
ಚಿಕ್ಕಮಗಳೂರು: ಗ್ರಾಮಸ್ಥರ ಪರದಾಟಕ್ಕೆ ಸ್ಪಂದಿಸದ ಜನಪ್ರತಿನಿಧಿಗಳನ್ನ ಸ್ಥಳೀಯರು ತರಾಟೆಗೆ ತೆಗೆದುಕೊಂಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಂಕೇನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ಕಳೆದ ಬಾರಿ ಪ್ರವಾಹದಲ್ಲಿ ಬಂಕೇನಹಳ್ಳಿ ಸೇತುವೆ ಕೊಚ್ಚಿ ಹೋಗಿತ್ತು. ಬಂಕೇನಹಳ್ಳಿ, ಚೇಗು, ಕೂಡಳ್ಳಿ ಸೇರಿದಂತೆ ಕೆಲ ಗ್ರಾಮಗಳ ಜನರು ಸೇತುವೆಯಿಲ್ಲದೆ ಪರದಾಡಬೇಕಾಯಿತು. ನಮಗೆ ಸೇತುವೆ ನಿರ್ಮಾಣ ಮಾಡಿಕೊಡಿ ಎಂದು ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ಸೇರಿದಂತೆ ಸರ್ಕಾರದ ಗಮನವನ್ನ ಇತ್ತ ನಿರಂತರವಾಗಿ ಸೆಳೆಯುತ್ತಲೇ ಬಂದಿದ್ರು. ಆದ್ರೂ ಯಾವುದೇ ಪ್ರಯೋಜನವಾಗದೆ ಇದ್ದಾಗ ತಾವೇ ಮುಂದು ಬಂದು ತಾತ್ಕಾಲಿಕ ಸೇತುವೆಯನ್ನ ನಿರ್ಮಿಸಿಕೊಂಡಿದ್ದರು.
ದುರಂತ ಅಂದ್ರೆ ಹೊಸದಾಗಿ ನಿರ್ಮಿಸಿದ ಸೇತುವೆ ಕೂಡ ಈ ಬಾರಿ ಮಳೆಯಲ್ಲಿ ಕೊಚ್ಚಿಕೊಂಡು ಹೋಗಿದೆ. ಇದರಿಂದ ಸಾವಿರಾರು ಜನರು ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ಉದ್ಭವಿಸಿತ್ತು. ಈ ನಡುವೆ ಕಳೆದ 10 ದಿನಗಳ ಹಿಂದೆ ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಶಾಸಕ ಕುಮಾರಸ್ವಾಮಿ ಸ್ಥಳಕ್ಕೆ ಭೇಟಕೊಟ್ಟ ವೇಳೆ ಸ್ಥಳೀಯರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ರು. ಆ ವೇಳೆ ಏನೋ ಸಬೂಬು ಹೇಳಲು ಹೊರಟ ಶಾಸಕರನ್ನ ನೀವು ಮಾತಾಡಬೇಡಿ, ಸುಳ್ಳು ಹೇಳೋದು ನಿಮ್ಮ ಜಾಯಮಾನವಾಗಿದೆ ಅಂತಾ ತರಾಟೆ ತೆಗೆದುಕೊಂಡಿದ್ರು.
ಬಿಸಿ ಮುಟ್ಟಿಸಿದ ಮೇಲೆ ಬುದ್ಧಿ ಕಲಿತ ಜನಪ್ರತಿನಿಧಿಗಳು
ಸ್ಥಳೀಯರು ಬಿಸಿ ಮುಟ್ಟಿಸಿದ ಮೇಲೆ ಇದೀಗ ಬಂಕೇನಹಳ್ಳಿಗೆ ತಾತ್ಕಾಲಿಕವಾಗಿ ಸೇತುವೆಯ ನಿರ್ಮಾಣವಾಗಿದೆ. ಸದ್ಯ, ಹೇಮಾವತಿ ನದಿಯ ಆರ್ಭಟ ತಕ್ಕ ಮಟ್ಟಿಗೆ ಕಮ್ಮಿಯಾಗಿರೋದ್ರಿಂದ ತಾತ್ಕಾಲಿಕ ಸೇತುವೆಯಲ್ಲಿ ಜನಸಾಮಾನ್ಯರು ಓಡಾಡಲು ಸಾಧ್ಯವಾಗಿದೆ. ಆದರೆ, ಇದು ಕೇವಲ ತಾತ್ಕಾಲಿಕ ವ್ಯವಸ್ಥೆಯಾಗಿರೋದ್ರಿಂದ ಸ್ಥಳೀಯರು ಶಾಶ್ವತ ಸೇತುವೆಗಾಗಿ ಬೇಡಿಕೆ ಇಟ್ಟಿದ್ದಾರೆ.