Asia Cup 2025: ನಾವು ಪಾಕಿಸ್ತಾನ ವಿರುದ್ಧ ಯಾವ ಪಂದ್ಯವನ್ನು ಆಡಬಾರದು ಎಂದ ಅಜರುದ್ದೀನ್
Asia Cup 2025: 2025ರ ಏಷ್ಯಾಕಪ್‌ನ ವೇಳಾಪಟ್ಟಿಯನ್ನು ಘೋಷಿಸಲಾಗಿದೆ. ಸೆಪ್ಟೆಂಬರ್ 9 ರಿಂದ 28ರವರೆಗೆ ಯುಎಇಯಲ್ಲಿ ನಡೆಯಲಿದೆ. ಭಾರತ-ಪಾಕಿಸ್ತಾನ ಪಂದ್ಯ ಸೆಪ್ಟೆಂಬರ್ 14ರಂದು ನಡೆಯಲಿದೆ. ಆದರೆ ಈ ಬಗ್ಗೆ ಮಾತನಾಡಿರುವ ಮೊಹಮ್ಮದ್ ಅಜರುದ್ದೀನ್, ದ್ವಿಪಕ್ಷೀಯ ಸರಣಿಗಳನ್ನು ಆಡದಿದ್ದರೆ, ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿಯೂ ಆಡಬಾರದು ಎಂದು ಹೇಳಿದ್ದಾರೆ.

2025 ರ ಏಷ್ಯಾಕಪ್ (Asia Cup 2025) ವೇಳಾಪಟ್ಟಿಯನ್ನು ಘೋಷಿಸಲಾಗಿದೆ. ಈ ಪಂದ್ಯಾವಳಿ ಸೆಪ್ಟೆಂಬರ್ 9 ರಿಂದ ಪ್ರಾರಂಭವಾಗಲಿದ್ದು ಸೆಪ್ಟೆಂಬರ್ 28 ರವರೆಗೆ ಯುಎಇಯಲ್ಲಿ ನಡೆಯಲಿದೆ. ಈ ಪಂದ್ಯಾವಳಿಯ ಬಹುನಿರೀಕ್ಷಿತ ಪಂದ್ಯ ಸೆಪ್ಟೆಂಬರ್ 14 ರಂದು ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವೆ ನಡೆಯಲಿದೆ. ಅಭಿಮಾನಿಗಳು ಈ ಪಂದ್ಯಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಆದಾಗ್ಯೂ, ಈ ಪಂದ್ಯಾವಳಿ ಪ್ರಾರಂಭವಾಗುವ ಮೊದಲು, ಟೀಂ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದು, ಭಾರತವು ಯಾವುದೇ ಪಂದ್ಯಾವಳಿಯಲ್ಲಿ ಪಾಕಿಸ್ತಾನ ವಿರುದ್ಧ ಪಂದ್ಯವನ್ನು ಆಡಬಾರದು ಎಂದಿದ್ದಾರೆ.
ಐಸಿಸಿ ಈವೆಂಟ್‌ಗಳಲ್ಲಿ ಮಾತ್ರ ಮುಖಾಮುಖಿ
ವಾಸ್ತವವಾಗಿ ಬಹಳ ವರ್ಷಗಳಿಂದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳನ್ನು ಐಸಿಸಿ ಈವೆಂಟ್‌ಗಳಲ್ಲಿ ಮಾತ್ರ ಆಡಲಾಗುತ್ತಿದೆ. 2008 ರ ಮುಂಬೈ ಭಯೋತ್ಪಾದಕ ದಾಳಿಯ ನಂತರ, ಭಾರತ ಸರ್ಕಾರವು ಇನ್ನು ಮುಂದೆ ಪಾಕಿಸ್ತಾನದ ವಿರುದ್ಧ ಯಾವುದೇ ದ್ವಿಪಕ್ಷೀಯ ಸರಣಿಯನ್ನು ಆಡುವುದಿಲ್ಲ ಎಂದು ಘೋಷಿಸಿತ್ತು. ಹೀಗಾಗಿ ಈ ಎರಡೂ ತಂಡಗಳ ನಡುವೆ ಬಹಳ ಸಮಯದಿಂದ ಯಾವುದೇ ದ್ವಿಪಕ್ಷೀಯ ಸರಣಿಗಳು ನಡೆದಿಲ್ಲ, ಆದರೆ ಎರಡೂ ತಂಡಗಳು ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಯಂತಹ ಐಸಿಸಿ ಈವೆಂಟ್‌ಗಳಲ್ಲಿ ಪರಸ್ಪರ ವಿರುದ್ಧ ಆಡುತ್ತಿವೆ. ಇದೀಗ ಈ ಎರಡೂ ತಂಡಗಳು 2025 ರ ಏಷ್ಯಾಕಪ್‌ನಲ್ಲಿಯೂ ಪರಸ್ಪರ ಮುಖಾಮುಖಿಯಾಗಲಿದ್ದು ಅಜರುದ್ದೀನ್ ಪಂದ್ಯದ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ.
ಅಜರುದ್ದೀನ್ ಹೇಳಿದ್ದೇನು?
ಮೊಹಮ್ಮದ್ ಅಜರುದ್ದೀನ್, ‘ನೀವು ದ್ವಿಪಕ್ಷೀಯ ಸರಣಿಗಳನ್ನು ಆಡದಿದ್ದರೆ, ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿಯೂ ಆಡಬಾರದು ಎಂದು ನಾನು ನಂಬುತ್ತೇನೆ. ಆದರೆ ಈ ಬಗ್ಗೆ ಸರ್ಕಾರ ಮತ್ತು ಮಂಡಳಿ ನಿರ್ಧರಿಸುತ್ತದೆ ಎಂದಿದ್ದಾರೆ. ಇನ್ನು 2025 ರ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಬಗ್ಗೆ ಮಾತನಾಡಿದ ಅಜರುದ್ದೀನ್, ‘ಲೆಜೆಂಡ್ಸ್ ಲೀಗ್ ಅಧಿಕೃತವಲ್ಲ. ಇದು ಐಸಿಸಿ ಅಥವಾ ಬಿಸಿಸಿಐಗೆ ಯಾವುದೇ ಸಂಬಂಧವಿಲ್ಲ. ಇದಕ್ಕೆ ಐಸಿಸಿ ಅಥವಾ ಬಿಸಿಸಿಐ ಅನುಮೋದನೆ ಅಗತ್ಯವಿಲ್ಲ. ಇದನ್ನು ಖಾಸಗಿಯಾಗಿ ಆಡಲಾಗುತ್ತದೆ, ಆದರೆ ಏಷ್ಯಾಕಪ್ ಅನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಆಯೋಜಿಸುತ್ತದೆ ಎಂದಿದ್ದಾರೆ.
Asia Cup 2025 schedule: ಸೆ. 9 ರಿಂದ ಏಷ್ಯಾಕಪ್ ಆರಂಭ; ಈ ದಿನದಂದು ಭಾರತ- ಪಾಕ್ ನಡುವೆ ಪಂದ್ಯ
ಸೆ. 9 ರಂದು ಪಂದ್ಯಾವಳಿ ಪ್ರಾರಂಭ
ಈ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಆಡುತ್ತಿದ್ದು, ಇವುಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಗುಂಪು ಎ ನಲ್ಲಿ ಭಾರತ, ಪಾಕಿಸ್ತಾನ, ಓಮನ್ ಮತ್ತು ಯುಎಇ ಸೇರಿವೆ ಮತ್ತು ಗುಂಪು ಬಿ ನಲ್ಲಿ ಬಾಂಗ್ಲಾದೇಶ, ಅಫ್ಘಾನಿಸ್ತಾನ, ಶ್ರೀಲಂಕಾ ಮತ್ತು ಹಾಂಗ್ ಕಾಂಗ್ ಸೇರಿವೆ. ಪಂದ್ಯಾವಳಿಯ ಅಂತಿಮ ಪಂದ್ಯ ಸೆಪ್ಟೆಂಬರ್ 28 ರಂದು ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
