PAI 2021: ರಾಜ್ಯಗಳ ಆಡಳಿತ ಕಾರ್ಯಕ್ಷಮತೆ ಶ್ರೇಯಾಂಕ ಪ್ರಕಟ; 3 ಸ್ಥಾನ ಕುಸಿದ ಕರ್ನಾಟಕ, ಮೊದಲ ಸ್ಥಾನ ಯಾರಿಗೆ?

TV9 Digital Desk

| Edited By: shivaprasad.hs

Updated on:Oct 28, 2021 | 11:20 AM

PAI 2021 Rankings: 6ನೇ ವರ್ಷದ ರಾಜ್ಯಗಳ ಆಡಳಿತ ಕಾರ್ಯಕ್ಷಮತೆ ಶ್ರೇಯಾಂಕವು ಬಿಡುಗಡೆಗೊಂಡಿದ್ದು, ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ ಕೇರಳ ಮೊದಲ ಸ್ಥಾನ ಪಡೆದಿದೆ. ಸಣ್ಣ ರಾಜ್ಯಗಳಲ್ಲಿ ಸಿಕ್ಕಿಂ ಮೊದಲ ಸ್ಥಾನ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪುದುಚೇರಿ ಪ್ರಥಮ ಸ್ಥಾನ ಅಲಂಕರಿಸಿದೆ. ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ? ಈ ಆಯ್ಕೆಗೆ ಮಾನದಂಡಗಳೇನು? ಇಲ್ಲಿದೆ ಮಾಹಿತಿ.

PAI 2021: ರಾಜ್ಯಗಳ ಆಡಳಿತ ಕಾರ್ಯಕ್ಷಮತೆ ಶ್ರೇಯಾಂಕ ಪ್ರಕಟ; 3 ಸ್ಥಾನ ಕುಸಿದ ಕರ್ನಾಟಕ, ಮೊದಲ ಸ್ಥಾನ ಯಾರಿಗೆ?
ಪ್ರಾತಿನಿಧಿಕ ಚಿತ್ರ
Follow us

6ನೇ ವರ್ಷದ ರಾಜ್ಯಗಳ ಆಡಳಿತದ ಕಾರ್ಯಕ್ಷಮತೆಯ ಶ್ರೇಯಾಂಕವು ಬಿಡುಗಡೆಗೊಂಡಿದ್ದು, ದಕ್ಷಿಣದ ರಾಜ್ಯಗಳು ಪ್ರಾಬಲ್ಯ ಸಾಧಿಸಿವೆ. ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ ಕೇರಳ 1.618 ಸೂಚ್ಯಂಕದೊಂದಿಗೆ ಮೊದಲ ಸ್ಥಾನದಲ್ಲಿದ್ದು, ತಮಿಳುನಾಡು ಎರಡನೇ ಸ್ಥಾನ ಹಾಗೂ ತೆಲಂಗಾಣ ಮೂರನೇ ಸ್ಥಾನ ಪಡೆದಿದೆ. ಈ ಮೂಲಕ ದಕ್ಷಿಣದ ರಾಜ್ಯಗಳು ಮೊದಲ ಮೂರು ಸ್ಥಾನವನ್ನು ಅಲಂಕರಿಸಿದಂತಾಗಿದೆ. ಛತ್ತೀಸ್​ಗಡ, ಗುಜರಾತ್ ಹಾಗೂ ಪಂಜಾಬ್ ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ. ಕರ್ನಾಟಕ 0.121 ಸೂಚ್ಯಂಕದೊಂದಿಗೆ 7ನೇ ಸ್ಥಾನವನ್ನು ಪಡೆದಿದೆ. ಕಳೆದ ವರ್ಷ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿತ್ತು. ಈ ಬಾರಿ ಮೂರು ಸ್ಥಾನ ಕುಸಿತಕಂಡಿದೆ. ಅದಾಗ್ಯೂ ಸೂಚ್ಯಂಕವು ಧನಾತ್ಮಕವಾಗಿಯೇ ಇರುವುದು ಸಮಾಧಾನ ಮೂಡಿಸಿದೆ. ಕರ್ನಾಟಕದ ನಂತರದ ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಆಂಧ್ರಪ್ರದೇಶ, ಜಾರ್ಖಂಡ್, , ಮಧ್ಯಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರ ಇದೆ. ಬಿಹಾರವು -1.343 ಹಾಗೂ ಉತ್ತರ ಪ್ರದೇಶ -1.418 ಸೂಚ್ಯಂಕದೊಂದಿಗೆ ಈ ಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನದಲ್ಲಿವೆ.

ಸಣ್ಣ ರಾಜ್ಯಗಳ ಪಟ್ಟಿಯಲ್ಲಿ 0.907 ಸೂಚ್ಯಂಕದೊಂದಿಗೆ ಸಿಕ್ಕಿಂ ಮೊದಲ ಸ್ಥಾನ, ಗೋವಾ ಮಿಜೋರಾಂ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದಿದೆ. ಸಣ್ಣ ರಾಜ್ಯಗಳಲ್ಲಿ ಉತ್ತರಾಖಂಡ್ ಹಾಗೂ ಮಣಿಪುರ ಕೊನೆಯ ಸ್ಥಾನಗಳಲ್ಲಿವೆ. ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯಲ್ಲಿ 1.345 ಸೂಚ್ಯಂಕದೊಂದಿಗೆ ಪುದುಚೇರಿ ಮೊದಲ ಸ್ಥಾನ ಪಡೆದಿದೆ. ಜಮ್ಮು ಮತ್ತು ಕಾಶ್ಮೀರ ಎರಡನೇ ಸ್ಥಾನದಲ್ಲಿದೆ. ದಾದ್ರಾ ಮತ್ತು ನಗರ್ ಹಾವೇಲಿ ಹಾಗೂ ದಾಮನ್ ಮತ್ತು ದಿಯು ಐದು ಹಾಗೂ ಅಂಡಮಾನ್ ಮತ್ತು ನಿಕೋಬಾರ್ ಆರನೇ ಸ್ಥಾನ ಪಡೆದಿವೆ.

ಸಾರ್ವಜನಿಕ ವ್ಯವಹಾರಗಳ ಕೇಂದ್ರ ಸೂಚ್ಯಂಕ ನೀಡುವ ಉದ್ದೇಶವೇನು? ಸಾರ್ವಜನಿಕ ವ್ಯವಹಾರಗಳ ಕೇಂದ್ರ (ಪಬ್ಲಿಕ್ ಅಫೇರ್ಸ್ ಸೆಂಟರ್- PAC) ಭಾರತದ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (SDGs) ಕೇಂದ್ರೀಕರಿಸುವ ಸಂಶೋಧನೆಯಲ್ಲಿ ತೊಡಗಿದೆ. ಇದನ್ನು ಭಾರತದಲ್ಲಿ ಆಡಳಿತದ ಗುಣಮಟ್ಟವನ್ನು ಸುಧಾರಿಸುವ ಆದೇಶದೊಂದಿಗೆ 1994ರಲ್ಲಿ ಸ್ಥಾಪಿಸಲಾಗಿದೆ. ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕವು ಭಾರತದ ರಾಜ್ಯಗಳಲ್ಲಿ ಆಡಳಿತದ ಸಮರ್ಪಕತೆ ಮತ್ತು ಗುಣಮಟ್ಟದ ವಾರ್ಷಿಕ ಮೌಲ್ಯಮಾಪನವಾಗಿದೆ. ಆಡಳಿತದ ಕಾರ್ಯಕ್ಷಮತೆಯ ಮೇಲೆ ಸೂಚ್ಯಂಕಗಳನ್ನು ನೀಡಲಾಗಿದ್ದು, ಅದರ ಆಧಾರದಲ್ಲಿ ರಾಜ್ಯಗಳು ಸ್ಥಾನ ಪಡೆದಿವೆ. PAI 2021 ಸಾರ್ವಜನಿಕ ಡೊಮೇನ್‌ನಲ್ಲಿ ಲಭ್ಯವಿರುವ ಕೇಂದ್ರ ಸರ್ಕಾರದ ಡೇಟಾವನ್ನು ಮಾತ್ರ ಬಳಸಿಕೊಂಡು ಪಕ್ಷಾತೀತ, ಸ್ವತಂತ್ರ ಮತ್ತು ಸಾಕ್ಷ್ಯ ಆಧಾರಿತ ಅಧ್ಯಯನವಾಗಿದೆ. ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕದ ವಿಶಿಷ್ಟ ಲಕ್ಷಣವೆಂದರೆ ಅದು ಸಂಪೂರ್ಣವಾಗಿ ಕಂಪ್ಯೂಟರ್ ಆಧಾರಿತವಾಗಿದ್ದು, ವ್ಯಕ್ತಿನಿಷ್ಠ ಪಕ್ಷಪಾತಕ್ಕೆ ಅವಕಾಶವಿರುವುದಿಲ್ಲ.

ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕದ ಆಯ್ಕೆಗೆ ಮಾನದಂಡಗಳೇನು? ಅಭಿವೃದ್ಧಿಯ ಸಂದರ್ಭದಲ್ಲಿ ಸಮಾನತೆ, ಬೆಳವಣಿಗೆ ಮತ್ತು ಸುಸ್ಥಿರತೆಯನ್ನು ಗಮನದಲ್ಲಿರಿಸಿಕೊಂಡು ಆಡಳಿತದ ಕಾರ್ಯಕ್ಷಮತೆಯನ್ನು ನೋಡಲಾಗುತ್ತದೆ. ಇದರೊಂದಿಗೆ ಐದು ಥೀಮ್‌ಗಳು, 14 SDGs ಗಳು ಮತ್ತು 43 ಸೂಚಕಗಳನ್ನು ಆಧರಿಸಿ ಶ್ರೇಯಾಂಕ ನೀಡಲಾಗುತ್ತದೆ. ಇವುಗಳ ಹೊರತಾಗಿ PAI 2021 ಐದು ಕೇಂದ್ರ ಪ್ರಾಯೋಜಿತ ಯೋಜನೆಗಳ ಅನುಷ್ಠಾನದ ಪರಿಣಾಮಕಾರಿ ಮೌಲ್ಯಮಾಪನವನ್ನು ಒಳಗೊಂಡಿದೆ. ಆ ಯೋಜನೆಗಳೆಂದರೆ, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGS), ರಾಷ್ಟ್ರೀಯ ಆರೋಗ್ಯ ಮಿಷನ್ (NHM), ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳು (ICDS), ಸಮಗ್ರ ಶಿಕ್ಷಾ ಅಭಿಯಾನ (SmSA) ಮತ್ತು ಮಧ್ಯಾಹ್ನದ ಊಟ ಯೋಜನೆ (MDMS). PAI 2021 ರಲ್ಲಿ COVID-19 ಸಾಂಕ್ರಾಮಿಕಕ್ಕೆ ರಾಜ್ಯಗಳು ತೆಗೆದುಕೊಂಡ ಪರಿಣಾಮಕಾರಿ ಕ್ರಮಗಳು ಹಾಗೂ ಯಶಸ್ಸಿನ ಮಟ್ಟವನ್ನು ಆಧರಿಸಿ ಶ್ರೇಯಾಂಕ ನೀಡಲಾಗಿದೆ. ಈ ಶ್ರೇಯಾಂಕವನ್ನು ನಾಳೆ ಅಕ್ಟೋಬರ್ 29, ಶುಕ್ರವಾರದಂದು ಬೆಂಗಳೂರಿನಲ್ಲಿ ಘೋಷಿಸಲಾಗುವುದು.

ಇದನ್ನೂ ಓದಿ:

ಕೆಲವೇ ನಿಮಿಷಗಳಲ್ಲಿ ವಿಶ್ವದಾದ್ಯಂತ ಕನ್ನಡ ಡಿಂಡಿಮ ಕಲರವ, ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕನ್ನಡ ಹಾಡು ಗಾಯನ

ರೈತರು ಪ್ರತಿಭಟನೆ ನಡೆಸುತ್ತಿದ್ದ ಜಾಗದಲ್ಲಿ ಭೀಕರ ಅಪಘಾತ; ಟ್ರಕ್​ ಹರಿದು ಮೂವರು ರೈತ ಮಹಿಳೆಯರ ದುರ್ಮರಣ

ತಾಜಾ ಸುದ್ದಿ

Related Stories

Click on your DTH Provider to Add TV9 Kannada