Elon Musk: ಎಲಾನ್ ಮಸ್ಕ್ ಆಸ್ತಿ ಒಂದೇ ದಿನದಲ್ಲಿ 1,82,500 ಕೋಟಿ ಏರಿಕೆ

ಟೆಸ್ಲಾ ಕಂಪೆನಿಯ ಸಿಇಒ ಎಲಾನ್ ಮಸ್ಕ್ ಆಸ್ತಿಯು ಒಂದೇ ದಿನದಲ್ಲಿ ಭಾರತದ ರೂಪಾಯಿ ಲೆಕ್ಕ ರೂ. 1,82,500 ಕೋಟಿಗೂ ಹೆಚ್ಚಾಗಿದೆ. ಮಂಗಳವಾರದಂದು ಟೆಸ್ಲಾ ಕಂಪೆನಿಯ ಷೇರಿನ ಮೌಲ್ಯ ಶೇಕಡಾ 20ರಷ್ಟು ಹೆಚ್ಚಾಗಿದೆ.

Elon Musk: ಎಲಾನ್ ಮಸ್ಕ್ ಆಸ್ತಿ ಒಂದೇ ದಿನದಲ್ಲಿ 1,82,500 ಕೋಟಿ ಏರಿಕೆ
ಎಲಾನ್ ಮಸ್ಕ್ (ಸಂಗ್ರಹ ಚಿತ್ರ)
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 10, 2021 | 8:45 PM

ಟೆಸ್ಲಾ ಕಂಪೆನಿಯ ಸಿಇಒ ಎಲಾನ್ ಮಸ್ಕ್ ಆಸ್ತಿ ಒಂದೇ ದಿನದಲ್ಲಿ 2500 ಕೋಟಿ ಅಮೆರಿಕನ್ ಡಾಲರ್ (ಭಾರತದ ರೂಪಾಯಿಗಳಲ್ಲಿ1,82,500 ಕೋಟಿಗೂ ಹೆಚ್ಚು) ಹೆಚ್ಚಾಗಿ, ಮತ್ತೊಮ್ಮೆ ಹೊಸ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಮಂಗಳವಾರದಂದು ಟೆಸ್ಲಾ ಕಂಪೆನಿಯ ಷೇರಿನ ಬೆಲೆ ಶೇ 20ರಷ್ಟು ಹೆಚ್ಚಳವಾಯಿತು. ವರ್ಷಕ್ಕೂ ಹೆಚ್ಚು ಸಮಯದಲ್ಲಿ ಕಂಡ ಅತಿ ದೊಡ್ಡ ಏರಿಕೆ ಇದು. ಆ ಮೂಲಕ ಶತಕೋಟ್ಯಧಿಪತಿ ಎಲಾನ್ ಮಸ್ಕ್ ಆಸ್ತಿ ಮೌಲ್ಯ 17,400 ಕೋಟಿ ಅಮೆರಿಕನ್ ಡಾಲರ್ ತಲುಪಿತು. ಇದರೊಂದಿಗೆ ಜೆಫ್ ಬೆಜೋಸ್ ಹಾಗೂ ಮಸ್ಕ್ ಮಧ್ಯದ ಸಂಪತ್ತಿನ ಅಂತರ ಬಹಳ ಕಡಿಮೆ ಆಯಿತು ಎಂದು ಬ್ಲೂಮ್​ಬರ್ಗ್ ಬಿಲಿಯನೇರ್ಸ್ ಸೂಚ್ಯಂಕವು ಸೂಚಿಸುತ್ತಿದೆ. ಕಳೆದ ರಾತ್ರಿ ನಾಸ್ಡಾಕ್ ಶೇ 3.7ರಷ್ಟು ಏರಿಕೆ ಕಂಡಿತು ಮುಖ್ಯವಾಗಿ ಆಪಲ್, ಅಮೆಜಾನ್ ಮತ್ತು ಫೇಸ್​ಬುಕ್​ನಂಥ ತಂತ್ರಜ್ಞಾನ ಕಂಪೆನಿಗಳು ಷೇರು ಬೆಲೆ ಹೆಚ್ಚಳದ ಮುಂಚೂಣಿಯಲ್ಲಿದ್ದವು.

ಅಮೆಜಾನ್.ಕಾಮ್ ಷೇರಿನ ಬೆಲೆಯಲ್ಲೂ ಏರಿಕೆ ಕಂಡಿದ್ದರಿಂದ ಅವರ ಆಸ್ತಿ ಮೌಲ್ಯದಲ್ಲಿ 600 ಕೋಟಿ ಅಮೆರಿಕನ್ ಡಾಲರ್ ಹೆಚ್ಚಾಯಿತು. ಆ ಮೂಲಕ ಅವರ ಒಟ್ಟಾರೆ ಆಸ್ತಿ ಮೌಲ್ಯ 18,000 ಕೋಟಿ ಅಮೆರಿಕನ್ ಡಾಲರ್ ಮುಟ್ಟಿತು. ಕಳೆದ ಜನವರಿಯಲ್ಲಿ ಎಲಾನ್ ಮಸ್ಕ್ ಅವರು ಬೆಜೋಸ್​​ರನ್ನು ಪಕ್ಕಕ್ಕೆ ಸರಿಸಿ, ವಿಶ್ವದ ನಂಬರ್ ಒನ್ ಶ್ರೀಮಂತ ಎಂಬ ಪಟ್ಟಕ್ಕೆ ಏರಿದರು. ಆ ನಂತರ ಒಂದು ಹಂತದಲ್ಲಿ ಮಸ್ಕ್ ಆಸ್ತಿ ಪ್ರಮಾಣ 21,000 ಕೋಟಿ ಅಮೆರಿಕನ್ ಡಾಲರ್ ಮುಟ್ಟಿತ್ತು ಎಂದು ವಿಶ್ವದ ಅತ್ಯಂತ ಶ್ರೀಮಂತ 500 ಮಂದಿಯ ಪಟ್ಟಿಯ ಸೂಚ್ಯಂಕದಿಂದ ತಿಳಿದುಬಂದಿತ್ತು.

ಸ್ಥಿರವಾಗಿ ತ್ರೈಮಾಸಿಕ ಲಾಭವನ್ನು ಗಳಿಸುತ್ತಾ ಬಂದಿದ್ದು, ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಆಯ್ಕೆಯಾಗಿದ್ದು, ಸ್ವಚ್ಛ ತಂತ್ರಜ್ಞಾನಕ್ಕೆ ಆದ್ಯತೆ ಹಾಗೂ ರೀಟೇಲ್ ಹೂಡಿಕೆದಾರರಿಂದ ಆಸಕ್ತಿ ಕಂಡುಬಂದಿದ್ದರಿಂದ ಟೆಸ್ಲಾ ಷೇರಿನ ಬೆಲೆಯಲ್ಲಿ ಭರ್ಜರಿ ಏರಿಕೆ ಕಂಡುಬಂದಿದೆ. ಈಚೆಗೆ ನಾಲ್ಕು ದಿನಗಳ ಅಂತರದಲ್ಲಿ ಎಲಾನ್ ಮಸ್ಕ್ ಆಸ್ತಿಯಲ್ಲಿ 2700 ಕೋಟಿ ಅಮೆರಿಕನ್ ಡಾಲರ್ ಕಡಿಮೆ ಆಗಿತ್ತು. ಆ ನಂತರ ವಿಶ್ವದ ನಂಬರ್ ಒನ್ ಶ್ರೀಮಂತ ಜೆಫ್ ಬೆಜೋಸ್​ಗಿಂತ ಸಂಪತ್ತಿನ ವಿಚಾರದಲ್ಲಿ ಬಹಳ ಹಿಂದೆ ಉಳಿದಿದ್ದರು ಮಸ್ಕ್. ಆದರೆ ಈಗ ಆ ಅಂತರ ಮತ್ತೆ ಕಡಿಮೆ ಆಗಿದೆ.

ಇದನ್ನೂ ಓದಿ: ಎಲಾನ್ ಮಸ್ಕ್​ಗೆ ಸೇರಿದ 1,95,000 ಕೋಟಿಗೂ ಹೆಚ್ಚು ಸಂಪತ್ತು ಒಂದೇ ವಾರದಲ್ಲಿ ಕಿಡಿಗೆ ತಾಗಿದ ಕರ್ಪೂರದಂತಾಯ್ತು