ರಂಗ ಸಂಗೀತದ ಮೇರು ಪ್ರತಿಭೆ ‘ಹಾರ್ಮೋನಿಯಂ’ ಆರ್.ಪರಮಶಿವನ್ ನಿಧನ
‘ಹಾರ್ಮೋನಿಯಂ’ ಪರಮಶಿವನ್ ಎಂದೇ ಖ್ಯಾತರಾಗಿದ್ದ ಹಿರಿಯ ರಂಗಭೂಮಿ ಕಲಾವಿದ ಹಾಗೂ ಸಂಗೀತ ವಿದ್ವಾಂಸ ಆರ್. ಪರಮಶಿವನ್ (94) ಇಂದು (ಡಿ.31) ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು.

ಬೆಂಗಳೂರು: ‘ಹಾರ್ಮೋನಿಯಂ’ ಪರಮಶಿವನ್ ಎಂದೇ ಖ್ಯಾತರಾಗಿದ್ದ ಹಿರಿಯ ರಂಗಭೂಮಿ ಕಲಾವಿದ ಹಾಗೂ ಸಂಗೀತ ವಿದ್ವಾಂಸ ಆರ್. ಪರಮಶಿವನ್ (94) ಇಂದು (ಡಿ.31) ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು.
ಹೆಂಡತಿ, ಮಗ ಮತ್ತು ಮಗಳು ಇದ್ದಾರೆ. ರಾಜಾಜಿನಗರದಲ್ಲಿರುವ ಸ್ವಗೃಹದಲ್ಲಿಯೇ ಪರಮಶಿವನ್ ನಿಧನರಾದರು. ವಿದೇಶಗಳಲ್ಲಿರುವ ಮಗ ಮತ್ತು ಮಗಳು ನಾಳೆ ನಗರಕ್ಕೆ ಬರಲಿದ್ದಾರೆ. ಮೃತರ ಅಂತ್ಯಸಂಸ್ಕಾರವು ಶನಿವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಮನೆಯಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯ ಸರ್ಕಾರದ ಗುಬ್ಬಿ ವೀರಣ್ಣ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ. ಡಾ.ರಾಜ್ಕುಮಾರ್ ಅವರ ತಂದೆ ಪುಟ್ಟಸ್ವಾಮಯ್ಯ ಅವರಿಗೂ ಪರಮಶಿವನ್ ಆಪ್ತರಾಗಿದ್ದರು.
ಪರಮಶಿವನ್ ತಮ್ಮ 4ನೇ ವಯಸ್ಸಿನಲ್ಲಿ ಅಂದರೆ 1934ರಲ್ಲಿ ಮೊದಲ ಬಾರಿಗೆ ರಂಗಭೂಮಿಯಲ್ಲಿ ಅಭಿನಯಿಸಿದರು. ಗುಬ್ಬಿ ಕಂಪನಿಯ ಎಂ.ಶಿವಪ್ಪ ಅವರ ಬಳಿ ಸಂಗೀತದ ಪ್ರಾಥಮಿಕ ಅಭ್ಯಾಸ ನಡೆಯಿತು. ಇವರ ಆಸಕ್ತಿ ಗುರುತಿಸಿದ್ದ ಮೈಸೂರು ಮಹಾರಾಜರ ಆಸ್ಥಾನ ವಿದ್ವಾನ್ ಡಾ.ಬಿ.ದೇವೇಂದ್ರಪ್ಪ ಅವರು ಮನೆಯಲ್ಲಿಟ್ಟುಕೊಂಡು ಊಟ ಹಾಕಿ ಸಂಗೀತದ ಉನ್ನತ ಅಭ್ಯಾಸಕ್ಕೆ ಅವಕಾಶ ಮಾಡಿಕೊಟ್ಟಿದ್ದರು.
ಹಿರಣ್ಣಯ್ಯ ಮಿತ್ರ ಮಂಡಳಿ, ಚಾಮುಂಡೇಶ್ವರಿ ನಾಟಕ ಕಂಪನಿಗಳಲ್ಲಿ ಕೆಲಸ ಮಾಡಿದ್ದರು. ಹಾರ್ಮೋನಿಯಂ ನುಡಿಸುವ ಸಂಗೀತ ಮೇಷ್ಟ್ರ ಕೆಲಸದ ಜೊತೆಗೆ ಹಲವು ಪಾತ್ರಗಳನ್ನೂ ನಿರ್ವಹಿಸಿ ಸೈ ಎನಿಸಿಕೊಂಡಿದ್ದರು. ಇವರ ದನಿಯ ರಂಗಗೀತೆಗಳು ಇಂದಿಗೂ ಯೂಟ್ಯೂಬ್ನಲ್ಲಿ ಹಿಟ್ ಆಗಿವೆ.
Published On - 9:44 pm, Thu, 31 December 20



