ಇಂದು ಟೊಕಿಯೋನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ಹಾಕಿ ಟೀಮಿನ ನಾಯಕ ಮನ್ಪ್ರೀತ್ ಸಿಂಗ್ ಜೊತೆ ಭಾರತದ ಧ್ವಜವನ್ನು ಹೊರುವ ಗೌರವಕ್ಕೆ ಪಾತ್ರರಾದ ವಿಖ್ಯಾತ ಬಾಕ್ಸರ್ ಮೇರಿ ಕೋಮ್ ಅವರಿಗೆ ಅವರ ಮಕ್ಕಳು ವಿಶಿಷ್ಟ ರೀತಿಯಲ್ಲಿ ಬೆಸ್ಟ್ ವಿಷಸ್ ಹೇಳಿದ್ದಾರೆ. ಕೋಮ್ ಮಕ್ಕಳು ಚುಂಗ್ತಾನ್ಗ್ಲೆನ್ ಕೋಮ್, ಖುಪ್ನೀಬರ್ ಕೋಮ್ ಮತ್ತು ರೆಖುಂಗ್ವರ್ ಕೋಮ್ ಒಂದು ವಿಡಿಯೋದಲ್ಲಿ ತಮ್ಮ ಅಮ್ಮನಿಗೆ ಶುಭಾಷಯ ಕೋರಿದ್ದಾರೆ. ಈ ಬಾರಿಯ ಒಲಂಪಿಕ್ಸ್ನಲ್ಲಿ ಭಾರತದ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಆಗಿರುವ #Tokyo2020 ಸದರಿ ವಿಡಿಯೋವನ್ನು ಶೇರ್ ಮಾಡಿ ಹೀಗೆ ಹೇಳಿದೆ: ‘ಎಮ್ಸಿ ಮೇರಿ ಕೋಮ್ ಅವರ ಮಕ್ಕಳು ತಮ್ಮ ತಾಯಿಗೆ ಒಂದು ಅಪ್ಯಾಯಮಾನ ಸಂದೇಶ ಕಳಿಸಿದ್ದಾರೆ. ನಿಮ್ಮ ಉತ್ತರಗಳನ್ನು ಇಲ್ಲಿಗೆ ಕಳಿಸಿರಿ #Tokyo2020 | #StrongerTogether | #UnitedByEmotion | #TeamIndia.’
MC Mary Kom's children send a lovely message for their mother! ?
Send yours, in the replies below ?#Tokyo2020 | #UnitedByEmotion | #StrongerTogether | #TeamIndia | @MangteC pic.twitter.com/Mt1VEpvEiv
— #Tokyo2020 for India (@Tokyo2020hi) July 23, 2021
ಟೊಕಿಯೋ ಒಲಂಪಿಕ್ಸ್ 2020 ನಲ್ಲಿ ಮೇರಿ ಕೋಮ್ ಬಂಗಾರದ ಪದಕ ಗೆಲ್ಲುವ ತವಕದಲ್ಲಿದ್ದಾರೆ. 2012 ಲಂಡನ್ ಒಲಂಪಿಕ್ಸ್ನಲ್ಲಿ ವಿಶ್ವದ ಅತ್ಯುನ್ನತ ಕ್ರೀಡಾಮೇಳಕ್ಕೆ ಪದಾರ್ಪಣೆ ಮಾಡಿದ ಅವರು ಆ ಬಾರಿ ಕಂಚಿನ ಪದಕ (ಅಂತಿಮವಾಗಿ ಸ್ವರ್ಣ ಪದಕ ಗೆದ್ದ ಬ್ರಿಟನ್ನಿನ ನಿಕೊಲಾ ಆಡಮ್ಸ್ ಗೆ ಕೋಮ್ ಸೋತಿದ್ದರು) ಗೆದ್ದಿದ್ದರು. ಒಲಂಪಿಕ್ಸ್ ಬಾಕ್ಸಿಂಗ್ ಈವೆಂಟ್ನಲ್ಲಿ ಭಾರತದ ಪರ ಪದಕ ಗೆದ್ದ ಮೊಟ್ಟ ಮೊದಲ ಮಹಿಳಾ ಬಾಕ್ಸರ್ ಎಂಬ ಹಿರಿಮೆಗೆ ಅವರು ಪಾತ್ರರಾಗಿದ್ದರು.
ಆದರೆ ಸೋಜಿಗದ ಸಂಗತಿಯೆಂದರೆ, ಆರು ಬಾರಿ ವಿಶ್ವ ಚಾಂಪಿಯನ್ಶಿಪ್ ಗೆದ್ದಿರುವ ಭಾರತದ ಸ್ಟಾರ್ ಬಾಕ್ಸರ್ 2016 ರಿಯೋ ಒಲಂಪಿಕ್ಸ್ಗೆ ಅರ್ಹತೆ ಗಿಟ್ಟಿಸುವಲ್ಲಿ ವಿಫಲರಾಗಿದ್ದರು.
2014 ಏಷ್ಯನ್ ಗೇಮ್ಸ್ನಲ್ಲಿ ಸ್ವರ್ಣ ಗೆದ್ದ ಅವರು ಭಾರತಕ್ಕೆ ಕೀರ್ತಿ ತಂದರಲ್ಲದೆ, ಬಾಕ್ಸಿಂಗ್ ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆದ್ದ ದೇಶದ ಮೊದಲ ಮಹಿಳೆ ಎನಿಸಿಕೊಂಡರು.
ಕೋಮ್ ಗ್ಲ್ಯಾಸ್ಗೋನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲು ವಿಫಲರಾಗಿದ್ದು ಕ್ರೀಡಾವಲಯದದಲ್ಲಿ ಆಶ್ಚರ್ಯ ಹುಟ್ಟಿಸಿತ್ತು. ಆದರೆ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ನಲ್ಲಿ ಅವರು ಚಿನ್ನದ ಪದಕ ಗೆದ್ದಾಗ ಅವರ ಕರೀಯರ್ ರೋಲರ್ ಕೋಸ್ಟರ್ ರೈಡ್ ಅಂತ ಎಲ್ಲರಿಗೂ ಅನಿಸಿತು.
51 ಕೆಜಿ ಫ್ಲೈವೇಟ್ ವರ್ಗದಲ್ಲಿ ಸ್ಪರ್ಧಿಸುವ ಮೇ ಕೋಮ್ ಅವರಿಂದ ಭಾರತ ಈ ಬಾರಿ ಚಿನ್ನದ ಪದಕ ನಿರೀಕ್ಷಿಸುತ್ತಿದೆ.
ಅವರ ದಾರಿ ಸುಗಮವಾಗೇನೂ ಇಲ್ಲ. ಯಾಕೆಂದರೆ, 2019 ರ ವಿಶ್ವ ಚಾಂಪಿಯನ್ಶಿಪ್ ಸೆಮಿಫೈನಲ್ನಲ್ಲಿ ಕೋಮ್ ಅವರನ್ನು ಸೋಲಿಸಿದ್ದ ಟರ್ಕಿಯ ಬೂಸ್ ನಾಜ್ ಕಾಕಿರೊಗ್ಲು ಅವರಿಂದ ತೀವ್ರ ಪ್ರತಿಸ್ಪರ್ಧೆ ಎದುರಾಗಲಿದೆ.