ಕೊರೊನಾದಿಂದ ಭಕ್ತರನ್ನು ‘ಗ್ಯಾರಂಟಿ’ಯಾಗಿ ರಕ್ಷಿಸ್ತಾನಂತೆ ಈ ‘ಕೋರಂಟಿ’ ಹನುಮ!
ಕಲಬುರಗಿ: ಕೊರೊನಾ ಬಂದ ಮೇಲೆ ಎಲ್ಲರ ಬಾಯಲ್ಲಿ ಇದೀಗ ಕ್ವಾರಂಟೈನ್ ಅನ್ನೋ ಪದ ಸಾಮಾನ್ಯವಾಗಿಬಿಟ್ಟಿದೆ. ಆದರೆ ಜಿಲ್ಲೆಯಲ್ಲಿ ಈ ಪದ ಹಲವಾರು ದಶಕಗಳ ಹಿಂದಿನಿಂದಲೇ ಚಾಲ್ತಿಯಲ್ಲಿತ್ತು. ವರ್ಷಗಳು ಕಳೆಯುತ್ತಾ ಹೋದಂತೆ ಜನರ ಬಾಯಲ್ಲಿ ಕ್ವಾರಂಟೈನ್ ಹೋಗಿ ಕೋರಂಟಿ ಅಂತಾ ಆಗಿಬಿಟ್ಟಿತು. ಅದಕ್ಕೆ ಸಾಕ್ಷಿ ನಗರದ ಹೊರವಲಯದಲ್ಲಿ ಇರುವ ಕೋರಂಟಿ ಹನುಮಾನ ಎಂಬ ಹೆಸರಿನ ಆಂಜನೇಯಸ್ವಾಮಿ ದೇವಸ್ಥಾನ. ಹೌದು, ಕೋರಂಟಿ ಹನುಮಾನನ ದೇವಸ್ಥಾನ ನಗರದ ಸುಪ್ರಸಿದ್ಧ ದೇಗುಲಗಳಲ್ಲಿ ಒಂದು. ಪ್ರತಿವರ್ಷ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಬರುತ್ತಾರೆ. ಅದರಲ್ಲೂ ಶನಿವಾರ […]
ಕಲಬುರಗಿ: ಕೊರೊನಾ ಬಂದ ಮೇಲೆ ಎಲ್ಲರ ಬಾಯಲ್ಲಿ ಇದೀಗ ಕ್ವಾರಂಟೈನ್ ಅನ್ನೋ ಪದ ಸಾಮಾನ್ಯವಾಗಿಬಿಟ್ಟಿದೆ. ಆದರೆ ಜಿಲ್ಲೆಯಲ್ಲಿ ಈ ಪದ ಹಲವಾರು ದಶಕಗಳ ಹಿಂದಿನಿಂದಲೇ ಚಾಲ್ತಿಯಲ್ಲಿತ್ತು. ವರ್ಷಗಳು ಕಳೆಯುತ್ತಾ ಹೋದಂತೆ ಜನರ ಬಾಯಲ್ಲಿ ಕ್ವಾರಂಟೈನ್ ಹೋಗಿ ಕೋರಂಟಿ ಅಂತಾ ಆಗಿಬಿಟ್ಟಿತು. ಅದಕ್ಕೆ ಸಾಕ್ಷಿ ನಗರದ ಹೊರವಲಯದಲ್ಲಿ ಇರುವ ಕೋರಂಟಿ ಹನುಮಾನ ಎಂಬ ಹೆಸರಿನ ಆಂಜನೇಯಸ್ವಾಮಿ ದೇವಸ್ಥಾನ.
ಹೌದು, ಕೋರಂಟಿ ಹನುಮಾನನ ದೇವಸ್ಥಾನ ನಗರದ ಸುಪ್ರಸಿದ್ಧ ದೇಗುಲಗಳಲ್ಲಿ ಒಂದು. ಪ್ರತಿವರ್ಷ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಬರುತ್ತಾರೆ. ಅದರಲ್ಲೂ ಶನಿವಾರ ಬಂದರೆ ಸಾಕು ಹೆಚ್ಚಿನ ಜನರು ದರ್ಶನ ಪಡೆಯಲು ಬರುತ್ತಾರೆ.
ದೇವಸ್ಥಾನಕ್ಕೆ ಕೋರಂಟಿ ಎಂಬ ಹೆಸರು ಬರಲು ಕಾರಣವೇನು..? ವಿಶೇಷವೆಂದರೆ, ಈ ಕೋರಂಟಿ ಹನುಮಾನ ದೇವಸ್ಥಾನಕ್ಕೆ ಕೋರಂಟಿ ಅಂತಾ ಹೆಸರು ಬಂದಿದ್ದೇ ಈ ಕ್ವಾರಂಟೈನ್ ಅನ್ನೋ ಪದದಿಂದ. 1940ರ ಸಮಯದಲ್ಲಿ ಕಲಬುರಗಿ ಹೈದರಾಬಾದ್ ನಿಜಾಮನ ಆಳ್ವಿಕೆಯಲ್ಲಿತ್ತು. ಆ ವೇಳೆಯಲ್ಲಿ ನಗರದ ಬಹುತೇಕ ಪ್ರದೇಶಗಳಲ್ಲಿ ಪ್ಲೇಗ್ ಅನ್ನೋ ಮಹಾಮಾರಿ ವಕ್ಕರಿಸಿತ್ತು. ಪ್ಲೇಗ್ನಿಂದ ಸಾಕಷ್ಟು ಸಾವು ನೋವು ಸಂಭವಿಸಿತ್ತು. ಆಗ ಈಗಿನಷ್ಟು ಆಸ್ಪತ್ರೆಗಳು ಕೂಡ ಇರಲಿಲ್ಲಾ. ಹೀಗಾಗಿ ನಿಜಾಮರ ಸರ್ಕಾರ ನಗರದ ಹೊರವಲಯದಲ್ಲಿರುವ ಪ್ರದೇಶದಲ್ಲಿ ಕ್ವಾರಂಟೈನ್ ಕೇಂದ್ರವನ್ನು ಪ್ರಾರಂಭಿಸಿತ್ತು.
ಈ ಕ್ವಾರಂಟೈನ್ ಕೇಂದ್ರಕ್ಕೆ ಪ್ಲೇಗ್ ಬಂದಿರೋ ಬಡಾವಣೆಯ ಜನರನ್ನು ಸ್ಥಳಾಂತರಿಸಲಾಗಿತ್ತು. ಜೊತೆಗೆ, ಹೈದರಾಬಾದ್ನಿಂದ ಬರುತ್ತಿದ್ದ ಯುನಾನಿ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿತ್ತು. 1940ರಿಂದ 1947ರವರೆಗೆ ಸತತವಾಗಿ ಕಾಡಿದ ಮಹಾಮಾರಿಯಿಂದ ಪಾರಾಗಲು ಸಾವಿರಾರು ಜನರು ಇಲ್ಲೇ ನೆಲೆಸಿ ಚಿಕಿತ್ಸ ಪಡೆದಿದ್ದರಂತೆ. ಇದೇ ಕ್ವಾರಂಟೈನ್ ಕೇಂದ್ರದಲ್ಲಿ ಪುಟ್ಟ ಹನುಮಂತನ ದೇವಸ್ಥಾನವೂ ಇತ್ತಂತೆ. ಹಾಗಾಗಿ ಕ್ವಾರಂಟೈನ್ ಹನುಮಾನ ಎಂದೇ ಪ್ರಸಿದ್ಧಿ ಪಡೆದ ದೇವಸ್ಥಾನ ಕಾಲಕ್ರಮೇಣ ಜನರ ಬಾಯಲ್ಲಿ ಕೋರಂಟಿ ಹನುಮಾನ ಎಂದೇ ಮನೆಮಾತಾದ.
ಅಂದು ಮಹಾಮಾರಿ ಪ್ಲೇಗ್ನಿಂದ ಜನರನ್ನು ರಕ್ಷಿಸಿದ್ದ ಆಂಜನೇಯ ಇದೀಗ ಕೊರೊನಾದಿಂದ ತಮ್ಮನ್ನು ರಕ್ಷಿಸುತ್ತಾನೆ ಎಂಬುದು ಭಕ್ತರ ನಂಬಿಕೆ. ಜೊತೆಗೆ ಹನುಮಂತನಿಗೆ ಇಲ್ಲಿ ಭಕ್ತಿಯಿಂದ ಕೈಮುಗಿದರೆ ಇಷ್ಟಾರ್ಥ ಸಿದ್ಧಿಯಾಗೋದು ಗ್ಯಾರಂಟಿಯಂತೆ. ಹಾಗಾಗಿ ಇವನನ್ನು ಗ್ಯಾರಂಟಿ ಹನುಮಾನ ಎಂದೂ ಸಹ ಕರೆಯುತ್ತಾರೆ. ಒಟ್ನಲ್ಲಿ, ನೀನೇ ನಮ್ಮ ಆಧಾರ. ನೀಗು ಬಾರೋ ಈ ಭಾರ ಅಂತಾ ಹಾಡುತ್ತಾ ಭಕ್ತರು ವಜ್ರಕಾಯನ ಮೊರೆ ಹೋಗುತ್ತಿದ್ದಾರೆ. -ಸಂಜಯ್.ಚಿಕ್ಕಮಠ
Published On - 8:49 pm, Sun, 5 July 20