಲಿ ಈ ಸೂಚ್ಯಂಕವು 50 ರಿಂದ 60 ಡಿಗ್ರಿ ಸೆಲ್ಸಿಯಸ್ಗೆ ಏರಿದೆ.

ಮಳೆ ಇಲ್ಲದಿರುವುದೇ ಬಿಸಿಲ ಬೇಗೆಗೆ ಕಾರಣ

ಬೆಂಗಳೂರಿನಲ್ಲಿ ಮಾರ್ಚ್‌ ತಿಂಗಳಲ್ಲಿ ಶೂನ್ಯ ಮಳೆ ಮತ್ತು ಏಪ್ರಿಲ್‌ನಲ್ಲಿ ಅತ್ಯಲ್ಪ ಮಳೆಯಾಗಿರುವುದರಿಂದ ಈ ವರ್ಷ ತಾಪಮಾನದ ಏರಿಕೆ ಹೆಚ್ಚಾಗಿದೆ. ಮಳೆಯು ತಾಪಮಾನವನ್ನು ತಾತ್ಕಾಲಿಕವಾಗಿ ತಗ್ಗಿಸುತ್ತದೆ. ಬೆಂಗಳೂರಿನಲ್ಲಿ ಮಾರ್ಚ್‌ನಲ್ಲಿ ಸರಾಸರಿ 14.7 ಮಿಮೀ ಮತ್ತು ಏಪ್ರಿಲ್‌ನಲ್ಲಿ 61.77 ಮಿಮೀ ಮಳೆಯಾಗಿದೆ. ಈ ವರ್ಷ ನಗರದಲ್ಲಿ ಎರಡು ತಿಂಗಳಲ್ಲಿ ಎರಡು ಮಿ.ಮೀ.ಗಿಂತ ಕಡಿಮೆ ಮಳೆಯಾಗಿದೆ.

ಬೆಂಗಳೂರಿನಲ್ಲಿ ಬಿಸಿಲ ಬೇಗೆ ಹೆಚ್ಚಾಗಿದೆ. ಏಕೆಂದರೆ ನಗರದಲ್ಲಿ ಮಳೆಯಾಗಿಲ್ಲ. ಹಸಿರುಮನೆ ಅನಿಲಗಳ ಹೆಚ್ಚಳ ಮತ್ತು ನಗರೀಕರಣದ ಕಾರಣದಿಂದಾಗಿ ಗರಿಷ್ಠ ತಾಪಮಾನ ಏರಿಕೆಯಾಗುತ್ತಿದೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಹವಾಮಾನ ಬದಲಾವಣೆ ದಿವೇಚಾ ಕೇಂದ್ರದ ವಿಶಿಷ್ಟ ವಿಜ್ಞಾನಿ ಪ್ರೊ.ಜೆ.ಶ್ರೀನಿವಾಸನ್ ಮಾಹಿತಿ ನೀಡಿದ್ದಾರೆ.

ಬೇಸಿಗೆಯಲ್ಲಿ ಆರೋಗ್ಯ ಸಮಸ್ಯೆಗಳ ಮೇಲೆ ಇರಲಿ ಎಚ್ಚರಿಕೆ

ಬೇಸಿಗೆಯಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ತಾಪಮಾನ ಮತ್ತು ಆರ್ದ್ರತೆಯ ಹೆಚ್ಚಳವು ನಿರ್ಜಲೀಕರಣದ ಸಮಸ್ಯೆಗೆ ಕಾರಣವಾಗುತ್ತದೆ. ಬೇಸಿಗೆಯಲ್ಲಿ ಜನರು ಹೆಚ್ಚು ಬೆವರುತ್ತಾರೆ, ಇದು ಸೋಡಿಯಂ ಮತ್ತು ಪೊಟ್ಯಾಸಿಯಮ್‌ನಂತಹ ಅಗತ್ಯ ಪೋಷಕಾಂಶಗಳ ಸವಕಳಿಗೆ ಕಾರಣವಾಗುತ್ತದೆ. ಬೇಸಿಗೆಯಲ್ಲಿ ನಮ್ಮ ದೇಹವನ್ನು ಹೈಡ್ರೀಕರಿಸಿಡುವುದು, ಸಡಿಲ ಉಡುಪುಗಳನ್ನು ಧರಿಸುವುದು ಮತ್ತು ಬೇಸಿಗೆಯಲ್ಲಿ ಸೂರ್ಯನ ಕಿರಣಗಳಿಂದ ತಪ್ಪಿಸಿಕೊಳ್ಳುವುದು ಮುಖ್ಯವಾಗಿದೆ. ಬೇಸಿಗೆಯಲ್ಲಿ ಅಜೀರ್ಣ ಸಮಸ್ಯೆ, ಚರ್ಮದ ಸಮಸ್ಯೆ, ಕಾಲೋಚಿತ ಜ್ವರ ಮತ್ತು ಸೋಂಕಿನ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ಹೀಗಾಗಿ, ಸಮತೋಲನ ಆಹಾರ ಸೇವನೆ ಅತಿ ಮುಖ್ಯ.

ಬೇಸಿಗೆಯಲ್ಲಿ ಸೂರ್ಯನ ಹಾನಿಕಾರಕ ಕಿರಣಗಳ ಬಗ್ಗೆ ಜಾಗರೂಕರಾಗಿರಬೇಕು, ಏಕೆಂದರೆ ಸೂರ್ಯನ ಕಿರಣಗಳಿಂದಾಗಿ ಟ್ಯಾನ್ ಆಗುವುದು, ಅದಕ್ಕಿಂತ ಹೆಚ್ಚಾಗಿ ಚರ್ಮದ ಕ್ಯಾನ್ಸರ್ ಬರುವ ಅಪಾಯವೂ ಹೆಚ್ಚಿರುತ್ತದೆ. ಹೀಗಾಗಿ ಸನ್‌ಸ್ಕ್ರೀನ್, ರಕ್ಷಣಾತ್ಮಕ ಉಡುಪು ಧರಿಸಿ. ಹೆಚ್ಚು ಬಿಸಿಲಿಗೆ ಮೈ ಒಡ್ಡದಿರಿ. ಬೇಸಿಗೆಯಲ್ಲಿ ಹೆಚ್ಚಾಗಿ ನೀರಿನಾಂಶವಿರುವ ಆಹಾರವನ್ನು ಸೇವಿಸಿ. ಕಲ್ಲಂಗಡಿ ಹಣ್ಣು, ಸೌತೆಕಾಯಿ, ಮಜ್ಜಿಗೆ, ತಂಪು ಪಾನಿಯಗಳ ಮೊರೆ ಹೋಗುವುದು ಉತ್ತಮ.

ಇನ್ನು ಮುಖ್ಯವಾಗಿ ಬೇಸಿಗೆಯಲ್ಲಿ ಧೂಳು ಹಾಗೂ ಶುಷ್ಕತೆಯಿಂದ ಚರ್ಮದ ಸಮಸ್ಯೆ ಹೆಚ್ಚುತ್ತದೆ. ಹೀಗಾಗಿ ನಿತ್ಯ ಸ್ನಾನ ಮಾಡುವ ಮೂಲಕ ದೇಹವನ್ನು ಶುಚಿಯಾಗಿಟ್ಟುಕೊಳ್ಳಬೇಕು. ಅತಿಯಾದ ಬಿಸಿನೀರು ಬಳಕೆ ಮಾಡಬೇಡಿ. ಇದರಿಂದ ಚರ್ಮಕ್ಕೆ ಹಾನಿಯಾಗುತ್ತೆ. ಮನೆಯಿಂದ ಹೊರಗೆ ಹೋಗುವಾಗ ಸನ್‌ಸ್ಕ್ರೀನ್‌ ಲೋಷನ್‌ ಮರೆಯದೆ ಹೆಚ್ಚಿಕೊಳ್ಳಿ. ದೇಹಕ್ಕೆ ಹಿತ ನೀಡುವಂತಹ ಉಡುಪು (ಹತ್ತಿ ಉಡುಪು) ಧರಿಸಬೇಕು. ಯಾವುದೇ ಚರ್ಮ ಸಮಸ್ಯೆ ಕಾಣಿಸಿಕೊಂಡರೂ ಮೊದಲು ವೈದ್ಯರ ಸಲಹೆ ಪಡೆಯಿರಿ. ತಾವಾಗಿಯೇ ಸೆಲ್ಫ್ ಟ್ರೀಟ್ಮೆಂಟ್ ಮಾಡಿಕೊಳ್ಳಲು ಮುಲಾಮುಗಳನ್ನು ಬಳಸಬೇಡಿ. ಅದರಲ್ಲೂ ಸ್ಟಿರಾಯ್ಡಿ ಇರುವಂತ ಕ್ರೀಮ್‌ಗಳನ್ನು ಬಳಸಬಾರದು ಎಂದು ಚರ್ಮರೋಗ ತಜ್ಞರು ಹೇಳುತ್ತಾರೆ.

Published On - 4:34 pm, Tue, 30 April 24