New Year Resolution | ಬದಲಾವಣೆ ನನ್ನಿಂದಲೇ ಎಂದು ನಂಬಿದ ಮಹಿಳಾ ಉದ್ಯಮಿ ಮತ್ತು ಸಾಫ್ಟ್​ವೇರ್ ಎಂಜಿನಿಯರ್​

ನಾವು ಪ್ರಕೃತಿಯನ್ನು ತುಂಬಾ ನಾಶ ಮಾಡುತ್ತಿದ್ದೀನವಿ, ಸ್ವಾರ್ಥಿಗಳಾಗಿ ಬಿಟ್ಟಿದ್ದೀವಿ ಅನಿಸುತ್ತದೆ. ಹಾಗಾಗಿ ಪರಿಸರದಲ್ಲಿ ಗಿಡ ನೆಡುವುದು, ಪ್ರಾಕೃತಿಕ ಸಂಪತ್ತಿನ ಕಾಳಜಿ- ಈ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ಯೋಚಿಸುತ್ತಿದ್ದೇನೆ.

New Year Resolution | ಬದಲಾವಣೆ ನನ್ನಿಂದಲೇ ಎಂದು ನಂಬಿದ ಮಹಿಳಾ ಉದ್ಯಮಿ ಮತ್ತು ಸಾಫ್ಟ್​ವೇರ್ ಎಂಜಿನಿಯರ್​
ಅಪರ್ಣಾ ಮತ್ತು ವೀಣಾ ಶಿವಣ್ಣ
Rashmi Kallakatta

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 31, 2020 | 11:09 PM

ಹೊಸ ವರ್ಷದಲ್ಲಿ ಒಂದಿಷ್ಟು ಹೊಸತನಗಳನ್ನು ಮೈಗೂಡಿಸಿಕೊಳ್ಳುವ ಕನಸು ಕಟ್ಟಿಕೊಳ್ಳುವುದು ಸಾಮಾನ್ಯ ಸಂಗತಿ. ವೈಯಕ್ತಿಕವಾಗಿ ನಾನು ಹೀಗೆ ಬದಲಾಗುತ್ತೇನೆ, ಸಮಾಜ ಹೀಗಾಗಬೇಕೆಂಬ ಆಸೆ ನನಗಿದೆ, ಸಮಾಜದ ಬದಲಾವಣೆಗೆ ನಾನು ಹೀಗೆ ಸಹಕರಿಸುತ್ತೇನೆ ಎಂದು ಬೆಂಗಳೂರಿನ ಮಹಿಳಾ ಉದ್ಯಮಿ ಅಪರ್ಣಾ ರಾವ್  ಮತ್ತು ಸಾಫ್ಟ್​ ವೇರ್ ಎಂಜಿನಿಯರ್ ವೀಣಾ ಶಿವಣ್ಣ  ಹೊಸ ವರ್ಷದ ಕನಸುಗಳನ್ನು ಟಿವಿ9 ಡಿಜಿಟಲ್ ಜೊತೆಗೆ ಹಂಚಿಕೊಂಡಿದ್ದಾರೆ.

ಆರೋಗ್ಯದ ಕಡೆ ಗಮನ ಕೊಡಬೇಕು

ನಾವು ಯೋಚಿಸಿದಂತೆ ಎಲ್ಲವೂ ಆಗಲ್ಲ. ಪರಿಸ್ಥಿತಿ ನೋಡಿಕೊಂಡು ಬದಲಾವಣೆ ಮಾಡಲೇ ಬೇಕಾಗುತ್ತದೆ. ಆದರೆ ಈ ವರ್ಷ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಅಂದುಕೊಂಡಿದ್ದೇನೆ. ಏನು ಬದಲಾವಣೆ ಆಗಬೇಕು? ನಿರೀಕ್ಷೆ ಏನು ಅಂತ ಕೇಳಿದರೆ, ಲಾಕ್ ಡೌನ್ ಸಮಯದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾದವು. ಅದರಲ್ಲಿಯೂ ಯುವಜನತೆ ಸಾಕಷ್ಟು ಒತ್ತಡಗಳನ್ನು ಅನುಭವಿಸಿದರು. ತಾವು ಕಲಿತ ಕ್ಷೇತ್ರದಲ್ಲಿ ಮುಂದುವರಿಯಬೇಕೇ? ಅಥವಾ ಆಸಕ್ತಿ ಇರುವ ವಿಷಯದಲ್ಲಿ ಮುಂದುವರಿಯಬೇಕೇ ಎಂಬ ಗೊಂದಲವುಂಟಾಯಿತು. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿಯೇ ಈ ಗೊಂದಲವಿದೆ. ಅದು ಅಲ್ಲದೇ ಇದ್ದರೆ ಇದು..ಈ ದಾರಿಯಾಗಿ ಹೋಗಬಹುದು ಎಂಬುದಕ್ಕೆ ನಮ್ಮ ಯುವ ಜನರನ್ನು ನಮ್ಮ ಶಿಕ್ಷಣ ವ್ಯವಸ್ಥೆ ತಯಾರು ಮಾಡಿಲ್ಲ. ಅವರಿಗೆ ಪ್ರಾಯೋಗಿಕ ಜ್ಞಾನ ಕಡಿಮೆ.

ನಾನು ಓರ್ವ ಮಹಿಳಾ ಉದ್ಯಮಿಯಾಗಿ ಹೇಳುವುದಾದರೆ ಯಾವುದಾದರೊಂದು ವ್ಯವಸಾಯ, ಉದ್ಯಮ ಆರಂಭಿಸಲು ಹೊರಟ ಮಹಿಳೆಯರಿಗೆ ಸರ್ಕಾರ ನೀತಿಗಳು ಹೇಗಿವೆ ಎಂಬುದು ಗೊತ್ತಿರಲ್ಲ, ಅವರಿಗೆ ಆ ಬಗ್ಗೆ ಭಯವಿರುತ್ತದೆ. ಅಂದರೆ ಯಾವುದೇ ನೀತಿಗಳ ಬಗ್ಗೆ ಜನರಿಗೆ ಸ್ಪಷ್ಟವಾದ ಮಾಹಿತಿ ಇಲ್ಲ. ಸರ್ಕಾರ ನೀತಿಗಳನ್ನು ಅನುಷ್ಠಾನಕ್ಕೆ ತರುವಾಗ ಅದರ ಬಗ್ಗೆ ಜನರಿಗೆ ಸ್ಪಷ್ಟವಾದ ಮಾಹಿತಿ ನೀಡಬೇಕು. ಅದು ಜನರಿಗೆ ತಲುಪಿದೆಯಾ ಅದನ್ನು ಜನರಿಗೆ ತಲುಪಿಸುವುದು ಹೇಗೆ ಎಂದು ಯೋಚಿಸಿದರೆ ಖಂಡಿತವಾಗಿಯೂ ಗೊಂದಲ ನಿವಾರಣೆ ಆಗಬಹುದು. ಇನ್ನು ಮಹಿಳೆಯರು ಪ್ರಯಾಣಿಸುವಾಗ ಎದುರಾಗುವ ಸಮಸ್ಯೆಗಳಲ್ಲೊಂದು ಸರಿಯಾದ ಟಾಯ್ಲೆಟ್ ಇಲ್ಲದೇ ಇರುವುದು. ಇದ್ದರೂ ಅವು ಸುರಕ್ಷಿತ ಅಥವಾ ಬಳಸಲು ಯೋಗ್ಯವಾಗಿರುವುದಿಲ್ಲ. ಮಹಿಳೆಯರು ಸುರಕ್ಷಿತವಾಗಿ ಓಡಾಡಬೇಕು ಎಂದರೆ ಸಾರ್ವಜನಿಕ ಸ್ಥಳಗಳಲ್ಲಿ ಬಳಸಲು ಯೋಗ್ಯವಾದ, ಸುರಕ್ಷಿತವಾದ ಟಾಯ್ಲೆಟ್ ವ್ಯವಸ್ಥೆಯೂ ಮುಖ್ಯವಾಗಿರುತ್ತದೆ.

ಲಾಕ್ ಡೌನ್ ಆರಂಭವಾದಾಗ ನಾನು ಫೇಸ್ ಬುಕ್ ನಲ್ಲಿ ಮಹಿಳಾ ಮಾರುಕಟ್ಟೆ ಎಂಬ ಗುಂಪು ಶುರುಮಾಡಿದೆ. ಮಹಿಳೆಯರು ಮಾಡಿದ ಉತ್ಪನ್ನಗಳನ್ನು ಮಾರಾಟ ಮತ್ತು ಖರೀದಿ ಮಾಡಲಿರುವ ವೇದಿಕೆ ಅದು. ಇದರಿಂದ ಹಲವಾರು ಮಹಿಳೆಯರು ಗೃಹೋದ್ಯಮದಲ್ಲಿ ತೊಡಗಿಕೊಂಡು ಸಂಪಾದನೆ ಮಾಡಲು ಸಹಾಯವಾಗಿದೆ. ಎಲ್ಲರನ್ನೂ ಒಳಗೊಂಡ ಪಾರದರ್ಶಕ ವ್ಯವಹಾರ ವ್ಯವಸ್ಥೆ ನಮ್ಮದು. ಉತ್ಪಾದಕರು ಮತ್ತು ಮಾರಾಟಗಾರರ ನಡುವಿನ ಕೊಂಡಿಯಾಗಿ ನಮ್ಮ ಗುಂಪು ಕಾರ್ಯನಿರ್ವಹಿಸುತ್ತಿದೆ. ವೈಯಕ್ತಿಕ ಬೆಳವಣಿಗೆ ಜತೆ ಇತರನ್ನೂ ಜತೆಗೂಡಿಸಿಕೊಂಡು ಬೆಳೆಯುವುದು, ಅವರಿಗೆ ಬೆಂಬಲವಾಗಿ ನಿಲ್ಲುವುದು, ಇದರಿಂದ ಸ್ವಾವಲಂಬಿ ಬದುಕುಕಟ್ಟಿಕೊಳ್ಳಲು ಯಾರಿಗಾದರೂ ಸಹಾಯವಾದರೆ ಅದಕ್ಕಿಂತ ದೊಡ್ಡ ಖುಷಿ ಏನಿದೆ.

ಅಪರ್ಣಾ ರಾವ್, ಹ್ಯಾಂಡ್ ಮೇಡ್ ಸೋಪುಗಳ ತಯಾರಿಸುವ ಉದ್ಯಮಿ

ಆರೋಗ್ಯ, ಪ್ರಕೃತಿ, ಸಾಮಾಜಿಕ ಸ್ವಾಸ್ಥ್ಯ

ವೈಯಕ್ತಿಕವಾಗಿ ಅಲ್ಲ ಎಲ್ಲರನ್ನೂ ಜತೆಗೂಡಿಸಿ ಬದಲಾವಣೆ ಮಾಡುವ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ಈಗಾಗಲೇ ನಾನು ಪ್ಲಾಸ್ಟಿಕ್ ಬಳಕೆ ನಿಲ್ಲಿಸಿದ್ದೇನೆ. ಮನೆಯಲ್ಲಿ ಶೇ. 95ರಷ್ಟು ವಸ್ತುಗಳು ಪ್ಲಾಸ್ಟಿಕ್ ರಹಿತ ಆಗಿವೆ. ಕಸದ ಬುಟ್ಟಿಯಾಗಲೀ, ಕವರ್ ಆಗಲಿ ಪ್ಲಾಸ್ಟಿಕ್ ಅಲ್ಲ. ಗಾಜು ಮತ್ತು ಮರದ ವಸ್ತುಗಳನ್ನು ನಾನು ಬಳಸುತ್ತೇನೆ. ಇಲ್ಲಿಯವರೆಗೆ ನಾನು ನನ್ನ ಮನೆ ಕುಟುಂಬ ಎಂಬುದಕ್ಕಷ್ಟೇ ಈ ಕಾಳಜಿ ಸೀಮಿತವಾಗಿರುತ್ತಿತ್ತು. ಇನ್ನುಮುಂದೆ ದೊಡ್ಡ ಮಟ್ಟದಲ್ಲಿ ಅಂದರೆ ನನ್ನ ಸಮಾಜ, ನಾನು ವಾಸಿಸುವ ಪ್ರದೇಶದಲ್ಲಿನ ಜನರು, ಸಮಾನ ಮನಸ್ಕರೊಂದಿಗೆ ಸೇರಿ ಕೆಲವು ಬದಲಾವಣೆಗಳನ್ನು ತರೋಣ ಎಂದು ಯೋಚಿಸುತ್ತಿದ್ದೇನೆ. ಅದರಲ್ಲಿ ಮೂರು ವಿಷಯಗಳು ಇವೆ. ಮೊದಲನೆಯದ್ದು ಆರೋಗ್ಯ, ಎರಡನೆಯದ್ದು ಪ್ರಕೃತಿ, ಮೂರನೆಯದ್ದು ಸಾಮಾಜಿಕ ಸ್ವಾಸ್ಥ್ಯ.

ನಾವು ಪ್ರಕೃತಿಯನ್ನು ತುಂಬಾ ನಾಶ ಮಾಡುತ್ತಿದ್ದೀನವಿ, ಸ್ವಾರ್ಥಿಗಳಾಗಿ ಬಿಟ್ಟಿದ್ದೀವಿ ಅನಿಸುತ್ತದೆ. ಹಾಗಾಗಿ ಪರಿಸರದಲ್ಲಿ ಗಿಡ ನೆಡುವುದು, ಪ್ರಾಕೃತಿಕ ಸಂಪತ್ತಿನ ಕಾಳಜಿ- ಈ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ಯೋಚಿಸುತ್ತಿದ್ದೇನೆ. ದೇಶ ಅಥವಾ ರಾಜ್ಯದಲ್ಲಿ ಯಾವ ರೀತಿಯ ಬದಲಾವಣೆ ಆಗಬೇಕು ಎಂದು ಹೇಳುವುದಾದರೆ ಈಗ ಕೋಮುವಾದ ಜಾಸ್ತಿಯಾಗುತ್ತಿದೆ 10 ವರ್ಷದ ಹಿಂದೆ ಹೀಗಿರಲಿಲ್ಲ. ಜನರು ಪ್ರಗತಿಪರ ರೀತಿಯಲ್ಲಿ ಯೋಚಿಸಬೇಕಿದೆ. ವಿಶೇಷವಾಗಿ ಈಗಿನ ಯುವಜನರು ಪ್ರೊಗ್ರೆಸಿವ್ ಆಗಿ ಯೋಚನೆ ಮಾಡಬೇಕು.

ವೀಣಾ ಶಿವಣ್ಣ , ಪ್ರಿನ್ಸಿಪಲ್ ಕನ್ಸಲ್ಟೆಂಟ್, ಇನ್ಫೋಸಿಸ್ ಟೆಕ್ನಾಲಜಿಸ್

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada