ಟಿ20 ವಿಶ್ವಕಪ್ನಲ್ಲಿ (ICC T20 World Cup 2021) ಟೀಮ್ ಇಂಡಿಯಾ (Team India) ಮೊದಲ ಜಯವನ್ನು ಎದುರು ನೋಡುತ್ತಿದೆ. ಪಾಕ್ ವಿರುದ್ದ ಪಂದ್ಯದಲ್ಲಿ ಸೋತಿರುವ ಭಾರತ ಇದೀಗ ದ್ವಿತೀಯ ಪಂದ್ಯದಲ್ಲಿ ನ್ಯೂಜಿಲೆಂಡ್ (India vs New zealand) ವಿರುದ್ದ ಆಡಲಿದೆ. ಆದರೆ ಈ ಪಂದ್ಯದಲ್ಲಿ ಪ್ಲೇಯಿಂಗ್ 11 ನಲ್ಲಿ ದೊಡ್ಡ ಬದಲಾವಣೆ ಕಂಡು ಬರುವ ಸಾಧ್ಯತೆ ಕಡಿಮೆ. ಇದಾಗ್ಯೂ ಬೌಲಿಂಗ್ ವಿಭಾಗದಲ್ಲಿ ಯಾರಿಗೆ ಚಾನ್ಸ್ ಸಿಗಲಿದೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಪಾಕ್ ವಿರುದ್ದದ ಪಂದ್ಯದ ವೇಳೆ ಅನುಭವಿ ಆಟಗಾರನನ್ನು ಹೊರಗಿಟ್ಟು ಕೊಹ್ಲಿ ಮಾಡಿದ ಪ್ರಯೋಗ ಫಲ ನೀಡಿಲ್ಲ. ಹೀಗಾಗಿ ನ್ಯೂಜಿಲೆಂಡ್ ವಿರುದ್ದ ಆ ತಪ್ಪು ಮಾಡುವ ಸಾಧ್ಯತೆ ಕಡಿಮೆ. ಅದರಂತೆ ಈ ಬಾರಿ ಟೀಮ್ ಇಂಡಿಯಾ ಸ್ಪಿನ್ ವಿಭಾಗದಲ್ಲಿ ಬದಲಾವಣೆ ಮಾಡಬಹುದು. ಆ ಮೂಲಕ ಲೆಫ್ಟ್-ರೈಟ್ ಕಾಂಬಿನೇಷನ್ನಲ್ಲಿ ಸ್ಪಿನ್ನರ್ಗಳನ್ನು ಕಣಕ್ಕಿಳಿಸಲಿದ್ದಾರೆ.
ಇಲ್ಲಿ ಸ್ಪಿನ್ ಆಲ್ರೌಂಡರ್ ರವೀಂದ್ರ ಜಡೇಜಾ ಸ್ಥಾನ ಪಡೆಯುವುದು ಬಹುತೇಕ ಖಚಿತ. ಮತ್ತೊಂದೆಡೆ ಪಾಕ್ ವಿರುದ್ದ ಮಿಸ್ಟರಿ ಸ್ಪಿನ್ನರ್ ಆಗಿ ಕಣಕ್ಕಳಿದಿದ್ದ ವರುಣ್ ಚಕ್ರವರ್ತಿ ಪರಿಣಾಮಕಾರಿಯಾಗಿರಲಿಲ್ಲ. ಹೀಗಾಗಿ ನ್ಯೂಜಿಲೆಂಡ್ ವಿರುದ್ದದ ಪ್ಲೇಯಿಂಗ್ 11 ನಿಂದ ವರುಣ್ಗೆ ಕೊಕ್ ನೀಡುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ಗೆ ಮಣೆಹಾಕುವುದು ಬಹುತೇಕ ಖಚಿತ ಎನ್ನಬಹುದು.
ಏಕೆಂದರೆ ಟೀಮ್ ಇಂಡಿಯಾ ಪರ ಅಶ್ವಿನ್-ಜಡೇಜಾ ಸ್ಪಿನ್ ಜೋಡಿ ಹಲವು ಬಾರಿ ಮೋಡಿ ಮಾಡಿದೆ. ಅದರಲ್ಲೂ ಧೋನಿ ನಾಯಕತ್ವದಲ್ಲಿ ಈ ಇಬ್ಬರೇ ಹೆಚ್ಚಿನ ಪಂದ್ಯಗಳಲ್ಲಿ ಸ್ಪಿನ್ ವಿಭಾಗವನ್ನು ಮುನ್ನಡೆಸಿದ್ದರು. ಆದರೆ ಆ ಬಳಿಕ ಯಜುವೇಂದ್ರ ಚಹಲ್ ಹಾಗೂ ಕುಲ್ದೀಪ್ ಯಾದವ್ ಎಂಟ್ರಿಯೊಂದಿಗೆ ಅಶ್ವಿನ್ ಹೊರಬಿದ್ದಿದ್ದರು. ಇತ್ತ ಜಡೇಜಾ ಕೂಡ ತಂಡದಲ್ಲಿ ತುಸು ಮಂಕಾದರು.
ಇದೀಗ ಹಳೆಯ ಜೋಡಿಯನ್ನು ಮತ್ತೆ ಒಂದಾಗಿಸಿ ಸ್ಪಿನ್ ಮೋಡಿ ಮಾಡುವ ಇರಾದೆಯಲ್ಲಿದೆ ಟೀಮ್ ಇಂಡಿಯಾ. ಇಬ್ಬರು ಅನುಭವಿ ಸ್ಪಿನ್ನರ್ಗಳು ತಂಡದಲ್ಲಿದ್ದರೆ ಒತ್ತಡಕ್ಕೊಳಗಾಗುವ ಸಾಧ್ಯತೆ ಕಡಿಮೆ. ಎರಡನೆಯದಾಗಿ, ಅಶ್ವಿನ್ ಅವರು ಎಲ್ಲಾ ರೀತಿಯ ಪಿಚ್ಗಳಲ್ಲೂ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹಾಗೆಯೇ ಆರಂಭದಿಂದಲೇ ರನ್ ಗತಿಯನ್ನು ನಿಯಂತ್ರಿಸುವಲ್ಲಿ ಪರಿಣತಿ ಪಡೆದಿದ್ದಾರೆ. ಇನ್ನು ಅಶ್ವಿನ್ ಅವರ ಪ್ರಮುಖ ಅಸ್ತ್ರ ಎಂದರೆ 6 ಎಸೆತಗಳನ್ನು ವಿಭಿನ್ನ ರೀತಿಯಲ್ಲಿ ಎಸೆಯುವುದು. ಹೀಗಾಗಿ ಇಬ್ಬನಿ ಇದ್ದರೂ ಅಶ್ವಿನ್ ಒದ್ದೆಯಾದ ಚೆಂಡಿನೊಂದಿಗೆ ಬೌಲಿಂಗ್ ಮಾಡುವ ವಿಧಾನವನ್ನು ಹೊಂದಿದ್ದಾರೆ.
ಇದಲ್ಲದೇ ನ್ಯೂಜಿಲೆಂಡ್ ತಂಡದಲ್ಲಿ ಜೇಮ್ಸ್ ನೀಶಮ್, ಡೆವೊನ್ ಕಾನ್ವೇ ಮತ್ತು ಮಿಚೆಲ್ ಸ್ಯಾಂಟ್ನರ್ ಅವರಂತಹ ಆಟಗಾರರಿದ್ದಾರೆ. ಇವರೆಲ್ಲರೂ ಎಡಗೈ ಬ್ಯಾಟರ್ಗಳು ಎಂಬುದು ವಿಶೇಷ. ವಿಶೇಷವಾಗಿ ಲೆಫ್ಟ್ ಹ್ಯಾಂಡರ್ ಬ್ಯಾಟರುಗಳನ್ನು ನಿಯಂತ್ರಿಸುವಲ್ಲಿ ಅಶ್ವಿನ್ ಪರಿಣಾಮಕಾರಿ. ಹೀಗಾಗಿ ನ್ಯೂಜಿಲೆಂಡ್ ವಿರುದ್ದ ಅಶ್ವಿನ್ಗೆ ಚಾನ್ಸ್ ಸಿಗುವುದು ಬಹುತೇಕ ಖಚಿತ ಎಂದೇ ಹೇಳಬಹುದು.
ಇನ್ನು ಅಶ್ವಿನ್ ಹಾಗೂ ಜಡೇಜಾ ಕೊನೆಯ ಬಾರಿಗೆ ಜೊತೆಯಾಗಿ ಟಿ20 ಕ್ರಿಕೆಟ್ನಲ್ಲಿ ಕಾಣಿಸಿಕೊಂಡಿದ್ದು 2017ರಲ್ಲಿ. ಅಂದರೆ 5 ವರ್ಷಗಳ ಬಳಿಕ ಈ ಜೋಡಿ ಮತ್ತೆ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ನ್ಯೂಜಿಲೆಂಡ್ ವಿರುದ್ದದ ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಜಯ ತಂದುಕೊಡಲಿದ್ದಾರಾ ಕಾದು ನೋಡಬೇಕಿದೆ.
ಇದನ್ನೂ ಓದಿ: T20 World Cup 2021: ಸೆಮಿಫೈನಲ್ ಲೆಕ್ಕಾಚಾರ: ನ್ಯೂಜಿಲೆಂಡ್ ವಿರುದ್ದ ಟೀಮ್ ಇಂಡಿಯಾ ಗೆಲ್ಲಲೇಬೇಕು, ಯಾಕೆ ಗೊತ್ತಾ?
ಇದನ್ನೂ ಓದಿ: ICC T20 Batter Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಟೀಮ್ ಇಂಡಿಯಾದ ಇಬ್ಬರ ಸ್ಥಾನ ಕುಸಿತ
ಇದನ್ನೂ ಓದಿ: T20 World Cup 2021: ಹಿಂದೂಗಳ ಮುಂದೆ ನಮಾಜ್ ಮಾಡಿದ್ದು ಖುಷಿಯಾಯ್ತು ಎಂದ ಪಾಕ್ ಕ್ರಿಕೆಟಿಗ
(T20 World cup 2021 R Ashwin Ravindra Jadeja Will save Virat Kohli in india vs New zealand)