ಸುಳ್ವಾಡಿ ‘ಪ್ರಸಾದ’ ದುರಂತಕ್ಕೆ 2 ವರ್ಷ: ಇನ್ನೂ ಈಡೇರಿಲ್ಲ ಸರಕಾರದ ಭರವಸೆ, ಸಂಕಷ್ಟದಲ್ಲಿ ಸಂತ್ರಸ್ಥರು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 16, 2020 | 7:44 AM

ಅಸ್ವಸ್ಥರಾದವರ ಕುಟುಂಬಗಳಿಗೆ 12 ತಿಂಗಳ ಕಾಲ ₹ 10 ಸಾವಿರ ಸಹಾಯಧನ, ಒಂದು ವರ್ಷ ಪಡಿತರ ಆಹಾರ, ಗುಡಿಕೈಗಾರಿಕೆ ಆರಂಭಿಸುವ ಮೂಲಕ ಉದ್ಯೋಗ ಕಲ್ಪಿಸುವ ಭರವಸೆಯನ್ನು ಅಂದಿನ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ನೀಡಿದ್ದರು.

ಸುಳ್ವಾಡಿ ‘ಪ್ರಸಾದ’ ದುರಂತಕ್ಕೆ 2 ವರ್ಷ: ಇನ್ನೂ ಈಡೇರಿಲ್ಲ ಸರಕಾರದ ಭರವಸೆ, ಸಂಕಷ್ಟದಲ್ಲಿ ಸಂತ್ರಸ್ಥರು
ಕಿಚ್ಚುಗುತ್ತಿ ಮಾರಮ್ಮ ದೇಗುಲ ಮತ್ತು ಆರೋಪಿ ಇಮ್ಮಡಿ ಮಹದೇವ ಸ್ವಾಮಿ
Follow us on

ಚಾಮರಾಜನಗರ: ಇಡೀ ರಾಜ್ಯ ತಲ್ಲಣಿಸುವಂತೆ ಮಾಡಿದ್ದ ಹನೂರು ತಾಲ್ಲೂಕು ಸುಳ್ವಾಡಿ ಗ್ರಾಮದ ಪ್ರಸಿದ್ಧ ಕಿಚ್ಚುಗತ್ತಿ ಮಾರಮ್ಮ ದೇಗುಲದಲ್ಲಿ ವಿಷ ಬೆರೆಸಿದ ಪ್ರಸಾದ ವಿತರಣೆ ಭೀಕರ ಕೃತ್ಯಕ್ಕೆ ಸೋಮವಾರ (ಡಿ.14) ಎರಡು ವರ್ಷ ಆಗಿದೆ. ವಿಷ ಬೆರೆಸಿದ್ದ ಟೊಮೆಟೊ ಬಾತ್ ಪ್ರಸಾದ ಸೇವಿಸಿದ್ದ 12 ಮಂದಿ ಮೃತಪಟ್ಟಿದ್ದರು. 120ಕ್ಕೂ ಹೆಚ್ಚು ಮಂದಿಗೂ ನಾನಾ ಸಂಕಷ್ಟ ಅನುಭವಿಸುತ್ತಾ ದಿನದೂಡುತ್ತಿದ್ದಾರೆ.

ದೇಶದ ಗಮನ ಸೆಳೆದಿದ್ದ ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ ಎಂದು ಅಂದಿನ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಗುಡುಗಿದ್ದರು. ಬಿದರಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ಥರಿಗೆ ಸಾಂತ್ವನ ಹೇಳಿ, ಭರವಸೆಗಳ ಮಹಾಪೂರವನ್ನೇ ಹರಿಸಿದ್ದರು. ಮೃತರ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ, ಎರಡು ಎಕರೆ ಜಾಗ, ಒಂದು ವರ್ಷ ಉಚಿತ ಪಡಿತರ, ಗುಡಿ ಕೈಗಾರಿಕೆ ಸ್ಥಾಪನೆ ಮಾಡುವುದಾಗಿ ಹೇಳಿದ್ದರು.

ಅಸ್ವಸ್ಥರಾದವರ ಕುಟುಂಬಗಳಿಗೆ 12 ತಿಂಗಳ ಕಾಲ ₹ 10 ಸಾವಿರ ಸಹಾಯಧನ, ಒಂದು ವರ್ಷ ಪಡಿತರ ಆಹಾರ, ಗುಡಿಕೈಗಾರಿಕೆ ಆರಂಭಿಸುವ ಮೂಲಕ ಉದ್ಯೋಗ ಕಲ್ಪಿಸುವ ಭರವಸೆ ನೀಡಿದ್ದರು. ಮೃತರ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ಬಿಟ್ಟರೆ ಬೇರೆ ಇನ್ಯಾವುದೇ ಸೌಲಭ್ಯ ನಮಗೆ ತಲುಪಿಲ್ಲ ಎಂದು ಕುಟುಂಬಗಳ ಸದಸ್ಯರು ಆರೋಪಿಸಿದ್ದಾರೆ.

ಕಿಚ್ಚಗುತ್ತಿ ಮಾರಮ್ಮ ದೇವಾಲಯದ ಟ್ರಸ್ಟ್ ಮೇಲೆ ಹಿಡಿತ ಸಾಧಿಸುವ ಸಲುವಾಗಿ ದೇವರ ಹೆಸರಿನಲ್ಲಿ ತಯಾರಿಸಿದ್ದ ಟೊಮೆಟೊ ಬಾತ್​ಗೆ ವಿಷ ಬೆರೆಸಲಾಗಿತ್ತು. ಏನೂ ಅರಿಯದ ಓಂ ಶಕ್ತಿ ಮಾಲಾಧಾರಿಗಳು ಸೇರಿದಂತೆ ಸುಳ್ವಾಡಿ, ಮಾರ್ಟಳ್ಳಿ, ದೊರೆಸ್ವಾಮಿ ಮೇಡು, ಬಿದರಳ್ಳಿ ಗ್ರಾಮಗಳ ಭಕ್ತರು ಪ್ರಸಾದ ಸೇವಿಸಿ ಸಾವನ್ನಪ್ಪಿದ್ದರು. ಕೋಟೆ ಪೊದೆ ಗ್ರಾಮದ ಮೈಲಿಬಾಯಿಯಲ್ಲಿ ಹೆಣ್ಣು ಮಕ್ಕಳು (ಪ್ರಿಯಾ ಮತ್ತು ರಾಣಿ) ಮತ್ತು ಓರ್ವ ಗಂಡು ಮಗ ಹಾಗೂ ಬಿದರಳ್ಳಿ ಗ್ರಾಮದ ಐಶ್ವರ್ಯ ತಂದೆ ತಾಯಿ ಇಲ್ಲದೆ ಅನಾಥರಾಗಿದ್ದಾರೆ.

ಸೆರೆಮನೆಯಲ್ಲಿ ಆರೋಪಿಗಳು
ದೇಗುಲ ಪ್ರಸಾದಕ್ಕೆ ವಿಷ ಬೆರೆಸಿದ್ದ ಆರೋಪಿಗಳಾದ ಇಮ್ಮಡಿ ಮಹದೇವ ಸ್ವಾಮಿ, ಅಂಬಿಕಾ, ಮಾದೇಶ ಮತ್ತು ದೊಡ್ಡಯ್ಯ ಕಳೆದ ಎರಡು ವರ್ಷದಿಂದ ಮೈಸೂರಿನ ಕಾರಾಗೃಹದಲ್ಲಿದ್ದಾರೆ. ಈ ಪ್ರಕರಣದ ಆರೋಪಿಗಳ ಪರವಾಗಿ ಯಾವುದೇ ವಕೀಲರು ವಾದಿಸುವುದಿಲ್ಲ ಎಂದು ಜಿಲ್ಲಾ ವಕೀಲರ ಸಂಘ ಹೇಳಿತ್ತು. ನವೆಂಬರ್ ತಿಂಗಳಲ್ಲಿ ಆರೋಪಿಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿಯೂ ಜಾಮೀನು ಸಿಕ್ಕಿರಲಿಲ್ಲ.

ತೆಗೆದಿದೆ ದೇಗುಲ
ಟ್ರಸ್ಟ್​ ನಿರ್ವಹಿಸುತ್ತಿದ್ದ ಕಿಚ್ಚುಗತ್ತಿ ಮಾರಮ್ಮ ದೇವಾಲಯಕ್ಕೆ ಕಳೆದ 22 ವರ್ಷದಿಂದ ಬೀಗ ಜಡಿಯಲಾಗಿತ್ತು. ಈಗ ದೇವಾಲಯವನ್ನು ಮುಜರಾಯಿ ಇಲಾಖೆ ತನ್ನ ಸುಪರ್ದಿಗೆ ತೆಗೆದುಕೊಂಡು, ಬಾಗಿಲು ತೆಗೆಸಿದೆ. ದೇವಾಲಯದಲ್ಲಿ ಪೂಜಾ ವಿಧಿವಿಧಾನಗಳು ನಡೆಯುತ್ತಿವೆ‌.
-ಎಂ.ಇ ಮಂಜುನಾಥ್

ಸುಳ್ವಾಡಿ ವಿಷ ಪ್ರಸಾದ: ಪ್ರಮುಖ ಆರೋಪಿಗೆ ಜಾಮೀನು ನಿರಾಕರಿಸಿದ ಸುಪ್ರೀಂಕೋರ್ಟ್

ದೇವರ ಪ್ರಸಾದವೆಂದು ವಿಷವುಣಿಸಿದ್ದ ಸ್ವಾಮಿ ಜೈಲಿನಲ್ಲಿದ್ದುಕೊಂಡೇ ಮಾಡಿದ್ದೇನು ಗೊತ್ತಾ?

Published On - 7:35 am, Wed, 16 December 20